ಉಡುಪಿ: ಶ್ರೀಕೃಷ್ಣ ಜನ್ಮಾಷ್ಠಮಿ ಸಂದರ್ಭದಲ್ಲಿ ಬಹುತೇಕ ಮಂದಿ ವಿವಿಧ ವೇಷಗಳ ಮೂಲಕ ಜನರನ್ನು ರಂಜಿಸುತ್ತಾರೆ. ಆದರೆ ಬೆರಳಣಿಕೆಯಷ್ಟು ಜನರು ಅದರಿಂದ ಬಂದ ಹಣದ ಸದ್ವಿನಿಯೋಗವನ್ನು ಮಾಡುತ್ತಾರೆ. ಅಂತಹ ಕೆಲವೇ ಕೆಲವು ಮಂದಿಯಲ್ಲಿ ರವಿ ಕಟಪಾಡಿಯವರು ಅಗ್ರಮಾನ್ಯರು.
ಆರು ವರ್ಷಗಳಿಂದ ಶರೀರವನ್ನು ದಂಡಿಸಿ ತಾನು ನೋವನ್ನು ಅನುಭವಿಸಿ ಅನಾರೋಗ್ಯ ಪೀಡಿತರ ಬಾಳಿನಲ್ಲಿರುವ ಅಂಧಕಾರವನ್ನು ನಿವಾರಿಸುವ ನಿಸ್ವಾರ್ಥ ಜೀವಿ ರವಿ ಕಟಪಾಡಿಯವರು ಇಲ್ಲಿಯವರೆಗೆ ವಿವಿಧ ಅವತಾರಗಳ ಮೂಲಕ ಸುಮಾರು 72 ಲಕ್ಷ ರೂಪಾಯಿ ಸಂಗ್ರಹಿಸಿ 33 ಮಕ್ಕಳ ಜೀವನದಲ್ಲಿ ಬೆಳಕಾಗಿದ್ದಾರೆ. ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ಅವರು ರವಿ ಕಟಪಾಡಿಯವರ ನಿಸ್ವಾರ್ಥ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದನ್ನು ಇಲ್ಲಿ ಸ್ಮರಿಸಬಹುದು.
ಆಗಸ್ಟ್ 30 ಮತ್ತು 31ರಂದು ರವಿ ಮತ್ತು ಅವರ ತಂಡ ನಾಲ್ವರು ಮಕ್ಕಳ ವೈದ್ಯಕೀಯ ಚಿಕಿತ್ಸೆಯ ಯೋಜನೆ ಹಾಕಿಕೊಂಡು ಶ್ರೀ ಕೃಷ್ಣ ಜನ್ಮಾಷ್ಠಮಿಯ ಸಂದರ್ಭದಲ್ಲಿ ಹಣ ಸಂಗ್ರಹಿಸಲು ಮುಂದಾಗಿದ್ದಾರೆ.
ಈ ಬಾರಿ ಕಟಪಾಡಿಯ ರವಿಯವರು ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದು ಹಾಲಿವುಡ್ ಸಿನಿಮಾದ ಡಾರ್ಕ್ ಅಲೈಟ್ ವೇಷದಲ್ಲಿ ಬೀದಿಗಿಳಿದು ದೇಣಿಗೆ ಸಂಗ್ರಹಕ್ಕೆ ತಯಾರಾಗುತ್ತಿದ್ದಾರೆ. ನಾಲ್ಕು ಮಕ್ಕಳಿಗೆ ಸಹಾಯ ಮಾಡಬೇಕು ಎಂದು ನಿರ್ಧಾರ ಮಾಡಿದ್ದೆವು, ಬಳಿಕ ಎರಡು ಕುಟುಂಬಗಳು ನಮ್ಮನ್ನು ಸಂಪರ್ಕ ಮಾಡಿದವು. ಅವರಿಗೂ ಸಹಾಯ ಮಾಡಲಿದ್ದೇವೆ ಎಂದು ರವಿಯವರು ಹೇಳಿದ್ದಾರೆ.
ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಅವಕಾಶ ಕಲ್ಪಿಸಿದ ಜಿಲ್ಲಾಡಳಿತಕ್ಕೆ ಧನ್ಯವಾದಗಳನ್ನು ಸಲ್ಲಿಸಿದ ರವಿ ಕಟಪಾಡಿ, ಈ ಬಾರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ತನ್ನ ಅತ್ಯಾಕರ್ಷಕ ವೇಷಭೂಷಣಗಳೊಂದಿಗೆ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸುವ ಮೂಲಕ ನೊಂದವರ ಪಾಲಿಗೆ ಆಶಾಕಿರಣವಾಗಲು ಹೊರಟಿದ್ದಾರೆ.
ಸಹೃದಯಿ ರವಿ ಮತ್ತು ಅವರ ತಂಡವನ್ನು ಆತ್ಮೀಯವಾಗಿ ಬರಮಾಡಿಕೊಂಡು ಅವರ ಮಹತ್ಕಾರ್ಯದಲ್ಲಿ ಅಳಿಲು ಸೇವೆಯನ್ನು ಮಾಡೋಣ.