Saturday, January 18, 2025
Saturday, January 18, 2025

ಅಡಿಕೆ ಕೊಳೆ ರೋಗ ಹಾಗೂ ಎಲೆಚುಕ್ಕಿ ರೋಗಗಳ ನಿರ್ವಹಣಾ ಕ್ರಮಗಳು

ಅಡಿಕೆ ಕೊಳೆ ರೋಗ ಹಾಗೂ ಎಲೆಚುಕ್ಕಿ ರೋಗಗಳ ನಿರ್ವಹಣಾ ಕ್ರಮಗಳು

Date:

ಉಡುಪಿ, ಜುಲೈ 6: ಪ್ರಸಕ್ತ ಸಾಲಿನ ಮುಂಗಾರು ಚುರುಕಾಗಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಕೊಳೆ ರೋಗ ಹಾಗೂ ಎಲೆಚುಕ್ಕೆ ರೋಗಗಳು ಬಾಧಿಸುವ ಸಾಧ್ಯತೆಯಿದ್ದು, ಮುಂಜಾಗೃತಾ ಕ್ರಮವಾಗಿ ಈ ಕೆಳಕಂಡ ರೋಗಗಳ ನಿರ್ವಹಣಾ ಕ್ರಮಗಳನ್ನು ಅನುಸರಿಸುವಂತೆ ತೋಟಗಾರಿಕೆ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಅಡಿಕೆ ಕೊಳೆ ರೋಗದ ನಿರ್ವಹಣಾ ಕ್ರಮಗಳು: ಕೆಳಗೆ ಬಿದ್ದಿರುವ ರೋಗ ಪೀಡಿತ ಅಡಿಕೆ ಕಾಯಿ ಹಾಗೂ ಒಣಗಿದ ಹಿಂಗಾರಗಳನ್ನು ಆರಿಸಿ ತೆಗೆದು ಸುಡಬೇಕು ಅಥವಾ ಗುಂಡಿಗಳಲ್ಲಿ ಹಾಕಿ ಮಣ್ಣಿನಿಂದ ಮುಚ್ಚಬೇಕು. ತೋಟಗಳಲ್ಲಿ ಹೆಚ್ಚಾಗಿ ನೀರು ನಿಲ್ಲದಂತೆ ಬಸಿಗಾಲುವೆ ಚೊಕ್ಕ ಮಾಡಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಬೇಕು. ಗಾಳಿ ಆಡುವಂತೆ ಮಾಡಲು ಅಂತರ ಬೆಳೆಗಳ ಅಥವಾ ಕಾಡು ಮರಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ತೆಗೆಯಬೇಕು. ತೋಟದಲ್ಲಿ ಅಲ್ಲಲ್ಲಿ ಅಡಿಕೆ ಸಿಪ್ಪೆ, ಬತ್ತದ ತೊಟ್ಟು ಹಾಗೂ ಇತರೆ ತ್ಯಾಜ್ಯ ವಸ್ತುಗಳನ್ನು ಬಳಸಿ ಹೊಗೆ ಹಾಕಬೇಕು (ಎಕರೆಗೆ 3-4 ಕಡೆ ಈ ರೀತಿ ಮಾಡುವುದು). ರೋಗ ಪೀಡಿತ ಮರಗಳಿಗೆ ಜುಲೈ-ಅಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ಶೇ. 1 ರ ಭೋರ್ಡೋ ದ್ರಾವಣ ಅಥವಾ ಶೇ. 0.2 ರ ಮೆಟಕಾಕ್ಸಿಲ್ ಎಂ.ಝಡ್ (02 ಗ್ರಾಂ 1 ಲೀ. ನೀರಿನಲ್ಲಿ ಕರಗಿಸಿ) ಅಥವಾ ಶೇ. 0.3 ರ ತಾಮ್ರದ ಆಕ್ಸಿಕ್ಲೋರೈಡ್ (3 ಗ್ರಾಂ 1 ಲೀ ನೀರಿನಲ್ಲಿ ಕರಗಿಸಿ) ನಿಂದ ಗೊನೆಗಳಿಗೆ ಹಾಗೂ ಎಲೆ ತೊಟ್ಟು, ಹೊಡೆ ಭಾಗ ಮತ್ತು ಸುಳಿ ಭಾಗಗಳು ಚೆನ್ನಾಗಿ ನೆನೆಯುವಂತೆ ಸೂಕ್ತ ಅಂಟಿನೊಂದಿಗೆ (ರಾಳ) ಸಿಂಪರಣೆ ಮಾಡಬೇಕು.

ಶಿರಿಕೊಳೆ ರೋಗ ಕಂಡುಬಂದಲ್ಲಿ ಮುಂಜಾಗೃತ ಕ್ರಮವಾಗಿ ಶೇ. 0.2 ರ ತಾಮ್ರದ ಆಕ್ಸಿಕ್ಲೋರೈಡ್ ಮತ್ತು ಶೇ. 0.05 ರ ಸ್ಟೆಪ್ಟೊಸೈಕ್ಲಿನ್ ದ್ರಾವಣದಿಂದ ಶಿರ ಭಾಗಗಳನ್ನು (ತೊಂಡೆ ಭಾಗ) ನೆನೆಸಬೇಕು. ಮಣ್ಣು ಪರೀಕ್ಷೆ ಆಧಾರದ ಮೇಲೆ ಶಿಫಾರಸು ಮಾಡಿದ ಸುಣ್ಣ, ಸಾವಯವ ಗೊಬ್ಬರ (ಪ್ರತಿ ಮರಕ್ಕೆ 10-12 ಕಿ.ಗ್ರಾಂ) ಮತ್ತು ರಾಸಾಯನಿಕ ಗೊಬ್ಬರಗಳನ್ನು (ಪ್ರತಿ ಮರಕ್ಕೆ 140:40:140 ಗ್ರಾಂ ಸಾ.ರಂ.ಪೊ) ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ ಮಣ್ಣಿಗೆ ಸೇರಿಸಬೇಕು. ಈಗಾಗಲೇ ಶಿಫಾರಸು ಮಾಡಿದ ಶೇ.50 ರಷ್ಟು ರಸಗೊಬ್ಬರಗಳನ್ನು ಮುಂಗಾರಿನ ಮೊದಲು ಕೊಟ್ಟಿದ್ದರೆ ಈಗ ಉಳಿದ ಅರ್ಧ ಭಾಗವನ್ನು ಕೊಟ್ಟರೆ ಸಾಕಾಗುತ್ತದೆ. ಇದೇ ಅವಧಿಯಲ್ಲಿ ಬೇರುಗಳ ವಲಯವನ್ನು ಶೇ. 10 ರ ಬೋರ್ಡೋ ದ್ರಾವಣ ಅಥವಾ ಶೇ. 0.3 ರ ಅಕೋಮಿನ್/ ತಾಮ್ರದ ಆಕ್ಸಿಕ್ಲೋರೈಡ್ ದ್ರಾವಣದಿಂದ ನೆನೆಸಬೇಕು. (ಪ್ರತಿ ಮರಕ್ಕೆ ಸುಮಾರು 5 ಲೀ ದ್ರಾವಣ ಅವಶ್ಯಕವಿರುತ್ತದೆ).

ತುಂತುರು ಮಳೆ ಇರುವಾಗ ಬೋರ್ಡೋ ದ್ರಾವಣವನ್ನು ಹಾಗೂ ಶುಷ್ಕ ವಾತಾವರಣ ಇದ್ದಾಗ ಬೋರ್ಡೋ ದ್ರಾವಣಕ್ಕೆ ಬದಲಿ ಶಿಲಿಂದ್ರ ನಾಶಕಗಳಾದ ತಾಮ್ರದ ಆಕ್ಸಿಕ್ಲೋರೈಡ್ ಅಥವಾ ಮೆಟಲಾಕ್ಸಿಲ್ ಎಂ.ಜಡ್ ಔಷಧಗಳನ್ನು ಸೂಕ್ತ ಅಂಟಿನೊಂದಿಗೆ ಸಿಂಪರಣೆಗೆ ಬಳಸಬಹುದು. ಈ ಮೇಲಿನ ಕ್ರಮಗಳನ್ನು ಸಾಮೂಹಿಕವಾಗಿ ಏಕಕಾಲದಲ್ಲಿ ಅನುಸರಿಸಿದಾಗ ಮರಗಳನ್ನು ಸುಳಿಕೊಳೆ ಅಥವಾ ಶಿರಕೊಳೆಯಿಂದ ಸಾಯುವುದನ್ನು ತಪ್ಪಿಸಬಹುದಾಗಿದೆ.

ಅಡಿಕೆ ಎಲೆಚುಕ್ಕಿ ರೋಗದ ನಿರ್ವಹಣಾ ಕ್ರಮಗಳು: ಹೆಚ್ಚು ಭಾದಿತ ಎಲೆಗಳನ್ನು ಕತ್ತರಿಸಿ ಸುಡುವುದರಿಂದ ಅಡಿಕೆ ಎಲೆಚುಕ್ಕಿ ರೋಗದ ಸೋಂಕಿನ ತೀವ್ರತೆಯನ್ನು ಕಡಿಮೆಗೊಳಿಸಬಹುದು. ಮುಂಜಾಗ್ರತಾ ಕ್ರಮವಾಗಿ ಅಡಿಕೆ ಗೊನೆಗಳಿಗೆ ಮೈಲುತುತ್ತು/ಬೋರ್ಡೋ ಮಿಶ್ರಣ ಸಿಂಪಡಿಸುವಾಗ ಎಲೆಗಳಿಗೂ ಸಿಂಪಡಿಸಬೇಕು. ಹೆಚ್ಚು ರೋಗಬಾಧೆಯಿರುವ ತೋಟಗಳಲ್ಲಿ, ಮಳೆಯಿಲ್ಲದ ಸಮಯದಲ್ಲಿ ಪ್ರೊಪಿಕೊನಝೋಲ್ (Propiconazole 25EC) ಅಥವಾ ಟೆಬುಕೊನಝೋಲ್ (Tebuconazole 38.9Sc) ಅಥವಾ ಹೆಕ್ಸಾಕೊನಝೋಲ್ (Hexaconazole 5EC / 5SC) ಶಿಲೀಂಧ್ರನಾಶಕವನ್ನು ಒಂದು ಲೀಟರ್ ನೀರಿಗೆ ಒಂದು ಮಿ.ಲೀ. ಪ್ರಮಾಣದಲ್ಲಿ ಮರಗಳಿಗೆ ಸಿಂಪಡಿಸಬೇಕು. ಮೂರರಿಂದ ನಾಲ್ಕು ವಾರಗಳ ನಂತರ, ಪ್ರೋಪಿನೆಬ್ 70WP ಶಿಲೀಂಧ್ರನಾಶಕವನ್ನು ಒಂದು ಲೀಟರ್ ನೀರಿಗೆ ಎರಡು ಗ್ರಾಂ ಪ್ರಮಾಣದಲ್ಲಿ ಸಿಂಪಡಿಸಬೇಕು. ಶಿಲೀಂಧ್ರನಾಶಕ ದ್ರಾವಣ ತಯಾರಿಸುವಾಗ ಪ್ರತೀ ಲೀಟರ್ ದ್ರಾವಣಕ್ಕೆ ಒಂದು ಮಿ. ಲೀ. ಪ್ರಮಾಣದಲ್ಲಿ ಅಂಟನ್ನು ಸೇರಿಸಬೇಕು.

ಪೊಷಕಾಂಶ ನಿರ್ವಹಣೆ: ಈ ರೋಗವು ಪ್ರಮುಖವಾಗಿ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದ ಕೊಟ್ಟಿಗೆ ಗೊಬ್ಬರ ನೀಡುವ ಹಾಗೂ ಅಗತ್ಯ ಪ್ರಮಾಣದಲ್ಲಿ ಪೊಟಾಷ್ ಪೋಷಕಾಂಶ ನೀಡದ ತೋಟಗಳಲ್ಲಿ ಹೆಚ್ಚು ಕಂಡುಬರುತ್ತಿದ್ದು, ಮಣ್ಣು ಪರೀಕ್ಷೆ ಹಾಗೂ ವಯಸ್ಸಿನ ಆಧಾರದಲ್ಲಿ ಸೂಕ್ತ ಪೋಷಕಾಂಶಗಳನ್ನು ನೀಡಬೇಕು. ಪ್ರಮುಖವಾಗಿ ಪೊಟಾಷ್ ನೀಡಿಕೆ ಅತೀ ಮುಖ್ಯವಾಗಿದೆ. ಹುಳಿ ಮಣ್ಣನ್ನು ಸಮತೋಲನಗೊಳಿಸಲು ಕೃಷಿ ಸುಣ್ಣವನ್ನು 250 ಗ್ರಾಂ.ಗಳಷ್ಟು ಪ್ರತಿ ಮರಕ್ಕೆ ನೀಡಬೇಕು. ಸುಣ್ಣ ನೀಡಿದ ಮೂರರಿಂದ ನಾಲ್ಕು ವಾರಗಳ ನಂತರ ಸಾಮಾನ್ಯವಾಗಿ ಪ್ರತಿ ಅಡಿಕೆ ಮರಕ್ಕೆ 12 ಕಿಲೋ ಗ್ರಾಂ.ನಷ್ಟು ಹಟ್ಟಿಗೊಬ್ಬರ ಮತ್ತು ಹಸಿರೆಲೆ ಗೊಬ್ಬರ, ಯೂರಿಯ (220 ಗ್ರಾಂ), ರಾಕ್ ಫಾಸ್ಪೇಟ್ (200 ಗ್ರಾಂ) ಮತ್ತು ಪೊಟಾಷ್ (240-350 ಗ್ರಾಂ) ನೀಡಬೇಕು. ರಸಗೊಬ್ಬರಗಳನ್ನು ಎರೆಡು ಕಂತುಗಳಲ್ಲಿ ನೀಡುವುದು ಒಳಿತು. ಜೊತೆಗೆ ಲಘುಪೋಷಕಾಂಶಗಳಾದ ಸತುವಿನ ಸಲ್ಫೇಟ್ (5 ಗ್ರಾಂ) ಮತ್ತು ಬೊರಾಕ್ಸ (5 ಗ್ರಾಂ) ಕೂಡ ನೀಡಬಹುದು. ಬಸಿ ಕಾಲುವೆಗಳನ್ನು ಸ್ವಚ್ಛಗೊಳಿಸಿ ತೋಟಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ರೋಗ ಪೀಡಿತ ಪ್ರದೇಶಗಳಿಂದ ಅಡಿಕೆ ಸಸಿಗಳನ್ನು ರೋಗವಿಲ್ಲದ ಪ್ರದೇಶಕ್ಕೆ ಸಾಗಿಸಬಾರದು. ಗಾಳಿಯಲ್ಲಿ ರೋಗಾಣು ಬಹಳ ಬೇಗನೆ ಹರಡುವುದರಿಂದ ಸಮುದಾಯ ಮಟ್ಟದ ರೋಗ ನಿಯಂತ್ರಣಾ ಕ್ರಮಗಳು ಸಹ ಮುಖ್ಯವಾಗಿರುತ್ತವೆ. ಈ ಎಲ್ಲಾ ಕ್ರಮಗಳನ್ನು ಅನುಸರಿಸುವುದರಿಂದ ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಮಾಡಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜಿನ ಅಗತ್ಯ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮಂಗಳೂರು, ಜ.17: ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಇರಬೇಕು ಎನ್ನುವುದು ನನ್ನ...

ಕೋಟೆಕಾರ್ ಉಳ್ಳಾಲದ ಸಹಕಾರಿ ಬ್ಯಾಂಕ್ ದರೋಡೆ- ಮಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ತುರ್ತು ಸಭೆ

ಮಂಗಳೂರು, ಜ.17: ಕೋಟೆಕಾರ್ ಉಳ್ಳಾಲದ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ...

ಸಾಲಿಗ್ರಾಮ: ಯುವ ವೇದಿಕೆ 8ನೇ ವಾರ್ಷಿಕೋತ್ಸವ

ಕೋಟ, ಜ.17: ಯುವ ವೇದಿಕೆಯ ಸಮಾಜಮುಖಿ ಕಾರ್ಯಗಳು ಅತ್ಯಂತ ಪ್ರಶಂಸನೀಯ ಎಂದು...

ದೈಹಿಕ ವಿಕಲಚೇತನರಿಗೆ ಬ್ಯಾಟರಿ ಚಾಲಿತ ವೀಲ್ ಚೇರ್ ಸೌಲಭ್ಯ: ಅರ್ಜಿ ಆಹ್ವಾನ

ಉಡುಪಿ, ಜ.17: ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ...
error: Content is protected !!