ಉಡುಪಿ: ದೇಶದ ಆರ್ಥಿಕ ಸ್ವಾಯತ್ತತೆ, ಉದ್ಯೋಗ ಮತ್ತು ಮೂಲ ಸೌಲಭ್ಯಾಭಿವೃದ್ದಿ ಸಾಧನೆಯ ಗುರಿಯೊಂದಿಗೆ ಸ್ವಾತಂತ್ರ್ಯಾ ನಂತರದ 70 ವರ್ಷಗಳಲ್ಲಿ ಕಾಂಗ್ರೆಸ್ ತನ್ನ ಆಡಳಿತದುದ್ದಕ್ಕೂ ಕಟ್ಟಿ ಬೆಳೆಸಿದ ಸಾರ್ವಜನಿಕ ಸಹಯೋಗದ ಸರಕಾರೀ ಸ್ವಾಮ್ಯದ ಸಂಸ್ಥೆಗಳನ್ನು ಮಾರಾಟ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸರಕಾರ ದೇಶದ ಭವಿಷ್ಯಕ್ಕೆ ಕೊಡಲಿ ಏಟು ಹಾಕಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ 7 ವರ್ಷಗಳಿಂದ ದೇಶದಲ್ಲಿ 100ಲಕ್ಷ ಕೋಟಿಯ ಆಧುನಿಕ ಮೂಲಸೌಲಭ್ಯಾಭಿವೃದ್ದಿಯ ಯೋಜನೆಗಳನ್ನು ಜಾರಿಗೊಳಿಸಿ ಲಕ್ಷ ಲಕ್ಷ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಹೇಳುತ್ತಲೇ ಜನರನ್ನು ದಿಕ್ಕು ತಪ್ಪಿಸಿ, ಇದೀಗ ನೇಶನಲ್ ಮೊನಿಟೈಸೇಶನ್ ಪೈಪ್ಲಾಯಿನ್ ಯೋಜನೆಯ ಹೆಸರಲ್ಲಿ 6 ಲಕ್ಷ ಕೋಟಿಗೆ ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು, ಅವುಗಳಲ್ಲಿ ಅತೀ ಮುಖ್ಯವಾಗಿ ದೇಶದ ಬೆನ್ನೆಲುಬಾಗಿರುವ 26,700ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿಗಳು, ಪ್ರಮುಖ ರೈಲ್ವೆ ಲಾಯಿನ್ ಗಳೂ ಸೇರಿ 150 ರೈಲುಗಳು ಮತ್ತು 400 ರೈಲ್ವೆ ಸ್ಟೇಶನ್ ಗಳು ಹಾಗೂ ಗೂಡ್ಸ್ ಶೆಡ್ಡುಗಳು, 2.5೦ ಲಕ್ಷ ಕಿಮೀ ಉದ್ದದ ಬಿಎಸ್ಎನ್ ಎಲ್, ಎಂಟಿಎನ್ ಎಲ್ ಒಪ್ಟಿಕಲ್ ಫೈಬರ್ ಲಾಯಿನ್ ಗಳು, 170 ಕಲ್ಲಿದ್ದಲು ಹಾಗೂ ಕಬ್ಬಿಣದ ಅದುರು ಗಣಿಗಳು, 25 ಪ್ರಮುಖ ವಿಮಾನ ನಿಲ್ದಾಣಗಳು, 9 ನೇಶನಲ್ ಸ್ಟುಡಿಯಂಗಳು, ನೇಶನಲ್ ಪವರ್ ಪ್ಲೇಂಟುಗಳು ಹಾಗೂ ಪವರ್ ಜನರೇಟಿಂಗ್ ಯೂನಿಟ್ಟುಗಳು, ನೇಶನಲ್ ಗ್ಯಾಸ್ ಪೈಪ್ ಲಾಯಿನ್, ಪೆಟ್ರೋಲಿಯಂ ಪೈಪು ಲಾಯಿನ್ ಗಳು ಹಾಗೂ ದೇಶದ ಪ್ರಮುಖ ಆಹಾರ ಸಂಗ್ರಹಗಾರ ಮತ್ತು ಉಗ್ರಾಣಗಳನ್ನು ತಮ್ಮದೇ ಜನರಿಗೆ ಲೀಸಿನ ಹೆಸರಲ್ಲಿ ಮಾರುತ್ತಿರುವುದು ಆಳುವ ಸರಕಾರ ದೇಶವಾಸಿಗಳಿಗೆ ಮಾಡಿದ ಮಹಾಮೋಸ.
ಪರಿಣಾಮವಾಗಿ ದೇಶದಲ್ಲಿ ಪ್ರತ್ಯಕ್ಷ ಪರೋಕ್ಷ ಸುಮಾರು 2 ಕೋಟಿ ಉದ್ಯೋಗ ನಷ್ಟವಾಗಲಿದ್ದು ಇದು ಯುವ ಜನಾಂಗದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದಾರೆ. ಸಂಬಂಧಪಟ್ಟ ಸಂಸ್ಥೆಗಳ ಯೂನಿಯನ್ ಗಳಿಗಾಗಲಿ, ಪಾರ್ಲಿಮೆಂಟಿನಲ್ಲಿ ಪ್ರತಿಪಕ್ಷಗಳಿಗಾಗಲಿ ಈ ಬಗ್ಗೆ ಚರ್ಚಿಸುವ ಅವಕಾಶ ನೀಡದೆ ಸರಕಾರ ಏಕಪಕ್ಷೀಯವಾಗಿ ತೆಗೆದುಕೊಂಡ ಈ ನಿರ್ಣಯ ಸಂವಿಧಾನ ವಿರೋಧಿಯಾಗಿದೆ. ಈಗಾಗಲೇ ಕೃಷಿ ಮಸೂದೆಯನ್ನು ಇದೇ ರೀತಿ ಜಾರಿಗೊಳಿಸುವ ಮೂಲಕ ಕೃಷಿ ಕ್ಷೇತ್ರವನ್ನು ಬಂಡವಾಳಶಾಹಿಗಳ ಹಸ್ತಕ್ಷೇಪಕ್ಕೆ ಒಳಪಡಿಸಿದ ಸರಕಾರ, ಇದೀಗ ಈ ಯೋಜನೆಯ ಮೂಲಕ ಇಡೀ ದೇಶವನ್ನೆ ಖಾಸಗಿಯವರ ತೆಕ್ಕೆಗೆ ಹಾಕುತ್ತಿದೆ.
ಕಾಂಗ್ರೆಸ್ ದೇಶವನ್ನು ಮಾರುತ್ತಿದೆ ಎಂದು ವೇದಿಕೆಗಳಲ್ಲಿ ಕಾಂಗ್ರೆಸ್ಸಿನ ವಿರುದ್ದ ಮಿಥ್ಯಾರೋಪ ಹೊರಿಸಿ ಠೀಕಿಸುತ್ತ ದೇಶದ ಅಧಿಕಾರ ಹಿಡಿದ ಪ್ರಧಾನಿ ನರೇಂದ್ರ ಮೋದಿ ಇದೀಗ ತಾನೇ ಸ್ವತಃ ಅಪ್ರಭುದ್ದ ಆರ್ಥಿಕ ನೀತಿಯ ಅರ್ಥಮಂತ್ರಿಯ ಮೂಲಕ ದೇಶವನ್ನು ಖಾಸಗಿಯವರಿಗೆ ಮಾರಲು ಹೊರಟಿರುವುದು ವಿಪರ್ಯಾಸ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಠೀಕಿಸಿದ್ದಾರೆ.