ವಿದ್ಯಾಗಿರಿ: ಬದ್ಧತೆ ಹಾಗೂ ಜೀವಪರತೆ ಇದ್ದಾಗ ಮಾತ್ರ ಉತ್ತಮ ಛಾಯಾಚಿತ್ರಕಾರನಾಗಲು ಸಾಧ್ಯ ಎಂದು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯ ಛಾಯಾಗ್ರಾಹಕ ಫಕ್ರುದ್ದೀನ್ ಎಚ್. ಹೇಳಿದರು.
ವಿದ್ಯಾಗಿರಿಯ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಸ್ನಾತಕೋತ್ತರ ವಿಭಾಗದ ‘ಅಭಿವ್ಯಕ್ತಿ ವೇದಿಕೆ’ ಹಮ್ಮಿಕೊಂಡಿದ್ದ ‘ಪತ್ರಿಕಾ ಛಾಯಾಗ್ರಹಣ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ವೃತ್ತಿಯಲ್ಲಿ ಕೇವಲ ಹೆಸರು ಅಥವಾ ಹಣದ ಹಿಂದೆ ಹೋದರೆ ಉತ್ತಮ ಛಾಯಾಗ್ರಾಹಕ ಆಗಲು ಸಾಧ್ಯವಿಲ್ಲ. ಪತ್ರಿಕಾ ಛಾಯಾಗ್ರಹಣದಲ್ಲಿ ಆಸಕ್ತಿ, ಸ್ಪಂದನೆ ಬಹುಮುಖ್ಯ ಎಂದರು. ‘ಛಾಯಾಗ್ರಾಹಕರಿಗೆ ಕಾರ್ಯಕ್ಷಮತೆ ಹಾಗೂ ಸಮಯ ಪಾಲನೆ ಅಗತ್ಯ. ಆಗ ಯಶಸ್ವಿ ಆಗಲು ಸಾಧ್ಯ ಎಂದ ಅವರು, ಛಾಯಾಗ್ರಾಹಕರಾಗಿ ತಾವು ಎದುರಿಸಿದ ಕ್ಲಿಷ್ಟಕರ ಸನ್ನಿವೇಶಗಳನ್ನು ತೆರೆದಿಟ್ಟರು. ವಿಭಿನ್ನ ಸನ್ನಿವೇಶಗಳಲ್ಲಿ ಫೋಟೊ ತೆಗೆಯುವ ಸವಾಲುಗಳನ್ನು ಅವರು ತಿಳಿಸಿದರು. ಛಾಯಾಚಿತ್ರಗಳು ಹಾಗೂ ಕ್ಯಾಮೆರಾ ಬಿಡಿಭಾಗಗಳನ್ನು ಪ್ರದರ್ಶಿಸಿದ ಅವರು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಛಾಯಾಚಿತ್ರಗಳು ನೆನಪುಗಳನ್ನು ಮರುಕಳಿಸುವ ಮೂಲಕ ಇತಿಹಾಸವನ್ನು ಬಿಚ್ಚಿಡುತ್ತದೆ. ಛಾಯಾಗ್ರಹಣದ ಸಂಪೂರ್ಣ ಜ್ಞಾನವು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಬಹುಮುಖ್ಯ ಎಂದು ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಹೇಳಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುಶ್ಮಿತಾ ಹಾಗೂ ವಿದ್ಯಾರ್ಥಿ ಸಂಯೋಜಕ ಆನಂದ ಕಾರ್ಯಕ್ರಮ ಸಂಘಟಿಸಿದರು. ಉಪನ್ಯಾಸಕ ಹರ್ಷವರ್ಧನ ವಂದಿಸಿದರು. ವಿದ್ಯಾರ್ಥಿನಿ ಪವಿತ್ರಾ ಕಾರ್ಯಕ್ರಮ ನಿರೂಪಿಸಿದರು.