(ಉಡುಪಿ ಬುಲೆಟಿನ್ ವಿಶೇಷ ವರದಿ) ಉಡುಪಿ: ಹೆಚ್ಚುತ್ತಿರುವ ವಾಹನಗಳಿಂದ ನಗರದಲ್ಲಿ ಆಗಾಗ್ಗೆ ಟ್ರಾಫಿಕ್ ಜಾಮ್ ಆಗುವುದು ಹೊಸ ಸಂಗತಿಯೇನಲ್ಲ. ಸಂಚಾರಿ ಪೊಲೀಸರು ದಿನವಿಡೀ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಕರ್ತವ್ಯನಿರ್ವಹಿಸುತ್ತಾರೆ. ಸುಗಮ ಸಂಚಾರಕ್ಕೆ ಹೊಸತೊಂದು ತಲೆನೋವು ಎದುರಾಗಿದೆ. ಉಡುಪಿ ನಗರದ ಹಲವೆಡೆ ರಸ್ತೆಯಲ್ಲೇ ವ್ಯಾಪಾರ ನಡೆಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಅಥವಾ ನಗರದ ಪ್ರಮುಖ (ದಿನವಿಡೀ ಅಧಿಕ ಸಂಖ್ಯೆಯಲ್ಲಿ ವಾಹನ ಸಂಚಾರವಿರುವ) ರಸ್ತೆಯಲ್ಲಿಯೇ ವ್ಯಾಪಾರ ನಡೆಸಲು ಯಾವ ಇಲಾಖೆ ಅನುಮತಿ ನೀಡಿದೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ?
ಉಡುಪಿ ನಗರಸಭಾ ವ್ಯಾಪ್ತಿಯ ಕಲ್ಸಂಕ ಅಂಬಾಗಿಲು ರಸ್ತೆ ಸೇರಿದಂತೆ ಅಲ್ಲಲ್ಲಿ ವಾಹನಗಳಲ್ಲಿ, ತಳ್ಳುಗಾಡಿಗಳಲ್ಲಿ ರಸ್ತೆಯಲ್ಲಿಯೇ ವ್ಯಾಪಾರ ನಡೆಸುವ ಘಟನೆಗಳಿಂದ ವಾಹನ ಸವಾರರಿಗೆ ದಿನನಿತ್ಯ ತೊಂದರೆಯಾಗುತ್ತಿದೆ ಎಂಬ ಕೂಗನ್ನು ವಾಹನ ಸವಾರರು ವ್ಯಕ್ತಪಡಿಸಿದ್ದಾರೆ. ಜೋಳ, ಹಣ್ಣು ಹಂಪಲು, ಬೆಲ್ಟ್ ಇತ್ಯಾದಿ ವಸ್ತುಗಳನ್ನು ತುಂಬಿದ ವಾಹನಗಳು ರಸ್ತೆಯಲ್ಲಿಯೇ ನಿಲ್ಲಿಸಿ ವ್ಯಾಪಾರ ನಡೆಸುವುದರಿಂದ ಅದನ್ನು ಖರೀದಿಸುವವರು ನಡು ರಸ್ತೆಯಲ್ಲಿ ದಿಢೀರನೆ ಯಾವುದೇ ಸೂಚನೆಗಳಿಲ್ಲದೇ ವಾಹನಗಳನ್ನು ನಿಲ್ಲಿಸುವುದರಿಂದ ಹಿಂದೆ ಬರುವ ವಾಹನಗಳಿಗೆ ನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ. ಇಂತಹ ರಸ್ತೆಗಳಲ್ಲಿ ಸಾಮಾನ್ಯವಾಗಿ ಬಹಳ ವೇಗದಿಂದ ವಾಹನಗಳು ಸಂಚರಿಸುವುದರಿಂದ ಸವಾರರಿಗೆ ಅಡಚಣೆ ಉಂಟಾಗುತ್ತದೆ.
ರಸ್ತೆಯ ಒಂದಷ್ಟು ಭಾಗವನ್ನು ಆಕ್ರಮಿಸಿ ವ್ಯಾಪಾರ ನಡೆಸುವವರ ಬಗ್ಗೆ ಸಂಬಂಧಪಟ್ಟ ಇಲಾಖೆ ಜಾಣಮೌನಕ್ಕೆ ಶರಣಾದರೆ, ಮುಂದಿನ ದಿನಗಳಲ್ಲಿ ಯಾರದ್ದೋ ನಿರ್ಲಕ್ಷತನದಿಂದ ಅಪಘಾತಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವ ಎಲ್ಲಾ ಸಾಧ್ಯತೆಗಳಿವೆ.
ವ್ಯಾಪಾರ ನಡೆಸುವವರು ಇತರರಿಗೆ ತೊಂದರೆ ಆಗದ ರೀತಿಯಲ್ಲಿ ರಸ್ತೆಯನ್ನು ಬಿಟ್ಟು ಸುರಕ್ಷಿತ ಕಡೆಗಳಲ್ಲಿ ವ್ಯಾಪಾರ ನಡೆಸಲಿ. ರಸ್ತೆಯಲ್ಲಿಯೇ ವ್ಯಾಪಾರ ನಡೆಸುವುದು ಎಷ್ಟು ಸರಿ? ತಕ್ಷಣ ಸಂಬಂಧಪಟ್ಟ ಇಲಾಖೆಯವರು ಇದರ ಬಗ್ಗೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Why there is no action on Auto stand without permission? You will find every corner there are auto stand.