ಶಿರ್ವ: ಇಂದು ಯುವಜನರಲ್ಲಿ ದೇಶಭಕ್ತಿ, ಶಿಸ್ತು, ಸಮಯಪ್ರಜ್ಞೆ ಮೂಡಿಸುವ ಸಂಘಟನೆಗಳಲ್ಲಿ ವಿಶ್ವದ ಅತಿ ದೊಡ್ಡ ಯುವ ಸಂಘಟನೆಯಾದ ನ್ಯಾಷನಲ್ ಕೆಡೆಟ್ ಕಾರ್ಪ್ಸ್(ಎನ್.ಸಿ.ಸಿ) ಒಂದಾಗಿದೆ. ಯುವಜನರಲ್ಲಿ ರಾಷ್ಟ್ರಪ್ರೇಮ, ಸಮಾಜ ಸೇವಾ ಗುಣಗಳನ್ನು, ತಮ್ಮ ವ್ಯಕ್ತಿತ್ವ ವಿಕಸನ, ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಮಾತ್ರವಲ್ಲದೆ ಉತ್ತಮ ಉದ್ಯೋಗ ಅವಕಾಶಗಳನ್ನು ಪಡೆದುಕೊಳ್ಳಲು ಎನ್.ಸಿ.ಸಿ ಸಹಕಾರಿಯಾಗಿದೆ.
ಇಂದು ಬಹಳಷ್ಟು ಪ್ರಮುಖರು ಎನ್.ಸಿ.ಸಿಯ ಹಿನ್ನಲೆ ಇರುವವರು ಆಗಿರುವುದು ಗಮನಾರ್ಹ ಎಂದು ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಕಾಲೇಜಿನ ಭೂಯುವ ಸೇನಾ ದಳದಿಂದ ಏರ್ಪಡಿಸಿದ 73ನೇ ಎನ್.ಸಿ.ಸಿಯ ದಿನಾಚರಣೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆರಾಲ್ಡ್ ಐವನ್ ಮೋನಿಸ್ ರವರು ಹೇಳಿದರು.
ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಇಂದು ತಮ್ಮ ಪ್ರಾಣದ ಪರಮ ತ್ಯಾಗ ಮಾಡಿದ ವೀರಯೋಧರೀಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಈ ದಿನವನ್ನು ಪ್ರತಿವರ್ಷ ನವೆಂಬರ್ ನಾಲ್ಕನೇ ಭಾನುವಾರದಂದು ಆಚರಿಸಲಾಗುತ್ತಿದೆ ಎಂದು ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಉಲ್ಲೇಖಿಸಿದರು.
ಕ್ಯಾಡೆಟ್ ಎಲ್ರುಷಾ ಮಿಲಿನಾ ಡೇಸ ಕಾರ್ಯಕ್ರಮದ ಮುಖ್ಯ ಉದ್ದೇಶವನ್ನು ಮತ್ತು ಮಹತ್ವವನ್ನು ವಿವರಿಸಿದರು.
ವಿವಿಧ ತರಬೇತಿಯಲ್ಲಿ ಭಾಗವಹಿಸಿ ಬಹುಮಾನ ಪಡೆದ ಕ್ಯಾಡೆಟ್ ಗಳಾದ ಧೀರಜ್ ಆಚಾರ್ಯ, ದೀಪಕ್, ಮೋಹಿತ್ ಸಾಲಿಯನ್, ಜನಿಸಿಯಾ ನೊರೊನ್ಹಾ, ರಿಯಾ ಸೆರೆನಾ ಡಿಸೋಜಾ, ರತನ್ ಕುಮಾರ್ ಕೋಟ್ಯಾನ್, ಆಶಿಶ್ ಪ್ರಸಾದ್ ಇವರನ್ನು ಕಾಲೇಜಿನ ವತಿಯಿಂದ ಅಭಿನಂದಿಸಲಾಯಿತು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು ಮತ್ತು ಬಹುಮಾನವನ್ನು ವಿತರಿಸಲಾಯಿತು.
ಸಂಘದ ನಿರ್ದೇಶಕಿ ಯಶೋದ, ಜೂನಿಯರ್ ಅಂಡರ್ ಆಫೀಸರ್ ಸುರಕ್ಷಾ, ಅಧ್ಯಾಪಕ ವೃಂದ, ಆಡಳಿತ ಸಿಬ್ಬಂದಿ, ಎಲ್ಲಾ ಕ್ಯಾಡೆಟ್ ಗಳು ಉಪಸ್ಥಿತರಿದ್ದರು. ಕ್ಯಾಡೆಟ್ ಸನ ಅತಿಯ ಬಹುಮಾನ ಪಟ್ಟಿಯನ್ನು ವಾಚಿಸಿದರು.
ಸೀನಿಯರ್ ಅಂಡರ್ ಆಫೀಸರ್ ವಿಶಾಲ್ ಎಸ್ ಮೂಲ್ಯ ಸ್ವಾಗತಿಸಿ, ಜೂನಿಯರ್ ಅಂಡರ್ ಆಫೀಸರ್ ಹರ್ಷಿತಾ ವಂದಿಸಿದರು. ಕ್ಯಾಡೆಟ್ ಲೋಬೋ ರಿಯಾ ಆನ್ ನೆವಿಲ್ ಕಾರ್ಯಕ್ರಮವನ್ನು ಸಂಯೋಜಿಸಿದರು.