ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ- ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಯೋಜನೆಯೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಅಂತರ್ ವಲಯ ಪುರುಷರ ವಾಲಿಬಾಲ್ ಪಂದ್ಯಾಟ-2022-23 ಮಂಗಳ ಕ್ರೀಡಾಂಗಣ ವಾಲಿಬಾಲ್ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಕರ ಭಂಡಾರಿ ಎಂ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಕಿಶೋರ್ ಕುಮಾರ್ ಸಿ.ಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ, ಕಾಲೇಜನ್ನು ಮತ್ತು ಕಾಲೇಜಿನ ಕ್ರೀಡಾ ಇತಿಹಾಸದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಸಾಯಿ ಹಾಗೂ ಭಾರತ ಜೂನಿಯರ್ ವಾಲಿಬಾಲ್ ತಂಡದ ತರಬೇತುದಾರರಾದ ನಾರಾಯಣ್ ಆಳ್ವ ಜಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸುಧಾಕರನ್ ಟಿ. ಉಪಸ್ಥಿತರಿದ್ದರು.
ಪಂದ್ಯಾಟದ ಪರಿವೀಕ್ಷಕರಾಗಿ ಡಾ. ಕೇಶವಮೂರ್ತಿ ಅವರು ಮಾತಾನಾಡಿ, ಪಂದ್ಯಾಟದ ಹಾಗೂ ಆಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಸಂಯೋಜಕರಾದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಮೊಹಮ್ಮದ್ ರಫೀಕ್ ಸ್ವಾಗತಿಸಿ, ಕ್ರೀಡಾ ಕಾರ್ಯದರ್ಶಿ ಶಿವಲೀಲಾ ವಂದಿಸಿದರು. ರೇಷ್ಮಾ ಹಾಗೂ ಮೋಹಿತ್ ಕಾರ್ಯಕ್ರಮವನ್ನು ನಿರೂಪಿಸಿದರು.
ಬಹುಮಾನ ವಿತರಣಾ ಮತ್ತು ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗ ನಿರ್ದೇಶಕ ಡಾ. ಜೆರಾಲ್ಡ್ ಸಂತೋಷ್ ಡಿಸೋಜ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೆಶಕ ರವಿ ವೈ ನಾಯಕ್ ವಿಜೇತರಾದವರಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.
ಪಂದ್ಯಾಟದ ಪರಿವೀಕ್ಷಕರಾಗಿ ಡಾ. ಕೇಶವಮೂರ್ತಿ ಅವರು ತೀರ್ಪುಗಾರರಾಗಿ ಆಗಮಿಸಿ ಕ್ರೀಡಾಕೂಟ ಯಶಸ್ಸಿಗೆ ಕಾರಣರಾದ ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರಿಗೆ, ದಾನಿಗಳಿಗೆ ಹಾಗೂ ಅತ್ಯಂತ ಕ್ಲಿಷ್ಠಕರವಾದ ಸ್ಪರ್ಧೆಯನ್ನು ವಹಿಸಿಕೊಂಡ ಕಾಲೇಜಿಗೆ ಕೃತಜ್ಞತೆಯನ್ನು ಸಲ್ಲಿಸಿ ಆಯೋಜಿಸಿದ ಸ್ಪರ್ಧೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ಕಾಲೇಜಿನ ಮುಖ್ಯ ಶೈಕ್ಷಣಿಕ ಸಲಹೆಗಾರರು ಹಾಗೂ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವಸಂತಿ ಪಿ ಅಧ್ಯಕ್ಷತೆಯನ್ನು ವಹಿಸಿ ಸದ್ರಿ ಕ್ರೀಡಾಕೂಟದಲ್ಲಿ ಕೆಲವು ದಾಖಲೆಗಳನ್ನು ನಿರ್ಮಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗಳು ಪಠ್ಯ ಮತ್ತು ಕ್ರೀಡೆಯಲ್ಲಿ ಸರಿಯಾಗಿ ತೊಡಗಿಸಿಕೊಂಡಲ್ಲಿ ಭವ್ಯ ಭವಿಷ್ಯವನ್ನು ಕಾಣಬಹುದೆಂದರು.
ಫಲಿತಾಂಶ: ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಅಂತರ್ ವಲಯ ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಮಂಗಳೂರು ವಲಯ ಹಾಗೂ ಉಡುಪಿ ವಲಯ ಮಟ್ಟದಲ್ಲಿ ತೇರ್ಗಡೆಗೊಂಡ 8 ತಂಡಗಳು ಭಾಗವಹಿಸದ್ದು, ಪ್ರಥಮ ಸ್ಥಾನವನ್ನು ಆಳ್ವಾಸ್ ಕಾಲೇಜು ಮೂಡಬಿದ್ರೆ, ದ್ವಿತೀಯ ಸ್ಥಾನವನ್ನು ಎಸ್.ಡಿ.ಎಮ್ ಕಾಲೇಜು ಉಜಿರೆ, ತೃತೀಯ ಸ್ಥಾನವನ್ನು ಬ್ಯಾರೀಸ್ ಕಾಲೇಜು ಕೋಡಿ ಕುಂದಾಪುರ, ಚತುರ್ಥ ಸ್ಥಾನವನ್ನು ಅತಿಥೇಯ ಕಾಲೇಜು ಪಡೆದುಕೊಂಡಿರುತ್ತಾರೆ.
ಪಂದ್ಯಾಟದ ಬೆಸ್ಟ್ ಸೆಟ್ಟರ್ ಸೌರವ್, ಆಳ್ವಾಸ್ ಕಾಲೇಜು, ಮೂಡಬಿದ್ರೆ, ಬೆಸ್ಟ್ ಅಟ್ಯಾಕರ್ ನಿಖಿಲ್, ಎಸ್.ಡಿ.ಎಂ ಕಾಲೇಜು ಉಜಿರೆ, ಬೆಸ್ಟ್ ಆಲ್ ರೌಂಡರ್ ಶಿವು, ಆಳ್ವಾಸ್ ಕಾಲೇಜು, ಮೂಡಬಿದ್ರೆ ಇವರು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುತ್ತಾರೆ.