ಉಡುಪಿ: ನಾವು ನಮ್ಮದಲ್ಲದ ಭಾಷೆ ಮತ್ತು ಸಂಸ್ಕೃತಿಯನ್ನು ಅರ್ಥಮಾಡಿಕೊಂಡರೆ ಆ ಭಾಷೆಯ ಬಗ್ಗೆ ಅರಿವು ಹೆಚ್ಚಾಗಿ ಸೌಹಾರ್ದತೆ ಸಾಧ್ಯವಾಗುತ್ತದೆ. ತಮಿಳು- ಕನ್ನಡದ ದೃಷ್ಟಿಯಿಂದ ಇದು ಅತೀ ಮುಖ್ಯ. ಇದರಿಂದ ರಾಜ್ಯಗಳ ನಡುವಿನ ಹಲವು ಸಮಸ್ಯೆಗಳು ಪರಿಹಾರವಾಗಬಹುದು ಎಂದು ಖ್ಯಾತ ಭಾಷಾ ವಿದ್ವಾಂಸರು ಮತ್ತು ಮದ್ರಾಸ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ತಮಿಳ್ ಸೆಲ್ವಿ ಹೇಳಿದರು.
ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಕನ್ನಡ ವಿಭಾಗ ಮತ್ತು ಐ.ಕ್ಯೂ.ಎ.ಸಿ. ವತಿಯಿಂದ ನಡೆದ ‘ಕನ್ನಡ- ತಮಿಳು ಸಾಂಸ್ಕೃತಿಕ ಸಂಬಂಧ’ ಎಂಬ ರಾಷ್ಟ್ರೀಯ ಅಂತರ್ಜಾಲ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.
ಒಂದೇ ದ್ರಾವಿಡ ಮೂಲದಿಂದ ಬಂದ ಕನ್ನಡ ಮತ್ತು ತಮಿಳು ಭಾಷೆಗಳ ಭಾಷಿಕ ಮತ್ತು ಸಾಂಸ್ಕೃತಿಕ ಸಂಬಂಧಗಳು ಅತೀ ಪ್ರಾಚೀನವಾದುದು. ಇದಕ್ಕೆ ಶಾಸನ ಮತ್ತು ಸಾಹಿತ್ಯ ಕೃತಿಗಳಲ್ಲಿ ದಾಖಲೆಗಳಿವೆ. ಕನ್ನಡದ ಸಂಸ್ಕೃತಿ ಮತ್ತು ಭಾಷೆಗೆ ಚ್ಯುತಿ ಬರದ ರೀತಿಯಲ್ಲಿ ತಮಿಳು ಅರಸರು ಆಳಿದ್ದನ್ನು ಅವರು ದಾಖಲೆ ಸಹಿತ ವಿವರಿಸಿದರು. ಕನ್ನಡ ಮತ್ತು ತಮಿಳು ಭಾಷೆಗಳಿಗಿರುವ ಭಾಷಿಕ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಉದಾಹರಣೆಗಳ ಸಹಿತ ವಿವರಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಪ್ರೊ. ಸೋಮಣ್ಣ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ ತಮಿಳು ಮತ್ತು ಕನ್ನಡ ಭಾಷೆಯ ಸಂಬಂಧಗಳು ನಿರಂತರ ಮುಂದುವರಿಯುವ ಅಗತ್ಯವನ್ನು ಪ್ರತಿಪಾದಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣನಾಥ ಶೆಟ್ಟಿ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ಐ.ಕ್ಯೂ.ಎ.ಸಿ. ಸಂಚಾಲಕರಾದ ಡಾ. ಸುರೇಶ್ ರೈ ಕೆ. ಉಪಸ್ಥಿತರಿದ್ದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಪ್ರೊ. ರಾಧಾಕೃಷ್ಣ ಸ್ವಾಗತಿಸಿ, ಪ್ರೊ.
ರತ್ನಮಾಲಾ ವಂದಿಸಿದರು. ಕನ್ನಡ ವಿಭಾಗ ಸಹಾಯಕ ಪ್ರಾಧ್ಯಾಪಕರಾದ ಡಾ. ಹೆಚ್.ಕೆ. ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು.