ಮನೆಯಲ್ಲಿ ಒಂದು ಗೋವನ್ನು ಸಾಕುವುದೇ ಸವಾಲಾಗಿದೆ ಎಂದು ಹಲವಾರು ಮಂದಿ ಮಾತನಾಡಿಕೊಳ್ಳುವ ಕಾಲಘಟ್ಟದಲ್ಲಿ ಸಕ್ರಿಯ ರಾಜಕೀಯದಲ್ಲಿರುವವರ ಮನೆಯಲ್ಲಿ ’ಗೋಶಾಲೆ’ ಇದೆ ಎಂದರೆ ಅದು ಸಾಮಾನ್ಯ ವಿಚಾರವಲ್ಲ. ಪ್ರತಿದಿನ ಬಿಡುವಿಲ್ಲದ ದಿನಚರಿ ಇರುವ ರಾಜಕಾರಣಿಯೊಬ್ಬರು ಗೋವುಗಳ ಸೇವೆಯನ್ನೂ ಮಾಡುವುದು ಎಂದರೆ ಅದು ಇತರರಿಗೆ ಮಾದರಿ.
ಇದು ನಮ್ಮದೇ ಜಿಲ್ಲೆಯ ಒಬ್ಬ ಪ್ರಭಾವಿ ರಾಜಕಾರಣಿಯ ಮನೆಯಲ್ಲಿರುವ ಗೋಶಾಲೆಯ ವರ್ಣನೆ. ಹೌದು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಅಮ್ಮುಂಜೆಯಲ್ಲಿರುವ ಮನೆಯಲ್ಲಿ ಗೋಶಾಲೆಯೂ ಇದೆ ಎಂದು ಬಹುತೇಕ ಮಂದಿಗೆ ತಿಳಿದಿದೆ ಮಾತ್ರವಲ್ಲದೇ ಆಕರ್ಷಣೆಯ ಕೇಂದ್ರವೂ ಆಗಿದೆ. ಗೋವುಗಳ ಬಗ್ಗೆ ಅತೀವ ಪ್ರೀತಿಯಿಂದ ತಮ್ಮ ಬಳಿಯೇ ಗೋವುಗಳ ವಾಸಸ್ಥಾನವಿರಬೇಕು ಎಂದು ಪ್ರಮೋದ್ ಮಧ್ವರಾಜ್ ಸುಸಜ್ಜಿತವಾದ ಗೋಶಾಲೆಯನ್ನು ನಿರ್ಮಿಸಿದ್ದು ಪ್ರತಿದಿನವೂ ಗೋಸೇವೆಯನ್ನು ಮಾಡುತ್ತಾರೆ. ದೀಪಾವಳಿ ಸಂದರ್ಭದಲ್ಲಿ ಗೋಶಾಲೆಯಲ್ಲಿ ಅಕ್ಷರಶಃ ಹಬ್ಬದ ವಾತಾವರಣ. ಅಂದು ಗೋವುಗಳಿಗೆ ವಿಶೇಷ ಅಲಂಕಾರದ ಜೊತೆಗೆ ಬಗೆಬಗೆಯ ಖಾದ್ಯ. ಅಷ್ಟು ಮಾತ್ರವಲ್ಲದೇ ಸ್ವತಃ ಪ್ರಮೋದ್ ಮಧ್ವರಾಜ್ ಅವರೇ ಗೋವುಗಳಿಗೆ ಆರತಿಯನ್ನು ಬೆಳಗಿ ಪೂಜೆ ಸಲ್ಲಿಸುತ್ತಾರೆ.
ಗೋಶಾಲೆಗೆ ಶುಕ್ರವಾರ ಮುಸ್ಸಂಜೆಯ ಸಮಯದಲ್ಲಿ ಲಕ್ಷ್ಮೀಯ ಆಗಮನವಾಗುವ ಮೂಲಕ ಗೋಶಾಲೆಯ ಮೆರುಗು ಹೆಚ್ಚಾಗಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.