ಉಡುಪಿ: ಜೀರ್ಣೋದ್ಧಾರಗೊಳ್ಳುತ್ತಿರುವ ಉಡುಪಿ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಮರದ ಕೆತ್ತನೆ ಕೆಲಸದ ಮುಹೂರ್ತವು ಸೆಪ್ಟೆಂಬರ್ 19 ಅನಂತ ಚತುರ್ದಶಿಯ ಪರ್ವಕಾಲ ಸಾಯಂಕಾಲ 4.00 ಗಂಟೆಗೆ ದೇವಸ್ಥಾನದ ಪ್ರಾಂಗಣದಲ್ಲಿ ನಡೆಯಲಿದೆ.
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಶಾಸಕ ಕೆ. ರಘುಪತಿ ಭಟ್, ಉಡುಪಿ ಜಿಲ್ಲಾ ಬಿಲ್ಡರ್ಸ ಅಸೋಸಿಯೇಷನ್ ಅಧ್ಯಕ್ಷರಾದ ಜೆರ್ರಿ ವಿನ್ಸೆಂಟ್ ಡಯಾಸ್ ಮತ್ತು ಇನ್ನಿತರ ಗಣ್ಯರು ಆಗಮಿಸಲಿದ್ದಾರೆ.
ಮೊದಲಿಗೆ ಶ್ರೀ ದೇವಳದಲ್ಲಿ ಪ್ರಾರ್ಥನೆ, ಬಳಿಕ ಮರದ ಕೆತ್ತನೆ ಕಾರ್ಯದ ಆರಂಭ ಪೂಜೆಯ ನಂತರ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.