ಪಟ್ಲ: ರೋಟರಿ ಉಡುಪಿ ಇದರ ಯು.ಎಸ್. ನಾಯಕ್ ಪ್ರೌಢಶಾಲೆ ಪಟ್ಲ ಇಂಟರಾಕ್ಟ್ ಕ್ಲಬ್ ಪದಪ್ರಧಾನ ಸಮಾರಂಭ ಇಂದು ಶಾಲೆಯ ಸಭಾಂಗಣದಲ್ಲಿ ನಡೆಯಿತು. ರೋಟರಿ ಉಡುಪಿ ಅಧ್ಯಕ್ಷ ಹೇಮಂತ ಯು ಕಾಂತ್ ಪದಪ್ರಧಾನ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಣ್ಣ ಸಣ್ಣ ಆಲೋಚನೆಯನ್ನು ಕಾರ್ಯರೂಪಕ್ಕೆ ತಂದರೆ ಅವುಗಳಿಂದ ದೀರ್ಘಾವಧಿಯ ಪ್ರಯೋಜನಗಳಿವೆ. ಸವಾಲಿನಲ್ಲಿ ಅವಕಾಶವನ್ನು ಹುಡುಕಿಕೊಂಡು ಅದಮ್ಯ ಆತ್ಮವಿಶ್ವಾಸದಿಂದ ಶಿಸ್ತುಬದ್ಧ ಜೀವನವನ್ನು ಮೈಗೂಡಿಸಿಕೊಂಡರೆ ಯಶಸ್ಸು ಶತಃಸಿದ್ಧ ಎಂದರು.
ಮುಖ್ಯೋಪಾಧ್ಯಾಯ ಶ್ರೀಕಾಂತ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಲಭ್ಯವಿರುವ ಸಂಪನ್ಮೂಲಗಳ ಸದ್ಬಳಕೆಯನ್ನು ಮಾಡಿ ವಿದ್ಯಾರ್ಥಿಗಳು ಸಮಾಜಮುಖಿಯಾಗಿ ಬೆಳೆದರೆ ದೇಶಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದಂತಾಗುತ್ತದೆ ಎಂದರು. ಉಪನ್ಯಾಸಕ ಗಣೇಶ್ ಪ್ರಸಾದ್ ಜಿ. ನಾಯಕ್ ಸಂಪನ್ಮೂಲ ವ್ಯಕ್ತಿಯಾಗಿ ಪರಿಸರ ಸಂರಕ್ಷಣೆ ಕುರಿತು ಮಾತನಾಡಿದರು. ಪರಿಸರವನ್ನು ರಕ್ಷಣೆ ಮಾಡಿದರೆ ಪರಿಸರವೇ ನಮ್ಮನ್ನು ರಕ್ಷಿಸುತ್ತದೆ. ಮರುಬಳಕೆಯ ವಸ್ತುಗಳನ್ನು ಬಳಸಲು ವಿದ್ಯಾರ್ಥಿಗಳು ಮುಂದೆ ಬಂದು ಇತರರಲ್ಲಿಯೂ ಇದರ ಬಗ್ಗೆ ಅರಿವನ್ನು ಮೂಡಿಸಿದರೆ ಮಹತ್ವದ ಹೆಜ್ಜೆಯನ್ನು ಇಟ್ಟ ಹಾಗೆ ಆಗುತ್ತದೆ. ಕೃಷಿಯ ಬಗ್ಗೆ ಆಸಕ್ತಿ ಹೆಚ್ಚಾದರೆ ಆರೋಗ್ಯವೂ ಸುಧಾರಿಸುತ್ತದೆ ಎಂದರು.
ಇಂಟರಾಕ್ಟ್ ಸಭಾಪತಿ ವನಿತಾ ಉಪಾಧ್ಯಾಯ, ರೋಟರಿ ಉಡುಪಿ ಕಾರ್ಯದರ್ಶಿ ಜೆ. ಗೋಪಾಲಕೃಷ್ಣ ಪ್ರಭು, ಶಿಕ್ಷಕ ಸಂಯೋಜಕ ನಟರಾಜ್, ರಾಮಚಂದ್ರ ಉಪಾಧ್ಯಾಯ, ಗುರುರಾಜ್ ಭಟ್, ಇಂಟರಾಕ್ಟ್ ನಿಕಟಪೂರ್ವ ಅಧ್ಯಕ್ಷ ಶರತ್ ನಾಯಕ್, ನೂತನ ಇಂಟರಾಕ್ಟ್ ಅಧ್ಯಕ್ಷೆ ದೀಪ್ತಿ, ಕಾರ್ಯದರ್ಶಿ ಅನನ್ಯ ಉಪಸ್ಥಿತರಿದ್ದರು.
ರೋಟರಿ ಉಡುಪಿ ವತಿಯಿಂದ ವಿದ್ಯಾಸೇತು ಶಿಕ್ಷಣ ಮಾರ್ಗದರ್ಶಿ ಗ್ರಂಥಗಳನ್ನು ವಿತರಿಸಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.