(ಉಡುಪಿ ಬುಲೆಟಿನ್ ವಿಶೇಷ ವರದಿ) ಪ್ರತಿಯೊಂದು ಆಚರಣೆಗೂ ಕಲಾವಿದರ ನಂಟು ಇರುತ್ತದೆ. ಅದರಲ್ಲೂ ಗಣೇಶ ಚ್ರತುರ್ಥಿ ಆಚರಣೆಗೆ ಹಾಗೂ ಆವೆ ಮಣ್ಣಿನ ಕಲಾವಿದರ ಬದುಕಿನ ನಡುವಿನ ಸಂಬಂಧವು ಹಲವಾರು ರೀತಿಯಲ್ಲಿ ವರ್ಣಿಸಬಹುದು. ತಮ್ಮಲ್ಲಿರುವ ಅಗಾಧ ಜ್ಞಾನ, ಪ್ರತಿಭೆ ಹಾಗೂ ಕೌಶಲ್ಯದ ಪರಿಣಾಮಕಾರಿಯಾದ ಮಿಶ್ರಣವನ್ನು ಮಾಡಿ ಗಣೇಶನ ವಿಗ್ರಹಕ್ಕೆ ಜೀವ ತುಂಬುವ ಕೆಲಸದಲ್ಲಿ ಅದೆಷ್ಟೋ ಮಂದಿ ಕಲಾವಿದರು ತೊಡಗಿಸಿಕೊಂಡಿದ್ದಾರೆ. ತಮ್ಮಲ್ಲಿರುವ ಕಲೆಯ ಜೀವಂತಿಕೆಯನ್ನು ಉಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನಗಳನ್ನು ಸಾಕಷ್ಟು ಮಂದಿ ಕಲಾ ಆರಾಧಕರು ನಡೆಸುತ್ತಿದ್ದಾರೆ. ಅಂತಹ ಅಪರೂಪದ ಕಲಾ ಆರಾಧಕರ ಪಟ್ಟಿಗೆ ಉಡುಪಿ ತಾಲೂಕಿನ ಅಂಬಾಗಿಲು ನಿವಾಸಿ ಬಾಲಚಂದ್ರ ಗಾಂಸ್ಕರ್ ಸೇರುತ್ತಾರೆ.
ಅಂಬಾಗಿಲು ಬಾಲಣ್ಣ ಎಂದು ಸ್ಥಳೀಯರಿಂದ ಕರೆಯಲ್ಪಡುವ ಇವರು ಕಳೆದ 33 ವರ್ಷಗಳಿಂದ ಬಟ್ಟೆಯ ಬ್ಯಾನರ್ ತಯಾರಿಸುವಲ್ಲಿ ತೊಡಗಿಸಿಕೊಂಡಿದ್ದು, ಎರಡು ದಶಕಗಳಿಂದ ಗಣೇಶನ ವಿಗ್ರಹವನ್ನೂ ರಚಿಸುತ್ತಿದ್ದಾರೆ. 20 ವರ್ಷಗಳ ಹಿಂದೆ ಸ್ವ-ಇಚ್ಛೆಯಿಂದ ಗಣೇಶನ ವಿಗ್ರಹ ರಚನೆ ಆರಂಭಿಸಿಯೇ ಬಿಟ್ಟ ಬಾಲಚಂದ್ರ ಗಾಂಸ್ಕರ್ ಅವರು ಬಳಿಕ ಹಿಂದಿರುಗಿ ನೋಡಲಿಲ್ಲ. ತಮ್ಮ ಕಲಾಪ್ರೌಢಿಮೆಯಿಂದ ಅತ್ಯಾಕರ್ಷಕ ಹಾಗೂ ಶಾಸ್ತ್ರಕ್ಕನುಸಾರವಾಗಿ ಗಣಪತಿಯ ಮಣ್ಣಿನ ಮೂರ್ತಿಯನ್ನು ನಿರ್ಮಿಸುವಲ್ಲಿ ಬಾಲಚಂದ್ರರು ನಿಸ್ಸೀಮರು.
ಚೌತಿಯ ಸಮಯ ಸಮೀಪಿಸುತ್ತಲೇ ಹಲವಾರು ಮಂದಿ ಪ್ರತಿದಿನ ಇವರು ರಚಿಸಿರುವ ಮೂರ್ತಿಗಳನ್ನು ಕಣ್ತುಂಬಿಕೊಳ್ಳಲು ಬಂದು ಒಂದಿಷ್ಟು ಚಿತ್ರಗಳನ್ನು ತೆಗೆಯುವುದು ರೂಢಿಯಾಗಿ ಬಿಟ್ಟಿದೆ. ಆವೆಮಣ್ಣಿನ ಮುದ್ದೆಯು ವಿವಿಧ ಶೈಲಿಯ ಗಣೇಶನ ವಿಗ್ರಹಗಳಾಗಿ ರೂಪುಗೊಳ್ಳುವುದನ್ನು ಕುತೂಹಲದಿಂದ ನೋಡಲು ಇವರ ಗರಡಿಗೆ (ಬಾಲು ಆರ್ಟ್ಸ್) ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರೂ ಸಾಲು ಸಾಲಾಗಿ ಬಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಇಲ್ಲಿಯವರೆಗೆ ಸುಮಾರು 560 ಕ್ಕೂ ಹೆಚ್ಚಿನ ವಿವಿಧ ಭಂಗಿಗಳ ಗಣೇಶ ವಿಗ್ರಹಗಳನ್ನು ರಚಿಸಿರುವ ಇವರು ಕಳೆದ 16 ವರ್ಷಗಳಿಂದ ಹಳದೀಪುರ ಮಠದ ವಾಮನಾಶ್ರಮ ಸ್ವಾಮೀಜಿಗಳಿಗೆ ಜನ್ಮಾಷ್ಟಮಿಯಂದು ಪೂಜಿಸಲು ಶ್ರೀ ಕೃಷ್ಣನ ವಿಗ್ರಹವನ್ನೂ ನಿರ್ಮಿಸಿ ಸೇವೆ ರೂಪದಲ್ಲಿ ನೀಡುತ್ತಿದ್ದಾರೆ. ಇದಲ್ಲದೆ ನವರಾತ್ರಿ ಸಂದರ್ಭದಲ್ಲಿ ಶಾರದೆಯ ವಿಗ್ರಹವನ್ನು ರಚಿಸುತ್ತಿದ್ದಾರೆ. ಇವರು ತನ್ನ ಕೈಚಳಕದಿಂದ ಗಣೇಶನನ್ನು ಹಲಸಿನ ಹಣ್ಣು, ತಾವರೆ, ತೆಂಗಿನ ಕಾಯಿಗಳ ರಾಶಿಯ ಮೇಲೆ ಕುಳ್ಳಿರಿಸಿದ್ದಾರೆ.
ವಿಗ್ರಹಕ್ಕೆ ಕೈಯನ್ನು ಜೋಡಿಸುತ್ತಾ ‘ಉಡುಪಿ ಬುಲೆಟಿನ್’ ಜೊತೆಗೆ ಮಾತಿಗಿಳಿದ ಬಾಲಣ್ಣ, ತನ್ನ ಶ್ರಮದ ಬಗ್ಗೆ ಒಂದಿಷ್ಟು ಬೆಳಕನ್ನು ಚೆಲ್ಲಿದರು. ಗಣೇಶ ಚತುರ್ಥಿಯ ಆಗಮನಕ್ಕೆ ಎರಡೂವರೆ ತಿಂಗಳಿರುವಾಗಲೇ ಸುತ್ತಮುತ್ತಲಿನ ಪರಿಸರದ ಆವೆಮಣ್ಣನ್ನು ಸಂಗ್ರಹಿಸಿ ವಿಗ್ರಹ ರಚನೆಯನ್ನು ಆರಂಭಿಸುತ್ತೇನೆ. ಪ್ರತಿನಿತ್ಯ ಮಧ್ಯರಾತ್ರಿ 12 ರಿಂದ 1 ಗಂಟೆಯವರೆಗೆ ವಿಗ್ರಹ ರಚನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ವಿಗ್ರಹವನ್ನು ಮಧ್ಯದಲ್ಲಿರಿಸಿ ಅತ್ತಿತ್ತ ತಿರುಗಿಸಲು ಅನುಕೂಲವಾಗುವ ಸ್ಟಾಂಡ್ ಸಹಿತ ಇನ್ನಿತರ ಉಪಕರಣಗಳನ್ನು ನಾನೇ ನಿರ್ಮಿಸಿದ್ದೇನೆ.
ಗುರುಗಳಾದ ಅಲೆವೂರಿನ ಕಲಾಪ್ರತಿಭದ ಶೇಖರ್ ಹಾಗೂ ಮಲ್ಪೆಯ ನೂತನ್ ಆರ್ಟ್ಸಿನ ಭಾಸ್ಕರ್ ಕೋಟ್ಯಾನ್ ಅವರ ಜೊತೆಗೆ ಜಿಲ್ಲೆಯ ಬಹುತೇಕ ಎಲ್ಲಾ ವಿಗ್ರಹ ರಚನೆಕಾರರ ಪ್ರಭಾವವು ನನ್ನ ಮೇಲಿದೆ ಎಂದು ಅವರೆಲ್ಲರನ್ನೂ ಸ್ಮರಿಸುವ ಬಾಲಚಂದ್ರ ಗಾಂಸ್ಕರ್, ತಮ್ಮ ಕಲೆಯನ್ನು ಅಭಿವೃದ್ಧಿಪಡಿಸಲು ಹಲವಾರು ಗಣೇಶ ಚತುರ್ಥಿ ಪೆಂಡಾಲುಗಳಿಗೆ ಭೇಟಿ ನೀಡಿ ವಿಗ್ರಹಗಳ ಸೂಕ್ಷ್ಮ ಅಂಶಗಳನ್ನು ಅರಿಯುತ್ತ ತನ್ನ ಕಲೆಯಲ್ಲಿ ಹೊಸತನವನ್ನು ಯಾವ ರೀತಿ ಬೆರೆಸಬಹುದು ಎಂದು ಅಧ್ಯಯನಿಸಲು ದೂರದ ಬೆಳಗಾವಿ, ಹೊನ್ನಾವರ ಹಾಗೂ ಇನ್ನಿತರ ಕಡೆಗಳಿಗೆ ಪ್ರಯಾಣಿಸಿದ್ದಾರೆ.
ಕಲೆಯು ನಿಂತ ನೀರಾಗಬಾರದು ಅದು ಚಲನಶೀಲವಾಗಬೇಕು ಎಂಬ ಧ್ಯೇಯವನ್ನಿಟ್ಟಿರುವ ಬಾಲಚಂದ್ರ ಗಾಂಸ್ಕರ್ ತನಗೆ ಹಣ ಮುಖ್ಯವಲ್ಲ, ಕಲೆಯನ್ನು ಉಳಿಸಿ ಬೆಳೆಸಿ ಪೋಷಿಸುವುದೇ ತನ್ನ ಮುಖ್ಯ ಗುರಿ ಎಂದಿದ್ದಾರೆ. ಹಂಚಿನ ಕಾರ್ಖಾನೆಗಳು ಮುಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಆವೆ ಮಣ್ಣಿನ ಕೊರತೆಯ ನಡುವೆಯೂ ಬೇರೆ ಬೇರೆ ಮೂಲಗಳಿಂದ ಆವೆ ಮಣ್ಣನ್ನು ಸಂಗ್ರಹಿಸಿ ಕಲೆಯನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿರುವ ಬಾಲಚಂದ್ರ ಗಾಂಸ್ಕರ್, ಹಂಚಿನ ಕಾರ್ಖಾನೆಗಳನ್ನು ಉಳಿಸಲು ಸರಕಾರವು ಸೂಕ್ತ ಕ್ರಮಗಳನ್ನು ಕೈಗೊಳ್ಳವ ಜೊತೆಗೆ ಆವೆ ಮಣ್ಣಿನ ವಿಗ್ರಹ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಬಾಲಣ್ಣನವರಿಗೆ ಅನೇಕ ಪ್ರಶಸ್ತಿಗಳು ಹುಡುಕಿ ಬಂದಿದ್ದು, ಪ್ರತಿಭಾ ಕಾರಂಜಿ ಸಹಿತ ಹಲವಾರು ಸ್ಪರ್ಧೆಗಳಲ್ಲಿ ಆವೆ ಮಣ್ಣಿನ ಕಲೆ ವಿಭಾಗದ ತೀರ್ಪುಗಾರರಾಗಿಯೂ ಇವರನ್ನು ಆಹ್ವಾನಿಸುತ್ತಾರೆ. ಕರ್ನಾಟಕ ಕಲಾವಿದರ ಸಂಘ, ಮನೆ ಮನೆ ಚಿತ್ರಕಲೆ ಕಲಾವಿದರ ಒಕ್ಕೂಟದಲ್ಲಿ ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡಿರುವ ಇವರು ಜಿಲ್ಲೆಯ ಪ್ರಗತಿಪರ ಕಲಾವಿದರಾಗಿ ಮೂಡಿ ಬಂದಿದ್ದಾರೆ ಎಂದರೆ ಅತಿಶಯೋಕ್ತಿ ಆಗಲಾರದು.