ಮಣಿಪಾಲ: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮಾಹೆ ಮಣಿಪಾಲದ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ವತಿಯಿಂದ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಸಪೋರ್ಟ್ ಗ್ರೂಪ್ ನ ಉದ್ಘಾಟನೆ ಮತ್ತು ಮೇದೋಜ್ಜೀರಕ ಗ್ರಂಥಿಗೆ ಸಂಬಂಧಿಸಿದ ಕ್ಯಾನ್ಸರ್‌ಗೆ ಬಹುಶಿಸ್ತಿನ ಚಿಕಿತ್ಸಾ ವಿಧಾನದ ಕುರಿತು ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ವಿಶಾಖಪಟ್ಟಣದ ಹೋಮಿಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಉಮೇಶ್ ಮಹಾಂತಶೆಟ್ಟಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಸಮಗ್ರ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವು ಕರಾವಳಿ ಕರ್ನಾಟಕ ಭಾಗದಲ್ಲಿ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಚಿಕಿತ್ಸಾ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿದ್ದು, ದೇಶದ ಅಗ್ರ ಕ್ಯಾನ್ಸರ್ ಕೇಂದ್ರಗಳಲ್ಲಿ ಒಂದಾಗಿದೆ.
ಟಾಟಾ ಮೆಮೋರಿಯಲ್ ಆಸ್ಪತ್ರೆ ಮುಂಬೈ 2008 ರಲ್ಲಿ pancreaticcancerindia.com ಅನ್ನು ಪ್ರಾರಂಭಿಸಿತು. ಇದು ಮೇದೋಜ್ಜೀರಕ ಗ್ರಂಥಿಗೆ ಸಂಬಂಧಿಸಿದ ಕ್ಯಾನ್ಸರ್‌ಗಳಿಗೆ ಚಿಕಿತ್ಸೆ ನೀಡಲು, ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ನಿರ್ವಹಣೆಯನ್ನು ಕೇಂದ್ರೀಕರಿಸಲು ಮತ್ತು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ಗಳ ಕುರಿತು ಅರಿವು ಮೂಡಿಸಲು ಮತ್ತು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಬೆಂಬಲ ಗುಂಪಿನ ಚಟುವಟಿಕೆಗಳನ್ನು ನಡೆಸಲು ಸಹಾಯ ಮಾಡಿತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿದ್ದ ಮಾಹೆ ಮಣಿಪಾಲದ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಮಾತನಾಡಿ, ಮಣಿಪಾಲದ ಸಮಗ್ರ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವು ಕಳೆದ ಐದು ವರ್ಷಗಳಲ್ಲಿ ಅತ್ಯಂತ ಸಮರ್ಥ ಕ್ಯಾನ್ಸರ್ ಶಸ್ತ್ರಚಿಕಿತ್ಸಕರು, ರೇಡಿಯೋಥೆರಪಿ ಆಂಕೊಲಾಜಿಸ್ಟ್, ವೈದ್ಯಕೀಯ ಆಂಕೊಲಾಜಿಸ್ಟ್, ಉಪಶಾಮಕ ಔಷಧಿಗಳ ತಜ್ಞರೊಂದಿಗೆ ಸಮಗ್ರವಾಗಿದೆ. ಅಲ್ಲದೇ ಕೇಂದ್ರದಲ್ಲಿ ವಿಶೇಷ ತಜ್ಞ ಶುಶ್ರೂಷಾ ಆರೈಕೆಯನ್ನು ಒದಗಿಸಲಾಗುತ್ತಿದೆ ಮತ್ತು ಕೇಂದ್ರವು ದೇಶದ ಶ್ರೇಷ್ಠ ಕ್ಯಾನ್ಸರ್ ಕೇಂದ್ರವಾಗುವ ಹಾದಿಯಲ್ಲಿದೆ.
ಭಾರತದಲ್ಲಿ ಪ್ರತಿ ವರ್ಷ 10000 ಕ್ಕೂ ಹೆಚ್ಚು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ. ಅವುಗಳಲ್ಲಿ ಶೇಕಡಾ 10 ರಿಂದ 20 ರಷ್ಟು ಮಾತ್ರ ಶಸ್ತ್ರಚಿಕಿತ್ಸೆಯಿಂದ ಗುಣಪಡಿಸಬಹುದಾಗಿದೆ. ಆದಾಗ್ಯೂ ಶಸ್ತ್ರಚಿಕಿತ್ಸಾ ತಂತ್ರಗಳಲ್ಲಿನ ಪರಿಷ್ಕರಣೆಗಳು ಮತ್ತು ಸುಧಾರಿತ ವಿಕಿರಣ ಚಿಕಿತ್ಸೆಯ ತಂತ್ರಗಳೊಂದಿಗೆ ಹೆಚ್ಚು ಹೆಚ್ಚು ಪ್ರಕರಣಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿದೆ.
10 ವರ್ಷಗಳ ಹಿಂದೆ ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಗೆ ಹೆಚ್ಚಾಗಿ ಉಪಶಮನಕಾರಿ ಔಷಧಿಯನ್ನು ಬಳಸಲಾಗುತಿತ್ತು. ಆದಾಗ್ಯೂ, ಶಸ್ತ್ರಚಿಕಿತ್ಸಾ ತಂತ್ರಗಳಲ್ಲಿನ ಪರಿಷ್ಕರಣೆಗಳೊಂದಿಗೆ, ಸುಧಾರಿತ ಕೀಮೋಥೆರಪಿ ಮತ್ತು ವಿಕಿರಣ ಚಿಕಿತ್ಸೆಯ ತಂತ್ರಗಳು ಮತ್ತು ಕ್ಯಾನ್ಸರ್ ಆರೈಕೆಯ ಪುರಾವೆ ಆಧಾರಿತ ಅಭ್ಯಾಸವು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಚಿಕಿತ್ಸಾ ಫಲಿತಾಂಶಗಳನ್ನು ಸುಧಾರಿಸಿದೆ ಎಂದರು.
ಕೆಎಂಸಿ ಡೀನ್ ಡಾ. ಶರತ್ ಕುಮಾರ್ ರಾವ್ ಸ್ವಾಗತಿಸಿ, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ವಂದಿಸಿದರು. ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ನವೀನ ಕುಮಾರ್ ಅವರು ಪ್ಯಾಂಕ್ರಿಯಾಟಿಕ್ ಸಪೋರ್ಟ್ ಗ್ರೂಪ್ ಮತ್ತು ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ಗೆ ಬಹುಶಿಸ್ತಿನ ವಿಧಾನದ ಸಿಎಂಇ ಕುರಿತು ಅವಲೋಕನವನ್ನು ನೀಡಿ, ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ನಡೆಸಲಾಗುತ್ತಿರುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಗಳು ಸೇರಿದಂತೆ ಎಲ್ಲಾ ರೀತಿಯ ಪ್ರಮುಖ ಮತ್ತು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಗೆ ಸಂಭಂದಿಸಿದ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ.
ಈ ಹೊಸ ಉಪಕ್ರಮವು ಹೊಸದಾಗಿ ಪತ್ತೆಯಾದ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ರೋಗಿಗೆ ರೋಗನಿರ್ಣಯದಿಂದ ಹಿಡಿದು ಯಶಸ್ವಿ ಚಿಕಿತ್ಸೆಯ ಮೂಲಕ ಸಾಮಾನ್ಯ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.