Thursday, January 23, 2025
Thursday, January 23, 2025

‘ಆನಂದ ಸ್ವರೂಪ’ ಉದ್ಘಾಟನೆ

‘ಆನಂದ ಸ್ವರೂಪ’ ಉದ್ಘಾಟನೆ

Date:

ವಿದ್ಯಾಗಿರಿ (ಮೂಡುಬಿದಿರೆ), ಡಿ.11: ‘ಆಳ್ವಾಸ್’ ರಾಜ್ಯದ ಶೈಕ್ಷಣಿಕ ಕ್ಷೇತ್ರದ ಮಿನುಗು ನಕ್ಷತ್ರ. ಅದಕ್ಕೆ ‘ಆನಂದ ಸ್ವರೂಪ’ವನ್ನು ಆಳ್ವರು ನೀಡಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಇಲ್ಲಿನ ಪುತ್ತಿಗೆ ವಿವೇಕಾನಂದ ನಗರದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಪ್ರಾಥಮಿಕ ಶಾಲೆ ‘ಆನಂದ ಸ್ವರೂಪ’ವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಮೂಡುಬಿದಿರೆಗೆ ಸಾಂಸ್ಕೃತಿಕ ಹಾಗೂ ಶಿಕ್ಷಣ ಕಾಶಿ ಎಂಬ ಬಿರುದನ್ನು ತಂದವರು ಡಾ.ಎಂ. ಮೋಹನ ಆಳ್ವರು. ಮೌಲ್ಯಾಧಾರಿತ, ನೈತಿಕ, ಗುಣಮಟ್ಟದ ಶಿಕ್ಷಣವನ್ನು ಮಾದರಿಯಾಗಿ ನೀಡುತ್ತಿದ್ದಾರೆ ಎಂದರು. ಮಹಾತ್ಮ ಗಾಂಧೀಜಿ ‘ರಾಮರಾಜ್ಯ’ದ ಕನಸನ್ನು ನನಸು ಮಾಡಲು ಕೇವಲ ಭದ್ರತೆ, ಅಭಿವೃದ್ಧಿ ಮತ್ತಿತರ ಕಾರ್ಯಗಳಿಂದಲೇ ಸಾಧ್ಯವಿಲ್ಲ.
ಉತ್ತಮ ಮನಸ್ಸುಗಳನ್ನು ಕಟ್ಟಬೇಕು. ಪ್ರತಿ ವ್ಯಕ್ತಿಯನ್ನು ಮೌಲ್ಯಯುತವಾಗಿ ರೂಪಿಸಬೇಕು. ಅದಕ್ಕೆ ಮೌಲ್ಯಾಧಾರಿತ, ನೈತಿಕ, ಗುಣಮಟ್ಟದ ಶಿಕ್ಷಣ ಬಹುಮುಖ್ಯ. ಅಂತಹ ವ್ಯಕ್ತಿ ನಿರ್ಮಾಣದಿಂದಲೇ ರಾಷ್ಟ್ರ ನಿರ್ಮಾಣ ಸಾಧ್ಯ. ಆ ಮಾದರಿ ಕಾರ್ಯವನ್ನು ಆಳ್ವರು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಕೇವಲ ಉಳ್ಳವರಿಗೆ ಮಾತ್ರವಲ್ಲ, ವಂಚಿತರಿಗೂ ಅವಕಾಶ ಕಲ್ಪಿಸುವ ಅವರ ಮನಸ್ಸು ಆಳ್ವಾಸ್ ಸಂಸ್ಥೆಯನ್ನು ಬೆಳೆಸಿದೆ. ರಾಜ್ಯ ಪ್ರವಾಸದ ಸಂದರ್ಭದಲ್ಲಿ ನನ್ನ ಬಳಿ ಹೆಚ್ಚಿನವರು ಕೇಳುವ ಹೆಸರು ‘ಆಳ್ವಾಸ್’. ಈ ಶಿಕ್ಷಣ ಸಂಸ್ಥೆಯು ಕೇವಲ ಮೂಡುಬಿದಿರೆಯ ನೆಲದಲ್ಲಿ ಮಾತ್ರವಲ್ಲ, ಎಲ್ಲೆಡೆ ಜನರ ಮನಸ್ಸಿನಲ್ಲಿ ನೆಲೆಯೂರಿದೆ. ಎಲ್ಲಿ ಹೋದರು ನಮ್ಮ ಬಳಿ ಪೋಷಕರು ಇಡುವ ಬೇಡಿಕೆಯೊಂದೇ, ‘ಆಳ್ವಾಸ್‌ನಲ್ಲಿ ನಮ್ಮ ಮಕ್ಕಳಿಗೆ ಸೀಟು ಸಿಗಬಹುದಾ?’ ಎಂದರು.

ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ, ಎಲ್ಲರನ್ನೂ ತನ್ನವರೆಂದು ಪ್ರೀತಿಯಿಂದ ನೋಡಿಕೊಳ್ಳುವ ಆಳ್ವರ ವ್ಯಕ್ತಿತ್ವವೇ ಒಂದು ಮಾದರಿ. ಅವರು ಮಾದರಿ ಶಿಕ್ಷಣ ತಜ್ಞರಾಗಿದ್ದಾರೆ ಎಂದರು. ಶಿಕ್ಷಣದಲ್ಲಿ ಹಲವು ಕೋಶಗಳಿವೆ. ಆದರೆ, ಆಳ್ವರು ‘ಮನೋಮಯ’ ಹಾಗೂ ‘ಆನಂದಮಯ’ ಎಂಬ ಎರಡು ನೆಮ್ಮದಿಯ ಕೋಶಗಳನ್ನು ಸೃಜಿಸಿದ್ದಾರೆ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಭವ್ಯ ಭವನ ಇದ್ದರೂ, ಶುಲ್ಕ ಹೆಚ್ಚಳವಿಲ್ಲ. ಎಲ್ಲರೂ ಅತ್ಯುನ್ನತ ಮಟ್ಟದ ಶಿಕ್ಷಣ ಪಡೆಯಬೇಕು ಎಂಬುದು ನನ್ನ ಕನಸು. ಅದಕ್ಕಾಗಿ ‘ಆನಂದ ಸ್ವರೂಪ’ ಸಮರ್ಪಿಸಿದ್ದೇವೆ. ಮಕ್ಕಳಿಂದ ಹಿರಿಯರಾದಿಯಾಗಿ ಎಲ್ಲರ ಪಂಚೇಂದ್ರೀಯಗಳಿಗೆ ಮುದ ನೀಡುವ ‘ಆಳ್ವಾಸ್ ವಿರಾಸತ್’ ಡಿ.14ರಿಂದ 17ರ ವರೆಗೆ ನಡೆಯಲಿದೆ. ಕುಟುಂಬ ಸಮೇತರಾಗಿ ಬನ್ನಿ. ಪ್ರವೇಶ ಉಚಿತ ಎಂದು ಆಮಂತ್ರಣ ನೀಡಿದರು.

ತೀರ್ಥರೂಪ ಮಿಜಾರುಗುತ್ತು ಆನಂದ ಆಳ್ವರ ಸವಿನೆನಪಿಗಾಗಿ ನಿರ್ಮಾಣಗೊಂಡ ‘ಆನಂದ ಸ್ವರೂಪ’ – ಆಳ್ವಾಸ್ ಕಿರಿಯ ಪ್ರಾಥಮಿಕ ಶಾಲೆಯು ಮೌಲ್ಯಯುತ ಶಿಕ್ಷಣವನ್ನು ನೀಡುವ ಪರಿಕಲ್ಪನೆಯನ್ನು ಹೊಂದಿದೆ. ಇಲ್ಲಿ ಶಿಶುವಿಹಾರ, ಪೂರ್ವ ಪ್ರಾಥಮಿಕ ಹಾಗೂ ಒಂದು ಮತ್ತು ಎರಡನೇ ತರಗತಿಗಳು ನಡೆಯಲಿವೆ. ಬಾಲ್ಯದಲ್ಲಿಯೆ ಮಕ್ಕಳಲ್ಲಿ ಸಂಸ್ಕಾರ, ಸೌಹಾರ್ದತೆ, ಮೌಲ್ಯಯುತ ಮನಸ್ಸನ್ನು ಕಟ್ಟುವ ಪೂರಕ ವಾತವರಣ ನಿರ್ಮಿಸಿದಾಗ ಅದು ಭವಿಷ್ಯದ ಸತ್ಪಪ್ರಜೆಗಳ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಇಂದು ಒಂದು ಚಿಕ್ಕ ಮಕ್ಕಳ ಶಾಲೆ ಹೇಗೆ ಉದ್ಘಾಟನೆಗೊಳ್ಳಬೇಕೋ ಹಾಗೆಯೇ ಉದ್ಘಾಟನೆಯನ್ನು ಮಾಡಿದ್ದೇವೆ. ಕನಿಷ್ಠ ಶುಲ್ಕದಲ್ಲಿ ಉತ್ಕೃಷ್ಟ ಮಟ್ಟದ ಶಿಕ್ಷಣ ನೀಡುವ ಗುರಿ ನಮ್ಮದು, ಆ ಕಾರ‍್ಯ ಈ ಶಾಲೆಯ ಮೂಲಕ ನಿರಂತರವಾಗಿ ಸಾಗಲಿದೆ ಎಂದರು.

ಭಾರತ ಸ್ಕೌಟ್ಸ್ ಗೈಡ್ಸ್ ಕರ್ನಾಟಕದ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, ಆಳವಾದ ಜ್ಞಾನ ಹಾಗೂ ಅಹಂಕಾರ ಇಲ್ಲದ ವ್ಯಕ್ತಿತ್ವ ಆಳ್ವರದ್ದು. ಅವರು ಶಿಕ್ಷಣದ ಮೂಲಕ ನಾಡಿನಲ್ಲಿ ಪರಿವರ್ತನೆಯ ನಾಂದಿ ಹಾಡುತ್ತಿದ್ದಾರೆ. ಅವರ ಸಂಘಟನಾ ಚಾತುರ್ಯ ಹಾಗೂ ಕಾರ್ಯಗಳು ಪವಾಡಗಳಂತೆ ಎಂದು ವಿಶ್ಲೇಷಿಸಿದರು. ಕಾವ್ಯಗಳ ಸಾಲುಗಳ ಮೂಲಕ ಬಣ್ಣಿಸಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ವಸುಧೈವಕುಟುಂಬಕಂ ಎಂಬ ಭಾವೈಕ್ಯ ಸಂದೇಶವನ್ನು ಕೃತಿ ಮೂಲಕ ಸಾರಿದ ಆಳ್ವರು, ಸರ್ವಜನಾಂಗದ ಶಾಂತಿಯ ತೋಟವನ್ನು ನಿರ್ಮಿಸಿದ್ದಾರೆ. ಕವಿಗಳು ಹೇಳಿದಂತೆ ಮೊದಲು ಮಾನವನಾಗು ಎಂಬ ನೀತಿಯನ್ನು ಕಾರ್ಯಗತಗೊಳಿಸುತ್ತಿದ್ದಾರೆ ಎಂದರು. ಆಳ್ವರು ನಂದನವನ್ನು ಸೃಷ್ಟಿಸುತ್ತಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ಸಾಧಿಸಲು ಮೊದಲು ಆ ಕ್ಷೇತ್ರದದಾಸನಾಗುವುದು ಮುಖ್ಯ ಎಂಬ ದಾಸವಾಣಿಯಂತೆ ಆಳ್ವರ ಕಾರ್ಯ ವೈಖರಿ. ಮನಸ್ಸಿನ ತಿಳಿಯನ್ನು ಕಲಕದೇ ಇರುವ ಸಾಮರಸ್ಯದ ನಾಡುಕಟ್ಟುತ್ತಿದ್ದಾರೆ ಎಂದುರು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಮಾತನಾಡಿ, ಮೂಡುಬಿದಿರೆಗೆ ಕೆಜಿಯಿಂದ ಹಿಡಿದು ಪಿಎಚ್‌ಡಿ ವರೆಗೆ ಶಿಕ್ಷಣ ಸೌಲಭ್ಯ ಕಲ್ಪಿಸಿದ ಆಳ್ವರ ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸಿದರು.

ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಆಳ್ವರ ಪರಿಶ್ರಮದಿಂದ ಮೂಡುಬಿದಿರೆಗೆ ಹೆಸರು ಬಂದಿದೆ. ಅವರ ಈ ಕಾರ್ಯವನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಧರ್ಮಗುರು ಫಾ. ಗೋಮ್ಸ್, ಸಂಪಿಗೆ ಚರ್ಚ್ ಧರ್ಮಗುರು ಫಾ. ವಿನ್ಸೆಂಟ್ ಡಿಸೋಜ, ಬದ್ರಿಯಾ ಜುಮ್ಮಾ ಮಸೀದಿ ಖತಿಬ್ ಅಬೂಬಕ್ಕರ್ ಸಿದ್ಧಿಕ್ ದಾರಿಮಿ, ಮಹಮ್ಮದ್‌ರಫಿ ಧಾರಿಮಿ, ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಧಾ, ಕ್ಷೇತ್ರ ಶಿಕ್ಷಣಾಧಿಕಾರ ಎಚ್. ಎಸ್. ವಿರೂಪಾಕ್ಷಪ್ಪ, ಪ್ರಮುಖರಾದ ಜಯಶ್ರೀ ಅಮರನಾಥ ಶೆಟ್ಟಿ, ಚೌಟರ ಅರಮನೆಯ ಕುಲದೀಪ್ ಎಂ., ಉದ್ಯಮಿ ಎಸ್.ಎಂ. ಮುಸ್ತಫಾ, ಶ್ರೀಪತಿ ಭಟ್, ನಾರಾಯಣ ಪಿ.ಎಂ., ತಿಮ್ಮಯ್ಯ ಶೆಟ್ಟಿ, ಧಾರ್ಮಿಕ ಮುಖಂಡ ಉಮೇಶ್ ಪೈ, ಎಂ.ಸಿ.ಎಸ್. ಸೊಸೈಟಿ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ., ಆಳ್ವರ ಕೌಟುಂಬಿಕ ಬಂಧುಗಳಾದ ಮೀನಾಕ್ಷಿ ಆಳ್ವ, ಶ್ರೀನಿವಾಸ ಆಳ್ವ ಇದ್ದರು. ಕೆ. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಮುದ ನೀಡಿದ ಚಿಣ್ಣರ ಮೆರವಣಿಗೆ: ವಿದ್ಯಾಗಿರಿಯಲ್ಲಿನ ಆಳ್ವಾಸ್ ಕಾಲೇಜಿನ ಆವರಣದಿಂದ ಆಟಿಕೆ ಯಂತ್ರಗಳು, ಪ್ರಾಣಿ-ಪಕ್ಷಿಗಳ ಬೊಂಬೆಗಳು, ಕಾರ್ಟೂನ್ ಪ್ರತಿಕೃತಿ, ಪಾಂಡಾ ಬೈಕ್, ಡಬ್ಬಲ್‌ಡೆಕ್ಕರ್ ಬಸ್, ರೈಲು ಬಂಡಿ, ಎಲೆಕ್ಟ್ರಿಕ್ ವಾಹನಗಳ, ಎನ್‌ಸಿಸಿ, ಕದೋನಿ, ಗರ್ನಲ್, ಲಂಗದಾವಣ ಮಕ್ಕಳು, ಚಿತ್ರದುರ್ಗ ಬ್ಯಾಂಡ್‌ಸೆಟ್, ಆಳ್ವಾಸ್ ಗೊಂಬೆ ಬಳಗ, ಬ್ಯಾಂಡ್ ಸೆಟ್, ಕಲ್ಲಡ್ಕ ಗೊಂಬೆ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಪಥಸಂಚಲನದೊಂದಿಗೆ ಪುಟಾಣಿಗಳು ಹಾಗೂ ಅತಿಥಿಗಳನ್ನು ‘ಆನಂದ ಸ್ವರೂಪ’ ಉದ್ಘಾಟನೆಗೆ ಬರಮಾಡಿಕೊಳ್ಳಲಾಯಿತು. ಇಡೀ ಕಾರ್ಯಕ್ರಮವು ಮಕ್ಕಳ ಜಾತ್ರೆಯ ಮೆರುಗು ನೀಡಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಂಜೀವಿನಿ ಸ್ವ ಸಹಾಯ ಗುಂಪುಗಳ ಆರ್ಥಿಕ ಸೇರ್ಪಡೆಗಾಗಿ ಬ್ಯಾಂಕರ್ಸ್ ಕಾರ್ಯಾಗಾರ

ಮಣಿಪಾಲ, ಜ.22: ಸ್ವ ಸಹಾಯ ಗುಂಪುಗಳ ಮಹಿಳೆಯರಿಗೆ ಬ್ಯಾಂಕ್ ಸೌಲಭ್ಯಗಳನ್ನು ಒದಗಿಸುವುದರಿಂದ...

ರಾಜ್ಯದಲ್ಲಿ ಗೋವುಗಳ ಮೇಲೆ ಆಕ್ರಮಣ- ಜ.25 ರಂದು ಉಪವಾಸಕ್ಕೆ ಪೇಜಾವರ ಶ್ರೀ ಕರೆ

ಉಡುಪಿ, ಜ.22: ರಾಜ್ಯದಲ್ಲಿ ಗೋವುಗಳ ಮೇಲೆ ಸರಣಿ ಹಿಂಸೆಗಳು ನಡೆಯುತ್ತಿದ್ದು ಗೋವುಗಳ...

ಕೆಎಂಸಿ ಮಣಿಪಾಲಕ್ಕೆ ಪ್ರತಿಷ್ಠಿತ ಸ್ಪಾರ್ಕ್ ಅನುದಾನ

ಮಣಿಪಾಲ, ಜ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ನೇತ್ರಶಾಸ್ತ್ರ ವಿಭಾಗದ...

ಮಲ್ಪೆ: ಸಿರಿಧಾನ್ಯ ರೋಡ್ ಶೋ

ಉಡುಪಿ, ಜ.22: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಉಡುಪಿ...
error: Content is protected !!