ಉಡುಪಿ, ಆ.19: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 20 ರಂದು ಗುಡುಗು ಸಹಿತ 64.5 ಮಿಮಿ-115.6 ಮಿಮಿ ಭಾರಿ ಮಳೆಯಾಗಲಿದೆ. ಅಂದು 30 ರಿಂದ 40 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉಡುಪಿ ಜಿಲ್ಲೆಯ ಹಲವೆಡೆ ಶನಿವಾರ ಬೆಳಗ್ಗೆ ಉತ್ತಮ ಮಳೆಯಾಗಿದೆ. ಬಳಿಕ ಬಿಟ್ಟು ಬಿಟ್ಟು ಮಳೆಯ ಸಿಂಚನವಾಗಿದೆ. ಶನಿವಾರ ಇಡೀ ದಿನ ಮೋಡ ಕವಿದ ವಾತಾವರಣವಿತ್ತು. ಸಂಜೆಯ ಬಳಿಕ ಸೂರ್ಯನ ದರ್ಶನವಾಗಿದೆ. ರಾತ್ರಿ ಮತ್ತೆ ಮಳೆಯಾಗಿದೆ.
ಆಗಸ್ಟ್ ತಿಂಗಳ ಮೊದಲಾರ್ಧದಲ್ಲಿ ಮಳೆ ಕೈಕೊಟ್ಟ ಕಾರಣ ಗದ್ದೆಗಳಲ್ಲಿ ನೀರಿಲ್ಲದೆ ಕೃಷಿಕ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಸಿಲ ತಾಪ ಹೆಚ್ಚಾಗಿ ಅಂತರ್ಜಲ ಮಟ್ಟವೂ ಕುಸಿತ ಕಂಡಿದೆ. ಇನ್ನಾದರೂ ದುರ್ಬಲಗೊಂಡ ಮುಂಗಾರು ಚುರುಕು ಪಡೆಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ರಾಜ್ಯದ ಜನರು.