ಉಡುಪಿ, ಏ.1: ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆದೇಶ ಮತ್ತು ಆಶೀರ್ವಾದದೊಂದಿಗೆ ಅಮೆರಿಕಾದ ಅಟ್ಲಾಂಟಾ ಮಹಾನಗರದಲ್ಲಿರುವ ಶ್ರೀ ಪುತ್ತಿಗೆ ಮಠದಲ್ಲಿ ಲೋಕ ಕಲ್ಯಾಣಕ್ಕಾಗಿ ಶ್ರೀನಿವಾಸ ಕಲ್ಯಾಣ ಮಹೋತ್ಸವ ಸಂಪನ್ನಗೊಂಡಿತು. ಶ್ರೀ ಪುತ್ತಿಗೆ ಮಠದ ಅನಿವಾಸಿ ಶಾಖೆಗಳ ಮುಖ್ಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ಇವರು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶನಿವಾರದಂದು ಶ್ರೀನಿವಾಸ ಕಲ್ಯಾಣ ಮಹೋತ್ಸವವು ನೃತ್ಯ ಗೀತ ವಾದ್ಯಗಳೊಂದಿಗೆ ನೂರಾರು ಭಕ್ತಜನರ ಸಂಭ್ರಮದ ಪಾಲ್ಗೊಳ್ಳುವಿಕೆಯೊಂದಿಗೆ ಜರಗಿತು. ಪುತ್ತಿಗೆ ಶ್ರೀಪಾದರು ವೀಡಿಯೋ ಸಂದೇಶದ ಮೂಲಕ ಭಕ್ತಜನರನ್ನು ಹರಸಿದರು. ಫಿನಿಕ್ಸ್ ಮಹಾನಗರದಲ್ಲಿರುವ ಶ್ರೀ ಪುತ್ತಿಗೆ ಮಠದ ಪ್ರಧಾನ ಅರ್ಚಕರಾದ ಕಿರಣ್ ಕುಮಾರ್ ರವರು ಹುಸ್ಟೋನ್ ಮಹಾನಗರದಲ್ಲಿರುವ ಶ್ರೀ ಪುತ್ತಿಗೆ ಮಠದ ಪ್ರಧಾನ ಅರ್ಚಕರಾದ ರಘುರಾಮ್ ಭಟ್ ರವರ ಸಹಯೋಗದೊಂದಿಗೆ ಕಲ್ಯಾಣ ಮಹೋತ್ಸವದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಅಟ್ಲಾಂಟಾ ಮಹಾನಗರದಲ್ಲಿರುವ ಶ್ರೀ ಪುತ್ತಿಗೆ ಮಠದ ಪ್ರಧಾನ ಅರ್ಚಕರಾದ ಜಯಪ್ರಸಾದ ಅಮ್ಮಣ್ಣಾಯರವರು ನೂರಾರು ಕಾರ್ಯಕರ್ತರ ಸಹಕಾರದೊಂದಿಗೆ ಕಾರ್ಯಕ್ರಮ ಸಂಯೋಜಿಸಿದ್ದರು. ನೂತನವಾಗಿ ನಿರ್ಮಾಣಗೊಳ್ಳಲಿರುವ ದೇಗುಲದ ನೀಲನಕ್ಷೆಯನ್ನು ಬಾಲಕೃಷ್ಣ ಇವರು ಸಭೆಗೆ ವಿವರಿಸಿ ಭಕ್ತಜನರ ಸಹಕಾರವನ್ನು ಶ್ರೀ ಮಠದ ಪರವಾಗಿ ಕೋರಿದರು. ಸಿಟಿ ಕೌನ್ಸಿಲರ್ ಬಾಬ್ ಎರಾಮಿಲ್, ಖ್ಯಾತ ವಕೀಲ ರೂಪಾಲ್ ವೈಷ್ಣವ್ ಉಪಸ್ಥಿತರಿದ್ದರು.
ಶ್ರೀನಿವಾಸನ ಕಲ್ಯಾಣ ಮಹೋತ್ಸವಕ್ಕೆಂದೇ ಹರೀಶ ಭಟ್ ತಂಡದವರು ಸಿದ್ದಪಡಿಸಿದ್ದ ಉಡುಪಿ ಊಟವನ್ನು ಸಾವಿರಾರು ಮಂದಿ ಸವಿದರು. ಪುತ್ತಿಗೆ ಶ್ರೀಪಾದರು ಸ್ಥಾಪಿಸಿರುವ ಶ್ರೀಕೃಷ್ಣ ಮಂದಿರಗಳಲ್ಲಿ ಇದು ಆರನೆಯ ಮಂದಿರವಾಗಿರುವುದು. ಭಕ್ತ ಜನರ ಸಹಕಾರದೊಂದಿಗೆ ಖರೀದಿಸಲ್ಪಟ್ಟ 6 ಎಕರೆ ವಿಸ್ತೀರ್ಣ ಜಾಗದಲ್ಲಿ ನೂತನ ಮಂದಿರ ನಿರ್ಮಾಣವಾಗಲಿದ್ದು ಈ ಬಗ್ಗೆ ಪರ್ಯಾಯ ಪೂರ್ವದಲ್ಲಿಯೇ ಶ್ರೀಪಾದರು ಭೂಮಿ ಪೂಜೆಯನ್ನು ನೆರವೇರಿಸಿದ್ದನ್ನು ಸ್ಮರಿಸಬಹುದು.