ಕಾರ್ಕಳ: ಜ್ಞಾನಸುಧಾ ಸಂಸ್ಥೆಗಳ ಸಂಸ್ಥಾಪಕ ದಿ.ಗೋಪ ಶೆಟ್ಟಿಯವರ 101ನೇ ಜನ್ಮದಿನಾಚರಣೆಯ ಪ್ರಯುಕ್ತ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್, ಜ್ಞಾನಸುಧಾ ಶಿಕ್ಷಣ ಸಂಸ್ಥೆ ಗಣಿತ ನಗರ ಹಾಗೂ ನಾಗಬನ ಕ್ಯಾಂಪಸ್ ಉಡುಪಿ, ಜ್ಞಾನಸುಧಾ ಎನ್.ಎಸ್.ಎಸ್ ಹಾಗೂ ಎನ್.ಸಿ.ಸಿ ಘಟಕ, ಜ್ಞಾನಸುಧಾ ಹಳೆ ವಿದ್ಯಾರ್ಥಿ ಸಂಘ ಮತ್ತು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಕಾರ್ಕಳ – ಕುಂದಾಪುರ ಇವರ ಸಹಯೋಗದೊಂದಿಗೆ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಜರುಗಿದ ರಕ್ತದಾನ ಶಿಬಿರವನ್ನು ರೆಡ್‌ಕ್ರಾಸ್ ಸೊಸೈಟಿ ಕಾರ್ಕಳ ಇದರ ಅಧ್ಯಕ್ಷ ಖ್ಯಾತ ವೈದ್ಯ ಡಾ. ರಾಮಚಂದ್ರ ಜೋಷಿ ಉದ್ಘಾಟಿಸಿದರು.
ಕುಂದಾಪುರ ರೆಡ್‌ಕ್ರಾಸ್ ಸೊಸೈಟಿಯ ಮೆಡಿಕಲ್ ಆಫಿಸರ್ ಡಾ.ಅಶ್ವತಿ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಉಪಸ್ಥಿತರಿದ್ದರು. ರಕ್ತದಾನ ಶಿಬಿರದಿಂದ 113 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ಇಂತಹ ಕಾರ್ಯಕ್ರಮದ ಮೂಲಕ ನೊಂದವರ, ಅಶಕ್ತರ ಏಳಿಗೆಗೆ ಶ್ರಮಿಸುತ್ತಿರುವುದು ಡಾ. ಸುಧಾಕರ್ ಶೆಟ್ಟಿಯವರ ಸಮಾಜಮುಖಿ ಕಾಳಜಿಗೆ ಸಾಕ್ಷಿಯಾಗಿದೆ ಎಂದು ಕಾರ್ಕಳದ ವೈದ್ಯ ಡಾ. ಭರತೇಶ್.ಎ. ಹೇಳಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿ ನಿಟ್ಟೆ ಗಾಜ್ರಿಯಾ ಆಸ್ಪತ್ರೆಯ ವೈದ್ಯರಾದ ಡಾ. ಕಾರ್ತಿಕ್ ರಾವ್ ಎನ್ ಮಾತನಾಡಿ, ಆರೋಗ್ಯ ಸೇವೆಯ ಮುಂಚೂಣಿಯಲ್ಲಿದ್ದು ಫ್ರಂಟ್ ಲೈನ್ ವಾರಿಯರ್ಸ್ ಆಶಾ ಕಾರ್ಯಕರ್ತರು ಆರೋಗ್ಯ ಕ್ಷೇತ್ರದ ಯೋಧರು ಎಂದರು.
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ವತಿಯಿಂದ ಕುಕ್ಕುಂದೂರು ಗ್ರಾಮದ 13 ಜನ ಆಶಾ ಕಾರ್ಯರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು. ಜೊತೆಗೆ ಮನೆ ನಿರ್ಮಾಣಕ್ಕೆ ನೆರವಾಗುತ್ತಿರುವ ಕುಕ್ಕುಂದೂರಿನ ಹುಡ್ಕೋ ಕಾಲೊನಿಯ ಪಾಂಚಜನ್ಯ ಸೇವಾ ಪ್ರತಿಷ್ಟಾನಕ್ಕೆ ರೂ.50 ಸಾವಿರ ನೆರವು ನೀಡಲಾಯಿತು.
ರಾಜ್ಯಮಟ್ಟಕ್ಕೆ ಆಯ್ಕೆಗೊಂಡ ಸಂಸ್ಥೆಯ ಚದುರಂಗ ಪಟು ಕಾರ್ಕಳ ಜ್ಞಾನಸುಧಾ ಪಿಯು ವಿದ್ಯಾರ್ಥಿನಿ ಅರುಂದತಿ ಜಿ.ವಿ. ಹಾಗೂ ಕಾರ್ಕಳ ಜ್ಞಾನಸುಧಾ ಆಂಗ್ಲಮಾದ್ಯಮ ಪ್ರೌಢಶಾಲೆಯ ಈಜುಪಟು 7ನೇ ತರಗತಿ ವಿದ್ಯಾರ್ಥಿನಿ ಭೂಮಿ ಇವರನ್ನು ಗೌರವಿಸಲಾಯಿತು.
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅದ್ಯಕ್ಷ ಡಾ. ಸುಧಾಕರ್ ಶೆಟ್ಟಿಯವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ವಿದ್ಯಾರ್ಥಿಗಳು ಪೋಷಕರ ಭಾವನೆಗಳನ್ನು ಅರ್ಥೈಸಿಕೊಂಡು ಹೆತ್ತವರನ್ನು ಗೌರವಿಸುವ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಆಡಳಿತ ಮಂಡಳಿ ಸದಸ್ಯ ಶಾಂತಿರಾಜ್ ಹೆಗ್ಡೆ, ಕೌನ್ಸಿಲರ್ ಡಾ. ಪ್ರಸನ್ನ ಹೆಗ್ಡೆ, ಜ್ಞಾನುಸುಧಾ ಪಿಯು ಪ್ರಾಂಶುಪಾಲ ದಿನೇಶ್.ಎಂ.ಕೊಡವೂರ್ ಉಪಸ್ಥಿತರಿದ್ದರು.
ಟ್ರಸ್ಟಿ ಅನಿಲ್ ಕುಮಾರ್ ಜೈನ್ ಸ್ವಾಗತಿಸಿ, ಪಿಆರ್‌ಒ ಜ್ಯೋತಿ ಪದ್ಮನಾಭ ಭಂಡಿ ವಂದಿಸಿದರು, ಆಂಗ್ಲಭಾಷಾ ಉಪನ್ಯಾಸಕಿ ಸಂಗೀತ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.