ಕಾರ್ಕಳ: ಕಾರ್ಕಳ ತಾಲೂಕು ಕಾಬೆಟ್ಟು ಸರಕಾರಿ ಶಾಲೆಯ ದೈಹಿಕ ಶಿಕ್ಷಣ ಮತ್ತು ಯೋಗ ಶಿಕ್ಷಕರಾದ ನರೇಂದ್ರ ಕಾಮತ್ ಅವರಿಗೆ ಈ ವರ್ಷ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯು ಬಂದಿದ್ದು ಅವರನ್ನು ಸನ್ಮಾನಿಸಿ, ಅಭಿನಂದಿಸುವ ಕಾರ್ಯಕ್ರಮವು ಶಾಲಾ ಶತಮಾನೋತ್ಸವ ಸಮಿತಿಯ ವತಿಯಿಂದ ಶಾಲೆಯ ಅಸೆಂಬ್ಲಿ ಸಭಾಂಗಣದಲ್ಲಿ ಸೋಮವಾರ ನಡೆಯಿತು. ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿಯವರು ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರೋಟರಿ ನಾಯಕರಾದ ಮೋಹನ್ ಶೆಣೈ ಅವರು ನರೇಂದ್ರ ಕಾಮತ್ ಅವರನ್ನು ಶಾಲು, ನೆನಪಿನ ಕಾಣಿಕೆ, ಫಲಪುಷ್ಪ ಸಹಿತ ಸನ್ಮಾನಿಸಿದರು. ಉತ್ತಮ ಶಿಕ್ಷಕರನ್ನು ಸಮಾಜವು ಗೌರವಿಸುವುದರ ಮೂಲಕ ಮಾನವ ಸಂಪನ್ಮೂಲದ ಅಭಿವೃದ್ಧಿಯು ತನ್ನಿಂದ ತಾನೇ ಆಗುತ್ತದೆ ಎಂದು ನುಡಿದರು.
ಪ್ರಾಥಮಿಕ ಶಾಲೆಯ ಪರವಾಗಿ ನಿವೇದಿತಾ ಕಾಮತ್, ಪ್ರೌಢ ಶಾಲೆಯ ಪರವಾಗಿ ಸುನೀತಾ ನಾಯಕ್ ಅಭಿನಂದನಾ ಭಾಷಣ ಮಾಡಿದರು. ಸನ್ಮಾನಕ್ಕೆ ಉತ್ತರಿಸಿದ ನರೇಂದ್ರ ಕಾಮತ್ ಅವರು ನನಗೆ ದೊರೆತ ಪ್ರಶಸ್ತಿ ಮತ್ತು ಸನ್ಮಾನಗಳು ನನ್ನ ವಿದ್ಯಾರ್ಥಿಗಳಿಗೆ ದೊರೆತ ಸನ್ಮಾನ ಎಂದು ಉತ್ತರಿಸಿದರು.
ಪುರಸಭೆಯ ವಾರ್ಡ್ ಸದಸ್ಯೆ ರೆಹಮತ್ ಎನ್ ಶೇಕ್, ಎಸ್.ಡಿ.ಎಂ.ಸಿ ಅಧ್ಯಕ್ಷ ಅಬ್ದುಲ್ ಆರೀಸ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಜೆಸಿಂತಾ ಡೇಸಾ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಇಂದಿರಾ, ಉಭಯ ಶಾಲೆಗಳ ಶಿಕ್ಷಕರು, ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.
ಆರ್ ವೈಕುಂಠ ಶೆಣೈ ಸ್ವಾಗತಿಸಿ, ಪ್ರೇಮಾನಂದ ಪೈ ಧನ್ಯವಾದ ಅರ್ಪಿಸಿದರು. ರಾಜೇಂದ್ರ ಭಟ್ ಕೆ ಕಾರ್ಯಕ್ರಮ ನಿರೂಪಿಸಿದರು.