Thursday, January 23, 2025
Thursday, January 23, 2025

ಡಬಲ್ ಇಂಜಿನ್ ಸರ್ಕಾರದಿಂದ ನವಕರ್ನಾಟಕದ ಅಭಿವೃದ್ಧಿ: ಪ್ರಧಾನಿ ನರೇಂದ್ರ ಮೋದಿ

ಡಬಲ್ ಇಂಜಿನ್ ಸರ್ಕಾರದಿಂದ ನವಕರ್ನಾಟಕದ ಅಭಿವೃದ್ಧಿ: ಪ್ರಧಾನಿ ನರೇಂದ್ರ ಮೋದಿ

Date:

ಮಂಗಳೂರು: (ಉಡುಪಿ ಬುಲೆಟಿನ್ ವರದಿ) ವಿಕಸಿತ ಭಾರತದ ನಿರ್ಮಾಣಕ್ಕೆ ದೇಶದ ಉತ್ಪಾದನಾ ವಲಯದ ವಿಸ್ತರಣೆ ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಅವರು ಇಂದು ಮಂಗಳೂರಿನ ಕುಳೂರು ಗೋಲ್ಡ್ ಫಿಂಚ್ ಸಿಟಿ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ 3800 ಕೋಟಿ ಮೊತ್ತದ 8 ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಧಾನಿಯವರನ್ನು ಸ್ವಾಗತಿಸಿದರು

ಈ ಯೋಜನೆಗಳಿಂದ ಉದ್ಯೋಗ ಕ್ಷೇತ್ರದಲ್ಲಿ, ಈಸ್ ಆಫ್ ಡುಯಿಂಗ್ ಬಿಸ್ನೆಸ್ ಗೆ ಹೆಚ್ಚಿನ ಅನುಕೂಲವಾಗಲಿದೆ. ನೂತನ ಯೋಜನೆಗಳಿಂದ ರೈತರಿಗೆ, ಮೀನುಗಾರರಿಗೆ ತಮ್ಮ ಉತ್ಪನ್ನಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ತಲುಪಿಸಲು ಸಾಧ್ಯವಾಗಲಿದೆ.

ಇಂದು ಜಾಗತಿಕ ಮಟ್ಟದಲ್ಲಿ ನಮ್ಮ ಉತ್ಪನ್ನಗಳನ್ನು ತಲುಪಿಸಲು ಸಾಧ್ಯವಾಗುತ್ತಿದೆ. ಕಳೆದ 8 ವರ್ಷಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಭಾರತಮಾಲಾ, ಕರಾವಳಿ ಪ್ರದೇಶಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಾಗರಮಾಲಾ ಯೋಜನೆಗಳ ಅನುಷ್ಠಾನದ ವೇಗ ಹೆಚ್ಚುತ್ತಿದೆ.

ಬಂದರು ಕೇಂದ್ರಿತ ಅಭಿವೃದ್ಧಿ: ಬಂದರುಗಳ ವಿಸ್ತರಣೆಗೆ ಹೆಚ್ಚಿನ ಗಮನವನ್ನು ನೀಡುವ ಕಾರ್ಯ ಆಗಿದೆ. ಕಳೆದ 8 ವರ್ಷಗಳಲ್ಲಿ ಭಾರತದ ಬಂದರಿನ ಸಾಮರ್ಥ್ಯ ದ್ವಿಗುಣವಾಗಿದೆ. ಸಾಗರಮಾಲಾ ಯೋಜನೆಯಿಂದ ಕರ್ನಾಟಕಕ್ಕೆ ಹೆಚ್ಚಿನ ಪ್ರಯೋಜನೆಗಳಾಗಿದೆ.

ಕರ್ನಾಟಕದ ಜನರ ಆಶೋತ್ತರಗಳನ್ನು ಸ್ಪಂದಿಸಲು ಡಬಲ್ ಇಂಜಿನ್ ಸರ್ಕಾರ ಹಗಲು ರಾತ್ರಿ ಶ್ರಮಿಸುತ್ತಿದೆ. ಮೆಟ್ರೋ ಸಂಪರ್ಕದಿಂದ ಹಲವಾರು ನಗರಗಳನ್ನು ಜೋಡಿಸಲಾಗಿದೆ. ಸೃಜನಶೀಲ ಪ್ರಯತ್ನಗಳಿಂದ ನಮ್ಮ ದೇಶದ ಡಿಜಿಟಲ್ ಪಾವತಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.

ಕರಾವಳಿ ಮತ್ತು ಪಶ್ಚಿಮ ಘಟ್ಟಗಳ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳಿವೆ. ಪ್ರವಾಸೋದ್ಯಮಗಳಿಂದ ಸಣ್ಣಮಟ್ಟಿನ ವ್ಯಾಪಾರ ನಡೆಸುವವರಿಗೆ ಹೆಚ್ಚಿನ ಅನುಕೂಲವಾಗಬೇಕು.

ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ರಾಣಿ ಅಬ್ಬಕ್ಕ ಅವರ ತ್ಯಾಗ ನಮಗೆ ಸ್ಪೂರ್ತಿಯಾಗಿದೆ. ಇಂತಹ ವೀರ ನಾರಿಯರ ಪರಾಕ್ರಮ ನಾರಿಶಕ್ತಿ ಅಭಿವೃದ್ಧಿಗೆ ಪ್ರೇರಣೆಯಾಗಿದೆ, ಹರ್ ಘರ್ ತಿರಂಗಾ ಅಭಿಯಾನವನ್ನು ರಾಜ್ಯದ ಜನತೆ ಅಭೂತಪೂರ್ವ ರೀತಿಯಲ್ಲಿ ಯಶಸ್ವಿಯಾಗಿಸಿದೆ.

ಆಯುಷ್ಮಾನ್ ಭಾರತ ಯೋಜನೆಯಿಂದ ನಾಲ್ಕು ಕೋಟಿ ಬಡವರಿಗೆ ಹೆಚ್ಚಿನ ಅನುಕೂಲವಾಗಿದೆ. ದೇಶದ ಪ್ರಗತಿಯ ಲಾಭ ತಳಮಟ್ಟದ ವ್ಯಕ್ತಿಗೂ ಸಿಗಲು ನಮ್ಮ ಸರ್ಕಾರ ವಿಶೇಷ ರೀತಿಯಲ್ಲಿ ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ಹಾಗೂ ಆಯುಷ್ ಸಚಿವ ಸರ್ಬಾನಂದ್ ಸೊನೊವಾಲ್ ಸ್ವಾಗತಿಸಿ ಪ್ರಧಾನಿಯವರಿಗೆ ಸಾಂಪ್ರದಾಯಿಕ ಪೇಟ, ಶಾಲು, ಹಾಗೂ ಶ್ರೀ ಕೃಷ್ಣನ ಮೂರ್ತಿಯನ್ನು ನೀಡಿ ಗೌರವಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸುನಿಲ್ ಕುಮಾರ್ ಹಾಗೂ ಸಂಸದ ನಳಿನ್ ಕುಮಾರ್ ಅವರು ಮಲ್ಲಿಗೆಯ ಹಾರ ಹಾಗೂ ಪರಶುರಾಮನ ಮೂರ್ತಿಯನ್ನು ನೀಡಿ ಪ್ರಧಾನಿಯವರನ್ನು ಗೌರವಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯ ಅಭಿವೃದ್ಧಿಯಲ್ಲಿ ಇಂದು ಸುವರ್ಣದಿನವಾಗಿದೆ. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಿಂದ ಬಹಳಷ್ಟು ಅನುಕೂಲವಾಗಲು ಡಬಲ್ ಇಂಜಿನ್ ಸರ್ಕಾರ ಕಾರಣ.

ಕರಾವಳಿಯ ಸಮಗ್ರ ಅಭಿವೃದ್ಧಿಯ ಮೂಲಕ ದೇಶದ ಅಭಿವೃದ್ಧಿಯಾಗುತ್ತಿರುವುದು ಡಬಲ್ ಇಂಜಿನ್ ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದರು. ನವಕರ್ನಾಟಕದ ಅಭಿವೃದ್ಧಿಯ ಮೂಲಕ ನವಭಾರತ ನಿರ್ಮಾಣ ಅಗುತ್ತಿದೆ ಎಂದರು.

ಮೀನುಗಾರರಿಗೆ ಸಾಂಕೇತಿಕವಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ಆಳ ಸಮುದ್ರ ಮೀನುಗಾರಿಕೆ ನಡೆಸಲು ಅನುಕೂಲವಾಗುವ ಡೀಪ್ ಸೀ ಫಿಶಿಂಗ್ ವೆಸಲ್ ಹಸ್ತಾಂತರವನ್ನು ಪ್ರಧಾನಿ ನೆರವೇರಿಸಿದರು.

ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಲ್ಹಾದ್ ಜೋಷಿ, ಕೇಂದ್ರ ಸಚಿವ ಶ್ರೀಪಾದ್ ಯೆಸ್ಸೋ ನಾಯಕ್, ಶಾಂತನು ಠಾಕೂರ್, ಶೋಭಾ ಕರಂದ್ಲಾಜೆ, ರಾಜ್ಯ ಸರ್ಕಾರದ ಸಚಿವರಾದ ಕೋಟ ಶೀನಿವಾಸ ಪೂಜಾರಿ, ಅಂಗಾರ, ಶಾಸಕರುಗಳಾದ ಹರೀಶ್ ಪೂಂಜಾ, ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಉಮಾನಾಥ್ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಂಜೀವಿನಿ ಸ್ವ ಸಹಾಯ ಗುಂಪುಗಳ ಆರ್ಥಿಕ ಸೇರ್ಪಡೆಗಾಗಿ ಬ್ಯಾಂಕರ್ಸ್ ಕಾರ್ಯಾಗಾರ

ಮಣಿಪಾಲ, ಜ.22: ಸ್ವ ಸಹಾಯ ಗುಂಪುಗಳ ಮಹಿಳೆಯರಿಗೆ ಬ್ಯಾಂಕ್ ಸೌಲಭ್ಯಗಳನ್ನು ಒದಗಿಸುವುದರಿಂದ...

ರಾಜ್ಯದಲ್ಲಿ ಗೋವುಗಳ ಮೇಲೆ ಆಕ್ರಮಣ- ಜ.25 ರಂದು ಉಪವಾಸಕ್ಕೆ ಪೇಜಾವರ ಶ್ರೀ ಕರೆ

ಉಡುಪಿ, ಜ.22: ರಾಜ್ಯದಲ್ಲಿ ಗೋವುಗಳ ಮೇಲೆ ಸರಣಿ ಹಿಂಸೆಗಳು ನಡೆಯುತ್ತಿದ್ದು ಗೋವುಗಳ...

ಕೆಎಂಸಿ ಮಣಿಪಾಲಕ್ಕೆ ಪ್ರತಿಷ್ಠಿತ ಸ್ಪಾರ್ಕ್ ಅನುದಾನ

ಮಣಿಪಾಲ, ಜ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ನೇತ್ರಶಾಸ್ತ್ರ ವಿಭಾಗದ...

ಮಲ್ಪೆ: ಸಿರಿಧಾನ್ಯ ರೋಡ್ ಶೋ

ಉಡುಪಿ, ಜ.22: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಉಡುಪಿ...
error: Content is protected !!