ಉಡುಪಿ: ಪೃಕೃತಿ ರಕ್ಷಣೆಯ ಭರವಸೆಯನ್ನು ನೀಡುವ ಪ್ರಕೃತಿಯೇ ದೇವರು ಎನ್ನುವ ಚಿಂತನೆಯಲ್ಲಿ ಆನೆಯ ಮುಖಸ್ವರೂಪವುಳ್ಳ ಗಣಪ, ಪ್ರಕೃತಿಯ ದ್ಯೋತಕವಾಗಿ ಹಳ್ಳಿ ಹಾಳೆಯ ಕಿರೀಟ, ರೋಗನಿರೋಧಕ ಶಕ್ತಿಯ ಬಿಂಬವಾಗಿ ಅರಶಿನ ಬಣ್ಣದೊಂದಿಗೆ ಕಂಗೊಳಿಸುವ ಸಿಂಧೂರ ತಿಲಕ, ಅರಿಶಿನ ಗಣಪ ಎಂದು ಕರೆ ಕೊಡುವ ಮೂಷಿಕ ವಾಹನದ ಕೃತಿ ಈ ಭಾದ್ರಪದ ಶುಕ್ಲದ ಚೌತಿಯಂದು ಮನ-ಮನೆಗೆ ದಯಮಾಡಿ ಹರಸಲೆಂದು ಸಂಭ್ರಮಾಚರಣೆಯಲ್ಲಿರುವ ಗೌರಿ ಗಣೇಶೋತ್ಸವಕ್ಕಾಗಿ, ಈಗಾಗಲೇ ಜಿಲ್ಲಾಧಿಕಾರಿಯವರ ಅರಿಶಿನ ಗಣಪತಿ ಅಭಿಯಾನದಂತೆ ಮಾಲಿನ್ಯರಹಿತವಾದ ವಿಗ್ರಹ ಮತ್ತು ಕೋವಿಡ್‌ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೋಗನಿರೋಧಕ ಅರಿಶಿನ ಗಣಪನ ಆರಾಧನೆಯ ಸಂಕಲ್ಪ ನಮ್ಮದ್ದಾಗಲಿ ಎಂಬ ಜನಜಾಗೃತಿಯನ್ನು ಸಾರುವ ಮರಳು ಶಿಲ್ಪಾಕೃತಿಯನ್ನು ಕೋಟೇಶ್ವರದ ಹಳೆ ಅಳಿವೆ ಕಡಲ ತೀರದಲ್ಲಿ ಉಡುಪಿಯ ‘ಸ್ಯಾಂಡ್ ಥೀಂ’ ತಂಡದ ಕಲಾವಿದರಾದ ಹರೀಶ್ ಸಾಗಾ ಸಾರಥ್ಯದೊಂದಿಗೆ ರಾಘವೇಂದ್ರ, ಪ್ರಸಾದ್ ಆರ್ ರಚಿಸಿದ್ದು ಈ ಅರಿಶಿನ ಗಣಪತಿ ಹಲವರ ಮನ ಗೆದ್ದಿದೆ.
ಹರೀಶ್ ಸಾಗಾರವರು ಮಾಸ್ಟರ್ ಆಫ್ ಫೈನ್ ಆರ್ಟ್ಸ್ ಪದವಿ ಪಡೆದಿದ್ದಾರೆ. ಇವರ ಕಲಾ ಸಾಧನೆಗೆ ಮಧ್ಯಪ್ರದೇಶದ ಮಾನವ ಸಂಕೇತ್ ಅಕಾಡೆಮಿ ಉಜ್ಜೈನಿ 2005ರಲ್ಲಿ ಚಿನ್ನದ ಪದಕ ನೀಡಿದೆ. 2006ರಲ್ಲಿ ನವದೆಹಲಿಯ ಅಗ್ನಿಪಥ್ ಸಂಸ್ಥೆಯು ರಜತ ಪದಕ ನೀಡಿದ್ದು ಮಹಾರಾಷ್ಟ್ರದ ಔರಂಗಬಾದ್ ನಲ್ಲಿರುವ ಅಖಿಲ ಭಾರತೀಯ ವಿಕಾಸ್ ಕೇಂದ್ರ 2010ರಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಹರೀಶ್ ಸಾಗಾರವರು ತ್ರಿವರ್ಣ ಆರ್ಟ್ ಸೆಂಟರ್ ಇಲ್ಲಿಯ ನಿರ್ದೇಶಕರಾಗಿದ್ದು, ಈ ಸಂಸ್ಥೆಯು ಮಣಿಪಾಲ ಮತ್ತು ಕುಂದಾಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸುಮಾರು 230ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. ಸ್ಯಾಂಡ್ ಥೀಂ ತಂಡದಲ್ಲಿ ತರಬೇತುದಾರರಾಗಿರುವ ಹರೀಶ್ ಸಾಗಾರವರು ತಮ್ಮ ತಂಡದೊಂದಿಗೆ ಮಲ್ಪೆ, ಕಾಪು, ಕುಂದಾಪುರ ಕಡಲ ತೀರದಲ್ಲಿ ಹಲವಾರು ಜನಜಾಗೃತಿ ಸಂದೇಶಗಳನ್ನು ತಮ್ಮ ಅತ್ಯಾಕರ್ಷಕ ಕಲಾಕೃತಿಗಳ ಮೂಲಕ ನೀಡಿದ್ದಾರೆ.
110ಕ್ಕೂ ಹೆಚ್ಚು ಮರಳು ಶಿಲ್ಪಗಳನ್ನು ರಚಿಸಿರುವ ಹರೀಶ್ ಸಾಗಾರವರು ಹೇಳುವ ಹಾಗೆ, ನಾವು ಕಲೆಯನ್ನು ಆರಾಧಿಸಿದರೆ ಮಾತ್ರ ನಮ್ಮಲ್ಲಿ ಪರಿಪೂರ್ಣತೆ ಮತ್ತು ಕಲಾಪ್ರೌಢಿಮೆ ಬರಲು ಸಾಧ್ಯ. ನಿರಂತರ ಪ್ರಯತ್ನ, ಶ್ರಮ ಹಾಗೂ ಅಧ್ಯಯನಶೀಲ ಗುಣಗಳನ್ನು ಮೈಗೂಡಿಸಿಕೊಂಡರೆ ಮಾತ್ರ ಸೃಜನಶೀಲ ಕಲಾವಿದ ರೂಪುಗೊಳ್ಳುತ್ತಾನೆ ಎನ್ನುತ್ತಾರೆ ಹರೀಶ್ ಸಾಗಾ.
ವಿವಿಧ ಹಬ್ಬ ಹರಿದಿನ, ರಾಷ್ಟ್ರೀಯ ದಿನಗಳ ಸಂದರ್ಭದಲ್ಲಿ ಪರಿಣಾಮಕಾರಿಯಾದ ಸಂದೇಶವನ್ನು ಜನರಿಗೆ ತಮ್ಮ ಅತ್ಯಾಕರ್ಷಕ ಮರಳು ಕಲಾಕೃತಿಗಳ ಮೂಲಕ ನೀಡುತ್ತಿರುವ ಹರೀಶ್ ಸಾಗಾರವರಿಗೆ ಒಳ್ಳೆಯದಾಗಲಿ ಎಂಬುದು ನಮ್ಮ ಶುಭ ಹಾರೈಕೆ.