ಕಾರ್ಕಳ: ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನಡೆಸುತ್ತಿರುವ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ಹಲವಾರು ಮೈಲುಗಲ್ಲುಗಳನ್ನು ಸಾಧಿಸುತ್ತಾ ನಾಡಿನ ಹೆಮ್ಮೆಯ ಕಾಲೇಜಾಗಿ ಹೊರಹೊಮ್ಮಿದೆ. ಪ್ರಸಕ್ತ ವರ್ಷ ಸಂಸ್ಥೆಯ
ಸಂಸ್ಥಾಪಕರಾದ ದಿ. ಗೋಪಶೆಟ್ಟಿಯವರ ಜನ್ಮ ಶತಾಬ್ದಿ ವರ್ಷ. ಜೊತೆಗೆ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ದಶಮಾನೋತ್ಸವದ ಸಂಭ್ರಮ.
ಈ ಸ್ಮರಣೀಯ ಸಂದರ್ಭ ಉಡುಪಿಯ ಕಡಿಯಾಳಿ ಬಳಿಯಿರುವ ನಾಗಬನ ಕ್ಯಾಂಪಸ್‌ನಲ್ಲಿ ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜನ್ನು ಪ್ರಾರಂಭಿಸಿರುವುದು ಹರ್ಷದಾಯಕ ಸಂಗತಿ. ಈ ಎಲ್ಲಾ ಸಂಭ್ರಮಕೆ ಮೆರುಗು ಎನ್ನುವಂತೆ ಇದೇ
ತಿಂಗಳ 21ರ ಶನಿವಾರದಂದು, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣ ಗಣಿತನಗರದಲ್ಲಿ ಸಂಸ್ಥಾಪಕರಾದ ದಿ.ಗೋಪ ಶೆಟ್ಟಿಯವರ “ಜನ್ಮ ಶತಾಬ್ದಿ ನುಡಿನಮನ” ಕಾರ್ಯಕ್ರಮ ಆಯೋಜಿಸಲಾಗಿದೆ.
ಕೋವಿಡ್ ನಿಯಮದ ಅನುಸಾರ ಎರಡು ವಿಭಾಗದಲ್ಲಿ ಕಾರ್ಯಕ್ರಮ ಜರುಗಲಿದೆ. ಬೆಳಗ್ಗೆ 10.00ಗಂಟೆಯಿಂದ ಅಪರಾಹ್ನ 12.15ರವರೆಗೆ ರಕ್ತದಾನ ಶಿಬಿರ, ಗಾಲಿಕುರ್ಚಿ ವಿತರಣೆ, ಅನಾಥಾಶ್ರಮಗಳಿಗೆ ಧನ ಸಹಾಯ ಹಾಗೂ 2021ರ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ ಹಾಗೂ ಸಂಸ್ಥೆಯ ನಿವೃತ್ತ ಉದ್ಯೋಗಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು, ಮಂಗಳೂರು ಪ್ರಾಂತ್ಯದ ಮಾಜಿ ಪ್ರಾಂತ್ಯಾಧಿಕಾರಿಣಿ ಸಿಸ್ಟರ್ ಕ್ರಿಸ್ಟೆಲ್ಲ, ಕಾರ್ಕಳದ ಪ್ರಖ್ಯಾತ ವೈದ್ಯ ಡಾ.ಕೆ.ರಾಮಚಂದ್ರ ಜೋಷಿ, ಪ್ರಭಾಕರ ಜಿ. ಶೆಟ್ಟಿ, ಎ.ಪಿ.ಜಿ.ಇ.ಟಿ. ಆಡಳಿತ ಮಂಡಳಿ ಸದಸ್ಯ ಎ.ಶಾಂತಿರಾಜ್ ಹೆಗ್ಡೆ ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಜೆಯ ಕಾರ್ಯಕ್ರಮದಲ್ಲಿ 7.30ಕ್ಕೆ ನೂತನವಾಗಿ ನಿರ್ಮಿಸಿರುವ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆ, ಕಾರ್ಕಳ ಪುರಸಭೆ ಹಾಗೂ ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಡುವ ಪೌರ ಕಾರ್ಮಿಕರಿಗೆ ಗೌರವ ಪುರಸ್ಕಾರ, 2021ರಲ್ಲಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ 600ಕ್ಕೆ 600 ಅಂಕಗಳಿಸಿದ 43 ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ಜೆ.ಇ.ಇ ಮೈನ್ ಸಾಧಕ ವಿದ್ಯಾರ್ಥಿಗಳನ್ನು ಗುರುತಿಸುವಿಕೆ ಮತ್ತು ಸಂಸ್ಥೆಯ ಉದ್ಯೋಗಿಗಳಿಗೆ ಭೋಜನಾ ಕೂಟ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್, ಬೋಳ ಪ್ರಭಾಕರ್ ಕಾಮತ್ ಪಾಲ್ಗೊಳ್ಳಲಿದ್ದಾರೆಂದು ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.