ಉಡುಪಿ, ಅ.24: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ನಡೆದ ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪುತ್ತೂರಿನ ಕಿಶೋರ್ ಕುಮಾರ್ ಗೆಲುವನ್ನು ಸಾಧಿಸಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ ಸಂಸದರಾದ ನಂತರ ತೆರವಾದ ಈ ಸ್ಥಾನಕ್ಕೆ ಅಕ್ಟೋಬರ್ 21 ರಂದು ಚುನಾವಣೆ ನಡೆದಿತ್ತು.
ಇಂದು (ಗುರುವಾರ) ಮಂಗಳೂರಿನ ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಕೇಂದ್ರ ಚುನಾವಣಾ ವೀಕ್ಷಕ ಪಂಕಜ್ ಕುಮಾರ್ ಪಾಂಡೆ, ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರ ಸಮ್ಮುಖದಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಕಿಶೋರ್ ಕುಮಾರ್ 3,654 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ 1,957 ಮತಗಳನ್ನು ಪಡೆದರು. ಎಸ್.ಡಿ.ಪಿ.ಐ ಅಭ್ಯರ್ಥಿ ಅನ್ವರ್ ಸಾದತ್ 195 ಮತಗಳನ್ನು ಪಡೆದರು.