ಉಡುಪಿ: ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಿಣಕಲ್ ಗ್ರಾಮದ ಹುಂಚಿಗುಡ್ಡ (ದ್ಯಾವಗೋಡು)ದಲ್ಲಿ 16ನೇ ಶತಮಾನಕ್ಕೆ ಸೇರಿದ ವೀರಗಲ್ಲನ್ನು ನ.ಸುರೇಶ್ ಕಲ್ಕೆರೆ ಇವರ ಮಾರ್ಗದರ್ಶನದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶೈಲ ಅನಂತರಾಮು ಅವರು ಪತ್ತೆ ಮಾಡಿರುತ್ತಾರೆ.
ಗ್ರಾನೈಟ್ (ಕಣ) ಶಿಲೆಯಲ್ಲಿ ಮಾಡಲ್ಪಟ್ಟ ಈ ವೀರಗಲ್ಲು ಮೂರು ಪಟ್ಟಿಕೆಯ ಕೆತ್ತನೆಯನ್ನು ಒಳಗೊಂಡಿದ್ದು, 16ನೇ ಶತಮಾನದ ಕನ್ನಡ ಲಿಪಿಯನ್ನು ಹೊಂದಿದೆ. ಶಾಸನವು 90 ಸೆಂ.ಮೀ ಎತ್ತರ ಹಾಗೂ 60 ಸೆಂ.ಮೀ ಅಗಲವಿದೆ. ವೀರಗಲ್ಲಿನ ಎರಡು ಪಟ್ಟಿಕೆಯಲ್ಲಿ ಶಾಸನಗಳಿದ್ದು, ಆದರೆ ತೃಟಿತಗೊಂಡಿದೆ.
ಕೆಳಗಿನ ಪಟ್ಟಿಕೆಯಲ್ಲಿ ಇಬ್ಬರು ವೀರರು ಬಿಲ್ಲು-ಬಾಣ ಹಾಗೂ ಖಡ್ಗ-ಗುರಾಣಿಯನ್ನು ಹಿಡಿದುಕೊಂಡು ಹೋರಾಟ ಮಾಡುವ ದೃಶ್ಯವಿದೆ. ಎರಡನೆಯ ಪಟ್ಟಿಕೆಯಲ್ಲಿ ಮರಣ ಹೊಂದಿದ ವೀರನು ನಂದಿಯ ಪಕ್ಕದಲ್ಲಿ ಕೈ ಮುಗಿದು ಕುಳಿತಿರುವ ಕೆತ್ತನೆಯಿದೆ. ಕೊನೆಯ ಹಂತದ ಮೇಲ್ಭಾಗದಲ್ಲಿ ಸೂರ್ಯ-ಚಂದ್ರ, ಮಧ್ಯ ಭಾಗದಲ್ಲಿ ಶಿವಲಿಂಗ ಹಾಗೂ ಇಕ್ಕೆಲಗಳಲ್ಲಿ ಕೈ ಮುಗಿದು ನಿಂತಿರುವ ವೀರ ಮತ್ತು ಕಾಲುದೀಪದ ಕೆತ್ತನೆಯನ್ನು ಮಾಡಲಾಗಿದೆ.
ಯುದ್ದದಲ್ಲಿ ವೀರರಿಬ್ಬರೂ ಮರಣ ಹೊಂದಿರಬಹುದು ಹಾಗಾಗಿ ಸಾಂಕೇತಿಕವಾಗಿ ಒಬ್ಬ ವೀರನನ್ನು ನಂದಿಯ ಪಕ್ಕದಲ್ಲಿ ಮತ್ತೊಬ್ಬ ವೀರನನ್ನು ಶಿವಲಿಂಗದ ಪಕ್ಕದಲ್ಲಿ ತೋರಿಸಿರಬಹುದು ಎಂದು ಸಂಶೋಧನಾರ್ಥಿಯು ಹೇಳಿದ್ದು, ವೀರಗಲ್ಲಿನಲ್ಲಿರುವ ಲಿಪಿಯು ಸವೆದು ಹೋಗಿರುವುದರಿಂದ ವೀರಗಲ್ಲಿನ ಬಗ್ಗೆ ನಿಖರವಾದ ಮಾಹಿತಿ ತಿಳಿಯುತ್ತಿಲ್ಲ ಆದರೆ ಮೇಲ್ನೋಟಕ್ಕೆ ಇದೊಂದು ವೀರಗಲ್ಲು ಆಗಿದೆ ಎಂದು ನ. ಸುರೇಶ್ ಕಲ್ಕರೆ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ರೀತಿಯ ವೀರಗಲ್ಲು ಹಾಗೂ ಶಾಸನೋಕ್ತ ಒಕ್ಕೈ ಮಾಸ್ತಿಗಲ್ಲುಗಳನ್ನು ಪತ್ತೆ ಮಾಡಿರುವುದನ್ನು ಸಂಶೋಧನಾರ್ಥಿಯು ತಿಳಿಸಿರುತ್ತಾರೆ. ಕ್ಷೇತ್ರಕಾರ್ಯ ಸಂದರ್ಭದಲ್ಲಿ ಸ್ಥಳೀಯರಾದ ಸೂರಪ್ಪ ಹೆಗ್ಡೆಯವರು ಸಹಕಾರ ನೀಡಿರುತ್ತಾರೆ.