ಘಟನೆಗಳ ವಸ್ತುನಿಷ್ಠ ಪರಿಶೀಲನೆ ಮತ್ತು ವಿಶ್ಲೇಷಿಸುವ ಸಾಮರ್ಥ್ಯವನ್ನು ಬರಹಗಾರರು ಹೊಂದಿರಬೇಕು. ಹಾಗಾದಾಗ ಮಾತ್ರ ಪ್ರಬುದ್ಧ ಬರಹಗಳು ಮೂಡಲು ಸಾಧ್ಯ ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ನರೇಂದ್ರ ಎಸ್. ಗಂಗೊಳ್ಳಿ ಅಭಿಪ್ರಾಯಪಟ್ಟರು. ಅವರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಘಟಕ ಮತ್ತು ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ’ಬದುಕಿಗೆ ಬರ” ವಿಚಾರ ಕುರಿತಾದ ಆನ್ಲೈನ್ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಲವಂತದ ಬರವಣಿಗೆ ಸರಿಯಲ್ಲ. ಸೃಜನಶೀಲತೆಯಿಂದ ಬರಹಗಳು ಹುಟ್ಟಬೇಕು. ಹೆಚ್ಚಿನ ಓದು, ವಿಚಾರ ಮಂಥನ, ಚರ್ಚೆ ಇತ್ಯಾದಿ ಉತ್ತಮ ಬರಹಗಾರರನ್ನು ರೂಪಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ. ಆಸಕ್ತಿಯ ಕ್ಷೇತ್ರ ಯಾವುದೇ ಇದ್ದರೂ ಓದುವಿಕೆ ನಿರಂತರವಾಗಿರಲಿ ಎಂದು ಅವರು ಹೇಳಿದರು.
ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಘವೇಂದ್ರ ಎ.ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಡಾ. ಪ್ರಕಾಶ್ ರಾವ್, ಸಾಂಸ್ಕೃತಿಕ ಸಂಘದ ಸಂಯೋಜಕಿ ಡಾ.ಪ್ರಜ್ಞಾ ಮಾರ್ಪಳ್ಳಿ, ಸಾಂಸ್ಕೃತಿಕ ಸಂಘದ ಅಧ್ಯಾಪಕ ಸಲಹೆಗಾರರಾದ ನಮ್ರತ ಆಚಾರ್, ಶಿವಕುಮಾರ್ ಅಳಗೋಡು, ದೀಕ್ಷ ಎಸ್, ಮೇಘನ ಮೇಗರೊಳಿ. ಉಪನ್ಯಾಸಕರಾದ ನಿತ್ಯಾನಂದ, ಪ್ರತಿಭಾ, ರಾಕೇಶ್ ಮೊದಲಾದವರು ಉಪಸ್ಥಿತರಿದ್ದರು.
ಅನಿರುದ್ಧ ಪ್ರಾರ್ಥಿಸಿದರು. ವಿದ್ಯಾರ್ಥಿನಿ ನಯನ ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿನಿ ಚೈತ್ರ ವೈದ್ಯ ಕಾರ್ಯಕ್ರಮ ನಿರೂಪಿಸಿದರು.