ಉಡುಪಿ, ಆ.8: ಕಲ್ಯಾಣಪುರ ಮಿಲಾಗ್ರಿಸ್ ಪದವಿಪೂರ್ವ ಕಾಲೇಜಿನ ಸಯನ್ಸ್ ಮತ್ತು ಇಕೊ ಕ್ಲಬ್ ಜತೆ ರೋಟರಿ ಉಡುಪಿ ಜಂಟಿ ಆಶ್ರಯದಲ್ಲಿ ರೋಟರಿ ಉಡುಪಿ ವತಿಯಿಂದ ಮಾಡಿರುವ ಮಿಯಾವಾಕಿ ಕಾಡಿನ ಬಳಿ ರೋಟರಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಗಿಡಗಳನ್ನು ನೆಡುವುದರ ಮೂಲಕ ವನಮಹೋತ್ಸವ ಆಚರಿಸಿದರು. ಕಾಲೇಜಿನ ಪ್ರಾಂಶುಪಾಲೆ ಸವಿತಾ ಕುಮಾರಿ ವಿದ್ಯಾರ್ಥಿಗಳಿಗೆ ವನಮಹೋತ್ಸವದ ಉದ್ದೇಶ ಮತ್ತು ಮಹತ್ವವನ್ನು ತಿಳಿಸಿ ರೋಟರಿ ಉಡುಪಿಯ ಸಹಕಾರವನ್ನು ಶ್ಲಾಘಿಸಿದರು.
ವಿದ್ಯಾರ್ಥಿ ಚಂದನ ಸ್ವಾಗತಿಸಿದರು. ರೋಟರಿ ಅಧ್ಯಕ್ಷ ಗುರುರಾಜ ಭಟ್ ಪ್ಲಾಸ್ಟಿಕ್ ಬಳಕೆ, ಅದರ ಅಸಮರ್ಪಕ ವಿಲೇವಾರಿಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳು ಮತ್ತು ವಿದ್ಯಾರ್ಥಿಗಳು ಈ ಬಗ್ಗೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಇಕೋ ಕ್ಲಬ್ ನ ಸಂಚಾಲಕಿ ಲೊಲೆಟಾ ಡಿಸೋಜ, ಸಹ ಸಂಚಾಲಕಿ ರೋಷನಿ ಸೋನ್ಸ್, ಕಾರ್ಯದರ್ಶಿ ವೈಷ್ಣವಿ ಆಚಾರ್ಯ ಉಪಸ್ಥಿತರಿದ್ದರು. ರಘುಪತಿ ಉಪಾಧ್ಯ, ರಾಮಚಂದ್ರ ಉಪಾಧ್ಯಾಯ, ಹೇಮಂತಕಾಂತ, ಶುಭಲಕ್ಷ್ಮಿ ಭಟ್ ಮತ್ತು ಸಾದನಾ ಮುಂಡ್ಕೂರ್ ಭಾಗವಹಿಸಿದ್ದರು.