ಲಕ್ನೌ, ಅ.29: (ಉಡುಪಿ ಬುಲೆಟಿನ್ ವರದಿ)ಇಲ್ಲಿಯ ಭಾರತ್ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಮ್ ನಲ್ಲಿ ಭಾನುವಾರ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 100 ರನ್ ಗಳ ಭರ್ಜರಿ ಗೆಲುವು ಸಾಧಿಸಿ, ಈ ವಿಶ್ವಕಪ್ ನಲ್ಲಿ ಸತತ 6ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 12 ಅಂಕಗಳನ್ನು ಪಡೆಯುವ ಮೂಲಕ ಮತ್ತೊಮ್ಮೆ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿದೆ.
ಟಾಸ್ ಸೋತು ಮೊದಲು ಭಾರತ ಬ್ಯಾಟಿಂಗ್ ನಡೆಸಬೇಕಾಯಿತು. ಆಂಗ್ಲರ ಬಿಗು ಬೌಲಿಂಗ್ ದಾಳಿಗೆ ಭಾರತದ ಮೊದಲೆರಡು ವಿಕೆಟ್ ಗಳು 27 ರನ್ ಆಗುವಷ್ಟರಲ್ಲಿ ಉರುಳಿದವು. ಶುಭ್ಮನ್ ಗಿಲ್ 9 ರನ್ನಿಗೆ ಔಟಾದರೆ, ವಿರಾಟ್ ಕೊಹ್ಲಿ ಶೂನ್ಯಕ್ಕೆ ನಿರ್ಗಮಿಸಿದರು. ಶ್ರೇಯಸ್ ಐಯ್ಯರ್ 4 ರನ್ ಗೆ ಔಟಾದರು. ರೋಹಿತ್ ಶರ್ಮಾ ಬಿರುಸಿನ ಆಟ ಪ್ರದರ್ಶಿಸಿ 87 ರನ್ ಗಳಿಸಿದರು. ಇದರಲ್ಲಿ 10 ಬೌಂಡರಿ ಮತ್ತು 3 ಬಾನೆತ್ತರದ ಸಿಕ್ಸ್ ಒಳಗೊಂಡಿತ್ತು. ಕೆ.ಎಲ್. ರಾಹುಲ್ 39 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ 49 ರನ್ ಗಳಿಸಿದರು. 50 ಓವರ್ ಗಳಲ್ಲಿ ರೋಹಿತ್ ಪಡೆ 9 ವಿಕೆಟ್ ನಷ್ಟಕ್ಕೆ 229 ರನ್ ಕಲೆ ಕಲೆ ಹಾಕಿತು.
ಗೆಲ್ಲಲು ಸುಲಭ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ಗೆ ಬುಮ್ರಾ ಆಘಾತ ನೀಡಿದರು. 30 ರನ್ ಆಗುವಷ್ಟರಲ್ಲಿ ಎರಡು ಪ್ರಮುಖ ಆಟಗಾರರಾದ ಡೇವಿಡ್ ಮಲಾನ್ ಮತ್ತು ಜೊ ರೂಟ್ ಬುಮ್ರಾ ದಾಳಿಗೆ ನಿರ್ಗಮಿಸಿದರು. ಕಳೆದ ಪಂದ್ಯದಲ್ಲಿ ಮಿಂಚಿದ ವೇಗಿ ಮಹಮ್ಮದ್ ಶಮಿ ಬೇರ್ಸ್ಟೊ ಮತ್ತು ಸ್ಟೋಕ್ಸ್ ಗೆ ಕಾಡಿದರು. ಒಟ್ಟು 39 ರನ್ ಆಗುವಷ್ಟರಲ್ಲಿ ಇಂಗ್ಲೆಂಡ್ 4 ವಿಕೆಟ್ ಗಳನ್ನು ಕಳೆದುಕೊಂಡಿತು. 98 ರನ್ ಆಗುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಗೆ ಗೆಲುವು ಮರೀಚಿಕೆ ಆಗುತ್ತಾ ಹೋಯಿತು.
ಮಹಮ್ಮದ್ ಶಮಿ 4 ವಿಕೆಟ್ ಪಡೆದರೆ, ಬುಮ್ರಾ 3 ವಿಕೆಟ್ ಪಡೆದರು. ಕುಲದೀಪ್ ಯಾದವ್ 2 ವಿಕೆಟ್ ಪಡೆದರು. ಅಂತಿಮವಾಗಿ ಇಂಗ್ಲೆಂಡ್ 34.5 ಓವರ್ ಗಳಲ್ಲಿ 129 ರನ್ ಗಳಿಗೆ ಆಲ್ ಔಟ್ ಆಯ್ತು. ಕಠಿಣವಾದ ಪಿಚ್ ನಲ್ಲಿ 87 ರನ್ ಗಳಿಸಿದ ನಾಯಕ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.