ಉಡುಪಿ ಬುಲೆಟಿನ್ ನ್ಯೂಸ್ ಡೆಸ್ಕ್, ಆ.29: ಶನ್ಶಾನ್ ಚಂಡಮಾರುತ ಜಪಾನ್‌ನ ನೈಋತ್ಯ ದ್ವೀಪ ಕ್ಯುಶುಗೆ ಅಪ್ಪಳಿಸಿದೆ. ಜಪಾನ್ ಹವಾಮಾನ ಸಂಸ್ಥೆ (ಜೆಎಂಐ) ಇದನ್ನು ವರ್ಷದ ದೇಶದ ಪ್ರಬಲ ಟೈಫೂನ್ ಎಂದು ಉಲ್ಲೇಖಿಸಿದೆ. ಶನ್ಶಾನ್ ಚಂಡಮಾರುತದಿಂದ ಧಾರಾಕಾರ ಮಳೆ ಮತ್ತು ಗಂಟೆಗೆ 252 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಕಾಗೋಶಿಮಾ ಪ್ರಿಫೆಕ್ಚರ್‌ನ ಬಹುತೇಕ ಭಾಗಗಳಿಗೆ ಟೈಫೂನ್ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಜೆಎಂಐ ಹೇಳಿದೆ. ಚಂಡಮಾರುತವು ಉತ್ತರ ದಿಕ್ಕಿನತ್ತ ಸಾಗುತ್ತಿತ್ತು. ಭಾರೀ ಮಳೆಯ ಕಾರಣ, ಶಿಜುವೊಕಾ ಮತ್ತು ಕಾಕೆಗಾವಾ ನಡುವಿನ ಟೊಕೈಡೊ ಶಿಂಕನ್ಸೆನ್ ಮಾರ್ಗದಲ್ಲಿ ಮಧ್ಯ ಜಪಾನ್ ಬುಲೆಟ್ ರೈಲು ಸೇವೆಗಳನ್ನು ನಿನ್ನೆ ರಾತ್ರಿ ಸ್ಥಗಿತಗೊಳಿಸಲಾಗಿದೆ. ಕನಿಷ್ಠ ಮೂರು ಜನರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಇಲಾಖೆ ಮಾಹಿತಿ ನೀಡಿದೆ.
ಪರಿಸ್ಥಿತಿಯ ಬಗ್ಗೆ ಸಮಯೋಚಿತ ಮತ್ತು ನಿಖರವಾದ ಮಾಹಿತಿಯನ್ನು ಒದಗಿಸುವಂತೆ ಪ್ರಧಾನಮಂತ್ರಿ ಫ್ಯೂಮಿಯೊ ಕಿಶಿಡಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸ್ಥಳೀಯ ಸರ್ಕಾರಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ಮತ್ತು ಸ್ಥಳಾಂತರಿಸುವಿಕೆಗೆ ಬೆಂಬಲದಂತಹ ಎಲ್ಲಾ ಸಂಭಾವ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.