ಅಫ್ಘಾನ್ ಬಿಕ್ಕಟ್ಟನ್ನು ಪರಿಹರಿಸುವ ಸಲುವಾಗಿ ಶಾಂತಿ ಮಾತುಕತೆ ನಡೆಸಬೇಕೆಂದು ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಕರೆ ನೀಡಿದ್ದಾರೆ. ದುಶಾನ್ಬೆಯಲ್ಲಿ ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದ ಎಸ್‌ಸಿಒ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ದೋಹಾ ಪ್ರಕ್ರಿಯೆ, ಮಾಸ್ಕೋ ಮತ್ತು ಇಸ್ತಾಂಬುಲ್ ಪ್ರಕ್ರಿಯೆಯನ್ನು ಆಧಾರವಾಗಿಟ್ಟುಕೊಂಡು ರಾಜಿ ಪ್ರಯತ್ನ ನಡೆಸಲು ಮುಂದಾಗಬೇಕು.
ಸ್ವತಂತ್ರ, ಏಕೀಕೃತ, ಶಾಂತಿಯುತ, ಪ್ರಜಾಪ್ರಭುತ್ವ ಮತ್ತು ಸಮೃದ್ಧ ರಾಷ್ಟ್ರವನ್ನು ಅಫ್ಘಾನ್ ಜನರು ಸೇರಿದಂತೆ ಎಲ್ಲರೂ ಬಯಸುತ್ತಾರೆ. ನಾಗರಿಕರ ಮತ್ತು ರಾಜ್ಯ ಪ್ರತಿನಿಧಿಗಳ ಮೇಲಿನ ಹಿಂಸಾಚಾರ ಮತ್ತು ಭಯೋತ್ಪಾದಕ ದಾಳಿಗಳಿಗೆ ಪೂರ್ಣ ವಿರಾಮ ಹಾಕುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಸಾಂಘಿಕ ಪ್ರಯತ್ನಗಳು ನಡೆಯಬೇಕು. ಸಂಘರ್ಷವನ್ನು ಬಗೆಹರಿಸಲು ಪರಸ್ಪರ ಪರಿಣಾಮಕಾರಿಯಾದ ಸಂವಾದದ ಅಗತ್ಯತೆಯಿದೆ. ಹಿಂಸೆ ಮತ್ತು ಬಲದಿಂದ ಅಧಿಕಾರವನ್ನು ವಶಪಡಿಸಿಕೊಳ್ಳುವ ಮನಸ್ಥಿತಿ ಖಂಡನೀಯ ಎಂದು ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಹೇಳಿದರು.