ಫಿಲಿಪೈನ್ಸ್ ವಾಯುಪಡೆಯ ವಿಮಾನ ಫಿಲಿಪೈನ್ಸ್ ದಕ್ಷಿಣ ಭಾಗದಲ್ಲಿ ಅಪಘಾತಕ್ಕೀಡಾಗಿ ಕನಿಷ್ಠ 45 ಜನರು ಸಾವನ್ನಪ್ಪಿದ್ದಾರೆ. ಸಿ -130 ಮಿಲಿಟರಿ ವಿಮಾನವು ಮಿಲೋನಾವೊದ ಕಾಗಾಯನ್ ಡಿ ಓರೊದಿಂದ ಸುಲು ಪ್ರಾಂತ್ಯಕ್ಕೆ ಸಂಚರಿಸುತ್ತಿತ್ತು. ಸುಮಾರು 90 ಕ್ಕಿಂತ ಹೆಚ್ಚಿನ ಜನರು ವಿಮಾನದಲ್ಲಿದ್ದರು.
ವಿಮಾನದ ಭಗ್ನಾವಶೇಷದಿಂದ ಜನರನ್ನು ರಕ್ಷಿಸುವ ಪ್ರಯತ್ನವನ್ನು ನಡೆಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಮೃತರಲ್ಲಿ ಹೆಚ್ಚಿನವರು ಮಿಲಿಟರಿ ಸಿಬ್ಬಂದಿಗಳಾಗಿದ್ದು ಘಟನೆಯಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದರೆ. 53 ಕ್ಕಿಂತಲೂ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆ. ಐವರು ಮಿಲಿಟರಿ ಸಿಬ್ಬಂದಿಗಳ ಸುಳಿವು ಇನ್ನೂ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.
ವಿಮಾನದ ಮೇಲೆ ಯಾವುದೇ ದಾಳಿ ನಡೆದ ಲಕ್ಷಣಗಳಿಲ್ಲ, ತಾಂತ್ರಿಕ ಸಮಸ್ಯೆಯಿಂದ ಅವಘಡ ಸಂಭವಿಸಿರಬಹುದು. ಘಟನೆಯ ಕುರಿತು ಸೂಕ್ತ ತನಿಖೆ ನಡೆಯಲಿದೆ ಎಂದು ಮಿಲಿಟರಿ ವಕ್ತಾರರು ತಿಳಿಸಿದ್ದಾರೆ.