ಬಲೂಚಿಸ್ತಾನದ ನೈಋತ್ಯ ಪ್ರಾಂತ್ಯ ಸಿಬಿ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಪಾಕಿಸ್ತಾನ ಪ್ಯಾರಾಮಿಲಿಟರಿ ಪಡೆಯ ಕನಿಷ್ಠ ಐವರು ಸೈನಿಕರು ಸಾವನ್ನಪ್ಪಿದ್ದಾರೆ. ಪ್ರಾಂತೀಯ ರಾಜಧಾನಿ ಕ್ವೆಟ್ಟಾದಿಂದ ಆಗ್ನೇಯದಲ್ಲಿ ಸುಮಾರು 161 ಕಿ.ಮೀ ದೂರದಲ್ಲಿರುವ ಸಿಬಿಯ ಸಂಗನ್ ಪ್ರದೇಶದಲ್ಲಿ ಪಾಕ್ ಸೈನಿಕರು ಗಸ್ತು ತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಗುಂಡಿನ ಚಕಮಕಿಯಲ್ಲಿ ಭಯೋತ್ಪಾದಕರಿಗೆ ಭಾರಿ ನಷ್ಟವಾಗಿದೆ. ಭಯೋತ್ಪಾದಕರು ಪಾರಾಗುವ ಮಾರ್ಗಕ್ಕೆ ದಿಗ್ಭಂಧನ ಹಾಕಿ ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಪಾಕ್ ಸೇನಾ ಮೂಲಗಳು ಹೇಳಿಕೆ ನೀಡಿದೆ.
2004ರಿಂದ ಬಲೂಚ್ ಪ್ರತ್ಯೇಕತಾವಾದಿಗಳ ಬಲವಾದ ಕೂಗಿನ ಕಾರಣ ಉಂಟಾಗಿರುವ ದಂಗೆಯಿಂದ ಸಾವಿರಾರು ಜನರ ಹತ್ಯೆ ಬಲೂಚಿಸ್ತಾನದಲ್ಲಿ ನಡೆದಿದೆ. ಈ ಪ್ರಾಂತ್ಯದಲ್ಲಿ ರಾಜಕೀಯ ನಾಯಕರ ಮತ್ತು ಪ್ರತ್ಯೇಕತಾವಾದಿಗಳ ಹತ್ಯೆ, ಅನಿಯಂತ್ರಿತ ಬಂಧನಗಳು ಮತ್ತು ಚಿತ್ರಹಿಂಸೆ ಪಾಕ್ ಸೇನೆಯ ಮೂಲಕ ನಿರಂತರವಾಗಿ ನಡೆಯುತ್ತಿದೆ. ಇದೇ ಕಾರಣಕ್ಕಾಗಿ ಬಲೂಚಿಸ್ತಾನದಲ್ಲಿ ಪಾಕ್ ಸೇನೆ ಮತ್ತು ಅಲ್ಲಿಯ ಪ್ರತ್ಯೇಕತಾವಾದಿಗಳ ನಡುವೆ ಆಗಾಗ್ಗೆ ಘರ್ಷಣೆ ಸಂಭವಿಸುತ್ತಿವೆ ಎಂದು ಸಾಮಾಜಿಕ ಹೋರಾಟಗಾರರು ಹೇಳುತ್ತಾರೆ.
ಅಫ್ಘಾನಿಸ್ತಾನದ ಮೂಲಕ ಬಲೂಚ್ ಪ್ರತ್ಯೇಕತಾವಾದಿಗಳನ್ನು ಭಾರತ ಪರೋಕ್ಷವಾಗಿ ಬೆಂಬಲಿಸುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ.