ಇಂದು ರಾಷ್ಟ್ರೀಯ ವಿಜ್ಞಾನ ದಿನ (ಫೆ. 28). ಭಾರತದಲ್ಲಿ ಮಹಾ ಸಂಶೋಧನೆಯೊಂದು ಹುಟ್ಟಿದ ದಿನ. 1921ರ ಬೇಸಿಗೆಯ ವಿಜ್ಞಾನ ಸಮ್ಮೇಳನವು ಇಂಗ್ಲೆಂಡಿನಲ್ಲಿ ಜರಗುತ್ತಿದ್ದು ಭಾರತದ ಆ ಮಹಾ ವಿಜ್ಞಾನಿಯು ಆಹ್ವಾನವನ್ನು ಪಡೆದಿದ್ದರು. ಅವರು ಆಗಿನ ಏಕಮಾತ್ರ ಸಂಪರ್ಕ ಸಾಧನವಾಗಿದ್ದ ಹಡಗಿನಲ್ಲಿ ಇಂಗ್ಲೆಂಡಿಗೆ ಹೊರಟರು. ಅದು ಮೂರು ತಿಂಗಳ ಸುದೀರ್ಘವಾದ ಅವಧಿಯ ಪ್ರಯಾಣ.
ಓಹ್! ಎಂತಹ ಸುಂದರ ನೀಲಿ ಕಡಲು! ಇನ್ನೇನು ಇಂಗ್ಲೆಂಡ್ ಸಮೀಪಿಸಿತು ಅನ್ನುವಾಗ ಹಡಗಿನ ಡೆಕ್ ಮೇಲೆ ನಿಂತು ಮೆಡಿಟರೇನಿಯನ್ ಸಮುದ್ರವನ್ನು ವೀಕ್ಷಣೆ ಮಾಡುತ್ತಿದ್ದ ಆ ವಿಜ್ಞಾನಿಯ ಮೆದುಳಿನಲ್ಲಿ ಝಗ್ ಎಂಬ ಬೆಳಕು ಒಂದು ಪ್ರಶ್ನೆಯನ್ನು ಉಂಟುಮಾಡಿತು. ‘ಓಹ್! ಎಂತಹ ಸುಂದರವಾದ ಸಮುದ್ರ. ಈ ಸಮುದ್ರದ ನೀರು ಏಕೆ ನೀಲಿ?’ ಹಿಂದೆ ಸಾವಿರಾರು ಜನರು ಸಮುದ್ರವನ್ನು ನೋಡಿರಬಹುದು. ಈ ಪ್ರಶ್ನೆ ಅವರ ತಲೆಯಲ್ಲಿ ಕೂಡ ಬಂದಿರಬಹುದು. ಆದರೆ ಆ ವಿಜ್ಞಾನಿ ಉತ್ತರ ಸಿಗದೆ ಸುಮ್ಮನೆ ಕೂರುವವವರೆ ಅಲ್ಲ!
ವಿಜ್ಞಾನಿಯ ತಲೆಯಲ್ಲಿ ಹುಳ ಹುಟ್ಟಿತ್ತು! ಇಂಗ್ಲೆಂಡಿನ ಸಮ್ಮೇಳನವು ಮುಗಿಸಿ ಭಾರತಕ್ಕೆ ಬಂದ ವಿಜ್ಞಾನಿಯು ತಕ್ಷಣ ಸಂಶೋಧನೆಗೆ ಇಳಿದರು. ಊಟ, ತಿಂಡಿ, ನಿದ್ರೆ ಎಲ್ಲವೂ ಮರೆತುಹೋಗಿತ್ತು! ಧೂಳು ಅಥವಾ ಬೇರೆ ಯಾವುದೇ ಕಣವಿಲ್ಲದ ಶುದ್ಧವಾದ ದ್ರವ ಮಾಧ್ಯಮಗಳ ಮೂಲಕ ಬೆಳಕಿನ ಕಿರಣವು ಹಾದು ಹೋಗುವುದನ್ನು ಗಮನಿಸಿದಾಗ ಪತನ ಕಿರಣಕ್ಕಿಂತ ಸ್ವಲ್ಪ ಭಿನ್ನವಾದ ತರಂಗದೂರ (Wave Length)ವಿರುವ ಇನ್ನೊಂದು ಕಿರಣವು ನಿರ್ಗಮಿಸುವುದು ಅವರ ಗಮನಕ್ಕೆ ಬಂದಿತು. ಆ ಭಿನ್ನ ತರಂಗದೂರದ ಆ ಕಿರಣವೇ ಸಮುದ್ರದ ನೀಲಿ ಬಣ್ಣಕ್ಕೆ ಕಾರಣ ಎಂದು ಅವರು ನಿಖರವಾಗಿ ತೀರ್ಮಾನ ಮಾಡಿದರು. ಅದನ್ನು ಚದುರುವಿಕೆ (ಸ್ಕ್ಯಾಟರಿಂಗ್) ಎಂದು ವಿಜ್ಞಾನದ ಭಾಷೆಯಲ್ಲಿ ಕರೆಯುತ್ತಾರೆ. ಆ ಸಂಶೋಧನೆಯ ಮೂಲಕ ಅವರು ವಿಶ್ವಕೀರ್ತಿಯನ್ನು ಪಡೆದರು! ಅವರೇ ಸಿ.ವಿ. ರಾಮನ್. ಆ ಚದುರುವಿಕೆಯನ್ನು ಮುಂದೆ ‘ರಾಮನ್ ಪರಿಣಾಮ’ ಎಂದು ಜಗತ್ತು ಕರೆಯಿತು!
ಈ ಸಂಶೋಧನೆಯನ್ನು ರಾಮನ್ ಅವರು ಮಾಡಿದ್ದು 1928ರ ಫೆಬ್ರುವರಿ 28ರಂದು. ಆದ್ದರಿಂದ ಆ ದಿನವನ್ನು ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನ (ನೇಷನಲ್ ಸಾಯನ್ಸ್ ಡೇ) ಎಂದು ಭಾರತವು ಕರೆಯಿತು! ಸಿ ವಿ ರಾಮನ್ ಅವರ ಈ ಸಂಶೋಧನೆಗೆ 1930ರಲ್ಲಿ ನೊಬೆಲ್ ಪ್ರಶಸ್ತಿಯು ಕೂಡ ದೊರೆಯಿತು. ಆ ಪ್ರಶಸ್ತಿ ಪಡೆದ ಮೊದಲ ಭಾರತೀಯ ವಿಜ್ಞಾನಿ ಆಗಿ ರಾಮನ್ ಅವರು ಇತಿಹಾಸಕ್ಕೆ ಸೇರಿ ಹೋದರು. ಮುಂದೆ 1954ರಲ್ಲಿ ಅವರಿಗೆ ‘ಭಾರತ ರತ್ನ ‘ ಪ್ರಶಸ್ತಿ ಕೂಡ ದೊರೆಯಿತು.
ಬಾಲ್ಯದಲ್ಲಿ ಮಹಾ ಪ್ರತಿಭಾವಂತ! ಸಿ ವಿ ರಾಮನ್ ಅವರು ಹುಟ್ಟಿದ್ದು ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ( 1888 ನವೆಂಬರ್ ಏಳು). ಬಾಲ್ಯದಿಂದಲೂ ಮಹಾ ಪ್ರತಿಭಾವಂತ. ಭೌತ ವಿಜ್ಞಾನದಲ್ಲಿ ತೀವ್ರ ಆಸಕ್ತಿ. ಆಗ ಕಲಿಕೆಯಲ್ಲಿ ಚುರುಕಾಗಿದ್ದ ವಿದ್ಯಾರ್ಥಿಗಳಿಗೆ ಎರಡೆರಡು ತರಗತಿಗಳಿಗೆ ಪ್ರಮೋಷನ್ ಕೊಡುತ್ತಿದ್ದರು.ಅದರ ಪರಿಣಾಮವಾಗಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿದಾಗ ಅವರ ವಯಸ್ಸು ಕೇವಲ 12! ಪದವಿ ಮುಗಿದಾಗ 16! ಸ್ನಾತಕೋತ್ತರ ಪದವಿ ಮುಗಿದಾಗ 18! ಅಲ್ಲಿಂದ ವಿಜ್ಞಾನದ ಸಂಶೋಧನೆಗಳಲ್ಲಿ ಮುಳುಗಿದ ರಾಮನ್ ಮುಂದೆ ಭಾರತದ ಕೀರ್ತಿಯನ್ನು ಭಾರೀ ಎತ್ತರಕ್ಕೆ ತೆಗೆದುಕೊಂಡು ಹೋದರು.
ಬೆಂಗಳೂರಿನಲ್ಲಿ ವಿಜ್ಞಾನ ಅಕಾಡೆಮಿ ಸ್ಥಾಪನೆ ಮಾಡಿದರು: ಬೇಸಿಕ್ ವಿಜ್ಞಾನದಲ್ಲಿ ಸಂಶೋಧನೆಗಳನ್ನು ಕೈಗೊಳ್ಳಲು ಬೆಂಗಳೂರಿನಲ್ಲಿ ರಾಮನ್ ಅವರು 1934ರಲ್ಲಿ ‘ಇಂಡಿಯನ್ ಅಕಾಡೆಮಿ ಆಫ್ ಸಾಯನ್ಸ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಅದರಲ್ಲಿ ಸಂಶೋಧನೆ ಮಾಡಲು ಭಾರತದ ಯುವಪ್ರತಿಭೆಗಳನ್ನು ಆಮಂತ್ರಣ ಮಾಡಿದರು. ನೂರಾರು ಯುವ ವಿಜ್ಞಾನಿಗಳನ್ನು ಅವರು ತುಂಬಾ ಎತ್ತರಕ್ಕೆ ಬೆಳೆಸಿದರು. ಬೆಂಗಳೂರಿನಲ್ಲಿ ಇದ್ದ ಪ್ರತಿಷ್ಠಿತ ‘ ಭಾರತೀಯ ವಿಜ್ಞಾನ ಮಂದಿರ ಸಂಸ್ಥೆಯ’ ಮೊದಲ ಭಾರತೀಯ ನಿರ್ದೇಶಕರಾಗಿ ಅವರು ಆಯ್ಕೆಯಾದರು. ಅವರಿಗಿಂತ ಮೊದಲು ಅಲ್ಲಿ ನಿರ್ದೇಶಕರಾಗಿ ಎಲ್ಲರೂ ಬ್ರಿಟಿಷ್ ಅಧಿಕಾರಿಗಳೇ ಇದ್ದವರು! ಹಾಗೆ ತಮ್ಮ ಜೀವಮಾನದ ಬಹುಮುಖ್ಯ ವರ್ಷಗಳನ್ನು ಅವರು ಬೆಂಗಳೂರಿನಲ್ಲಿ ಕಳೆದರು. ಅತ್ಯಂತ ಸರಳವಾಗಿ ಬದುಕಿದರು.
ದಿನವೂ ತನ್ನ ಆಫೀಸಿಗೆ ಬೈಸಿಕಲ್ ಮೇಲೆ (ಸಂಸ್ಥೆಯ ಕಾರು ಇದ್ದರೂ) ಕುಳಿತು ಬರುತ್ತಿದ್ದ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿಯನ್ನು ನೋಡುವುದೇ ಬೆಂಗಳೂರಿನ ನಾಗರಿಕರಿಗೆ ಆ ದಿನಗಳಲ್ಲಿ ಒಂದು ಅಚ್ಚರಿಯ ಸಂಗತಿ ಆಗಿತ್ತು!
ಮುಂದೆ 1970ರ ನವೆಂಬರ್ 21ರಂದು ಅವರು ನಿಧನರಾದರು. ಇಂದು (ಫೆಬ್ರುವರಿ 28) ರಾಷ್ಟ್ರೀಯ ವಿಜ್ಞಾನ ದಿನ. ಸಿ. ವಿ. ರಾಮನ್ ಸಂಶೋಧನೆಯನ್ನು ನೆನಪಿಸುವ ದಿನ. ಇಂದು ನಾವೆಲ್ಲರೂ ಅವರನ್ನು ನೆನೆಯೋಣ.
-ರಾಜೇಂದ್ರ ಭಟ್ ಕೆ.