ನನ್ನ ವೃತ್ತಿ ಮತ್ತು ಹವ್ಯಾಸದ ದೃಷ್ಟಿಕೋನ ಒಂದೇ. ಎರಡಕ್ಕೂ ಸೂಕ್ಷ್ಮವಾದ ನೋಟ ಬೇಕು, ಸಂವೇದನಾಶೀಲ ಮನಸ್ಸು ಬೇಕು. ವೃತ್ತಿಯಲ್ಲಿ ನಾನು ಅರ್ಥ್ರೋಸ್ಕೋಪಿ ಹಾಗು ಸ್ಪೋರ್ಟ್ಸ್ ಇಂಜುರಿಯ ಶಸ್ತ್ರ ಚಿಕಿತ್ಸಾ ತಜ್ಞ. ವೃತ್ತಿ ಸಂಬಂಧಿ ಸಮಾವೇಶ ಗೋಷ್ಠಿ ಹಾಗೂ ಉಪನ್ಯಾಸ ನೀಡಲು ಪ್ರಯಾಣ -ಪ್ರವಾಸ ಅನಿವಾರ್ಯ.
ಗುಂಪಿನೊಂದಿಗೆ ಪ್ರವಾಸ ತೆರಳುವುದಕ್ಕಿಂತ ಒಬ್ಬಂಟಿಯಾಗಿ ಅಥವಾ ಕುಟುಂಬದೊಡನೆ ಪ್ರವಾಸ ನನಗಿಷ್ಟ. ದೇಶ ವಿದೇಶಗಳ ಸಮಾವೇಶಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನನ್ನ ಹೊಣೆಗಾರಿಕೆ ಮುಗಿದ ತಕ್ಷಣ ಸುತ್ತಾಡಲು ಹೊರಡುತ್ತೇನೆ. ನಾನು ನೋಡಿದ ತಾಣಗಳ ಚಿತ್ರಗಳು ಹಾರ್ಡ್ ಡಿಸ್ಕ್ ನಲ್ಲಿ ಬಂಧಿಯಾಗುವುದು ನನಗಿಷ್ಟವಿಲ್ಲ. ಹಾಗಾಗಿ ಬ್ಲಾಗ್, ಫೇಸ್ಬುಕ್ ಹಾಗು ಇನ್ಸ್ಟಾಗ್ರಾಮ್ ಮೂಲಕ ಹಂಚಿಕೊಂಡು ಇತರರಿಗೂ ಸಂತಸ ಹಂಚುವುದು ಖುಷಿ ಕೊಡುತ್ತದೆ.
ನನಗೆ ಐವತ್ತು ವರ್ಷ ತುಂಬುವುದರ ಒಳಗೆ ನೂರು ತಾಣಗಳನ್ನು ನೋಡುವ ಪಟ್ಟಿ ಮಾಡಿದ್ದೆ. ದೇವರ ದಯೆಯಿಂದ ಅವೆಲ್ಲವನ್ನೂ ಕೋವಿಡ್ ವಿಶ್ವವನ್ನು ಆವರಿಸುವ ಮುಂಚೆ ನೋಡುವಂತಾಗಿದೆ. ಲಾಕ್ಡೌನ್ ನನ್ನ ಪ್ರವಾಸ ಕಥನ – ಚಿತ್ರ ಭಂಡಾರಕ್ಕೆ ಪುಸ್ತಕ ರೂಪ ಕೊಡಲು ಸಹಕರಿಸಿದೆ.
ಜಪಾನೀಯರ ಸ್ವಚ್ಛತೆ -ಸಮಯಪ್ರಜ್ಞೆ, ಸ್ಲೊವೆನಿಯಾ- ಆಸ್ಟ್ರಿಯಾದ ಸೌಂದರ್ಯ, ಇಸ್ರೇಲಿಗರ ದೇಶಪ್ರೇಮ-ಕಿಚ್ಚು, ಫ್ರೆಂಚರ ಭಾಷೆ- ಅಡುಗೆಯ ಪ್ರೀತಿ, ಬಾಲಿ ದ್ವೀಪದವರ ಸಂಸ್ಕೃತಿ, ಇಟಲಿಯನ್ನರ ಕಲೋಪಾಸನೆ, ಆಫ್ರಿಕಾದ ವನ್ಯ ಜೀವಿಗಳು, ಬ್ರೆಜಿಲ್ ನ ಅಮೆಝೋನ್, ಚೇನಾದ ಅಗಾಧ ಪ್ರಕೃತಿ ಸೌಂದರ್ಯ, ಓಮನ್ ನ ವಾಹಿಬಾ ಮರಳು ಸಾಗರ.. ಹೀಗೆ ನೂರು ತಾಣಗಳ ನೆನಪಿನ ಪಟ್ಟಿಗೆ ಕೊನೆಯಿಲ್ಲ.
-ಡಾ. ಕಿರಣ್ ಆಚಾರ್ಯ (ಮುಖ್ಯಸ್ಥರು, ಮೂಳೆ ಚಿಕಿತ್ಸೆ ವಿಭಾಗ, ಕೆ.ಎಂ.ಸಿ. ಮಣಿಪಾಲ)