ಹೊಂಬಾಳೆ ಫಿಲ್ಮ್ಸ್ ಬ್ಯಾನರಿನಲ್ಲಿ ನಿರ್ಮಿಸಿದ ಹಾಗೂ ರಿಶಭ ಶೆಟ್ಟಿ ನಿರ್ದೇಶನ ಮಾಡಿ ನಟಿಸಿರುವ ಕಾಂತಾರ ಸಿನೆಮಾ ಕನ್ನಡ ಸಿನೆಮಾ ಇಂಡಸ್ಟ್ರಿಯ ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯುವ ಲಕ್ಷಣ ಕಂಡು ಬರುತ್ತಿದೆ. ಕನ್ನಡದ ಮಟ್ಟಿಗೆ ಇದು ಸುನಾಮಿ ಸಿನೆಮಾ!
ದೈವಾರಾಧನೆಯ ಕತೆ ಇದ್ದ ಕಾರಣ ಇದು ತುಳುನಾಡಿನಲ್ಲಿ ಹಿಟ್ ಆಗಬಹುದು ಎಂದು ಆರಂಭದಲ್ಲಿ ಲೆಕ್ಕಾಚಾರ ಮಾಡಲಾಗಿತ್ತು. ಆದರೆ ಈ ಸಿನೆಮಾ ತುಳುನಾಡು ಮತ್ತು ತುಳುವರ ಗಡಿಯನ್ನು ದಾಟಿ ಎಲ್ಲೆಡೆ ಜನರಿಗೆ ಇಷ್ಟ ಆಗಿದೆ. ಈ ರೀತಿಯ ಯಶಸ್ಸಿಗೆ ಕಾರಣವೇನು?
ಕನ್ನಡದಲ್ಲಿ ಹಿಂದೆ ಹಿಟ್ ಆದ ಬಂಗಾರದ ಮನುಷ್ಯ, ಓಂ, ಮುಂಗಾರು ಮಳೆ, ಜನುಮದ ಜೋಡಿ, ಯಜಮಾನ, ಜೀವನ ಚೈತ್ರ, ಮಿಲನ ಮೊದಲಾದ ಸಿನೆಮಾಗಳು ಕೂಡ ರಿಲೀಸ್ ಆದ ಮೊದಲ ವಾರದಲ್ಲೇ ಈ ರೀತಿ ಹಿಟ್ ಆಗಿರಲಿಲ್ಲ!
ಬಂಗಾರದ ಮನುಷ್ಯ ಸಿನಿಮಾವು ಗೆಲ್ಲುವ ಭರವಸೆಯು ಅದರ ನಿರ್ದೇಶಕ ಸಿದ್ದಲಿಂಗಯ್ಯ ಅವರಿಗೇ ಇರಲಿಲ್ಲ! ಯಾಕೆಂದರೆ ಅದರಲ್ಲಿ ಕ್ಲೈಮಾಕ್ಸ್ ಇರಲಿಲ್ಲ! ಮುಂಗಾರು ಮಳೆ ಸಿನೆಮಾದ ಮೊದಲ ಶೋ ದಿನ ಥಿಯೇಟರ್ ಎದುರು ಕಾದು ನಿಂತಿದ್ದ ನಿರ್ದೇಶಕ ಯೋಗರಾಜ್ ಭಟ್ಟರು ಖಾಲಿ ಸೀಟುಗಳನ್ನು ನೋಡಿ ಅಳುತ್ತ ಹಿಂದೆ ಹೋಗಿದ್ದರು!
ಆದರೆ ಕಾಂತಾರ ಸಿನೆಮಾ ವಿಷಯದಲ್ಲಿ ಹಾಗೆ ಆಗಲಿಲ್ಲ. ಚಿತ್ರವು ಮೊದಲ ದಿನದಿಂದಲೂ ಹೌಸ್ ಫುಲ್ ಆಗಿದೆ! ಇಂದಿಗೂ ಥಿಯೇಟರಗಳ ಸಂಖ್ಯೆ ಹೆಚ್ಚಾಗ್ತಾ ಇದೆ. ಸಿನೆಮಾ ಟಿಕೆಟ್ ಸಿಗದೆ ಜನರು ಪಡುವ ಕಷ್ಟ, ಪಡಿಪಾಟಲುಗಳು, ನಿತ್ಯವೂ ಥಿಯೇಟರ್ ಮುಂದೆ ನೂಕುನುಗ್ಗಲಲ್ಲಿ ಜನರು ಟಿಕೇಟಗಾಗಿ ಗುದ್ದಾಡುವ ಪ್ರಸಂಗಗಳು ಸಿನೆಮಾದ ಭರ್ಜರಿ ಯಶಸ್ಸಿಗೆ ಮುನ್ನುಡಿ ಬರೆಯುತ್ತವೆ. ಅದರ ಜೊತೆಗೆ ಕರಾವಳಿಯಲ್ಲಿ ಹಿಂದೆ ಮುಚ್ಚಿ ಹೋಗಿರುವ ಹಲವು ಅತ್ಯುತ್ತಮವಾದ ಸಿನೆಮಾ ಮಂದಿರಗಳು ಈಗ ಇರಬೇಕಿತ್ತು ಅನ್ನುವ ವಿಷಾದ ಭಾವ ಕೂಡ ನಮಗೆ ಕಾಡತೊಡಗಿದೆ.
ಹಿಂದೆ ಕನ್ನಡದ ಸಿನೆಮಾಗಳಿಗೆ ವಾರಾಂತ್ಯದಲ್ಲಿ ಮಾತ್ರ ಥಿಯೇಟರ್ ತುಂಬುತ್ತಿತ್ತು! ಆದರೆ ಕಾಂತಾರ ಇದುವರೆಗಿನ ಎಲ್ಲಾ ಶೋಗಳು ಭರ್ತಿ ಆಗಿವೆ. ಮಾರ್ನಿಂಗ್ ಶೋಗೆ ಕೂಡ ಟಿಕೆಟ್ ಸಿಗುತ್ತಾ ಇಲ್ಲ! ಕನ್ನಡ ಅರ್ಥ ಆಗದ ರಾಜ್ಯಗಳಲ್ಲಿ ಕೂಡ ಜನ ಸಬ್ ಟೈಟಲ್ ಇಲ್ಲದೆ ಕಾಂತಾರ ಸಿನೆಮಾವನ್ನು ನೋಡುತ್ತಿದ್ದಾರೆ!
ಸಿನೆಮಾ ರಿಲೀಸ್ ಆದ 15 ದಿನಗಳ ಒಳಗೆ ನಮ್ಮ ಕಾಂತಾರ ಸಿನೆಮಾ ಮಲಯಾಳಂ, ತೆಲುಗು, ತಮಿಳು, ಹಿಂದೀ ಮತ್ತು ತುಳು ಭಾಷೆಗೂ ಡಬ್ ಆಗುವ ಸುದ್ದಿಗಳು ಬರ್ತಾ ಇವೆ. ಅಲ್ಲಿಗೆ ಕೇವಲ 16 ಕೋಟಿ ಬಜೆಟನ ಒಂದು ಸುಂದರವಾದ ಸಿನೆಮಾವು ಪಾನ್ ಇಂಡಿಯಾ ಸಿನೆಮಾ ಆಗುವ ಕೀರ್ತಿಗೆ ಪಾತ್ರವಾಗಿದೆ!
ಇಲ್ಲೊಂದು ಸೂಕ್ಷ್ಮ ಸಂಗತಿಯನ್ನು ನಾವು ಗಮನಿಸಬೇಕು. ಈ ಸಿನೆಮಾವು ದೈವಾರಾಧನೆಯ ಹಿನ್ನೆಲೆಯನ್ನು ಹೊಂದಿದ್ದ ಕಾರಣ ಅದರ ಚಿತ್ರೀಕರಣದಲ್ಲಿ ಸಣ್ಣ ಲೋಪವಾದರೂ ಜನರ ನಂಬಿಕೆಗೆ ಭಾರೀ ಪೆಟ್ಟು ಬೀಳುತ್ತಿತ್ತು. ಭಾರೀ ದೊಡ್ಡ ಅಪವಾದವನ್ನು ಚಿತ್ರತಂಡವು ಹೊರುವ ಅಪಾಯ ಇತ್ತು. ಆದರೆ ಹಾಗೆ ಆಗಲಿಲ್ಲ ಮತ್ತು ಜನರಿಗೆ ಈ ಸಿನೆಮಾ ಇಷ್ಟ ಆಗಿದೆ! ಎರಡು ವರ್ಷಗಳ ಕೋರೋನಾ ಸಂಕಟದ ನಂತರ ಇಂತಹ ಒಂದು ಯಶಸ್ಸು ಕನ್ನಡ ಸಿನೆಮಾರಂಗಕ್ಕೆ ಬೇಕಿತ್ತು ಅಲ್ವಾ?
ಕಾಂತಾರ ಸಿನೆಮಾ ಇಷ್ಟೊಂದು ಭಾರೀ ಗೆದ್ದದ್ದು ಹೇಗೆ?
1) ಇಲ್ಲಿ ಗೆದ್ದಿರುವುದು ತುಳುನಾಡಿನ ದೈವಗಳ ಮೇಲಿರುವ ಜನರ ನಂಬಿಕೆ! ಇಲ್ಲಿ ಯಾವ ನಂಬಿಕೆಗೂ ವೈಜ್ಞಾನಿಕ ಟಚ್ ಕೊಡುವ ಪ್ರಯತ್ನ ಮಾಡಿಲ್ಲ! ನಂಬಿಕೆಗಳೇ ಹೈಲೈಟ್ ಇಲ್ಲಿ!
2) ಇಡೀ ಸಿನಿಮಾದ ಹೈಲೈಟ್ ಆಗಿರುವುದು ತುಳುನಾಡಿನ ಸಂಸ್ಕೃತಿ! ನಮ್ಮ ದೈವಾರಾಧನೆ, ಯಕ್ಷಗಾನ, ಕೋಳಿ ಅಂಕ, ಕಂಬಳ ಇತ್ಯಾದಿ ಇಲ್ಲಿ ಶೋ ಕೇಸ್ ಆಗಿವೆ. ಸಿನೆಮಾದಲ್ಲಿ ಯಾವುದನ್ನು ಕೂಡ ವಿಜೃಂಭಣೆ ಮಾಡದೆ ಇರುವುದನ್ನು ಇರುವ ಹಾಗೆ ತೋರಿಸಲಾಗಿದೆ.
3) ಇಡೀ ಸಿನೆಮಾದ ಪವರಫುಲ್ ಸ್ಕ್ರಿಪ್ಟ್ ಇಲ್ಲಿ ಗೆದ್ದಿದೆ! ರಿಷಭ ಶೆಟ್ಟಿಯವರು ತನ್ನ ಹತ್ತಾರು ಗೆಳೆಯರ ಜೊತೆ ಕೊರೋನ ಸಮಯದಲ್ಲಿ ತನ್ನ ಹುಟ್ಟೂರಾದ ಕೆರಾಡಿಯಲ್ಲಿ ಎರಡು ವರ್ಷಗಳ ಕಾಲ ಇದ್ದು ಈ ಸಿನೆಮಾದ ಸ್ಕ್ರಿಪ್ಟ್ ಬರೆದದ್ದು ಅದ್ಭುತ! ಒಂದು ಪಾತ್ರ, ಒಂದು ದೃಶ್ಯ, ಒಂದು ಸಂಭಾಷಣೆ ಸಿನಿಮಾದ ಆತ್ಮದಿಂದ ಹೊರಗೆ ಉಳಿದಿಲ್ಲ ಅನ್ನುವಲ್ಲಿಗೆ ಗೆದ್ದದ್ದು ಚಿತ್ರಕಥೆ!
4) ರಿಶಭ ಶೆಟ್ಟಿ ಅವರ ಅಭಿನಯವು ತುಂಬಾ ಅದ್ಭುತ. ಅದಕ್ಕಾಗಿ ರಾಷ್ಟ್ರಪ್ರಶಸ್ತಿ ಬಂದರೂ ಆಶ್ಚರ್ಯ ಇಲ್ಲ! ಹಿಂದೆ ಅವರ ಹತ್ತಾರು ಸಿನೆಮಾಗಳ ಅಭಿನಯ ನೋಡಿದ ನನಗೆ ಇಲ್ಲಿ ಕಂಡದ್ದು ಮಾಸ್ಟರ್ ಪೀಸ್ ಅಭಿನಯ!
5) ಸಿನೆಮಾದಲ್ಲಿ ಬರುವ ಸಣ್ಣ ಸಣ್ಣ ಪಾತ್ರಗಳು ಕೂಡ ಚಿತ್ರಕತೆಯಲ್ಲಿ ಅವುಗಳದ್ದೇ ಆದ ಸ್ಪೇಸ್ ಪಡೆಯುತ್ತಾ ಹೋಗುತ್ತವೆ! ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಸ್ವರಾಜ್ ಶೆಟ್ಟಿ, ಕಿಶೋರ್, ಪ್ರಮೋದ್ ಶೆಟ್ಟಿ, ಮಾನಸಿ ಸುಧೀರ್ ಎಲ್ಲರೂ ಸಿನೆಮಾ ನೋಡಿ ಹೊರಗೆ ಬಂದ ನಂತರ ಕೂಡ ನಮ್ಮ ಮನದಲ್ಲಿ ಉಳಿಯುತ್ತಾರೆ. ನೂರಾರು ಸ್ಥಳೀಯ ಕಲಾವಿದರೂ ಮಿಂಚು ಹರಿಸಿದ್ದಾರೆ!
6) ಕುಂದಾಪುರದ ಕನ್ನಡ ಭಾಷೆಯ ಸಣ್ಣ ಸಂಭಾಷಣೆಯ ಬಿಟ್ ಗಳು ಸಿನೆಮಾದ ಸೌಂದರ್ಯವನ್ನು ಹೆಚ್ಚಿಸಿವೆ. ಗ್ರಾಮ್ಯ ಜನರ ಅವಾಚ್ಯ ಬೈಗಳು ಕೂಡ ನಗು ಉಕ್ಕಿಸುತ್ತವೆ ಮತ್ತು ಸಹ್ಯವಾಗುತ್ತವೆ!
7) ಕರ್ನಾಟಕದ ಇಂದಿನ ಡೀಮ್ಡ್ ಫಾರೆಸ್ಟ್ ಸಮಸ್ಯೆ, ಅದಕ್ಕೆ ಪೂರಕವಾದ ದಲಿತರ ಹೋರಾಟಗಳು ಇಡೀ ಸಿನಿಮಾದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿವೆ.
8) ತುಳು ಭಾಷಿಗರ ಮನೆ ದೈವವು ಪಂಜುರ್ಲಿ ಆಗಿರುವ ಕಾರಣ ಮತ್ತು ಜನರು ಆ ದೈವವನ್ನು ಉತ್ಕಟವಾಗಿ ನಂಬುವ ಕಾರಣ ಜನರು ಮತ್ತೆ ಮತ್ತೆ ಸಿನೆಮಾ ನೋಡುತ್ತಾ ಇದ್ದಾರೆ.
9) ಅಜನೀಶ್ ಲೋಕನಾಥ್ ಅವರ ಹಾಡುಗಳು ಮತ್ತು ಹಿನ್ನೆಲೆ ಸಂಗೀತಗಳು ಸಿನೆಮಾದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿವೆ. ಸಿಂಗಾರ ಸಿರಿಯೆ, ವರಾಹ ರೂಪಂ ಹಾಡುಗಳು ಕ್ಲಾಸಿಕ್!
10) ಕೆರಾಡಿ ಗ್ರಾಮದ ಹೊರಾಂಗಣ ಸೌಂದರ್ಯವನ್ನು ಮೊಗೆದು ಕೊಟ್ಟ ಸಿನಿಮಾಟೋಗ್ರಾಫಿ ಅತೀ ಹೆಚ್ಚು ಅಂಕ ಪಡೆಯುತ್ತದೆ. ಅರವಿಂದ ಕಶ್ಯಪ್ ಅವರ ಕ್ಯಾಮೆರಾದ ಓಟ ಬೆರಗು ಹುಟ್ಟಿಸುತ್ತದೆ. ಕಾಡಿನ ಒಳಗೆ ಡ್ರೋನ್ ಕ್ಯಾಮೆರ ಅಷ್ಟೊಂದು ಅದ್ಭುತ ದೃಶ್ಯಗಳನ್ನು ಹೇಗೆ ಶೂಟ್ ಮಾಡಿತು ಅನ್ನುವುದೇ ಕೌತುಕ!
11) ಸಿನೆಮಾದಲ್ಲಿ ಬೆಚ್ಚಿ ಬೀಳಿಸುವ ಭೀಭಸ್ಸ ದೃಶ್ಯಗಳು ಮತ್ತು ಅದಕ್ಕೆ ಪೂರಕವಾದ ಶಬ್ದಗಳು ಮೈ ನವಿರೇಳಸುವ ಪರಿ ಅದ್ಭುತ! ಸೌಂಡ್ ಎಂಜಿನಿಯರ್ ಅವರಿಗೆ ಒಂದು ಹ್ಯಾಟ್ಸಪ್ ಹೇಳಲೇಬೇಕು!
12)ವಿಕ್ರಂ ಮೋರೆ ಎಂಬ ರಾಷ್ಟ್ರಪ್ರಶಸ್ತಿ ವಿಜೇತ ಫೈಟ್ ಮಾಸ್ಟರ್ ರೂಪಿಸಿರುವ ಫೈಟ್ ದೃಶ್ಯಗಳು ತುಂಬಾ ರೋಚಕ ಆಗಿವೆ. ಅವುಗಳ ಚಿತ್ರೀಕರಣ ಕೂಡ ಅಷ್ಟೇ ಅದ್ಭುತ ಆಗಿದೆ.
13) ತನ್ನೂರಿನ ಮತ್ತು ತನ್ನ ಮಣ್ಣಿನ ಜನರನ್ನು ದೈವವು ಫಾರೆಸ್ಟ್ ಆಫೀಸರ್ ಅವರ ವಶಕ್ಕೆ ಒಪ್ಪಿಸುವ ಕೊನೆಯ ದೃಶ್ಯವು ಓಹ್! ಅಂತಹ ಕ್ಲೈಮಾಕ್ಸ್ ಇದುವರೆಗೆ ನಾನು ಯಾವ ಸಿನೆಮಾಗಳಲ್ಲಿ ಕೂಡ ನೋಡಿಲ್ಲ! ದೈವವು ಇಡೀ ಸಮಾಜವನ್ನು ಒಗ್ಗೂಡಿಸುವ ಶಕ್ತಿಯಾಗಿ ನಿಂತು ನಮ್ಮ ನಂಬಿಕೆಯನ್ನು ಗಟ್ಟಿ ಮಾಡುತ್ತದೆ.
14) ಕತೆಯು ಮೂರು ಟೈಮ್ ಲೈನಿನಲ್ಲಿ ಓಡುತ್ತಿರುವ ಕಾರಣ ಎಡಿಟಿಂಗ್ ತುಂಬಾ ದೊಡ್ಡ ಸವಾಲು. ಆದರೆ ಇಲ್ಲಿ ಎಡಿಟಿಂಗ್ ತುಂಬಾ ಚೆನ್ನಾಗಿ ಮೂಡಿಬಂದಿದೆ ಮತ್ತು ಸಿನೆಮಾದ ವೇಗವನ್ನು ಹೆಚ್ಚಿಸಿದೆ.
15) ಸಿನೆಮಾದಲ್ಲಿ ಯಾವುದೇ ಗಿಮಿಕ್, ಚಮಕ್ ಎರಡೂ ಇಲ್ಲ. ಎಲ್ಲವೂ ನೇರಾನೇರ. ತಾರಾ ಆಕರ್ಷಣೆಗಳು ಇಲ್ಲ. ಯಾವ ಪಾತ್ರ, ಸನ್ನಿವೇಶ ಕೂಡ ಹೈಲೈಟ್ ಮಾಡಲು ಚಿತ್ರ ತಂಡ ಹೋಗಿಲ್ಲ. ಇಡೀ ಎರಡೂವರೆ ಗಂಟೆ ನಮಗೆ ಅದು ಸಿನೆಮಾ ಅಂತ ಅನ್ನಿಸುವುದೇ ಇಲ್ಲ! ಅದು ಸಿನೆಮಾದ ಅತ್ಯಂತ ದೊಡ್ಡ ಯಶಸ್ಸು!
16) ಪ್ರಗತಿ ರಿಶಭ ಶೆಟ್ಟಿ ಮತ್ತವರ ತಂಡದ ವಸ್ತ್ರ ವಿನ್ಯಾಸ ಇಲ್ಲಿ ಪೂರ್ಣ ಅಂಕ ಪಡೆಯುತ್ತದೆ.
ಒಟ್ಟಿನಲ್ಲಿ ಇಲ್ಲಿ ಗೆದ್ದಿರುವುದು ರಿಶಭ್ ಶೆಟ್ಟಿ ಅನ್ನುವುದಕ್ಕಿಂತ ತುಳುನಾಡಿನ ನಂಬಿಕೆ ಮತ್ತು ಮಣ್ಣಿನ ಮಕ್ಕಳ ಸಂಸ್ಕೃತಿ ಅನ್ನುವುದು ಹೆಚ್ಚು ಸೂಕ್ತ! ಆದರೂ ಗೆಲುವಿನ ಬಹುದೊಡ್ಡ ಪಾಲು ನಮ್ಮ ರಿಶಭ್ ಶೆಟ್ಟಿ ಅವರಿಗೆ ಸಲ್ಲಬೇಕು!
-ರಾಜೇಂದ್ರ ಭಟ್ ಕೆ.