ಭಾರತವನ್ನು ಕಲೆ-ವಾಸ್ತುಶಿಲ್ಪ ಕ್ಷೇತ್ರದಲ್ಲಿ “ವಿಸ್ಮಯಗಳ ಬೀಡು” ಮತ್ತು ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ, ಕಲಾಶೈಲಿಯಲ್ಲಿ ತನ್ನದೇ ಆದ ಶ್ರೇಷ್ಠತೆ ಮತ್ತು ಅದ್ಭುತವೆಂದೆನಿಸಿಕೊಂಡಿರುವ ಕೊಡುಗೆಯನ್ನು ನೀಡಿದ ದೇಶ ಎಂದು ಹೇಳಿದರೂ ತಪ್ಪಾಗಲಾರದು. ಇಂತಹ ಕಲಾ ವೈಖರಿಗಳಲ್ಲಿ ಒಂದಾದ ಮಹಾರಾಷ್ಟ್ರ ರಾಜ್ಯದ ಗೋದಾವರಿಯ ಉಪನದಿಯ ದಂಡೆಯ ಮೇಲೆ, ಸ್ಥಳೀಯವಾಗಿ ವೆರುಲ್ ಲೆನಿ ಎಂದು ಕರೆಯಲ್ಪಡುವ ಎಲ್ಲೋರ ಗುಹೆಗಳು ಜಿಲ್ಲಾ ಕೇಂದ್ರವಾದ ಔರಂಗಾಬಾದ್‌ನ ಉತ್ತರ-ವಾಯುವ್ಯಕ್ಕೆ 30 ಕಿಮೀ ದೂರದಲ್ಲಿ ಔರಂಗಾಬಾದ್-ಚಾಲಿಸ್‌ಗಾಂವ್ ರಸ್ತೆಯಲ್ಲಿದೆ.
ಉತ್ತರದಿಂದ-ದಕ್ಷಿಣಕ್ಕೆ ಅರ್ಧವೃತ್ತದಲ್ಲಿರುವ 2 ಕಿಲೋಮೀಟರ್‌ಗಿಂತಲೂ ಹೆಚ್ಚು ವಿಸ್ತರಿಸಲ್ಪಟ್ಟಿರುವ ಎಲ್ಲೋರವು ನೂರಕ್ಕೂ ಹೆಚ್ಚು ಗುಹೆಗಳನ್ನು ಹೊಂದಿದ್ದು, ಇವುಗಳಲ್ಲಿ ಬೌದ್ಧ, ಹಿಂದೂ (Brahmanical) ಮತ್ತು ಜೈನ ಧರ್ಮಕ್ಕೆ ಮೀಸಲಾದ 34 ಗುಹೆಗಳಿದ್ದು, ಇವುಗಳು ಮಾತ್ರ ಸಂದರ್ಶನಕ್ಕೆ ಮುಕ್ತವಾಗಿವೆ. ಇದರಂತೆ ದಕ್ಷಿಣದಲ್ಲಿರುವ ಮೊದಲ 12 ಗುಹೆಗಳು ಬೌದ್ಧ ಧರ್ಮೀಯರಿಗೆ ಸೀಮಿತವಾಗಿದ್ದು, (5-8ನೇ ಶತಮಾನ) ಮಧ್ಯದ 13 ರಿಂದ 29 ರವರೆಗಿನ ಗುಹೆಗಳು ಹಿಂದೂ (Brahmanical) ಧರ್ಮಿಯರಿಗೆ (7-10ನೇ ಶತಮಾನ) ಮತ್ತು ಉತ್ತರದ ಅಂಚಿನ 30 ರಿಂದ 34ರ ವರೆಗಿನ ಗುಹೆಗಳು ಜೈನರಿಗೆ (9-12ನೇ ಶತಮಾನ) ಸೇರಿದೆ ಎಂದು ತಿಳಿದುಬಂದಿದೆ.
ಆರ್ಕಿಯೋಲಜಿಕಲ್ ಸರ್ವೇ ಆಫ್ ಇಂಡಿಯಾದ ವ್ಯಾಪ್ತಿಗೆ ಒಳಪಡುವ ಈ ಎಲ್ಲೋರ ಗುಹಾಂತರ ಸಂಕೀರ್ಣಗಳು ವಿವಿಧ ರಾಜವಂಶಗಳಿಂದ ರಾಜಮನೆತನದ ಪ್ರೋತ್ಸಾಹವನ್ನು ಪಡೆದಿರಬಹುದು, ಅವುಗಳಲ್ಲಿ ಹೆಚ್ಚಿನವುಗಳಿಗೆ ಶಾಸನದ ಪುರಾವೆಗಳ ಕೊರತೆಯಿದೆ. ಆದರೆ ಗುಹೆ 15ರ ಮುಂಭಾಗದ ಮಂಟಪದ ಹಿಂಭಾಗದ ಗೋಡೆಯ ಮೇಲೆ ರಾಷ್ಟ್ರಕೂಟ ದಂತಿದುರ್ಗ (ಸಾ.ಶ.ವ 753-57) ಮಾತ್ರ ಖಚಿತವಾದ ಶಾಸನದ ಸಾಕ್ಷ್ಯವಾಗಿದೆ. ಎಲ್ಲೋರಾವು ಕಲ್ಯಾಣಿ ಚಾಲುಕ್ಯರು ಮತ್ತು ದೇವಗಿರಿಯ (ದೌಲತಾಬಾದ್) ಯಾದವರ ನಿಯಂತ್ರಣದಲ್ಲಿತ್ತು. ದೌಲತಾಬಾದಿನಲ್ಲಿ ಜೈನ ಧರ್ಮಕ್ಕೆ ಸಂಬಂಧಿಸಿದ ಹಲವಾರು ಶಿಲ್ಪಗಳು ಸಂಶೋಧನೆಗಳಿಂದ ದೊರಕಿದ್ದು, ಯಾದವರ ಕಾಲದಲ್ಲಿ ಜೈನ ಧರ್ಮಕ್ಕೆ ಹೆಚ್ಚಿನ ಪ್ರೋತ್ಸಾಹ ದೊರಕಿದುದರಿಂದ ಇಲ್ಲಿನ ಜೈನ ಗುಹೆಗಳು ಇವರ ಕಾಲದಲ್ಲಿ ನಿರ್ಮಾಣವಾಗಿರಬಹುದೆಂಬ ವಾದವು ಇದೆ. ಹಾಗಾಗಿ ಈ ಗುಹಾಂತರ ಸಂಕೀರ್ಣಗಳನ್ನು ರಾಷ್ಟ್ರಕೂಟ ಮತ್ತು ಯಾದವರ ಕಾಲದಲ್ಲಿ ಕೊರೆದು ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತದೆ.
ವಿಶ್ವಕರ್ಮ ಗುಹೆ: ಎಲ್ಲೋರದ ಮೊದಲ 12 ಬೌದ್ಧ ಗುಹೆಗಳ ಪೈಕಿ 10ನೆಯದು ವಿಶ್ವಕರ್ಮ ಗುಹೆ (ಸುತಾರ್ ಕಾ ಜೋಪ್ಡಿ)ಯಾಗಿರುತ್ತದೆ. ಇದು ಏಕೈಕ ಚೈತ್ಯವಾಗಿದ್ದು, ಸರಿಸುಮಾರು ಏಳನೇ ಶತಮಾನದ ವೇಳೆಗೆ ನಿರ್ಮಾಣವಾಯಿತು ಎಂದು ಹೇಳುವ ಈ ಬೌದ್ಧ ಚೈತ್ಯ ಗುಹೆಗೆ ಹಿಂದೂ ಸಂಬಂಧಿ ವಿಶ್ವಕರ್ಮಕ ಜೋಪ್ರಾ ಎಂಬ ನಾಮಕರಣ ಮಾಡಿರುವುದು ಆಸಕ್ತಿದಾಯಕವಾದ ವಿಷಯವಾಗಿರುತ್ತದೆ. ಎತ್ತರದ ವೇದಿಕೆಯ ಮೇಲೆ ದೊಡ್ಡ ಪ್ರಾಂಗಣವನ್ನು ಹೊಂದಿರುವ ಮತ್ತು ಎರಡು ಅಂತಸ್ತನ್ನು ಒಳಗೊಂಡಿರುವ ಹಾಗೂ ಕಂಬದ ಸಭಾಂಗಣವನ್ನು ಈ ಚೈತ್ಯವು ಹೊಂದಿದೆ. ಈ ಗುಹೆಯು ಕುಶಲಕರ್ಮಿಗಳಿಗೆ ಪ್ರಾರ್ಥನಾ ಮಂದಿರವಾಗಿರಬಹುದೆಂಬ ನಂಬಿಕೆಯಿದೆ ಮತ್ತು ಪ್ರತಿ ವರ್ಷವೂ ವಿಶ್ವಕರ್ಮ ಸಮಾಜದವರು ಇಲ್ಲಿ ವಿಶ್ವಕರ್ಮ ದಿನವನ್ನು ಆಚರಿಸುತ್ತಾರೆ.
ಭವ್ಯವಾಗಿ ನಿರ್ಮಾಣವಾಗಿಲ್ಲದಿದ್ದರೂ ಸಂಕೀರ್ಣವಾಗಿ ಕೆತ್ತಿದ ಈ ಚೈತ್ಯವು 85 ಅಡಿ ಉದ್ದ, 43 ಅಡಿ ಅಗಲ ಮತ್ತು 34 ಅಡಿ ಎತ್ತರವನ್ನು ಹೊಂದಿದೆ. ಈ ಚೈತ್ಯವು ಒಮ್ಮೆ ಎತ್ತರದ ಪರದೆಯ ಗೋಡೆಯನ್ನು ಹೊಂದಿತ್ತು, ಈಗ ಅದು ನಾಶವಾಗಿ ಹೋಗಿದೆ. ಮುಂಭಾಗದಲ್ಲಿ ಕಲ್ಲಿನಿಂದ ನಿರ್ಮಾಣವಾದ ಅಂಗಳವಿದ್ದು ಇದರಲ್ಲಿ ಚೈತ್ಯದ ಪ್ರವೇಶಕ್ಕೆ ಮೆಟ್ಟಿಲುಗಳನ್ನು ಮಾಡಲಾಗಿದೆ. ನಂತರದಲ್ಲಿ ಎರಡೂ ಬದಿಯಲ್ಲಿ ಕಂಬಗಳನ್ನು ಹೊಂದಿದ ಹಜಾರವಿದ್ದು ಇಲ್ಲಿನ ಹಿಂಭಾಗದ ಗೋಡೆಗಳಲ್ಲಿ ಕೋಣೆಗಳಿವೆ. ಕಂಬಗಳುಳ್ಳ ಚೈತ್ಯದ ವೆರಾಂಡಾವು ಒಂದು ಚಿಕ್ಕ ಕಲಶವನ್ನು ಎರಡೂ ಬದಿಗಳಲ್ಲಿ ಮತ್ತು ಒಂದೇ ಹಿಂಬದಿಯ ಗೋಡೆಯನ್ನು ದೂರದ ಮೂಲೆಯಲ್ಲಿ ಹೊಂದಿದೆ. ಮೊಗಶಾಲೆಯಲ್ಲಿರುವ ಸ್ತಂಭಗಳು ಭಾರಿ ಚೌಕಾಕಾರದ ಶೂಲಗಳನ್ನು ಮತ್ತು ಘಟ-ಪಲ್ಲವ, ಪುಷ್ಪಕುಂಭ ಮತ್ತು ಎಲೆಗಳ ಗೊಂಚಲುಗಳನ್ನು ಹೊಂದಿವೆ. ಚೈತ್ಯದ ಸಭಾಂಗಣದ ಮೇಲ್ಛಾವಣಿಯು ನೋಡಲು ಪಕ್ಕೆಲುಬಿನ ರೀತಿಯಲ್ಲಿದ್ದು ಬಂಡೆಯಲ್ಲಿ ಕಾಷ್ಠ-ಆಧಾರಿತ ವಾಸ್ತುಶೈಲಿಯನ್ನು ಅನುಕರಿಸಿದಂತೆ ಕಾಣುತ್ತದೆ. ಆದ್ದರಿಂದ ಇದಕ್ಕೆ “ಕಾರ್ಪೆಂಟರ್ಸ್ ಗುಹೆ” ಎಂಬ ಹೆಸರು ಕೂಡ ಇದೆ. ಗುಹೆಯ ಅಂಕಣಗಳ ಒಂದು ತುದಿಯಲ್ಲಿ ನಿಂತಿರುವ ವ್ಯಕ್ತಿಯು ಯಾವುದೇ ಶಬ್ದವನ್ನು ರಚಿಸಿದಾಗ ಪಕ್ಕೆಲುಬಿನ ವಾಲ್ಟ್ ಸಭಾಂಗಣದಲ್ಲಿ ಪ್ರತಿಧ್ವನಿ ಪರಿಣಾಮವನ್ನು ನೀಡುತ್ತದೆ.
ಚೈತ್ಯದ ಒಳಭಾಗದಲ್ಲಿ ವೃತ್ತಾಕಾರದ ತಳಹದಿ ಜೊತೆಗೆ ಅರ್ಧ ಗೋಳಾಕಾರದ ಗುಮ್ಮಟವನ್ನು ಹೊಂದಿರುವ ಸುಮಾರು 27 ಅಡಿ ಎತ್ತರ ಮತ್ತು 16 ಅಡಿ ವ್ಯಾಸದ ಬೃಹತ್ ಸ್ತೂಪವಿದೆ. ಸ್ತೂಪದ ಮುಂಭಾಗದಲ್ಲಿ ಸರಿಸುಮಾರು 15 ಅಡಿಯಷ್ಟು ಎತ್ತರವಿರುವ ಗೌತಮ ಬುದ್ಧನ ಬೃಹತ್ ವಿಗ್ರಹವಿದೆ. ಬುದ್ಧನನ್ನು ಬೋಧಿ ವೃಕ್ಷದ ಕೆಳಗೆ ಸಿಂಹಾಸನದ ಮೇಲೆ ಪ್ರಲಂಬ ಪಾದನಾಗಿ ಕುಳಿತಿರುವಂತೆ ತೋರಿಸಲಾಗಿದೆ. ಬುದ್ಧನ ಕೈ ಭಾಗವು ಭಗ್ನಗೊಂಡಿರುವುದರಿಂದ, ಈತನ ಕೈಗಳು ವ್ಯಾಖ್ಯಾನ ಮುದ್ರೆಯಲ್ಲಿರಬಹುದೆಂದು ಅಂದಾಜಿಸಲಾಗಿದೆ. ಬುದ್ಧನ ಶಿರದ ಹಿಂಭಾಗದಲ್ಲಿ ವೃತ್ತಾಕಾರದ ಪ್ರಭಾವಳಿಯನ್ನು ತೋರಿಸಲಾಗಿದ್ದು, ಉಳಿದಂತೆ ಶಿಲ್ಪದಲ್ಲಿ ಪೌರಾಣಿಕ ಜೀವಿಗಳು ಹಾಗೂ ಬುದ್ಧನನ್ನು ಸುತ್ತುವರೆದಿರುವ ಕಮಾನಿನಲ್ಲಿ ಉದ್ದಕ್ಕೂ ತೇಲುವ ವಿದ್ಯಾಧರರು ಬೋಧಿ ವೃಕ್ಷದ ಕಡೆಗೆ ಚಲಿಸುತ್ತಿರುವಂತೆ ಕೆತ್ತಲಾಗಿದೆ. ಬುದ್ಧನ ಎಡ ಮತ್ತು ಬಲ ಪಾರ್ಶ್ವದಲ್ಲಿ ಬೋಧಿಸತ್ವರು ಮತ್ತು ಅವಲೋಕಿತೇಶ್ವರ (?) ಉಬ್ಬುಕೆತ್ತನೆಯಿದೆ. ಈ ಸ್ತೂಪ ಮತ್ತು ಬುದ್ಧನ ವಿಗ್ರಹವಿರುವ ನವರಂಗದಲ್ಲಿ 14 ಅಡಿ ಎತ್ತರದ 28 ಅಷ್ಟಭುಜಾಕೃತಿಯ ಕಂಬಗಳಿದ್ದು, ಇದರ ಮೇಲಿನ ಹಂತದಲ್ಲಿ ನೃತ್ಯ ಮತ್ತು ಸಂಗೀತ ವಾದ್ಯಗಳನ್ನು ನುಡಿಸುವ ಗಂಧರ್ವ ಭಕ್ತರ ಕುಬ್ಜ ಶಿಲ್ಪಗಳಿಂದ ಅಲಂಕರಿಸಲ್ಪಟ್ಟಿದೆ.
ಪ್ರಸ್ತುತ ಈ ಗುಹೆಗಳನ್ನು ಯುನೆಸ್ಕೋ 1983ರಲ್ಲಿ ವಿಶ್ವ ಪಾರಂಪರಿಕ ತಾಣ ಎಂದು ಗುರುತಿಸಿದೆ. ಬೌದ್ಧ, ಹಿಂದೂ ಮತ್ತು ಜೈನ ಧರ್ಮಗಳಿಗೆ ಸೇರಿದ 34 ಗುಹೆಗಳು ಹಾಗೂ ಒಂದೇ ಕಲ್ಲಿನಲ್ಲಿ ಕಡೆಯಲಾಗಿರುವ ದ್ರಾವಿಡ ಶೈಲಿಯ ಸುಪ್ರಸಿದ್ಧ ಕೈಲಾಸ ದೇವಾಲಯವೂ ಇರುವ ಎಲ್ಲೋರವು ಭಾರತೀಯ ಕಲೆಯ ಮುಖ್ಯ ಕೇಂದ್ರಗಳಲ್ಲೊಂದಾಗಿದೆ.
ಬರಹ: ಶ್ರಾವ್ಯಾ ಆರ್ & ದಿವ್ಯ