ಬೆಳ್ಳೆ (ಬೊಳ್ಳೆ) ಗ್ರಾಮವು ಜಿಲ್ಲಾ ಕೇಂದ್ರವಾದ ಉಡುಪಿಯಿಂದ ಸರಿಸುಮಾರು 16 ಕಿ.ಮೀ ದೂರದಲ್ಲಿದೆ. ಈ ಊರನ್ನು ಪ್ರಾಚೀನ ಕಾಲದಿಂದಲೂ ‘ಬೊಳ್ಳೆ’ ಅಂದರೆ ‘ಬೊಳ್ಳದ ಊರು’ ಎಂಬುದಾಗಿ ಕರೆಯಲಾಗಿತ್ತು. ಈ ಊರಿನ ಮಧ್ಯದಲ್ಲಿ ಪಾಪನಾಶಿನಿ (ಭದ್ರಾ) ನದಿಯು ಹರಿದು ಹೋಗುವುದರಿಂದ ಗುರುತಿಸಲು ‘ಪಡುಬೆಳ್ಳೆ’ ಮತ್ತು ‘ಮೂಡುಬೆಳ್ಳೆ’ ಎಂದು ಹೇಳುವುದು ವಾಡಿಕೆಯಾಗಿತ್ತು.
ಈ ಗ್ರಾಮದ ಪ್ರಾಗೈತಿಹಾಸಿಕತೆಯನ್ನು ನೋಡುವುದಾದರೆ ಕುಂಜಾರುಗಿರಿಯ ಬಾಣತೀರ್ಥದಲ್ಲಿ ನೂತನ ಶಿಲಾಯುಗದ ಕಲ್ಲಿನ ಕೊಡಲಿ ಮತ್ತು ಬೃಹತ್ ಶಿಲಾಯುಗದ ಸಮಾಧಿಗಳು ಪತ್ತೆಯಾಗಿದ್ದು, ಪ್ರಾಚೀನ ಕಾಲದಿಂದಲೂ ಜನವಸತಿ ಇತ್ತು ಎಂಬುದು ಅಧ್ಯಯನದಿಂದ ಸಾಬೀತಾಗಿದೆ. ಇಷ್ಟು ಮಾತ್ರವಲ್ಲದೇ ಈ ಗ್ರಾಮವು ಪ್ರಾಚೀನ ದೇವಾಲಯ ಹಾಗೂ ದೈವಸ್ಥಾನಗಳಿಗೆ ಹೆಸರುವಾಸಿಯಾಗಿದ್ದು, ಇಲ್ಲಿನ ಪ್ರಮುಖ ದೇವಾಲಯಗಳೆಂದರೆ;
ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ಈ ದೇವಾಲಯವು ಪಾಪನಾಶಿನಿ ನದಿಯ ತೀರದಲ್ಲಿದ್ದು 15-16ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು, ಈ ದೇವಾಲಯದ ವೈಶಿಷ್ಟ್ಯವೆಂದರೆ ಇಲ್ಲಿ ಶಿವನನ್ನು “ಮೂರ್ತಿ” ರೂಪದಲ್ಲಿ ಪೂಜಿಸಲಾಗುತ್ತದೆ.
ಮೂಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಾಲಯ: ಈ ದೇವಸ್ಥಾನವು ಊರಿನ ಪೂರ್ವ ದಿಕ್ಕಿನಲ್ಲಿ ಕಂಡುಬರುವ “ದೇವರಗುಡ್ಡೆ” ಪ್ರದೇಶದಲ್ಲಿದೆ. 14-15 ನೇ ದೇವಾಲಯದಲ್ಲಿ ನಿರ್ಮಾಣವಾಗಿರುವ ವೈಶಿಷ್ಟ್ಯವೆಂದರೆ ಇಲ್ಲಿ ಸೂರ್ಯನಿಗೂ ಒಂದು ಗುಡಿ ಇದ್ದು, ಈ ಗುಡಿಯಿದ್ದು, “ವರ್ತುಲಾಕಾರ” (ವೃತ್ತಾಕಾರ) ದಲ್ಲಿ ನಿರ್ಮಾಣ ಮಾಡಲಾಗಿದೆ.
ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಾಲಯ: ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕುಂಜಾರುಗಿರಿಯು ಬೆಳ್ಳೆ ಗ್ರಾಮದ ವ್ಯಾಪ್ತಿಗೆ ಸೇರುತ್ತದೆ.
ಸ್ಥಳನಾಮ ಐತಿಹ್ಯ: ಕುಂಜಾರು ಎಂದರೆ ತುಳುವಿನಲ್ಲಿ ‘ಆನೆ’ ಎಂಬುದಾಗಿದೆ. ದೂರದಿಂದ ಕಂಡಾಗ ಈ ಬೆಟ್ಟವು ಆನೆಯ ಆಕಾರದಲ್ಲಿ ಕಾಣುವುದರಿಂದ ಕುಂಜಾರುಗಿರಿ ಎಂಬುದಾಗಿ ಹೆಸರು ಬಂತೆಂದು ಹೇಳಲಾಗುತ್ತದೆ. ಇಲ್ಲಿ ಬೆಟ್ಟದ ತಪ್ಪಲಿನಲ್ಲಿ ದುರ್ಗಾದೇವಿ ದೇವಸ್ಥಾನವಿದೆ ಇಲ್ಲಿ ತಾಯಿ ದುರ್ಗೆಯು ಗಿರಿಕನ್ಯೆಯಾಗಿ ಪೂಜಿತಳಾಗಿದ್ದಾಳೆ. ಈ ದೇವಾಲಯಕ್ಕೆ ಮೂರು ಕಡೆಗಳಿಂದಲೂ ದಾರಿ ಇದ್ದು, ಈ ಬೆಟ್ಟದ ಪ್ರಾಚೀನ ಹೆಸರು ವಿಮಾನಗಿರಿ ಅಥವಾ ದುರ್ಗಾಬೆಟ್ಟ ಎಂಬುದಾಗಿದೆ.
ದೇವಾಲಯದ ಗರ್ಭಗುಡಿಯಲ್ಲಿರುವ ದುರ್ಗೆಯ ವಿಗ್ರಹವು ಚತುರ್ಭುಜಧಾರಿಯಾಗಿದ್ದು, ಮೇಲಿನ ಎರಡು ಕೈಗಳಲ್ಲಿ ಶಂಖ-ಚಕ್ರ ಹಾಗೂ ಕೆಳಗಿನ ಎರಡು ಕೈಗಳಲ್ಲಿ ತ್ರಿಶೂಲ ಮತ್ತು ಧನಸ್ಸುನ್ನು ಹಿಡಿದಿದ್ದು ಗಿರಿದುರ್ಗೆ, ಮಹಿಷಮರ್ಧಿನಿ ಎಂಬ ಹೆಸರಿನಿಂದ ಪೂಜಿತಳಾಗುತ್ತಾಳೆ. ಕುಂಜಾರುಗಿರಿ ಬೆಟ್ಟದ ತಪ್ಪಲಿನ ಸುತ್ತಲು ನಾಲ್ಕು ಪವಿತ್ರ ತೀರ್ಥಗಳಾದ ಪರಶು ತೀರ್ಥ, ಗದಾ ತೀರ್ಥ, ಬಾಣ ತೀರ್ಥ ಮತ್ತು ಧನುಸ್ ತೀರ್ಥವು ಕಂಡುಬರುತ್ತದೆ. ಐತಿಹ್ಯದ ಪ್ರಕಾರ ಪರಶುರಾಮರು ತನ್ನ ನಾಲ್ಕು ಆಯುಧಗಳನ್ನು ನಾಲ್ಕು ದಿಕ್ಕಿಗೆ ಬಿಸಾಡಿದ ಸಂದರ್ಭದಲ್ಲಿ ಈ ಆಯುಧಗಳು ಬಿದ್ದ ಸ್ಥಳಗಳಲ್ಲಿ ಒಂದೊಂದು ಪವಿತ್ರ ತೀರ್ಥಗಳು ಉದ್ಭವಿಸಿದವು ಎಂದು ಹೇಳಲಾಗುತ್ತದೆ. ಈ ತೀರ್ಥಗಳಲ್ಲಿ ವರ್ಷವಿಡಿ ನೀರು ತುಂಬಿರುವುದು ಇದರ ವೈಶಿಷ್ಟ್ಯವಾಗಿದೆ.
ಪಾಜಕ: ಶ್ರೀಮದ್ ಮಧ್ವಾಚಾರ್ಯರು 1238 ರಲ್ಲಿ ಇಲ್ಲಿ ಜನಿಸಿದರು. ಇವರ ತಂದೆ ಮಧ್ಯಗೇಹ ನಾರಾಯಣ ಭಟ್ಟ ಮತ್ತು ತಾಯಿ ವೇದಾವತಿ. ಇಲ್ಲಿನ ಪಾಜಕ ಮಠವು ಆಚಾರ್ಯ ಮಧ್ವರ ಬಾಲ್ಯ ಜೀವನ ಹಾಗೂ ಬೋಧನೆಗಳಿಗೆ ಸಾಕ್ಷಿಯಾಗಿದೆ. ಬಾಲ್ಯದಲ್ಲಿ ಇವರು ಹಾಲು ಮತ್ತು ಮೊಸರಿನ ಪಾತ್ರೆಗೆ ಕಲ್ಲು ಮುಚ್ಚಿದ್ದರು ಎಂಬುದಾಗಿ ಐತಿಹ್ಯ ಹೇಳುತ್ತದೆ ಮತ್ತು ಇದನ್ನು ಈಗಲೂ ಇಲ್ಲಿ ಕಾಣಬಹುದಾಗಿದೆ.
ಕಟ್ಟಿಂಗೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ: ಈ ದೇವಾಲಯವು ಕರ್ನಾಟಕದಲ್ಲಿ ಚತುರ್ಮುಖ ಬ್ರಹ್ಮನ ಆರಾಧನೆ ಮಾಡುವ ಕೆಲವೇ ಕೆಲವು ದೇವಾಲಯಗಳಲ್ಲಿ ಒಂದಾಗಿದೆ. ಹೀಗೆ ಈ ಬೆಳ್ಳೆ ಗ್ರಾಮವು ಪ್ರಾಚೀನ ಕಾಲದಿಂದಲೂ ಜನವಸತಿ ಇರುವ ನೆಲೆಯಾಗಿದ್ದು, ಇಂದಿಗೂ ಸಹ ತನ್ನ ಸಾಂಸ್ಕೃತಿಕ ಕಟ್ಟುಪಾಡುಗಳನ್ನು ಉಳಿಸಿ ಬೆಳೆಸಿಕೊಂಡು ಬಂದಿದೆ.
ಸಂಗ್ರಹ: ಶ್ರಾವ್ಯ ಆಚಾರ್ಯ, ಪ್ರಥಮ ಬಿ.ಎ. ವಿದ್ಯಾರ್ಥಿನಿ, ಎಂ.ಎಸ್.ಆರ್.ಎಸ್ ಕಾಲೇಜು ಶಿರ್ವ