Monday, January 20, 2025
Monday, January 20, 2025

ತೂತುಕುಡಿಯ ಉಪ್ಪಿನ ಗದ್ದೆಗಳು

ತೂತುಕುಡಿಯ ಉಪ್ಪಿನ ಗದ್ದೆಗಳು

Date:

ಧುರೈಯಿಂದ ಕನ್ಯಾಕುಮಾರಿಗೆ ಹೋಗುತ್ತಿದ್ದಾಗ ಅಚ್ಚರಿಯ ದೃಶ್ಯವನ್ನು ನೋಡಿದೆವು. ರಸ್ತೆಯ ಎರಡೂ ಬದಿಗಳಲ್ಲಿ ದೃಷ್ಟಿ ಚಾಚಿದಷ್ಟೂ ಬೆಳ್ಳನೆಯ ಗದ್ದೆಗಳನ್ನು, ದಿಬ್ಬಗಳನ್ನು ನೋಡಿ ಇಲ್ಲಿ ಹಿಮಪಾತವಾಗುತ್ತದೆಯೇ ಎನ್ನುವಷ್ಟು ಗೊಂದಲವಾಯಿತು. ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದ ಕಾರಿನ ಡ್ರೈವರ್ ಇದು ತೂತುಕುಡಿ ಜಿಲ್ಲೆಯಲ್ಲಿ ತಯಾರಿಸಲಾಗುವ ‘ಉಪ್ಪು’ ಎಂದು ಹೇಳಿ, ಕಾರನ್ನು ಒಂದು ಕಡೆ ನಿಲ್ಲಿಸಿ, ನಮ್ಮನ್ನು ಉಪ್ಪಿನ ಗದ್ದೆಗೆ ಇಳಿಸಿಬಿಟ್ಟರು.

ತಮಿಳುನಾಡಿನ ಬಂಗಾಳಕೊಲ್ಲಿಯ ತೀರದಲ್ಲಿ ತೂತುಕುಡಿ ಎಂಬ ಒಂದು ಜಿಲ್ಲೆ ಹಾಗೂ ಅದೇ ಹೆಸರಿನ ಪುರಸಭಾ ವ್ಯಾಪ್ತಿಯ ಒಂದು ಬಂದರು ನಗರವೂ ಇದೆ. ಹಿಂದೆ ಇಲ್ಲಿ ಸಮುದ್ರದಿಂದ ಮುತ್ತುಗಳನ್ನು ಪಡೆಯುತ್ತಿದ್ದರಿಂದ ‘ಪರ್ಲ್ ಸಿಟಿ’ ಎಂಬ ಹೆಸರೂ ತೂತುಕುಡಿಗೆ ಇದೆ. ಜಿಲ್ಲೆಯಾದ್ಯಂತ ಇರುವ ಕಾರ್ಖಾನೆಗಳಲ್ಲಿ ವ್ಯಾಪಾರ, ರಫ್ತು ವಹಿವಾಟು ನಡೆದು ಹೆಚ್ಚಿನ ವಿದ್ಯಾವಂತರಿರುವ ಜಿಲ್ಲೆ ಎಂದು ಕೂಡ ಇದು ಕರೆಸಿಕೊಂಡಿದೆ.

ಪಾಂಡ್ಯ ಅರಸರಿಂದ ಹಿಡಿದು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯವರೆಗೆ ತೂತುಕುಡಿ ಹಲವರ ಆಳ್ವಿಕೆಗೆ ಒಳಪಟ್ಟಿದೆ. ಡಚ್ಚರು, ಪೋರ್ಚುಗೀಸರು ಮತ್ತು ಬ್ರಿಟಿಷರು ತಮ್ಮ ವ್ಯಾಪಾರದ ನಿರ್ವಹಣೆಗಾಗಿ ಇಲ್ಲಿಯ ಬಂದರನ್ನು ಅಭಿವೃದ್ಧಿ ಪಡಿಸಿದರು. ಪೋರ್ಚುಗೀಸರು ತೂತುಕುಡಿಯನ್ನು ತಮ್ಮದೇ ಉಚ್ಛಾರಣೆಯಲ್ಲಿ ‘ಟ್ಯುಟಿಕೊರಿನ್’ ಎಂದು ಕರೆದು ಅದೇ ಹೆಸರು ಸ್ಥಿರವಾಗಿ ನಿಂತಿತ್ತು. 1997 ನೇ ಇಸವಿಯಲ್ಲಿ ತಮಿಳುನಾಡು ಸರಕಾರ ಅಧಿಕೃತವಾಗಿ ‘ತೂತುಕುಡಿ’ ಎಂದು ಹೆಸರು ಬದಲಾವಣೆ ಮಾಡಿತು.‍

ತೂತುಕುಡಿಯಲ್ಲಿ ದೊರಕುವ ನೀರಿನಲ್ಲಿ ಉಪ್ಪು (ಸೋಡಿಯಂ ಕ್ಲೋರೈಡ್) ತಯಾರಿಸಲು ಬೇಕಾಗುವ ಗುಣಮಟ್ಟದ ಲವಣಾಂಶ ಲಭ್ಯವಿದೆ. ಇದರ ಜೊತೆಗೆ ಒಣಹವೆ ಮತ್ತು ಪ್ರಖರವಾದ ಬಿಸಿಲೂ ಜಿಲ್ಲೆಯಾದ್ಯಂತ ಉಪ್ಪಿನ ತಯಾರಿಕೆಗೆ ಇಂಬು ಕೊಟ್ಟಿದೆ. ಹತ್ತು ಎಕರೆಯಿಂದ ಹಿಡಿದು ನೂರಾರು ಎಕರೆಯ ಮಾಲಿಕರು ತಮ್ಮ ಜಮೀನಿನಲ್ಲಿ ಉಪ್ಪು ತಯಾರಿಸುತ್ತಾರೆ. ಜಿಲ್ಲೆಯ 25,000 ಎಕರೆಗಳಲ್ಲಿ ವರ್ಷಕ್ಕೆ 25-30 ಲಕ್ಷ ಟನ್ ಗಳಷ್ಟು ಉಪ್ಪನ್ನು ತಯಾರಿಸಲಾಗುತ್ತದೆ.

ದೇಶದ ಉಪ್ಪು ತಯಾರಿಕೆಯಲ್ಲಿ ಗುಜರಾತ್ ಒಂದನೇ ಸ್ಥಾನ ಪಡೆದರೆ, ತಮಿಳುನಾಡು ಎರಡನೇ ಸ್ಥಾನದಲ್ಲಿದೆ. ಇದರಲ್ಲಿ ಹೆಚ್ಚಿನ ಭಾಗ ತೂತುಕುಡಿಯಲ್ಲೇ ಉತ್ಪಾದನೆಯಾಗುತ್ತದೆ. ದೇಶದ ಒಟ್ಟು ಉತ್ಪಾದನೆಯ 11% ನಷ್ಟು ಉಪ್ಪು ಇಲ್ಲಿ ತಯಾರಾಗುತ್ತದೆ.

ಉಪ್ಪು ತಯಾರಿಕೆಗೆ ಹೇಳಿ ಮಾಡಿಸಿದ ಕಾಲ ಫೆಬ್ರವರಿಯಿಂದ ಅಕ್ಟೋಬರ್ ತಿಂಗಳುಗಳು. ಗದ್ದೆಗಳನ್ನು ಸಜ್ಜುಗೊಳಿಸಿ, ಬೋರ್ ವೆಲ್ ಮುಖಾಂತರ ನೀರನ್ನು ಗದ್ದೆಗಳಿಗೆ ಹಾಯಿಸಲಾಗುತ್ತದೆ. ನಂತರ ಪ್ರತಿದಿನ ಕೆಲಸಗಾರರಿಗೆ ನಿಂತ ನೀರನ್ನು ಕಲುಕುವ ಕೆಲಸವಿರುತ್ತದೆ. ನೀರು ಆವಿಯಾದಂತೆ ಉಪ್ಪಿನ ಹರಳುಗಳು ನೆಲದ ಮೇಲೆ ಶೇಖರವಾಗುತ್ತವೆ. ಸಾಮಾನ್ಯವಾಗಿ ಹದಿನೈದು ದಿನಗಳಲ್ಲಿ ಉಪ್ಪು ತಯಾರಾದರೆ, ತೀವ್ರ ಬೇಸಗೆಯ ದಿನಗಳಲ್ಲಿ ಆರು ದಿನಗಳು ಸಾಕು. ಉಪ್ಪಿನ ಹರಳುಗಳು ಶೇಖರಗೊಂಡಂತೆ ಮೊದಲು ಅವುಗಳನ್ನು ಗದ್ದೆಯ ಬದುಗಳಿಗೆ ಎಳೆದು ತರಲಾಗುತ್ತದೆ. ನಂತರ ಬುಟ್ಟಿಗಳಲ್ಲಿ ತುಂಬಿ ದಿಬ್ಬಗಳನ್ನಾಗಿ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ಅದನ್ನು ಟ್ರಾಕ್ಟರುಗಳಲ್ಲಿ ತುಂಬಿ ಫ್ಯಾಕ್ಟರಿಗಳಿಗೆ ಕಳಿಸಿ, ಶುದ್ಧೀಕರಿಸಿದ ಉಪ್ಪನ್ನು ಪಡೆಯಲಾಗುತ್ತದೆ.

ಅಯೋಡೈಸ್ಡ್ ಉಪ್ಪು, ಹರಳುಪ್ಪು, ಪುಡಿಯುಪ್ಪು, ಕಾರ್ಖಾನೆಗಳಿಗೆ ಬೇಕಾಗುವ ಉಪ್ಪು, ಕೆಮಿಕಲ್ ಯುಕ್ತ ಉಪ್ಪು, ಕಡಿಮೆ ಸೋಡಿಯಂ ಇರುವ ಉಪ್ಪು- ಇತ್ಯಾದಿ ಹಲವು ವಿಧದ ಉಪ್ಪನ್ನು ತಯಾರಿಸಲಾಗುತ್ತದೆ. ಒಂದು ಎಕರೆ ಗದ್ದೆಗೆ ವಾರ್ಷಿಕ ಸರಾಸರಿ ಉತ್ಪಾದನೆ ನೂರು ಟನ್ ಉಪ್ಪು ಎಂದು ಲೆಕ್ಕ ತೆಗೆದುಕೊಂಡರೂ, ಇತ್ತೀಚಿನ ಅಕಾಲ ಮಳೆ ಆ ಲೆಕ್ಕವನ್ನು ತಪ್ಪಿಸಿದೆ. ಒಂದು ದಿನ ಮಳೆ ಬಂದರೆ ಉಪ್ಪು ಕೊಚ್ಚಿಕೊಂಡು ಹೋಗಿ, ಒಂದು ವಾರ ಕೆಲಸವಿಲ್ಲದೆ ಕೆಲಸಗಾರರು ಚಡಪಡಿಸಬೇಕಾಗುತ್ತದೆ.

ತೀವ್ರವಾದ ಬಿಸಿಲಿನಲ್ಲಿ ಉಪ್ಪುನೀರಿನಲ್ಲಿ ನಿಂತು ಆರೋಗ್ಯದ ಸಮಸ್ಯೆ ಬಂದರೂ, ದಿನಗೂಲಿ ನೌಕರರು ಜೀವನ ನಡೆಸಲು ವಿಧಿಯಿಲ್ಲದೆ ಬವಣೆ ಪಡುತ್ತಾರೆ. ‘ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ’ ಎಂಬ ಗಾದೆಮಾತನ್ನು ಕೇಳುತ್ತಾ ಬಂದಿದ್ದರೂ ಉಪ್ಪನ್ನು ಎಲ್ಲಿ, ಹೇಗೆ ತಯಾರಿಸುತ್ತಾರೆ ಎಂದು ತಿಳಿದುಕೊಂಡದ್ದು ಕಳೆದ ವಾರವಷ್ಟೇ. ಸಮಯದ ಅಭಾವ ಇದ್ದ ಕಾರಣ ನಮಗೆ ಫ್ಯಾಕ್ಟರಿಯೊಳಗೆ ಹೋಗಲಾಗಲಿಲ್ಲ. ಕನ್ಯಾಕುಮಾರಿಗೆ ಪ್ರವಾಸ ಹೋಗುವವರು ದಾರಿಯಲ್ಲಿ ಸಿಗುವ ತೂತುಕುಡಿಯ ಉಪ್ಪಿನ ಕಾರ್ಖಾನೆಗೂ ಒಮ್ಮೆ ಭೇಟಿಕೊಡಲು ಪ್ರಯತ್ನಿಸಿ.

-ವಾಣಿ ಸುರೇಶ್ ಕಾಮತ್

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!