ಜೇಮ್ಸ್ ಕ್ಲಿಯರ್ ಅವರು ಬರೆದಿರುವ ‘ಆಟೋಮಿಕ್ ಹ್ಯಾಬಿಟ್ಸ್’ ಎಂಬ ಪುಸ್ತಕವನ್ನು ಓದುತ್ತ ನನಗನಿಸಿದ ವಿಷಯವೆಂದರೆ ಎಲ್ಲರೂ ಓದಲೇ ಬೇಕಾದಂತಹ ಪುಸ್ತಕ. ನಮ್ಮ ನಡವಳಿಕೆಯಲ್ಲಿ ಸಣ್ಣ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನಮ್ಮ ಜೀವನವನ್ನು ಗೆಲ್ಲಬಹುದು ಎಂದು ಈ ಪುಸ್ತಕ ಹೇಳುತ್ತದೆ.
ಸ್ವಯಂ-ಸುಧಾರಣೆಗೆ ನಾವು ಅನುಸರಿಸುವ ಮಾರ್ಗವೆಂದರೆ ದೊಡ್ಡ ಸಾಧನೆಯ ಗುರಿ. ಅದಕ್ಕೋಸ್ಕರ ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಗುರಿಯನ್ನು ಸಾಧಿಸಲು ದೊಡ್ಡ ಸವಾಲುಗಳನ್ನು ಸ್ವೀಕರಿಸುವುದು. ಇದು ಸಿದ್ಧಾಂತದಲ್ಲಿ ಉತ್ತಮವೆಂದು ತೋರುತ್ತದೆಯಾದರೂ, ಇದು ಸಾಮಾನ್ಯವಾಗಿ ಹತಾಶೆ, ಬೇಸರ, ವೈಫಲ್ಯದೊಂದಿಗೆ ಕೊನೆಗೊಳ್ಳುತ್ತದೆ. ಬದಲಾಗಿ, ನಮ್ಮ ಸಾಮಾನ್ಯ ದೈನಂದಿನ ಅಭ್ಯಾಸಗಳು ಮತ್ತು ನಡವಳಿಕೆಗಳನ್ನು ನಿಧಾನವಾಗಿ ಸ್ವಲ್ಪಮಟ್ಟಿಗೆ ಸುಧಾರಿಸಿಕೊಳ್ಳುವ ಮೂಲಕ ನಿರಂತರ ಸುಧಾರಣೆಯತ್ತ ಗಮನಹರಿಸಬೇಕು.
ಇದಕ್ಕೆ ಅವರು ನೀಡುವ ಉತ್ತಮ ಉದಾಹರಣೆ ‘The surprising power of atomic habits’ ಬ್ರಿಟಿಷ್ ಸೈಕ್ಲಿಂಗ್ ಟೀಮ್ 100 ವರ್ಷಗಳ ಕಾಲ ಒಲಂಪಿಕ್ ಆಟವನ್ನು ಆಡಿದ ಇತಿಹಾಸವನ್ನು ಹೊಂದಿತ್ತು ಆದರೆ ಇಷ್ಟೊಂದು ವರ್ಷಗಳಲ್ಲಿ ಕೇವಲ ಒಂದೇ ಒಂದು ಬಾರಿ ಸ್ವರ್ಣ ಪದಕ ಗಳಿಸುವಲ್ಲಿ ಯಶಸ್ಸು ಕಂಡಿತು. ಬ್ರಿಟಿಷ್ ಟೀಮ್ ನ ಕಳಪೆ ಪ್ರದರ್ಶನವನ್ನು ಕಂಡ ಖ್ಯಾತ ಸೈಕಲ್ ಉತ್ಪಾದನಾ ಸಂಸ್ಥೆ ತಮ್ಮ ಬ್ರಾಂಡ್ ಮೇಲೆ ಇದೊಂದು ಕಳಂಕ ಎಂದು ಪರಿಗಣಿಸಿ ಬ್ರಿಟನ್ ಟೀಮಿಗೆ ಸೈಕಲ್ ಪೂರೈಸುವುದನ್ನು ನಿಲ್ಲಿಸಿತು.
ಬ್ರಿಟನ್ ಟೀಮ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಮ್ಮ ತಂಡದ ಪ್ರದರ್ಶನ ಉತ್ತಮ ಪಡಿಸುವಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಂಡಿತು. ಮುಖ್ಯವಾಗಿ ತಮ್ಮ ತರಬೇತುದಾರನನ್ನು ಬದಲಾಯಿಸಿ ಹೊಸ ತರಬೇತುದಾರ ಬ್ರೆಲ್ಸ್ ಫೋಲ್ಡನ್ನು ಆಯ್ಕೆ ಮಾಡಿದರು. ಬ್ರೈಲ್ಸ್ ಫೋಲ್ಡ್ ನ ಮುಖ್ಯ ತಂತ್ರಗಾರಿಕೆ ಎಂದರೆ ತಾನು ನಿರ್ವಹಿಸುವ ಕೆಲಸದಲ್ಲಿ ಕನಿಷ್ಠ ಶೇಕಡ ಒಂದರಷ್ಟಾದರೂ ಪ್ರಗತಿಗೆ ಪ್ರಯತ್ನಿಸುವುದು. ಆತನು ಇತರ ತಂಡಗಳ ಯಶಸ್ಸಿನ ಗುಟ್ಟನ್ನು ಸರಿಯಾಗಿ ಅವಲೋಕಿಸಿದನು. ಅದರೊಂದಿಗೆ ತನ್ನ ತಂಡದ ಯಶಸ್ಸಿಗೆ ಪ್ರತಿ ದಿನದ ತಯಾರಿಯನ್ನು ನಡೆಸಿದನು. ಅದರಂತೆ ಸೈಕಲ್ ನ ಸೀಟ್ ಅನ್ನು ಪುನರ್ ನಿರ್ಮಾಣಗೊಳಿಸಿದನು. ತಂಡದ ಸದಸ್ಯರು ತೊಡುವ ಬಟ್ಟೆಯನ್ನು ಹಗುರ ಹಾಗೂ ಆರಾಮದಾಯಕವಾಗಿದೆಯೇ ಎಂಬುದನ್ನು ಪರೀಕ್ಷಿಸಿ ಕಂಡುಕೊಂಡನು. ಸೈಕಲ್ಲಿನ ಟೈಯರ್ ಹಿಡಿತದ ಬಗ್ಗೆಯೂ ಹೆಚ್ಚು ಅಧ್ಯಯನ ನಡೆಸಿ ಪರಿವರ್ತನೆಗೆ ಒತ್ತು ಕೊಟ್ಟನು. ತಂಡದ ಸದಸ್ಯರಿಗಾಗಿ ವಿವಿಧ ವೈದ್ಯರೊಂದಿಗೆ ಚರ್ಚಿಸಿ ಅತಿ ಉತ್ತಮ ವಿಶ್ರಾಂತಿ, ವ್ಯಾಯಾಮ ಮಾಡುವ ರೀತಿ, ಆಹಾರ, ನಿದ್ರೆ ಇತ್ಯಾದಿ ವಿಷಯಗಳಿಗಾಗಿ ಪ್ರತಿ ಸವಾರನಿಗಾಗಿ ಪ್ರತ್ಯೇಕ ತರಬೇತುದಾರರನ್ನು ನೇಮಿಸಿಕೊಂಡರು. ಪ್ರತಿ ಸವಾರನಿಗೆ ರಾತ್ರಿಯ ಉತ್ತಮ ನಿದ್ರೆಗೆ ಕಾರಣವಾಗಬಹುದಾದ ದಿಂಬು ಮತ್ತು ಹಾಸಿಗೆಯ ಮಾದರಿಯನ್ನು ಅವರು ನಿರ್ಧರಿಸಿದರು. ಕಣ್ಣಿಗೆ ಹಾಕುವ ಡ್ರಾಪ್ ನಿಂದ ಹಿಡಿದು ತಲೆಗೆ ತೊಡುವ ಹೆಲ್ಮೆಟ್, ಸೈಕಲ್ ಸರಪಳಿ ಇತ್ಯಾದಿ ಪ್ರತಿಯೊಂದರ ಬಗ್ಗೆಯೂ ಸೂಕ್ಷ್ಮವಾಗಿ ಗಮನಿಸಿ ಪ್ರಗತಿಯೆಡೆಗೆ ಕಾರ್ಯನಿರ್ವಹಿಸಿದರು. ಜೇಮ್ಸ್ ನ ಪೂರ್ಣ ತಂತ್ರಗಾರಿಕೆಯಂತೆ ಪ್ರತಿದಿನದ ಶೇಕಡ ಒಂದರಷ್ಟು ಪ್ರಗತಿ ಮುಂದೆ ಆತನಿಗೆ ದೊಡ್ಡ ಗೆಲುವನ್ನೇ ಸಾಧಿಸಿ ಕೊಟ್ಟಿತು.
ಇದರ ಫಲಿತಾಂಶವೆಂಬಂತೆ 2008ರ ಬೀಜಿಂಗ್ ಒಲಂಪಿಕ್ಸ್ ನಲ್ಲಿ ಶೇಕಡ 60ರಷ್ಟು ಸೈಕ್ಲಿಂಗ್ ತಂಡದ ಮೆಡಲ್ ಬ್ರಿಟನ್ ತಂಡದ ಕೈಯಲ್ಲಿತ್ತು. 2017ರಲ್ಲಿ ನಡೆದ ಲಂಡನ್ ಒಲಂಪಿಕ್ಸ್ ನಲ್ಲಿ 9 ಸ್ವರ್ಣ ಪದಕ ಹಾಗೂ ಜಗತ್ತಿನ ಏಳು ಈವರೆಗಿನ ದಾಖಲೆಗಳನ್ನು ಈ ತಂಡ ಭೇದಿಸಿ ನಿಂತಿತ್ತು. ಆರಂಭದಲ್ಲಿ 1 ಪ್ರತಿಶತದಷ್ಟು ಉತ್ತಮ ಅಥವಾ 1 ಪ್ರತಿಶತ ಕೆಟ್ಟದಾಗಿ ಆಯ್ಕೆ ಮಾಡುವ ನಡುವೆ ಸಾಮಾನ್ಯವಾಗಿ ಯಾವುದೇ ವ್ಯತ್ಯಾಸ ಕಾಣಸುವುದಿಲ್ಲ. ಆದರೆ ಸಮಯ ಕಳೆದಂತೆ, ಈ ಸಣ್ಣ ಸುಧಾರಣೆಗಳು ಅಥವಾ ಕುಸಿತಗಳು ನೀವು ದಿನನಿತ್ಯದ ಆಧಾರದ ಮೇಲೆ ಸ್ವಲ್ಪ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಜನರ ನಡುವೆ ಬಹಳ ದೊಡ್ಡ ಅಂತರವನ್ನು ಕಂಡುಕೊಳ್ಳುತ್ತೀರಿ.
ಅದೇ ರೀತಿ ಅಪೌಷ್ಠಿಕ ಆಹಾರ ಒಂದು ದಿನ ಸೇವಿಸುವುದು, ಅತಿಯಾದ ಕೆಲಸದ ಒತ್ತಡವೆಂದು ಮನೆ ಕುಟುಂಬಕ್ಕೆ ಸಮಯ ನೀಡದೇಯಿರುವುದು, ಕೆಲಸವನ್ನು ತಾತ್ಕಾಲಿಕವಾಗಿ ಮುಂದೂಡುವುದು ಮೊದಲಾದವುಗಳಿಂದ ತುಂಬಾ ವ್ಯತ್ಯಾಸ ಆಗದೆ ಇರಬಹುದು. ಆದರೆ ಇದು ನಿರಂತರವಾಗಿ ನಡೆದಲ್ಲಿ ಅಥವಾ ಪ್ರತಿ ದಿನವೂ ಒಂದು ಪ್ರತಿಶತ ಕುಂದುತ್ತ ಹೋದಲ್ಲಿ ನಮ್ಮ ಒಟ್ಟಾರೆ ಅಧಃಪತನಕ್ಕೆ ಇದೇ ಕಾರಣವಾಗುತ್ತದೆ. ನೀವು ಒಂದು ವರ್ಷದವರೆಗೆ ಪ್ರತಿ ದಿನವೂ ಒಂದು ಪ್ರತಿಶತವನ್ನು ಉತ್ತಮಗೊಳಿಸಿದರೆ, ನೀವು ವರ್ಷಾಂತ್ಯದ ಹೊತ್ತಿಗೆ ಮೂವತ್ತೇಳು ಪಟ್ಟು ಉತ್ತಮವಾಗಿ ಮೇಲೇರುತ್ತೀರಿ. ಸಣ್ಣ ಸುಧಾರಣೆಗಳು ತಕ್ಷಣದಲ್ಲಿ ಹೆಚ್ಚಿನ ವ್ಯತ್ಯಾಸವನ್ನು ಮಾಡುವುದಿಲ್ಲವಾದರೂ ದೀರ್ಘಾವಧಿಯಲ್ಲಿ ನಮ್ಮ ಏಳಿಗೆಯಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತದೆ.
– ಸೌಜನ್ಯ ಶೆಟ್ಟಿ
(ಲೇಖಕರ ಪರಿಚಯ: ಲೇಖಕರು ಉಡುಪಿ ದೊಡ್ಡಣಗುಡ್ಡೆಯ ಡಾ. ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆಯ ಆಡಳಿತಾಧಿಕಾರಿ.)