ಭಾರತ ನನ್ನ ರಾಷ್ಟ್ರ ಅನ್ನೋ ಹೆಮ್ಮೆ ಎಲ್ಲಾ ಭಾರತೀಯನ ರಕ್ತದಲ್ಲಿ ಇದೆ ಅನ್ನೊದನ್ನ ಸ್ವಾತಂತ್ರ್ಯದ ಈ ಅಮೃತ ಮಹೋತ್ಸವದ ಅಮೃತ ಗಳಿಗೆಯಲ್ಲಿ ಜಗಜ್ಜಾಹಿರ ಮಾಡಿದ್ದಾನೆ ಪ್ರತಿಯೊಬ್ಬ ಭಾರತೀಯ. ಎಲ್ಲೆಡೆ ಮೆರವಣಿಗೆ, ಭಾರತಾಂಬೆಯ ಜೈಕಾರ ಕೇಳುತ್ತಿರಲು ಮನಸ್ಸಲ್ಲಿ ಅದೇನೋ ರೋಮಾಂಚನ. ಭಾರತೀಯರಾಗಿ ಹುಟ್ಟಿದ ನಾವೇ ಪುಣ್ಯವಂತರು ಅಂತ ನಮಗೆಲ್ಲಾ ಅನಿಸಿದ್ದು ಸುಳ್ಳಲ್ಲ.
ಈ ಒಂದು ಅಮೃತ ಮಹೋತ್ಸವದ ಅಮೃತಗಳಿಗೆಯ ಕ್ಷಣದ ಅನುಭವ ನಮಗೆ ಆಗುತ್ತಿದೆ ಅಂದರೆ ಅಲ್ಲಿ ಅದೆಷ್ಟೋ ಸ್ವಾತಂತ್ರ್ಯ ಹೋರಾಟದ ಮಹಾನುಭಾವರ ನೆತ್ತರು ಹರಿದಿದೆ. ಬ್ರಿಟಿಷರ ದಾಸ್ಯದ ವಿಮುಕ್ತಿಗಾಗಿ ಅದೆಷ್ಟೋ ತಾಯಂದಿರ ಕರುಳ ಬಳ್ಳಿಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟರೋ, ಅದೆಷ್ಟೋ ವೀರ ವನಿತೆಯರು ನಾಡಿಗಾಗಿ ಮಡಿದರೋ, ಅವರೆಲ್ಲರ ತ್ಯಾಗದ ಪ್ರತೀಕ ಈ ನಮ್ಮ ಅಮೃತ ಮಹೋತ್ಸವ.
ನಾಡಿಗಾಗಿ ಪ್ರಾಣ ಒತ್ತೆ ಇಟ್ಟ ನಮ್ಮೆಲ್ಲ ನಾಯಕ ನಾಯಕಿಯರಿಗೆ ನಮ್ಮೆಲ್ಲರ ಕೋಟಿ ಕೋಟಿ ನಮನಗಳು. ಅದೇ ರೀತಿ ಅಂದು ಪಡೆದ ಸ್ವಾತಂತ್ರ್ಯದ ಕಸಿಯುವಿಕೆಯನ್ನು ಯಾರಿಂದನೂ ಮಾಡಲು ಬಿಡದೆ ತನ್ನ ಪ್ರಾಣವನ್ನು ಒತ್ತೆ ಇಡುವ ನಮ್ಮ ಹೆಮ್ಮೆಯ ಯೋಧರಿಗೆ ಹಾಗೂ ನಮ್ಮ ಹಸಿವನ್ನು ನೀಗಿಸೊ ಅನ್ನದಾತನಿಗೂ ಚಿರಋಣಿಯಾಗಿರಬೇಕು ಪ್ರತಿಯೊಬ್ಬ ಭಾರತೀಯನು.
ಈ ಅಮೃತ ಗಳಿಗೆಯಲ್ಲಿ ಪ್ರತಿಯೊಬ್ಬ ಭಾರತೀಯನ ಕನಸು ಸಾಕಾರಗೊಂಡಿದ್ದು ಹರ್ ಘರ್ ತಿರಂಗ ಅನ್ನೋ ಮಹಾ ಯೋಜನೆಯಲ್ಲಿ. ನಾನು ಭಾರತೀಯ ಅನ್ನೋದನ್ನ ಎಲ್ಲರೂ ಈ 3 ದಿನದ ಆಚರಣೆಯ ಸಂದರ್ಭದಲ್ಲಿ ಸಾಬೀತುಪಡಿಸಿದರೆ ಸಾಲದು, ಮುಂದೆಯೂ ಅದೇ ರೀತಿಯ ರಾಷ್ಟ್ರಭಕ್ತಿ ಪ್ರತಿಯೊಬ್ಬ ಭಾರತೀಯನ ಉಸಿರಲ್ಲಿ ಬೆರೆತಿರಬೇಕು.
ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಅನ್ನೋ ಯೊಜನೆಯಲ್ಲಿ ಮನೆ ಮನೆಯಲ್ಲಿ ಹಾರಾಡಿದ ತ್ರಿವರ್ಣ ಧ್ವಜ 3 ದಿನದ ಬಳಿಕ ಎಲ್ಲಿ ಹೇಗೆ ಇರುತ್ತದೆ ಅನ್ನೋದರಲ್ಲಿ ನಮ್ಮ ದೇಶಪ್ರೇಮ ಸಾಬೀತಾಗುವುದು. ನಾವು ಉಪಯೋಗಿಸಿದ ಈ ರಾಷ್ಟ್ರ ಧ್ವಜಗಳನ್ನು ಎಲ್ಲೆಂದರಲ್ಲಿ ಬಿಸಾಡದೇ ಜೋಪಾನವಾಗಿ ಇಡುವುದು ಅಥವಾ ಸರಕಾರದ ವತಿಯಿಂದ ವಿತರಣೆಯಾದ ಬಾವುಟಗಳನ್ನು ಮತ್ತೆ ಆಯಾ ಪಂಚಾಯತ್ ಗಳಲ್ಲಿ ಹಿಂತೆಗೆದುಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಿದರೆ ಉತ್ತಮ. ಪ್ರತಿಯೊಬ್ಬ ಭಾರತೀಯನೂ ನಮ್ಮ ರಾಷ್ಟ್ರಧ್ವಜಕ್ಕೆ ಅಪಮಾನ ಆಗದ ರೀತಿಯಲ್ಲಿ ನೋಡಿಕೊಳ್ಳಬೇಕು ಅದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಕೂಡ.
ನನ್ನ ದೇಶ ನನ್ನ ಅಭಿಮಾನ ಸದಾ ನನ್ನ ಮನದಲ್ಲಿರಬೇಕು. ಆಗ ನಮ್ಮ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಒಂದು ಬೆಲೆ. ಭಾರತ್ ಮಾತಾ ಕೀ ಜೈ, ಜೈ ಜವಾನ್ ಜೈ ಕಿಸಾನ್.
-ಸಮಿತ ಶೆಟ್ಟಿ, ಸಿದ್ದಕಟ್ಟೆ