Home ಅಂಕಣ ಒಂದೆಡೆ ಮಕ್ಕಳು ಬೇಕು ಎಂಬ ತುಡಿತ, ಇನ್ನೊಂದೆಡೆ ಮಾಂಸದ ಮುದ್ದೆಯನ್ನು ಕಿತ್ತು ಬಿಸಾಡುವ ಕ್ರೌರ್ಯ

ಒಂದೆಡೆ ಮಕ್ಕಳು ಬೇಕು ಎಂಬ ತುಡಿತ, ಇನ್ನೊಂದೆಡೆ ಮಾಂಸದ ಮುದ್ದೆಯನ್ನು ಕಿತ್ತು ಬಿಸಾಡುವ ಕ್ರೌರ್ಯ

ಹೆಚ್ಚುತ್ತಿವೆ ಅಬಾರ್ಷನ್ ಕೇಸುಗಳು! ಯುವಜನತೆಯ ನೈತಿಕತೆಯು ಎತ್ತ ಸಾಗುತ್ತಿದೆ?

298
0

ಇತ್ತೀಚೆಗೆ ಇಂಟರ್ನೆಟ್ ಮೂಲಕ ಮಾನವ ಅಂಡಗಳನ್ನು ಮಾರಾಟ ಮಾಡುವ ಸಂಗತಿಗಳು ಹೆಚ್ಚುತ್ತಿವೆ. ಅದರಲ್ಲಿಯೂ ಸೂಪರ್ ಮಾಡೆಲಗಳ ಅಂಡಗಳಿಗೆ ಭಾರೀ ಬೇಡಿಕೆ ಇದೆ. ಈಗಾಗಲೇ ರಕ್ತ ಬ್ಯಾಂಕುಗಳು ಇರುವ ಹಾಗೆ ಮಾನವರ ವೀರ್ಯ ಬ್ಯಾಂಕುಗಳು ಜನಪ್ರಿಯ ಆಗ್ತಾ ಇವೆ. ಮಕ್ಕಳಿಲ್ಲದ ದಂಪತಿಗಳಿಗೆ ಮಗುವನ್ನು ಪಡೆಯಲು ಇಂದು ಹತ್ತಾರು ಕಾನೂನುಬದ್ಧವಾದ ದಾರಿಗಳು ಇವೆ. ದುಃಖ ಪಡುತ್ತಾ ಮೂಲೆ ಸೇರುವ ಕಾಲವು ಇನ್ನಿಲ್ಲ ಎಂದೇ ಹೇಳಬಹುದು.

ತಮ್ಮ ವೀರ್ಯದಾನ ಮಾಡಿ ಸಾವಿರಾರು ಮಕ್ಕಳ ಜನನಕ್ಕೆ ಕಾರಣ ಆಗಲು ವೀರ್ಯವಂತ ಪುರುಷರು ತುದಿಗಾಲಲ್ಲಿ ನಿಂತಿದ್ದಾರೆ. ಹಾಗೆಯೇ ದುಡ್ಡಿದ್ದವರ ಮಗುವಿಗೆ ತಾಯಿ ಆಗಲು ತಮ್ಮ ಗರ್ಭಾಶಯವನ್ನು ತೆರೆದಿಟ್ಟು ಹಲವು ಬಾಡಿಗೆಯ ತಾಯಂದಿರು ಕೂಡ ಅಷ್ಟೇ ಉತ್ಸಾಹದಲ್ಲಿ ರೆಡಿ ಇದ್ದಾರೆ. ಅದೇ ರೀತಿಯಲ್ಲಿ ಇತ್ತೀಚೆಗೆ ಮಾನವ ಕ್ಲೋನಿಂಗ್ ಮೂಲಕ ತಮ್ಮದೇ ವಂಶವಾಹಿ ಇರುವ ಮಗುವನ್ನು ಪಡೆಯಲು ದಂಪತಿಗಳಿಗೆ ಸಾಧ್ಯ ಇರುವ ಸಂಶೋಧನೆಗಳು ಫಲಿತಾಂಶವನ್ನು ಕೊಡುತ್ತಿವೆ. ಇನ್ನು ಮುಂದೆ ಬಂಜೆತನ ಒಂದು ಶಾಪ ಎಂದು ಯಾವ ದಂಪತಿಗಳೂ ದುಃಖ ಪಡಬೇಕು ಅಂತ ಇಲ್ಲ! ಮಕ್ಕಳಿಲ್ಲ ಎಂಬ ಕಾರಣಕ್ಕೆ ಕೀಳರಿಮೆಗೆ, ಕೊರಗಿಗೆ ಹೋಗುವ ಅಗತ್ಯ ಕೂಡ ಇಲ್ಲ!

ಮಗು ಇಲ್ಲದ ದಂಪತಿಗಳ ದುಃಖ ಒಂದೆಡೆ, ಆರೋಗ್ಯಪೂರ್ಣ ದಂಪತಿಗಳು ಮಗುವನ್ನು ಪಡೆಯಲು ವಿಫಲವಾದಾಗ ಪಡುವ ಅಪಮಾನ, ನೋವು ಅವರಿಗೆ ಮಾತ್ರ ಗೊತ್ತು. ಆ ಗಂಡನನ್ನು ನಪುಂಸಕ ಎಂದೂ, ಹೆಣ್ಣನ್ನು ಬಂಜೆ ಎಂದೂ ಸಮಾಜ ಇಂದಿಗೂ ಕರೆಯುತ್ತದೆ. ಹೆಣ್ಣಿನ ಮೇಲೆ ಬರುವ ಅಪವಾದಗಳು ಜಾಸ್ತಿ. ಈ ಅಪಮಾನಗಳಿಂದ ಹೊರಬರಲು ಅಡ್ಡದಾರಿ ಹುಡುಕುವ ದಂಪತಿಗಳ ಸಂಖ್ಯೆಯೂ ಸಾಕಷ್ಟು ಇದೆ. ಆದರೆ ಇಂದು ಅತ್ಯಂತ ವೇಗವಾಗಿ ಓಡುತ್ತಿರುವ ವೈದ್ಯಕೀಯ ವಿಜ್ಞಾನವು ಅದಕ್ಕೆಲ್ಲ ಪರಿಹಾರಗಳನ್ನು ಈಗಲೇ ಹುಡುಕಿ ಆಗಿದೆ. ಅವುಗಳಲ್ಲಿ 60% ಪರಿಹಾರಗಳಿಗೆ ನಮ್ಮ ದೇಶದ ಕಾನೂನು ಮಾನ್ಯತೆ ಕೊಟ್ಟಿದೆ. ದೇಶದ ಕಾನೂನುಬದ್ಧವಾದ ವಿಧಾನಗಳ ಮೂಲಕ ಈಗ ತಮ್ಮದೇ ಮಗುವನ್ನು ಪಡೆಯಲು ನೂರಾರು ಅವಕಾಶಗಳು ಇವೆ. ಅದಕ್ಕಾಗಿ ದಂಪತಿಗಳು ಲಕ್ಷ ಲಕ್ಷ ದುಡ್ಡು ಖರ್ಚು ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ತಮ್ಮದೇ ಮಗುವನ್ನು ಪಡೆಯುವ ಖುಷಿಯು ಲಕ್ಷ ಕೋಟಿ ದುಡ್ಡಿಗೂ ಮೀರಿದ್ದು ಎಂಬುದು ಅವರ ಭಾವನೆ. ಸ್ವಲ್ಪ ಬ್ರಾಡ್ ಆಗಿ ಯೋಚನೆ ಮಾಡುವವರು ಅನಾಥಾಶ್ರಮದ ಒಂದು ಮಗುವನ್ನು ಅಧಿಕೃತವಾಗಿ ದತ್ತಕ್ಕೆ ತೆಗೆದುಕೊಂಡು ತಮ್ಮ ಮಗುವಿನ ಹಾಗೆ ಪ್ರೀತಿಯನ್ನು ಕೊಡುವವರೂ ಇದ್ದಾರೆ. ಅಂತವರನ್ನು ನಾವು ಹೆಚ್ಚು ಅಭಿನಂದಿಸೋಣ.

ಆ ಮಗು ಬೇಡ ಎಂದು ಕಿತ್ತು ಹಾಕುವವರು. ಇದೇ ಸಮಸ್ಯೆಯ ಇನ್ನೊಂದು ಮುಖವನ್ನು ನನ್ನ ಆತ್ಮೀಯರಾದ ವೈದ್ಯರು ನನ್ನ ಜೊತೆ ಹೇಳುತ್ತಾ ಹೋದರು. ಅವರು ಮತ್ತು ಅವರ ಪತ್ನಿ ಒಂದು ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರಾಗಿ ವೃತ್ತಿ ಮಾಡುತ್ತಿದ್ದಾರೆ. ಅಲ್ಲಿ ವಾರಕ್ಕೆ ಕನಿಷ್ಠ 18-20 ಅಬಾರ್ಷನಗಳು ನಡೆಯುತ್ತಿವೆ ಅನ್ನೋದನ್ನು ಅವರು ಹೇಳಿದಾಗ ನನ್ನ ಬೆನ್ನುಮೂಳೆಯಲ್ಲಿ ಚಳಕ್ ಎಂದು ಕರೆಂಟ್ ಓಡಿತು. ಅನೈತಿಕತೆಯ ಫಲ – ಮಾಂಸದ ಮುದ್ದೆ: ಆ ವೈದ್ಯರು ತಮ್ಮ ಹೆಸರನ್ನು ಉಲ್ಲೇಖ ಮಾಡಬಾರದು ಎಂದು ಹೇಳಿದ್ದಾರೆ. ಅವರು ಹೇಳಿದ್ದು ನಿಜಕ್ಕೂ ಭಯಾನಕವಾದ ವಿಷಯ. ಅದರಲ್ಲಿ ಹೆಚ್ಚಿನವರು 18-23 ವರ್ಷ ಪ್ರಾಯದ ಮೆಡಿಕಲ್ ವಿದ್ಯಾರ್ಥಿನಿಯರು. ಅಪ್ಪ ಅಮ್ಮನಿಂದ ದೂರ ಇರುವವರು. ಒಬ್ಬಂಟಿತನ ಹೋಗಲಾಡಿಸಲು ಪ್ರೀತಿ, ಪ್ರೇಮ, ಪ್ರಣಯ, ಸೆಕ್ಸ್, ಡ್ರಗ್ಸ್ ಇವುಗಳ ಮೊರೆ ಹೋಗುವವರು. ಸ್ವಚ್ಚಂದತೆಯ ರೆಕ್ಕೆ ಬಿಚ್ಚಿ ಹಾರಾಡುವವರು.

ಎಲ್ಲಾ ಹುಡುಗಿಯರು ಹಾಗೆ ಅಂತ ಅಲ್ಲವೆ ಅಲ್ಲ. ವೈದ್ಯರು ಹೇಳುವ ಪ್ರಕಾರ ಮೆಡಿಕಲ್ ಕಲಿಯಲು ಬರುವ ಎಲ್ಲ ಹುಡುಗಿಯರೂ, ಹುಡುಗರೂ ಹಾಗೆ ಅಂತಲ್ಲ. ತುಂಬಾ ಸೀರಿಯಸ್ ಆಗಿ ಕಲಿಯುವ ಮಕ್ಕಳೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆದರೆ ಸ್ವಚ್ಛಂದತೆಯ ಬದುಕು ಆಸೆ ಪಡುವ ಹಲವರು ವರ್ಷಕ್ಕೆ ಎರಡು, ಮೂರು ಬಾರಿ ಅಬಾರ್ಷನ್ ಮಾಡಿಸಿಕೊಳ್ಳಲು ಕೂಡ ಹಿಂದೇಟು ಹಾಕುವುದಿಲ್ಲ. ಗರ್ಭಪಾತಕ್ಕೆ ಹೆದರುವುದೇ ಇಲ್ಲ. ಹೀಗೆಲ್ಲ ಮಾಡಿದರೆ ಮುಂದೆ ನಿಮಗೆ ಮಕ್ಕಳಾಗುವುದೇ ಇಲ್ಲ ಎಂದು ವೈದ್ಯರು ಎಚ್ಚರಿಕೆ ಕೊಟ್ಟರೂ ಅವರು ಕ್ಯಾರೇ ಅನ್ನುತ್ತಿಲ್ಲ ಅನ್ನೋದು ಇನ್ನೂ ಭಯ ಹುಟ್ಟಿಸುವ ಸಂಗತಿ. ಅವರು ವೈದ್ಯಕೀಯ ವಿದ್ಯಾರ್ಥಿಗಳು. ಅವರಿಗೆ ಎಲ್ಲವೂ ಗರ್ಭ ನಿರೋಧಕ ವಿಧಾನಗಳು ಗೊತ್ತಿವೆ. ಆದರೆ ಆ ಕ್ಷಣಕ್ಕೆ ಮೈ ಮರೆವು ಅವರನ್ನು ಈ ಹಂತಕ್ಕೆ ತಲುಪಿಸುತ್ತದೆ. ಈಗಿನ ಆಧುನಿಕ ಸಿನೆಮಾಗಳು, ವೆಬ್ ಸೀರೀಸ್, ಮೊಬೈಲ್, ಜಾಲತಾಣಗಳು, ಆಧುನಿಕ ಜೀವನ ಪದ್ಧತಿ ಮತ್ತು ಸುಲಭದಲ್ಲಿ ದೊರೆಯುವ ಡ್ರಗ್ಸ್ ಅವರನ್ನು ಪ್ರಪಾತಕ್ಕೆ ದೂಡುತ್ತಿದೆ.

ಅದಕ್ಕಿಂತ ಹೆಚ್ಚಿನ ಭಯಪಡುವ ಸಂಗತಿ ಎಂದರೆ ಗ್ರಾಮಾಂತರ ಭಾಗದ ವಿದ್ಯಾವಂತ ಹೆಣ್ಣುಮಕ್ಕಳು ಪ್ರೀತಿ, ಪ್ರೇಮದ ಆಮಿಷಗಳಿಗೆ ಬಲಿಯಾಗಿ ಗರ್ಭ ಧರಿಸುತ್ತಿದ್ದಾರೆ. ಅವರ ಪ್ರಮಾಣವೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆ ಬೇಡದ ಮಗುವನ್ನು ಕಿತ್ತು ಕಸದ ಬುಟ್ಟಿಗೆ ಎಸೆಯಲು ಅವರು ಹೇಸುತ್ತಿಲ್ಲ. ಆ ಅನೈತಿಕತೆಯ ಫಲವಾದ ಮಾಂಸದ ಪಿಂಡವನ್ನು ತೆಗೆದು ಬಿಸಾಡಲು ಇಂದು ಹದಿಹರೆಯದ ಜೋಡಿಗಳು ಹಿಂದೆ ಮುಂದೆ ನೋಡುತ್ತಿಲ್ಲ. ಮೊಬೈಲ್ ಮೂಲಕ, ವಿವಿಧ
ಜಾಲತಾಣಗಳ ಮೂಲಕ ಗೆಳೆತನ ಮಾಡಿಕೊಂಡ ಹದಿಹರೆಯದ ಜೋಡಿಗಳು ಬಹಳ ಬೇಗ ನಿಕಟವಾಗುತ್ತಾರೆ. ಸಂಯಮ ಕಳೆದುಕೊಂಡು ಈ ಭಾವುಕ ಕ್ಷಣದಲ್ಲಿ ಮೈಮರೆಯುತ್ತಾರೆ. ಅವುಗಳಲ್ಲಿ 90% ಪ್ರೀತಿಗಳು ಮದುವೆಯವರೆಗೂ ಹೋಗುವುದಿಲ್ಲ ಅನ್ನೋದು ಕೂಡ ಅಷ್ಟೇ ಸತ್ಯವಾದ ಸಂಗತಿ. ಆ ಹುಡುಗ ಮತ್ತು ಹುಡುಗಿ ಯಾವ ಪಾಪ ಪ್ರಜ್ಞೆಯೂ ಇಲ್ಲದೆ ಮಾಂಸದ ಮುದ್ದೆಯನ್ನು ಕಸದ ಬುಟ್ಟಿಗೆ ಎಸೆದು ಮುಂದಕ್ಕೆ ಹೋಗುತ್ತಿರುವುದು ಕೂಡ ಹೆಚ್ಚು ಆತಂಕಕ್ಕೆ ಕಾರಣವಾಗಿದೆ.

ಒಂದೆಡೆ ಮಗು ಬೇಕೂ ಎಂದು ದಂಪತಿಗಳು ತೀವ್ರವಾಗಿ ಹಂಬಲಿಸುವುದು, ಅದಕ್ಕಾಗಿ ಲಕ್ಷ ಲಕ್ಷ ದುಡ್ಡು ಸುರಿಯಲು ಕೂಡ ಮುಂದಾಗುವ ದೃಶ್ಯ. ಇನ್ನೊಂದೆಡೆ ತಮ್ಮ ಫೇಕ್ ಪ್ರೀತಿಯ ಪ್ರತೀಕವಾದ ಮುಗ್ಧ ಮಗು (ಅವರ ಪ್ರಕಾರ ಮಾಂಸದ ಮುದ್ದೆಯನ್ನು) ಕಿತ್ತು ಬಿಸಾಡಿ ಧಿಮಾಕು ತೋರುವ ಯುವ ಪ್ರೇಮಿಗಳು. ಈ ದುರಂತಕ್ಕೆ ಕಾರಣರು ಯಾರು? ನಮ್ಮ ಯುವ ಸಮಾಜವು ಎತ್ತ ಕಡೆಗೆ ಹೋಗುತ್ತಿದೆ?

-ರಾಜೇಂದ್ರ ಭಟ್ ಕೆ

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.