ಇಂದು ಆಂಗ್ಲ ಮಾಧ್ಯಮ ಶಾಲೆಗಳ ಅಬ್ಬರದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ತುಂಬಾ ಸಂತ್ರಸ್ತವಾಗಿವೆ. ಅದರಲ್ಲಿಯೂ ಖಾಸಗಿ ಆಡಳಿತ ಮಂಡಳಿಗಳ ಆಡಳಿತಕ್ಕೆ ಒಳಪಟ್ಟ ಮತ್ತು ಸರಕಾರದ ಅನುದಾನವನ್ನು ಪಡೆಯುತ್ತಿರುವ ಕನ್ನಡ ಮಾಧ್ಯಮ ಅನುದಾನಿತ ಶಾಲೆಗಳು ಇನ್ನೂ ಹೆಚ್ಚು ಸವಾಲುಗಳನ್ನು ಎದುರಿಸುತ್ತಾ ಇವೆ.
ಒಂದು ಕಡೆಯಲ್ಲಿ ಶಾಲೆಗಳ ಗುಣಮಟ್ಟ ಕಾಪಾಡುವ ಸವಾಲು, ಇನ್ನೊಂದೆಡೆ ಶಿಕ್ಷಕರ ಕೊರತೆ, ಮತ್ತೊಂದೆಡೆ ಮಕ್ಕಳ ಸಂಖ್ಯೆಯನ್ನು ಉಳಿಸಿಕೊಳ್ಳುವ ಅನಿವಾರ್ಯತೆ….. ಹೀಗೆ ನೂರಾರು ಸವಾಲು, ಸಮಸ್ಯೆಗಳ ನಡುವೆ ಇಂತಹ ಶಾಲೆಗಳು ಇಂದು ಅಳಿವು, ಉಳಿವಿನ ಹೋರಾಟದಲ್ಲಿ ಇವೆ. ಆಡಳಿತ ಮಂಡಳಿಗಳ ತೀವ್ರ ಪ್ರಯತ್ನ ಮತ್ತು ಶಿಕ್ಷಕರ ಕಠಿಣ ಪರಿಶ್ರಮಗಳಿಂದ ಮಾತ್ರ ಇಂತಹ ಶಾಲೆಗಳನ್ನು ಉಳಿಸಲು ಸಾಧ್ಯ ಎನ್ನುವುದು ತಜ್ಞರ ಅಭಿಪ್ರಾಯ. ಶತಮಾನ ಕಂಡ ಅತ್ತೂರು ಶಾಲೆ ನಾಡಿಗೆ ಮಾದರಿ ಆಯ್ತು. ಕಾರ್ಕಳ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಇರುವ ಅತ್ತೂರು ಸೈಂಟ್ ಲಾರೆನ್ಸ್ ವಿದ್ಯಾಸಂಸ್ಥೆಗಳು (ಪ್ರಾಥಮಿಕ ಮತ್ತು ಪ್ರೌಢಶಾಲೆ) ಇಂದು ಒಂದು ಅಪೂರ್ವವಾದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ನಾಡಿಗೆ ಮಾದರಿ ಆದವು. ಅದರ ಸಂಪೂರ್ಣವಾದ ಕ್ರೆಡಿಟ್ ಉಭಯ ವಿದ್ಯಾಸಂಸ್ಥೆಗಳ ಪೂರ್ವ ವಿದ್ಯಾರ್ಥಿಗಳಿಗೆ ದೊರೆಯುತ್ತದೆ.
ಅದು ಪೂರ್ವವಿದ್ಯಾರ್ಥಿಗಳ ಮೆಗಾ ಪುನರ್ಮಿಲನ ಕಾರ್ಯಕ್ರಮ. ಇಂದು (ಏಪ್ರಿಲ್ 20) ಅತ್ತೂರು ಪ್ರೌಢಶಾಲೆಯ 60 ಎಸೆಸೆಲ್ಸಿ ಬ್ಯಾಚುಗಳ ವಿದ್ಯಾರ್ಥಿಗಳು ಮತ್ತು ಪ್ರಾಥಮಿಕ ಶಾಲೆಯ ನೂರಾರು ಬ್ಯಾಚುಗಳ ಪೂರ್ವವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ ಅದು. ಸೇರಿದ ಪೂರ್ವವಿದ್ಯಾರ್ಥಿಗಳ ಸಂಖ್ಯೆಯು 1500 ದಾಟಿತ್ತು. ಈ ಪುನರ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಲು ದೂರದ ಮುಂಬೈ, ಹೈದರಾಬಾದ್, ಚೆನ್ನೈ, ದೆಹಲಿ ಮೊದಲಾದ ಕಡೆಯಿಂದ ಪೂರ್ವ ವಿದ್ಯಾರ್ಥಿಗಳು ಬಂದಿದ್ದರು. ವಿದೇಶಗಳಿಂದ ಕೂಡ ಹಲವಾರು ಪೂರ್ವ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ಮೇಲಿನ ಪ್ರೀತಿಯಿಂದ ಬಂದು ಸೇರಿದ್ದರು. ಇಡೀ ದಿನ ಅತ್ತೂರು ಶಾಲೆಯ ಪರಿಸರದಲ್ಲಿ ಹಬ್ಬದ ವಾತಾವರಣ ಇತ್ತು. ಎಷ್ಟೋ ಪೂರ್ವ ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿತುಹೋದ ಎಷ್ಟೋ ವರ್ಷಗಳ ನಂತರ ಶಾಲೆಗೆ ಬಂದಿದ್ದರು.
ಕೆಲವರು ಶಾಲೆ ಕಲಿತು ಹೋದ ನಂತರ ಇದೇ ಮೊದಲ ಬಾರಿಗೆ ತಾವು ಕಲಿತ ಶಾಲೆಗೆ ಬಂದಿದ್ದರು. ಆ ವಿದ್ಯಾಸಂಸ್ಥೆಗಾಗಿ ಬದುಕು ಸವೆಸಿದ ಮತ್ತು ವಿದ್ಯಾರ್ಥಿಗಳನ್ನು ತುಂಬಾ ಪ್ರೀತಿ ಮಾಡಿದ 70-80 ನಿವೃತ್ತ ಶಿಕ್ಷಕರು ಹೊತ್ತಿಗೆ ಮೊದಲೇ ಆಗಮಿಸಿ ಸಭಾಂಗಣದಲ್ಲಿ ಆಸೀನರಾಗಿದ್ದರು. ಎಲ್ಲರ ಕಣ್ಣುಗಳಲ್ಲಿಯೂ ಭಾರೀ ಎನ್ನುವ ಎಕ್ಸೈಟಮೆಂಟ್, ತವಕ, ರೋಮಾಂಚನ, ತಾವು ಕಲಿತ ವಿದ್ಯಾಸಂಸ್ಥೆಯ ಮೇಲೆ ಪ್ರೀತಿ ಎದ್ದುಕಾಣುತ್ತಿತ್ತು. ತಮ್ಮ ಗುರುಗಳನ್ನು ಹುಡುಕಿಕೊಂಡು ಹೋಗಿ ಪರಿಚಯ ಮಾಡಿಕೊಂಡು ಮಾತಾಡಿಸುವ, ಅವರ ಆಶೀರ್ವಾದ ಪಡೆಯುವ ಖುಷಿಗಳು ಎದ್ದು ಕಾಣುತ್ತಿದ್ದವು. ಅತ್ತೂರು ಪ್ರೌಢಶಾಲೆಯ ಮೊದಲ ಬ್ಯಾಚಿನ ಹಾಗೂ ಮೊದಲ ಅಡ್ಮಿಷನ್ ನಂಬರ್ ಇರುವ ವಿದ್ಯಾರ್ಥಿ ಕೂಡ ಬಂದಿದ್ದು ಅವರು ಎಲ್ಲರ ಆಕರ್ಷಣೆಯ ಕೇಂದ್ರ ಆಗಿಬಿಟ್ಟರು. ಸಾವಿರಾರು ಪೂರ್ವ ವಿದ್ಯಾರ್ಥಿಗಳು ಮತ್ತೆ ಮಗು ಆಗಿಬಿಟ್ಟರು.
ದೂರ ದೂರದಿಂದ ಆಗಮಿಸಿದ್ದ ಪೂರ್ವ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಈಗ ಜೀವನದಲ್ಲಿ ಸೆಟಲ್ ಆದವರು ಮತ್ತು ಮೂರು ತಲೆಮಾರು ಕಂಡವರು 50/60/70 ವರ್ಷ ಪ್ರಾಯದವರೂ ಇದ್ದರು. ಬಂದವರು ತಮ್ಮ ತಮ್ಮ ಕ್ಲಾಸ್ ರೂಮಗಳನ್ನು ಹುಡುಕಿಕೊಂಡು ಹೋದರು. ತಮ್ಮ ತಮ್ಮ ಬ್ಯಾಚಿನವರನ್ನು ಹುಡುಕಿ ಹೆಗಲ ಮೇಲೆ ಕೈ ಹಾಕಿದರು. ಏನೋ, ಹೇಗಿದ್ದೀಯಾ? ಎಂದು ಏಕವಚನದಲ್ಲಿ ಮಾತಾಡಿದರು. ಕೆಲವರು ಸಂಕೋಚ ಮಾಡದೆ ಹಗ್ ಮಾಡಿಕೊಂಡರು. ಮೈದಾನದ ಉದ್ದಕ್ಕೂ ನಡೆದುಬಂದರು. ತಾವು ಕಲ್ಲು ಎಸೆದ ಮಾವಿನ ಮರವನ್ನು ಹುಡುಕಿದರು. ತಂಟೆ ಮಾಡಿದ್ದು, ಶಿಕ್ಷಕರಿಂದ ಬೈಸಿಕೊಂಡದ್ದು ಹೀಗೆ ಎಲ್ಲವನ್ನೂ ನೆನಪು ಮಾಡಿಕೊಂಡರು. ತಮ್ಮ ಬ್ಯಾಚಿನ ವಿದ್ಯಾರ್ಥಿಗಳ ಜೊತೆಗೆ ಗ್ರೂಪ್ ಫೋಟೋ ತೆಗೆಸಿಕೊಂಡರು. ಸೆಲ್ಫಿ ತೆಗೆದು ತಮ್ಮ ಮೆಮೋರಿಯಲ್ಲಿ ಸ್ಟೋರ್ ಮಾಡಿಕೊಂಡರು. ಖುಷಿಯನ್ನು ಹಂಚಿಕೊಂಡರು.
ಸಂಕ್ಷಿಪ್ತವಾದ ಮತ್ತು ಅರ್ಥಪೂರ್ಣವಾದ ಸಭಾ ಕಾರ್ಯಕ್ರಮ. ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಕರ್ನಾಟಕ ಲೋಕಾಯುಕ್ತ ಪೂರ್ವ ನ್ಯಾಯಮೂರ್ತಿ ಜಸ್ಟೀಸ್ ಸಂತೋಷ್ ಹೆಗ್ಡೆಯವರು ಭ್ರಷ್ಟಾಚಾರ ಮುಕ್ತ ಸಮಾಜವನ್ನು ಕಟ್ಟಬೇಕು ಎಂದು ಆಶಯ ವ್ಯಕ್ತಪಡಿಸಿದರು. ನಿವೃತ್ತ ಮುಖ್ಯ ಶಿಕ್ಷಕರಾದ ಮುನಿರಾಜ ರೆಂಜಾಳ ಅವರು ಗುರುಶಿಷ್ಯ ಪರಂಪರೆಯ ಬಗ್ಗೆ ಭಾವಪೂರ್ಣವಾದ ಮಾತುಗಳನ್ನು ಹೇಳಿದರು. ಪೂರ್ವ ವಿದ್ಯಾರ್ಥಿಗಳು ಶಾಲೆಯ ನೆರವಿಗೆ ನಿಲ್ಲಬೇಕು ಎಂದರು. ಉಭಯ ವಿದ್ಯಾಸಂಸ್ಥೆಯ ಸಂಚಾಲಕರಾದ ರೆ. ಫಾ.ಅಲ್ಬನ್ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು. ಅವರು ಹೇಳಿದ ಒಂದು ಮಾತು – ಈ ಶಾಲೆ ಇನ್ನು ಪೂರ್ವ ವಿದ್ಯಾರ್ಥಿಗಳದ್ದು. ಉಭಯ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕರಾದ ಸುಬ್ರಹ್ಮಣ್ಯ ಉಪಾಧ್ಯಾಯ ಮತ್ತು ಪ್ರದೀಪ್ ನಾಯಕ್ ವೇದಿಕೆಯಲ್ಲಿ ಇದ್ದರು. ಯಾವ ಪೂರ್ವವಿದ್ಯಾರ್ಥಿ ವೇದಿಕೆಯಲ್ಲಿ ಕುಳಿತುಕೊಳ್ಳದೆ ಕೆಳಗೆ ಕೂತರು. ತಮ್ಮ ಗುರುಗಳನ್ನು ವೇದಿಕೆಯಲ್ಲಿ ಕುಳ್ಳಿರಿಸಿ ಉನ್ನತ ಪರಂಪರೆಯನ್ನೇ ಹಾಕಿಕೊಟ್ಟರು.
ಭಾವಪೂರ್ಣವಾದ ಗುರುವಂದನೆ: ಭಾಗವಹಿಸಿದ ಸಾವಿರಾರು ವಿದ್ಯಾರ್ಥಿಗಳು ತುಂಬಾ ಧನ್ಯತೆಯನ್ನು ಫೀಲ್ ಮಾಡಿದ ಕ್ಷಣ ಎಂದರೆ ಗುರುವಂದನೆ ಕಾರ್ಯಕ್ರಮ. ಆ ಶಾಲೆಗಾಗಿ ಸರ್ವಸ್ವ ಧಾರೆಯೆರೆದ ನಿವೃತ್ತ ಮತ್ತು ಪ್ರವೃತ್ತ ಶಿಕ್ಷಕರಿಗೆ ನೆರವೇರಿಸಿದ ಗುರುವಂದನಾ ಕಾರ್ಯಕ್ರಮ ಅದು. ಸುಮಾರು 60 ಶಿಕ್ಷಕರು ಈ ವೇದಿಕೆಯಲ್ಲಿ ಗುರುವಂದನೆ ಪಡೆದರು. ಪೂರ್ವ ವಿದ್ಯಾರ್ಥಿಗಳು ತಮ್ಮ ಗುರುಗಳ ಪಾದಮೂಲದಲ್ಲಿ ಕುಳಿತುಕೊಂಡು ಪಾದಪೂಜೆ ಮಾಡಿದರು. ಪಾದಸ್ಪರ್ಶ ಮಾಡಿ ರೋಮಾಂಚನಗೊಂಡರು. ಶಾಲು ಹೊದೆಸಿ, ಫಲಪುಷ್ಪ ನೀಡಿ, ಸ್ಮರಣಿಕೆ ಕೊಟ್ಟು ಸಂಭ್ರಮಿಸಿದರು.
ಇಂದು ಅತ್ತೂರಿನ ಪೂರ್ವ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ತೋರಿದ ಪ್ರೀತಿಯನ್ನು ನೋಡಿ ನಾನು ಮೂಕವಿಸ್ಮಿತ ಆಗಿದ್ದೇನೆ. ಇದು ಅನ್ಯತ್ರ ದುರ್ಲಭವೇ ಆದ ಪ್ರೀತಿ. ಮಧ್ಯಾಹ್ನ ಸುಗ್ರಾಸವಾದ ಭೋಜನ ಇದ್ದರೂ ಪೂರ್ವ ವಿದ್ಯಾರ್ಥಿಗಳು ಊಟವನ್ನು ಮರೆತು ತಮ್ಮ ಶಿಕ್ಷಕರ ಜೊತೆಗೆ ಗ್ರೂಪ್ ಫೋಟೋ, ಸೆಲ್ಫಿಗಳಲ್ಲಿ ಮುಳುಗಿಬಿಟ್ಟರು. ಶಿಕ್ಷಕರೂ ತಮ್ಮ ಶಿಷ್ಯರನ್ನು ತಬ್ಬಿಹಿಡಿದು ಪ್ರೀತಿ ಧಾರೆ ಎರೆದರು. ಶಿಷ್ಯರು ತಮ್ಮ ಗುರುಗಳ ಮಾತುಗಳನ್ನು ಕಿವಿಕೊಟ್ಟು ಆಲಿಸಿದರು.
ಗುರುಗಳ ಸ್ಪರ್ಶಕ್ಕೆ ರೋಮಾಂಚನಗೊಂಡರು. ಹಲವು ಬ್ಯಾಚುಗಳ ವಿದ್ಯಾರ್ಥಿಗಳು ದುಡ್ಡು ಸಂಗ್ರಹವನ್ನು ಮಾಡಿ ಶಾಲೆಗೆ ಹಲವು ಕೊಡುಗೆಗಳನ್ನು ನೀಡಿದರು. ಶಾಲೆಗೆ ಇನ್ನಷ್ಟು ಕೊಡುಗೆಗಳು ದೊರೆಯುವ ಭರವಸೆ ದೊರೆಯಿತು. ಶಾಲೆಗೆ ನಮ್ಮಿಂದ ಏನಾಗಬೇಕು ಸರ್? ಎಂದು ಮುಖ್ಯ ಶಿಕ್ಷಕರನ್ನು ಕೇಳಿ ಮಾಹಿತಿ ಪಡೆದರು. ಶಾಲೆಯ ಉನ್ನತಿಗೆ ಸಂಕಲ್ಪ ತೊಟ್ಟರು.
ಸಿಯಾ ಸಂತೋಷ್ ನಾಯಕ್ ಎಂಬ ಅದ್ಭುತ ಸಂಘಟಕ: ಈ ಶಾಲೆಯ 1998-99ರ ಎಸೆಸೆಲ್ಸಿ ಬ್ಯಾಚಿನ ವಿದ್ಯಾರ್ಥಿ ಮತ್ತು ಈಗ ಉದ್ಯಮಿಯಾಗಿರುವ ಸಿಯಾ ಸಂತೋಷ್ ನಾಯಕ್ ಅವರು ಈ ಇಡೀ ಕನಸಿನ ಕಾರ್ಯಕ್ರಮದ ಸಂಘಟಕರಾಗಿ ನಿಂತವರು. 60 ಬ್ಯಾಚುಗಳ ವಿದ್ಯಾರ್ಥಿಗಳ 60 ವಾಟ್ಸಪ್ ಗುಂಪುಗಳನ್ನು ಒಂದೂವರೆ ವರ್ಷಗಳ ಹಿಂದೆ ರಚನೆ ಮಾಡಿ ನಿರಂತರ ಸಂವಹನ ಮಾಡಿ 1500 ಪೂರ್ವ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಬರುವ ಹಾಗೆ ಮಾಡಿದ್ದು ಸಣ್ಣ ಸಾಧನೆ ಅಲ್ಲವೇ ಅಲ್ಲ. ಇಡೀ ಕಾರ್ಯಕ್ರಮದ ಹಿಂದಿನ ಚಾಲಕ ಶಕ್ತಿ ಅವರು ಎಂದರೆ ಉತ್ಪ್ರೇಕ್ಷೆ ಇಲ್ಲ.
ಅವರನ್ನು ವೇದಿಕೆಯಲ್ಲಿ ಶಿಕ್ಷಕರ ಪರವಾಗಿ ಸನ್ಮಾನ ಮಾಡಿದ್ದು ಅರ್ಥಪೂರ್ಣ ಆಗಿತ್ತು. ಎಲ್ಲ ಕನ್ನಡ ಮಾಧ್ಯಮ ಶಾಲೆಯಲ್ಲಿಯೂ ಇಂತಹ ಒಬ್ಬ ಪೂರ್ವವಿದ್ಯಾರ್ಥಿ ಇರಬೇಕು ಮತ್ತು ಎಲ್ಲ ಕನ್ನಡ ಮಾಧ್ಯಮ ಶಾಲೆಗಳು ಈ ರೀತಿಯ ಕಾರ್ಯಕ್ರಮಗಳನ್ನು ನಡೆಸಬೇಕು ಎಂಬಲ್ಲಿಗೆ ಈ ಪುನರ್ಮಿಲನ ಕಾರ್ಯಕ್ರಮವು ತನ್ನ ಉದ್ದೇಶವನ್ನು ಪೂರ್ತಿ ಮಾಡಿತು. ನಾಡಿನ ನೂರಾರು ಕನ್ನಡ ಮಾಧ್ಯಮ ಶಾಲೆಗಳು ಸ್ಫೂರ್ತಿ ಪಡೆಯಬೇಕಾದ ಕಾರ್ಯಕ್ರಮ ಇದು.
-ರಾಜೇಂದ್ರ ಭಟ್ ಕೆ.