30 ವರ್ಷಗಳ ಹಿಂದೆ ಮದುವೆಯಾಗಿ ಉತ್ತರ ಪ್ರದೇಶದ ಒಂದು ಹಳ್ಳಿಯಿಂದ ಬುಲಂದ ಶಹರ್ ಎಂಬ ನಗರಕ್ಕೆ ಬಂದಾಗ ಆಕೆಯ ಕೈಯ್ಯಲ್ಲಿ ಒಂದು ರೂಪಾಯಿ ಇರಲಿಲ್ಲ. ಎರಡು ವರ್ಷ ಆಗುವಾಗ ಎರಡು ಪುಟ್ಟ ಮಕ್ಕಳ ಆಕೆಯ ಮಡಿಲನ್ನು ಸೇರಿದ್ದವು. ಆದರೆ 1995ರಲ್ಲಿ ಗಂಡನಿಗೆ ತೀವ್ರವಾದ ಮಾನಸಿಕ ಕಾಯಿಲೆಯು ಕಾಡಿದಾಗ ಆಕೆಯು ನಿಜವಾಗಿಯೂ ಕಂಗೆಟ್ಟರು!
ಸಂಬಂಧಿಕರು, ಗಂಡನ ಮನೆಯವರು ಯಾರೂ ಆಕೆಯ ನೆರವಿಗೆ ನಿಲ್ಲಲಿಲ್ಲ. ಮಕ್ಕಳು ಹಸಿವೆಯಿಂದ ಅಳುತ್ತಿದ್ದರೆ ಅಮ್ಮನ ಕರುಳು ಕಿತ್ತು ಬರುತ್ತಿತ್ತು. ಆದರೆ ಏನಾದರೂ ಮಾಡಿ ಬದುಕು ಕಟ್ಟಿ ಕೊಳ್ಳಬೇಕು, ಸ್ವಂತ ಕಾಲ ಮೇಲೆ ನಿಲ್ಲಬೇಕು, ತನಗೆ ಅಪಮಾನ ಮಾಡಿದವರ ಎದುರು ತಲೆ ಎತ್ತಿ ಓಡಾಡಬೇಕು ಎನ್ನುವ ಬಯಕೆ ಹೆಮ್ಮರವಾಗಿ ಬೆಳೆದಿತ್ತು. ಆಕೆ ಕೃಷ್ಣಾ ಯಾದವ್, ಸಾವಿರಾರು ಸವಾಲುಗಳನ್ನು ಗೆದ್ದ ಗಟ್ಟಿಗಿತ್ತಿ ಮಹಿಳೆ! ಬದುಕಿದರೆ ಆಕೆಯ ಹಾಗೆ ಬದುಕಬೇಕು.
ಆಕೆಗೆ ಉಪ್ಪಿನಕಾಯಿ ಮಾಡಲು ಮಾತ್ರ ಗೊತ್ತಿತ್ತು: ಕೃಷ್ಣಾ ಯಾದವ್ ಅವರಿಗೆ ರುಚಿ ರುಚಿಯಾಗಿ ಉಪ್ಪಿನಕಾಯಿ ಮಾತ್ರ ಮಾಡಲು ಗೊತ್ತಿತ್ತು! ಮನೆಯಲ್ಲಿಯೆ ಉಪ್ಪಿನಕಾಯಿ ತಯಾರಿಸಿ ಗಾಜಿನ ಭರಣಿಗಳಲ್ಲಿ ತುಂಬಿಸಿ ಮನೆ ಮನೆಗಳಿಗೆ ಹೋಗಿ ಅದನ್ನು ಮಾರಾಟ ಮಾಡಲು ಆರಂಭ ಮಾಡಿದರು. ಆದರೆ ತುತ್ತಿನ ಚೀಲವು ತುಂಬಲಿಲ್ಲ! ಅಪಮಾನವು ನಿಲ್ಲಲಿಲ್ಲ. ಶ್ರೀಮಂತರು ಆಕೆಯನ್ನು ಗೇಟಿನ ಒಳಗೆ ಬಿಡಲಿಲ್ಲ. ಉಪವಾಸ ಮತ್ತು ಬಡತನಗಳು ಅವರಿಗೆ ಉತ್ತಮ ಪಾಠವನ್ನು ಕಲಿಸಿದವು.
ಒಂದು ದಿನ ತನ್ನ ಬದುಕನ್ನು ತಾನೇ ರೂಪಿಸಿಕೊಳ್ಳಬೇಕು ಎನ್ನುವ ತೀವ್ರವಾದ ಹಂಬಲದಿಂದ ಗಟ್ಟಿ ನಿರ್ಧಾರಕ್ಕೆ ಬಂದರು. ರಿಸ್ಕ್ ಬಗ್ಗೆ ಅವರು ಯೋಚಿಸಲೇ ಇಲ್ಲ. ಗಂಡ ಮತ್ತು ಪುಟ್ಟ ಮಕ್ಕಳನ್ನು ಒಪ್ಪಿಸಿ ಅವರನ್ನು ಕರೆದುಕೊಂಡು ಆಕೆ ದೆಹಲಿಗೆ ಬಂದರು. 3,500 ರೂ. ಬಂಡವಾಳ ಹೊಂದಿಸಲು ಭಾರೀ ಕಷ್ಟಪಟ್ಟರು. ಅಡುಗೆ ಕೆಲಸ ಕಲಿತರೂ ಬದುಕಿನ ಬಂಡಿ ಓಡಲಿಲ್ಲ. ಮನೆಯಲ್ಲೇ ಉಪ್ಪಿನಕಾಯಿಯನ್ನು ತಯಾರಿಸಿ ಮಾರಾಟ ಮಾಡಲು ಒಂದು ಸಣ್ಣ ಬಂಡವಾಳ ಬೇಕಾಗಿತ್ತು. ಹಾಗೋ ಹೀಗೋ 3,500 ರೂಪಾಯಿ ಬಂಡವಾಳ ಹೊಂದಿಸಿಕೊಳ್ಳಲು ಬಹಳ ಕಷ್ಟಪಟ್ಟರು. ಡೆಲ್ಲಿಯ ಯಾವ ಬ್ಯಾಂಕ್ ಕೂಡ ಅವರಿಗೆ ಸಾಲ ಕೊಡಲು ಮುಂದೆ ಬರಲಿಲ್ಲ. ಮನೆಯಲ್ಲಿಯೇ ತಯಾರಿಸಿದ ರುಚಿಯಾದ ಉಪ್ಪಿನಕಾಯಿಯನ್ನು ಈಗ ಚೇತರಿಸಿಕೊಂಡ ಗಂಡ ತಳ್ಳು ಗಾಡಿಯಲ್ಲಿ ಪೇಟೆಗೆ ತಂದು ಮಾರಾಟ ಮಾಡಲು ಆರಂಭ ಮಾಡಿದರು. ಆರಂಭದಲ್ಲಿ ಅಲ್ಪ ಸ್ವಲ್ಪ ಲಾಭ ಬರತೊಡಗಿತು.
ಒಂದು ಹಿಡಿಯಷ್ಟು ಭರವಸೆ ಮತ್ತು ಒಂದು ಟನ್ ಆತ್ಮವಿಶ್ವಾಸ. ಕೈಗೆ ಸ್ವಲ್ಪ ದುಡ್ಡು ಬಂದಂತೆ ಅವರಲ್ಲಿ ಒಂದು ಹಿಡಿಯಷ್ಟು ಭರವಸೆ ಮೂಡಿತು. ಗಂಡನ ಆರೋಗ್ಯ ಕೂಡ ಈಗ ಸುಧಾರಣೆ ಆಗಿತ್ತು. ಈ ಬಾರಿ ಕೃಷ್ಣಾ ಯಾದವ್ ಮತ್ತೊಂದು ಹೊಸ ಸಾಹಸಕ್ಕೆ ಇಳಿದುಬಿಟ್ಟರು. 2011ರಲ್ಲಿ ‘ ಶ್ರೀ ಕೃಷ್ಣಾ ಪಿಕ್ಕಲ್ಸ್’ ಎಂಬ ಹೆಸರಿನ ಉಪ್ಪಿನಕಾಯಿಯನ್ನು ತಯಾರಿಸುವ ಕಂಪನಿಯು ಆರಂಭ ಆದದ್ದು ಹಾಗೆ. ಮುಂದೆ ತನ್ನ ಹಾಗೆ ಬವಣೆಯನ್ನು ಪಡುತ್ತಿರುವ 400ಕ್ಕಿಂತ ಅಧಿಕ ಮಹಿಳೆಯರಿಗೆ ಆಕೆಯು ಉದ್ಯೋಗ ನೀಡಿದರು. ಅವರಿಗೆ ಉದ್ಯೋಗದ ಭದ್ರತೆಯನ್ನು ನೀಡಿದರು. ಉಪ್ಪಿನಕಾಯಿ ಮಾಡುವ ತರಬೇತು ನೀಡಿದರು. ಅವರನ್ನು ನೌಕರರ ಹಾಗೆ ನೋಡದೆ ತನ್ನ ಮನೆಯವರ ಹಾಗೆ ನೋಡಿಕೊಂಡರು. ಎಲ್ಲರೂ ಉತ್ಸಾಹದಿಂದ ಗಡಿಯಾರ ನೋಡದೆ ಕೆಲಸ ಮಾಡಿದರು. ಕೆಲವೇ ವರ್ಷಗಳಲ್ಲಿ ಕಂಪೆನಿಯು ಬೃಹತ್ತಾಗಿ ಬೆಳೆಯಿತು.
ಗ್ರಾಹಕರ ನಂಬಿಕೆ ಪಡೆಯುವುದು ಸುಲಭ ಅಲ್ಲ. ಉಪ್ಪಿನಕಾಯಿ ಹೆಚ್ಚು ರುಚಿ ಇದ್ದ ಕಾರಣ ಮತ್ತು ಹೆಚ್ಚು ಕಾಲ ಕೆಡದ ಹಾಗೆ ಸಂರಕ್ಷಣೆ ಮಾಡಿದ ಕಾರಣ ಅದು ಭಾರೀ ಡಿಮ್ಯಾಂಡನ್ನು ಪಡೆಯಿತು. ಅವರು ಉಪ್ಪಿನಕಾಯಿಗೆ ಯಾವುದೇ ಕೆಮಿಕಲ್ ಸೇರಿಸುತ್ತಾ ಇರಲಿಲ್ಲ. ದೆಹಲಿಯ ಎಲ್ಲ ಹಾಸ್ಟೆಲುಗಳು ಅವರಿಗೆ ದೊಡ್ಡ ಆರ್ಡರ್ ಕೊಟ್ಟವು. ಗ್ರಾಹಕರಿಗೆ ಏನು ಬೇಕು ಎನ್ನುವುದು ಅವರಿಗೆ ಸರಿಯಾಗಿ ಗೊತ್ತಿತ್ತು. ನಿರಂತರ ದುಡಿಮೆ, ಅನ್ವೇಷಣಾ ಪ್ರವೃತ್ತಿ, ಮಾರ್ಕೆಟಿಂಗ್ ನಾಡಿಮಿಡಿತದ ಅರಿವು, ಕ್ವಾಲಿಟಿಯ ಬಗ್ಗೆ ಕಾಂಪ್ರಮೈಸ್ ಇಲ್ಲದ ಧೋರಣೆ, ಕಠಿಣ ನಿರ್ಧಾರಗಳು, ಆರ್ಥಿಕ ಶಿಸ್ತು…ಇವುಗಳು ಅವರ ಕೈ ಹಿಡಿದವು. ಕೃಷ್ಣಾ ಅವರ ಹೊಸ ಬ್ರಾಂಡ್ ನಿರ್ಮಾಣ ಮಾಡಿದವು. ಆಕೆ ಹೆಚ್ಚು ಓದಿದವರು ಅಲ್ಲ. ಆದರೆ ವ್ಯಾವಹಾರಿಕ ಜ್ಞಾನ ಇತ್ತು. ಅದಕ್ಕಿಂತ ಹೆಚ್ಚಾಗಿ ಪ್ರಾಮಾಣಿಕತೆ ಇತ್ತು. ಕೆಲವೇ ವರ್ಷಗಳಲ್ಲಿ ಕೃಷ್ಣಾ ಉಪ್ಪಿನಕಾಯಿ ಕಂಪೆನಿಯು ರಪ್ತು ಉದ್ಯಮಕ್ಕೆ ಇಳಿಯಿತು ಮತ್ತು ಕೋಟಿ ಕೋಟಿ ದುಡ್ಡು ಮಾಡಿತು.
ಇಂದು ಅವರ ಕಂಪೆನಿಯು ಆರಂಭವಾಗಿ 12 ವರ್ಷ ಮಾತ್ರ ಆಗಿದೆ: ಈಗ ಅವರ ಕಂಪನಿಯು 152 ವಿಧವಾದ ರುಚಿ ರುಚಿಯಾದ ಉಪ್ಪಿನಕಾಯಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದೆ. ವಿದೇಶಗಳಲ್ಲಿಯೂ ಭಾರೀ ಡಿಮ್ಯಾಂಡ್ ಇದೆ. ಹಣ್ಣುಗಳ ಜ್ಯೂಸ್, ಸ್ಕ್ವಾಷ್, ಸೂಪ್, ಜಾಮ್ ಇವುಗಳನ್ನು ಕೂಡಾ ಅವರ ಕಂಪೆನಿಯು ತಯಾರಿಸುತ್ತಿದೆ. ಕೇವಲ 3,500 ರೂಪಾಯಿ ಬಂಡವಾಳದಿಂದ ಆರಂಭವಾದ ಉದ್ಯಮವು ಇದೀಗ ಕೋಟಿ ಕೋಟಿ ಲಾಭ ತರುತ್ತಿದೆ.
ಕೃಷ್ಣಾ ಯಾದವ್ ಅವರಿಗೆ ರಾಷ್ಟ್ರಪತಿ ಮತ್ತು ಪ್ರಧಾನಿಯಿಂದ ನಾರಿ ಶಕ್ತಿ ಮತ್ತು ಉದ್ಯಮ ರತ್ನ ಎಂಬ ಎರಡು ಬಹು ಶ್ರೇಷ್ಟವಾದ ಪ್ರಶಸ್ತಿಗಳು ದೊರೆತಿವೆ. ಕಠಿಣ ದುಡಿಮೆಯ ಮೂಲಕ ಬದುಕನ್ನು ರೂಪಿಸಲು ಹೊರಡುವ ಸಾವಿರಾರು ಮಹಿಳೆಯರಿಗೆ ಕೃಷ್ಣಾ ಯಾದವ್ ಭರವಸೆಯ ಬೆಳಕನ್ನು ತೋರಿದ್ದಾರೆ.
-ರಾಜೇಂದ್ರ ಭಟ್ ಕೆ