Home ಅಂಕಣ ಎಸೆಸೆಲ್ಸಿ ಪರೀಕ್ಷೆ – ಫಿನಿಷಿಂಗ್ ಟಚಸ್ – ಭಾಗ 3

ಎಸೆಸೆಲ್ಸಿ ಪರೀಕ್ಷೆ – ಫಿನಿಷಿಂಗ್ ಟಚಸ್ – ಭಾಗ 3

454
0

ವಿಜ್ಞಾನದಲ್ಲಿ ಖುಷಿ ಕೊಡುವ ಅಪ್ಲಿಕೇಶನ್ ಪ್ರಶ್ನೆಗಳು:

ವಿಜ್ಞಾನದ ಪ್ರಶ್ನೆಪತ್ರಿಕೆಯಲ್ಲಿ ನಾಲ್ಕು ವಿಧವಾದ ಪ್ರಶ್ನೆಗಳು ಇರುತ್ತವೆ. Knowledge based, Understanding based, Skill based and Application based questions.

ಅದರಲ್ಲಿ 12-14 ಅಂಕದ ಪ್ರಶ್ನೆಗಳು ಅಪ್ಲಿಕೇಶನ್ ಅಂದರೆ ಅನ್ವಯ ಆಧಾರಿತ ಪ್ರಶ್ನೆಗಳು ಆಗಿರುತ್ತವೆ. ಈ ಪ್ರಶ್ನೆಗಳು ನೀವೆಲ್ಲ ತಿಳಿದುಕೊಂಡ ಹಾಗೆ ಪಠ್ಯಪುಸ್ತಕದ ಹೊರಗಿನ ಪ್ರಶ್ನೆಗಳು ಅಲ್ಲವೇ ಅಲ್ಲ! ಪಠ್ಯಪುಸ್ತಕದ ಜ್ಞಾನವನ್ನು ನಿಮ್ಮ ಜೀವನಕ್ಕೆ ಅನ್ವಯ ಮಾಡಿಕೊಂಡ ಪ್ರಶ್ನೆಗಳು ಇವು. ಖಂಡಿತವಾಗಿ ಇವು ಕಠಿಣ ಪ್ರಶ್ನೆಗಳು ಅಲ್ಲ. ಸ್ವಲ್ಪ ಹೊತ್ತು ಯೋಚನೆ ಮಾಡಿದರೆ ಉತ್ತರ ಖಂಡಿತವಾಗಿ ಹೊಳೆಯುತ್ತದೆ. ಪಠ್ಯ ಪುಸ್ತಕದ ಯಾವುದೋ ಒಂದು ಪರಿಕಲ್ಪನೆಗೆ (Concept) ಅದು ಕನೆಕ್ಟ್ ಆಯ್ತು ಅಂದರೆ ಉತ್ತರವು ತನ್ನಿಂದ ತಾನೇ ಹೊಳೆಯುತ್ತದೆ. ಸ್ವಲ್ಪ ಕೂಲ್ ಆಗಿ ನೀವು ಯೋಚನೆ ಮಾಡಬೇಕು ಅಷ್ಟೇ!

ಈ ಪ್ರಶ್ನೆಗಳನ್ನು ಇದೇ ಪಾಠದಿಂದ ಬರುತ್ತವೆ ಎಂದು ಗೆಸ್ ಮಾಡಲು ಸಾಧ್ಯವೇ ಇಲ್ಲ.

ಪ್ರತೀ ವರ್ಷವೂ ಈ 12-14 ಅಂಕದ ಅನ್ವಯ ಪ್ರಶ್ನೆಗಳು ಹೊಸದಾಗಿ ಬರುವ ಕಾರಣ ಪ್ರಶ್ನೆಗಳನ್ನು ಗೆಸ್ ಮಾಡುವುದು ಕಷ್ಟವೇ ಹೌದು. ಆದರೆ ನಿಮಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಕೆಲವು ಅನ್ವಯ ಆಧಾರಿತ ಮಾದರಿ ಪ್ರಶ್ನೆಗಳನ್ನು ಇಲ್ಲಿ ಕೊಡುತ್ತಿದ್ದೇನೆ. ಅವುಗಳ ಉತ್ತರಗಳನ್ನು ನಿಮ್ಮ ಅಧ್ಯಾಪಕರ ಜೊತೆ ಚರ್ಚೆ ಮಾಡಿ.

ಮಾದರಿ ಅನ್ವಯವಾದ ಆಧಾರಿತ ವಿಜ್ಞಾನದ ಪ್ರಶ್ನೆಗಳು:
1) ನಿಮಗೊಂದು ಡೈನಮೋ ಕೊಡಲಾಗಿದೆ. ಅದರಲ್ಲಿ ಹೆಚ್ಚು ವಿದ್ಯುತ್ ಪ್ರವಾಹ ಪಡೆಯಲು ಯಾವ ಮಾರ್ಪಾಡು ಮಾಡಿಕೊಳ್ಳುತ್ತೀರಿ?

2) ಸರಕಾರ ಎಸಿ ಮತ್ತು ಕೂಲರ್ ಬಳಕೆ ಕಡಿಮೆ ಮಾಡಲು ವಿನಂತಿ ಮಾಡ್ತಾ ಇದೆ. ಯಾಕೆ?

3) ಸರಕಾರ ಗೋಬರ್ ಗ್ಯಾಸ್ ಸಂಪರ್ಕ ಮಾಡುವ ರೈತರಿಗೆ ಸಬ್ಸಿಡಿ ಕೊಡಲು ಮುಂದಾಗಿದೆ. ವೈಜ್ಞಾನಿಕ ಕಾರಣ ಕೊಡಿ.

4) ಒಂದು ಊರಿನಲ್ಲಿ ಇತ್ತೀಚೆಗೆ ಮಳೆಯ ನೀರನ್ನು ಬಾಲ್ದಿಯಲ್ಲಿ ಸಂಗ್ರಹ ಮಾಡಿದಾಗ ಅದರ ಮೇಲೆ ಒಂದು ಕಂದು ಬಣ್ಣದ ಪದರ ಕಂಡುಬಂದಿತು? ಅದಕ್ಕೆ ಕಾರಣ ಏನು?

4) ಒಂದು ದ್ರಾವಣದ pH ಮಟ್ಟ 10 ಬಂದರೆ ಅದು ಆಮ್ಲವ ಅಥವ ಪ್ರತ್ಯಾಮ್ಲವ?

5) ಸರಕಾರವು ತಲೆಯ ಹಿಂಭಾಗವನ್ನು ಮುಚ್ಚುವ ಹೆಲ್ಮೆಟನ್ನು ಯಾಕೆ ಕಡ್ಡಾಯ ಮಾಡ್ತಾ ಇದೆ?

6) ಒಬ್ಬ ತಾಯಿ ಸತತ ಮೂರನೇ ಹೆಣ್ಣು ಮಗುವಿಗೆ ಜನ್ಮ ಕೊಟ್ಟಾಗ ಎಲ್ಲರೂ ಆಕೆಯ ಮೇಲೆ ಆರೋಪ ಮಾಡ್ತಾರೆ. ಅದಕ್ಕೆ ಆಕೆ ಹೇಳುತ್ತಾರೆ ಇದಕ್ಕೆ ನಾನು ಕಾರಣ ಅಲ್ಲ. ಅದಕ್ಕೆ ಕಾರಣ ನನ್ನ ಗಂಡ ಎಂದು. ಅದನ್ನು ಹೇಗೆ ಸಮರ್ಥನೆ ಮಾಡುತ್ತೀರಿ?

7) ಒಬ್ಬ ಹುಡುಗ 16 ವರ್ಷ ಪ್ರಾಯಕ್ಕೆ ಬಂದರೂ ಪುರುಷ ಲಕ್ಷಣ ಕಂಡು ಬರುತ್ತ ಇಲ್ಲ. ಅದಕ್ಕೆ ಯಾವ ಹಾರ್ಮೋನ್ ಕಾರಣ ಆಗಿರುತ್ತದೆ?

8) ಒಬ್ಬ ವ್ಯಕ್ತಿ ಪದೇ ಪದೇ ಜ್ವರ ಮತ್ತು ಗಂಟು ನೋವಿಗೆ ಒಳಗಾಗುತ್ತಾನೆ. ಅದಕ್ಕೆ ವೈದ್ಯರು ಔಷಧಿ ಕೊಟ್ಟು ಪಪ್ಪಾಯಿ ಹಣ್ಣು ತಿನ್ನಲು ಸಲಹೆ ಕೊಡುತ್ತಾರೆ. ಹಾಗಿದ್ದರೆ ಆ ಜ್ವರ ಯಾವುದು? ಪಪ್ಪಾಯಿ ಹಣ್ಣು ತಿನ್ನಲು ಹೇಳಿದ್ದು ಯಾಕೆ?

8) ಒಬ್ಬ ವಿಜ್ಞಾನದ ವಿದ್ಯಾರ್ಥಿಯಾಗಿ ಪರಿಸರ ಸಂರಕ್ಷಣೆ ಮಾಡಲು ನೀನು ಯಾವ ಎರಡು ಸಂಕಲ್ಪ ತೆಗೆದುಕೊಳ್ಳುತ್ತೀ?

9) ತಾಮ್ರದ ವಿದ್ಯುತ್ ವಿಭಜನೆ ಮಾಡುವಾಗ ಕ್ಯಾಥೋಡ್ ರಾಶಿಯು ಹೆಚ್ಚಾಗುವುದು ಯಾಕೆ?

10) ಒಬ್ಬ ದಂತವೈದ್ಯರು ಒಬ್ಬ ವ್ಯಕ್ತಿಯ ಹಲ್ಲುಗಳನ್ನು ಪರೀಕ್ಷೆ ಮಾಡಿ ಹಲ್ಲುಗಳು ಕೊರೆದು ಹೋಗುತ್ತಿರುವ ಬಗ್ಗೆ ಹೇಳುತ್ತಾರೆ. ಅದಕ್ಕೆ ಯಾವ ಅಂಶ ಕಾರಣ ಆಗಿರುತ್ತದೆ?

11) ಭಾಷಣದ ವೇದಿಕೆಯ ಮೇಲೆ ಹೋಗಿ ಮಾತಾಡಲು ನಿಂತಾಗ ಒಬ್ಬನಿಗೆ ಆತಂಕವು ಆರಂಭ ಆಗುತ್ತದೆ. ಎದೆ ಬಡಿತ ಹೆಚ್ಚುತ್ತದೆ. ಇದಕ್ಕೆ ಯಾವ ಹಾರ್ಮೋನ್ ಕಾರಣ ಆಗಿರುತ್ತದೆ?

12) ಒಂದು ಪ್ಲಾಸ್ಟಿಕ್ ಕೊಡಪಾನವನ್ನು ತುಂಡು ಮಾಡಿ ಒಂದು ಹೂವಿನ ಕುಂಡ ಮಾಡಿದರೆ ಅದನ್ನು ವಿಜ್ಞಾನದ ಭಾಷೆಯಲ್ಲಿ ಏನು ಹೇಳುತ್ತಾರೆ?

13) ನಿಮ್ಮ ಊರಿನಲ್ಲಿ ಒಂದು ಉಷ್ಣ ವಿದ್ಯುತ್ ಸ್ಥಾವರ ನಿರ್ಮಿಸಲು ಸಮೀಕ್ಷೆ ಆರಂಭ ಆಗಿದೆ. ನೀವು ವಿಜ್ಞಾನದ ವಿದ್ಯಾರ್ಥಿ ಆಗಿ ಸಮರ್ಥನೆ ಮಾಡುತ್ತಿರೋ ಅಥವಾ ಪ್ರತಿಭಟನೆ ಮಾಡುತ್ತೀರೋ? ಎರಡು ಕಾರಣ ನೀಡಿ.

14) ಬಲ್ಬಿನ ಒಳಗೆ ಟಂಗ್ಸ್ಟನ್ ತಂತುವನ್ನು ಯಾಕೆ ಸುರುಳಿ ಮಾಡಿ ಇಟ್ಟಿದ್ದಾರೆ? ಇಸ್ತ್ರೀ ಪೆಟ್ಟಿಗೆಯ ಒಳಗೆ ಯಾಕೆ ನೈಕ್ರೊಮ್ ತಂತುವನ್ನು ಯಾಕೆ ಝಿಗಝಾಗ್ ಮಾಡಿ ಇಟ್ಟಿದ್ದಾರೆ?

15) ಸಿನಿಮ ಸ್ಟಾರ್ಟ್ ಆದ ನಂತರ ಕತ್ತಲೆಯ ಥಿಯೇಟರ್ ಒಳಗೆ ನೀವು ಹೋದಾಗ ಸ್ವಲ್ಪ ಹೊತ್ತು ನಿಮಗೆ ಏನೂ ಕಾಣುವುದಿಲ್ಲ. ಯಾಕೆ?

16) ಕಾಮನಬಿಲ್ಲು ಮಳೆಗಾಲದಲ್ಲಿ ಮಾತ್ರ ಯಾಕೆ ಕಂಡುಬರುತ್ತದೆ?

17) ಸೂರ್ಯ ಹುಟ್ಟುವಾಗ ಮತ್ತು ಮುಳುಗುವಾಗ ಯಾಕೆ ಕೆಂಪಾಗಿ ಕಂಡು ಬರುತ್ತಾನೆ?

18) ನಿಮ್ಮ ಕಣ್ಣಲ್ಲಿ ವಸ್ತುವಿನ ಪ್ರತಿಬಿಂಬವು ರೆಟಿನಾ ಪರದೆಯ ಹಿಂಭಾಗದಲ್ಲಿ ಪತನವಾದರೆ ಯಾವ ಮಸೂರ ಇರುವ ಕನ್ನಡಕ ವೈದ್ಯರು ಸಲಹೆ ಕೊಡುತ್ತಾರೆ?

19) ಆರ್ಗಾನ್ ಮತ್ತು ನಿಯಾನ್ ಇವುಗಳನ್ನು ಜಡಾನಿಲಗಳ ಗುಂಪಿನಲ್ಲಿ ಯಾಕೆ ಇರಿಸಿದ್ದಾರೆ?

20) ಬಾಲ್ ಪೆನ್ ಬದಲು ಇಂಕ್ ಪೆನ್ ಬಳಸಲು ಒಬ್ಬ ಪರಿಸರ ಪ್ರೇಮಿ ವಿದ್ಯಾರ್ಥಿ ನಿರ್ಧಾರ ಮಾಡುತ್ತಾನೆ. ಅದರಿಂದ ಪರಿಸರಕ್ಕೆ ಏನು ಲಾಭ ಇದೆ?

21) ಸಮುದ್ರ ತೀರದಲ್ಲಿ ವಾಸವಾಗಿ ಇರುವ ವ್ಯಕ್ತಿಗಳಿಗೆ ಯಾಕೆ ಗಳಗಂಡ ಕಾಯಿಲೆ ಬರುವುದಿಲ್ಲ?

22) ಅಣೆಕಟ್ಟು ನಿರ್ಮಾಣ ಮಾಡುವುದರಿಂದ ಪರಿಸರಕ್ಕೆ ಯಾವ ತೊಂದರೆ ಆಗುತ್ತದೆ?

23) ಚಕ್ಕುಲಿ, ಚಿಪ್ಸ್ ಪ್ಯಾಕೆಟ್ ಮಾಡುವಾಗ ಅದರ ಒಳಗೆ ಯಾಕೆ ನೈಟ್ರೋಜನ್ ತುಂಬಿಸುತ್ತಾರೆ?

24) ಗಾಳಿಯ ರಭಸ ಕಡಿಮೆ ಇರುವ ಜಾಗದಲ್ಲಿ ಪವನ ವಿದ್ಯುತ್ ಸ್ಥಾವರu ಯಾಕೆ ನಿರ್ಮಿಸಲು ಸಾಧ್ಯ ಇಲ್ಲ?

25) ವಜ್ರವು ಹೊಳೆಯಲು ಅದರ ಯಾವ ಗುಣ ಕಾರಣ ಆಗಿರುತ್ತದೆ?

26) ಹುಳಿತೇಗು, ತಲೆ ಸುತ್ತುವುದು, ವಿಪರೀತ ಬಾಯಾರಿಕೆ ಇರುವ ಒಬ್ಬ ವ್ಯಕ್ತಿಗೆ ವೈದ್ಯರು ಆಮ್ಲ ಶಾಮಕ ಮಾತ್ರೆ ಕೊಟ್ಟಿದ್ದಾರೆ. ಯಾಕೆ?

27) ಇಸ್ತ್ರೀ ಪೆಟ್ಟಿಗೆಯ ಒಳಗೆ ನೈಕ್ರೋಮ್ ತಂತುವನ್ನು ಯಾಕೆ ಬಳಸುತ್ತಾರೆ?

28) ಟಿವಿಯ ಮದರ್ ಬೋರ್ಡ್ ಹಾಳಾದರೆ ನಿರ್ವಹಣೆ ಮಾಡುವಾಗ ಎಚ್ಚರವಹಿಸಬೇಕು. ಯಾಕೆ?

29) ಪದೇ ಪದೇ ಮೂತ್ರ ವಿಸರ್ಜನೆ, ವಿಪರೀತ ಬೆವರುವುದು, ಬಾಯಿ ಒಣಗುವುದು ಈ ಲಕ್ಷಣ ಇರುವ ವ್ಯಕ್ತಿಯನ್ನು ವೈದ್ಯರು ಯಾವ ಕಾಯಿಲೆಗೆ ಸಂಬಂಧಪಟ್ಟು ಪರೀಕ್ಷೆ ಮಾಡುತ್ತಾರೆ. ಅದು ಯಾವ ಹಾರ್ಮೋನ್ ಕೊರತೆಯಿಂದ ಉಂಟಾಗಿರಬಹುದು?

30) ಟ್ರಾಫಿಕ್ ಸಿಗ್ನಲಗಳಲ್ಲಿ ಯಾಕೆ ದೂರಕ್ಕೆ ಕಾಣಲು ರೆಡ್ ಸಿಗ್ನಲ್ ಉಪಯೋಗ ಮಾಡುತ್ತಾರೆ?

ನಿಮ್ಮ ಅಧ್ಯಾಪಕರ ಜೊತೆ ಕೂತು ಇನ್ನಷ್ಟು ಇಂತಹ ಅನ್ವಯ ಪ್ರಶ್ನೆಗಳನ್ನು ಆರಿಸಿ ಗೈಡ್ ಮಾಡಲು ಹೇಳಿ. ಈ ಪ್ರಶ್ನೆಗಳಿಗೆ ನೀವು ವೈಜ್ಞಾನಿಕ ಕಾರಣ ಕೊಡಬೇಕು. ಸರಿಯಾಗಿ ಯೋಚನೆ ಮಾಡಿದರೆ ಅವುಗಳು ಖುಷಿ ಕೊಡುವ ಪ್ರಶ್ನೆಗಳು. ಇವುಗಳು ಪರೀಕ್ಷೆಗೆ ಮಾತ್ರವಲ್ಲ ನಿಮ್ಮ ಜೀವನಕ್ಕೂ ಉಪಯೋಗ ಆಗುತ್ತವೆ.

(ನಾಳೆಗೆ ಮುಂದುವರೆಯುತ್ತದೆ)

ರಾಜೇಂದ್ರ ಭಟ್ ಕೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.