Sunday, November 24, 2024
Sunday, November 24, 2024

ಯುಗದ ಆದಿ ಯುಗಾದಿ – ನೂತನ ವರ್ಷದ ಬುನಾದಿ

ಯುಗದ ಆದಿ ಯುಗಾದಿ – ನೂತನ ವರ್ಷದ ಬುನಾದಿ

Date:

ಮ್ಮೆಲ್ಲ ಓದುಗ ಪ್ರಭುಗಳಿಗೆ ಚಾಂದ್ರಮಾನ ಯುಗಾದಿ ಹಬ್ಬದ ಶುಭಾಶಯಗಳು. ನಿಜವಾದ ಹಿಂದೂಗಳು ತಮ್ಮ ವರ್ಷದ ಮೊದಲ ದಿನವಾಗಿ ಆಚರಣೆ ಮಾಡುವ ದಿನ ಇದು. ಅಂತೆಯೇ ಇಂದು ಒಂದು ಸಂವತ್ಸರ ಕಳೆದು ಹೋಗಿ ಶೋಭಕೃತ್ ಸಂವತ್ಸರ ಹೊಸ್ತಿಲು ದಾಟಿ ಬಂದಿದೆ.

ಪ್ರಕೃತಿಯ ದೃಷ್ಟಿಯಿಂದಲೂ ಯುಗಾದಿಯೆ ವರ್ಷದ ಆರಂಭ: ಬ್ರಿಟಿಷ್ ಕ್ಯಾಲೆಂಡರ್ ಪ್ರಕಾರ ನಾವು ಜನವರಿ ಒಂದರಂದು ಆಚರಿಸುವ ಹೊಸ ಹಬ್ಬವು ಪ್ರಕೃತಿಗೆ ಪೂರಕವಿಲ್ಲ. ಆಗ ತೀವ್ರವಾದ ಶಿಶಿರದ ದಟ್ಟ ಪ್ರಭಾವದಿಂದ ಎಲೆಗಳೆಲ್ಲ ಉದುರಿಹೋಗಿ ಗಿಡ ಮರಗಳು ಬೋಳಾಗಿರುತ್ತವೆ. ಆ ಶೀತ ವಾತಾವರಣ ನಮ್ಮ ಆರೋಗ್ಯದ ಮೇಲೆ ಕೂಡ ದುಷ್ಪರಿಣಾಮ ಉಂಟು ಮಾಡುತ್ತದೆ.

ಆದರೆ ಯುಗಾದಿಯ ಹೊತ್ತಲ್ಲಿ ವಸಂತ ಋತು ಪ್ರವೇಶ ಮಾಡುವ ಕಾರಣ ಪ್ರಕೃತಿ ಮಾತೆ ಹೊಸ ಉತ್ಸಾಹದ ಕಳೆಯನ್ನು ಹೊತ್ತು ಬಂದಿರುತ್ತಾಳೆ. ಗಿಡ ಮರಗಳು ಪ್ರಫುಲ್ಲಿತವಾಗಿ ಅರಳಿರುತ್ತವೆ. ಹೂವುಗಳನ್ನು ಹೊತ್ತ ಗಿಡ, ಮರ, ಬಳ್ಳಿಗಳನ್ನು ನೋಡುವುದೇ ಒಂದು ಅದ್ಭುತ ಅನುಭೂತಿ. ನದಿ, ತೊರೆಗಳು ನಿಧಾನವಾಗಿ ಸಂತಸದಿಂದ ಹರಿಯುತ್ತವೆ. ಸೂರ್ಯನ ಕಿರಣಗಳು ಮೆತ್ತಗಾಗುತ್ತವೆ. ಆಕಾಶ ಶುಭ್ರವಾಗುತ್ತದೆ. ಆದ್ದರಿಂದ ಪ್ರಕೃತಿಯ ಮಡಿಲಲ್ಲಿ ಬೆಳೆದ ನಮಗೆ ಯುಗಾದಿಯೇ ವರ್ಷದ ಆರಂಭ ಅಂದರೆ ಹೆಚ್ಚು ಸರಿ!

ಬ್ರಹ್ಮ ಸೃಷ್ಟಿಯನ್ನು ಆರಂಭಿಸಿದ ದಿನ: ಹಿಂದೂಗಳ ಪ್ರತೀಯೊಂದು ಹಬ್ಬದ ಹಿಂದೆ ಒಂದಲ್ಲ ಒಂದು ಪೌರಾಣಿಕವಾದ ಹಿನ್ನೆಲೆಗಳು ಬೆಸೆದುಕೊಂಡಿರುತ್ತವೆ. ಹಾಗೆ ಯುಗಾದಿಗೂ ಹಲವು ಪುರಾಣದ ಘಟನೆಗಳು ಬೆಂಬಲವಾಗಿ ನಿಲ್ಲುತ್ತವೆ. ಬ್ರಹ್ಮನು ತನ್ನ ಸೃಷ್ಟಿಯನ್ನು ಆರಂಭ ಮಾಡಿದ ದಿನ ಎನ್ನುವುದು ಪ್ರಧಾನ ಹಿನ್ನೆಲೆ. ಮತ್ಸ್ಯನ ಅವತಾರದಲ್ಲಿ ವಿಷ್ಣುವು ಸೋಮಕಾಸುರ ಎಂಬ ರಾಕ್ಷಸನನ್ನು ಕೊಂದು ಅವನು ಅಪಹರಣ ಮಾಡಿದ್ದ ನಾಲ್ಕು ವೇದಗಳನ್ನು ಮತ್ತೆ ತಂದು ಬ್ರಹ್ಮನಿಗೆ ಕೊಟ್ಟನು. ಅಲ್ಲಿಂದ ಬ್ರಹ್ಮನ ಸೃಷ್ಟಿ ಕ್ರಿಯೆಯು ಆರಂಭ ಆಯಿತು ಅನ್ನುವ ನಂಬಿಕೆಯ ಹಿನ್ನೆಲೆಯಲ್ಲಿ ಯುಗಾದಿಯು ನಮಗೆ ವರ್ಷದ ಆರಂಭದ ಹಬ್ಬವೇ ಆಗಬೇಕು.

ಯುಗಾದಿಯು ನಮ್ಮ ಸಂವತ್ಸರಗಳ ಪ್ರಕಾರ ವರ್ಷದ ಮೊದಲ ದಿನ. ನಾವು ದಕ್ಷಿಣ ಭಾರತದ ಮಂದಿ ಶಾಲಿವಾಹನ ಶಕೆಯ ಸಂವತ್ಸರ ಆಚರಣೆ ಮಾಡುವವರು. ಉತ್ತರ ಭಾರತದ ಮಂದಿಗೆ ವಿಕ್ರಮಾದಿತ್ಯನ ವಿಕ್ರಮ ಶಕೆಯ ಮೇಲೆ ಹೆಚ್ಚು ನಂಬಿಕೆ. ಎರಡೂ ಸಂವತ್ಸರಗಳು ತಿಥಿ, ವಾರ, ಕರಣ ಮತ್ತು ಮಾಸಗಳಿಂದ ತುಂಬಾ ವೈಜ್ಞಾನಿಕವಾಗಿವೆ. ಪ್ರತೀ ಹಬ್ಬವೂ ಆಯಾ ತಿಥಿಗಳ ಹಿನ್ನೆಲೆಯಲ್ಲಿ ಬರುತ್ತದೆ. ಹಾಗೆಯೇ ಆ ಸಂವತ್ಸರದ ಆರಂಭವಾಗಿ ಕೂಡ ಯುಗಾದಿಯು ಮಹತ್ವ ಪಡೆಯುತ್ತದೆ. ಜನವರಿ ಒಂದಕ್ಕೆ ಈ ರೀತಿಯ ಯಾವ ಹಿನ್ನೆಲೆ ಇದೆ?

ಬೇವು ಬೆಲ್ಲದ ಆಶಯ ಬದುಕಿಗೆ ಪೂರಕ: ಬದುಕಿನ ಸುಖ ಮತ್ತು ಕಷ್ಟ ಎರಡನ್ನೂ ಸಮವಾಗಿ ಸ್ವೀಕಾರ ಮಾಡುವ ನಮ್ಮ ಆರ್ಷೆಯರ ಆಶಯಕ್ಕೆ ಯುಗಾದಿ ಮುನ್ನುಡಿ ಬರೆಯುತ್ತದೆ. ಬೇವು ಬೆಲ್ಲಗಳನ್ನು ಭಗವಂತನಿಗೆ ಅರ್ಪಣೆ ಮಾಡಿ ನಾವು ಸೇವನೆ ಮಾಡಿ ಗಟ್ಟಿ ದೇಹ ಮತ್ತು ಆರೋಗ್ಯವನ್ನು ಪಡೆಯುವ ಹಬ್ಬ ಯುಗಾದಿ. ಬೇವಿಗೆ ನೂರಾರು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆ ಎನ್ನುತ್ತದೆ ಆಧುನಿಕ ವಿಜ್ಞಾನ! ಬೆಲ್ಲವೂ ಅಷ್ಟೇ ರೋಗ ನಿವಾರಕ ಶಕ್ತಿಯನ್ನು ಹೊಂದಿದೆ. ಅದಕ್ಕಿಂತ ಹೆಚ್ಚಾಗಿ ಬದುಕಿನ ಎರಡೂ ಸ್ಥಾಯಿಭಾವಗಳನ್ನು ಅಂದರೆ ಸುಖ ಮತ್ತು ಕಷ್ಟ, ನೋವು ಮತ್ತು ನಲಿವು, ಸೋಲು ಮತ್ತು ಗೆಲುವು ಇವುಗಳನ್ನು ಸಮವಾಗಿ ಸ್ವೀಕಾರ ಮಾಡುವ ಮನಸ್ಥಿತಿಯನ್ನು ಪಡೆಯಲು ಈ ಹಬ್ಬವು ಪೂರಕ. ಹಾಗೆಯೇ ತೈಲಾಭ್ಯಂಜನ ಮಾಡುವ, ಹೊಸ ಬಟ್ಟೆ ಧರಿಸುವ, ಹಿರಿಯರು ಮಾಡುವ ಪಂಚಾಂಗ ಶ್ರವಣದ ಮೂಲಕ ಆಚರಿಸಲ್ಪಡುವ ಮತ್ತು ಸಿಹಿ ಪಾಯಸದ ಜೊತೆಗೆ ಮನೆಯವರೆಲ್ಲ ಸೇರಿ ಉಣ್ಣುವ ಈ ಹಬ್ಬವು ಆಚರಣೆಯಲ್ಲೂ ಶ್ರೀಮಂತವಾಗಿದೆ.

ನಮ್ಮ ರಾಮಾಯಣ, ಮಹಾ ಭಾರತಗಳ ಕಾಲದಲ್ಲಿಯೂ ಯುಗಾದಿ ಹಬ್ಬದ ಆಚರಣೆಯ ಉಲ್ಲೇಖಗಳು ದೊರೆಯುತ್ತವೆ. ಹುಲ್ಲಿನ ಗೊಂಬೆ ಮಾಡಿ ಸುಡುವ ಮತ್ತು ಮಾದಕ ಪೇಯಗಳಲ್ಲಿ ಮುಳುಗೇಳುವ ಜನವರಿ ಒಂದು ನಮಗೆ ಯಾವ ಸಂದೇಶ ಕೊಡುತ್ತದೆ ಹೇಳಿ? ಹಿಂದೂಗಳಿಗೆ ಯುಗಾದಿಯೇ ಹೊಸ ವರ್ಷದ ಆರಂಭ ಆಗಲಿ ಎನ್ನುವುದು ಆಶಯ. ಮತ್ತೊಮ್ಮೆ ನಮ್ಮೆಲ್ಲ ಓದುಗ ಪ್ರಭುಗಳಿಗೆ ಚಾಂದ್ರಮಾನ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

-ರಾಜೇಂದ್ರ ಭಟ್ ಕೆ.

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನ.28: ನರೇಂದ್ರ ಎಸ್ ಗಂಗೊಳ್ಳಿ ಅವರ ‘ನಿಭೃತ’ ಪತ್ತೇದಾರಿ ಕಾದಂಬರಿ ಬಿಡುಗಡೆ

ಉಡುಪಿ, ನ.23: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮತ್ತು...

ವಯನಾಡ್: ಪ್ರಿಯಾಂಕಾ ಗಾಂಧಿಗೆ ಐತಿಹಾಸಿಕ ಗೆಲುವು

ವಯನಾಡ್, ನ.23: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ...

ಉಪಚುನಾವಣೆಯಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್- ನಮ್ಮ ಕಾರ್ಯಕರ್ತರ ಅವಿರತ ಶ್ರಮದ ಗೆಲುವು: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ನ.23: ಕರ್ನಾಟಕದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಮಹಾರಾಷ್ಟ್ರದ ಗೆಲುವು ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಗೆಲುವು: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ನ.23: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಗೆಲುವು ಉತ್ತಮ...
error: Content is protected !!