Tuesday, January 21, 2025
Tuesday, January 21, 2025

ನಮ್ಮ ಪ್ರೀತಿಯ ಅಪ್ಪು ಸರ್ ಅವರಿಗೊಂದು ಪ್ರೇಮಪತ್ರ

ನಮ್ಮ ಪ್ರೀತಿಯ ಅಪ್ಪು ಸರ್ ಅವರಿಗೊಂದು ಪ್ರೇಮಪತ್ರ

Date:

ಇಂದು ನಿಮಗೆ 48 ತುಂಬಿತು. ಆದರೆ ನಿಮ್ಮ ಹೃದಯಕ್ಕೆ ಇನ್ನೂ ಹದಿನಾರರ ಹರೆಯ! ನಿಮ್ಮ ಜೀವನ ಪ್ರೀತಿ ಮತ್ತು ಮುಗ್ಧತೆಗಳು ನಿಮ್ಮನ್ನು ನಮ್ಮ ಹೃದಯದಲ್ಲಿ ಶಾಶ್ವತ ಮಾಡಿ ಬಿಟ್ಟಿವೆ. ದೊಡ್ಡಮನೆ ಹುಡುಗ ಹೇಗಿರಬೇಕು ಎನ್ನುವುದನ್ನು ನಿಮ್ಮಷ್ಟು ಚೆನ್ನಾಗಿ ಯಾರೂ ಸಾಬೀತು ಮಾಡಲು ಸಾಧ್ಯವೇ ಆಗಿಲ್ಲ ಅಪ್ಪು ಸರ್. ನಿಮ್ಮ ವ್ಯಕ್ತಿತ್ವಕ್ಕೆ ನೂರಾರು ಆಯಾಮಗಳು ಅಪ್ಪು ಸರ್! ನಿಮ್ಮನ್ನು ಕೇವಲ ಸಿನೆಮಾ ನಟ, ವರನಟನ ಮಗ ಇಷ್ಟೇ ಆಗಿ ನಾವು ಕನ್ನಡಿಗರು ನೋಡಲೇ ಇಲ್ಲ. ನೀವು ಆರಿಸಿಕೊಂಡ ಪ್ರತೀ ಆಯಾಮದಲ್ಲಿಯೂ ನೀವು ರಾಜರತ್ನವೇ ಸರಿ ಅಪ್ಪು ಸರ್. ಭಗವಂತ ನಿಮ್ಮನ್ನು ಅಭಿನಯ ಮಾಡಲು ಸೃಷ್ಟಿಸಿರಬೇಕು ಎಂದು ನಮಗೆ ನೂರಾರು ಬಾರಿ ಅನಿಸಿದೆ. ಪ್ರಚಾರ ಇಲ್ಲದೆ ನೀವು ಮಾಡಿದ ನೂರಾರು ಸೇವಾಕಾರ್ಯಗಳು ನಿಮಗೆ ಭಾರೀ ಪ್ರಭಾವಳಿಯನ್ನು ತೋಡಿಸಿದವು.

ಅಪ್ಪು ಸರ್ ಮೊದಲ ಆಯಾಮ – ಬಾಲನಟನಾಗಿ: ಕೇವಲ ಆರು ತಿಂಗಳ ಪ್ರಾಯದ ಮಗು ಆಗಿದ್ದಾಗ ಅಪ್ಪ ಡಾಕ್ಟರ್ ರಾಜಕುಮಾರ್ ನಟಿಸಿದ ‘ಪ್ರೇಮದ ಕಾಣಿಕೆ’ ಸಿನೆಮಾದಲ್ಲಿ ಕ್ಯಾಮೆರಾ ಎದುರಿಸಿದ ನೀವು ಮುಂದಿನ ವರ್ಷ ‘ಸನಾದಿ ಅಪ್ಪಣ್ಣ’ ಸಿನೆಮಾದಲ್ಲಿ ‘ತಾತಾ ಪೀಪಿ ತಾತಾ ಪೀಪಿ’ ಎಂದು ಹೇಳಿದ ತೊದಲು ಮಾತುಗಳು ಇನ್ನೂ ನಮ್ಮ ಕಿವಿಯಲ್ಲಿ ಹಾಗೇ ಇವೆ. ನೀವು ಬಾಲನಟನಾಗಿ ಅಭಿನಯಿಸಿದ ಒಟ್ಟು ಸಿನೆಮಾಗಳು 12! ಅದರಲ್ಲಿ ‘ಬೆಟ್ಟದ ಹೂವು’ ಸಿನೆಮಾದಲ್ಲಿ ಬಾಲನಟನಾಗಿ ರಾಷ್ಟ್ರಪ್ರಶಸ್ತಿ ಪಡೆದವರು ನೀವು!ಭಾಗ್ಯವಂತ, ಎರಡು ನಕ್ಷತ್ರ, ಭಕ್ತ ಪ್ರಹ್ಲಾದ, ಚಲಿಸುವ ಮೋಡಗಳು…. ಹೀಗೆ ಸಾಲು ಸಾಲು ಸೂಪರ್ ಹಿಟ್ ಸಿನೆಮಾಗಳು. ಬಾಲನಟನಾಗಿ ನಿಮ್ಮನ್ನು ಕನ್ನಡಿಗರು ಮಾಡಿದ ಪ್ರೀತಿ, ಅದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ! ಎರಡು ಬಾರಿ ಅತ್ಯುತ್ತಮ ಬಾಲನಟ ರಾಜ್ಯಪ್ರಶಸ್ತಿ ಪಡೆದು ಮಿಂಚಿದವರು ನೀವು.

ಅಪ್ಪು ಸರ್ ಎರಡನೇ ಆಯಾಮ – ಪವರ್ ಸ್ಟಾರ್ ಪುನೀತ್: 2002ದಲ್ಲಿ ‘ ಅಪ್ಪು’ ಸಿನೆಮಾದ ಮೂಲಕ ನಾಯಕ ನಟನಾಗಿ ಕನ್ನಡ ಸಿನೆಮಾ ರಂಗವನ್ನು ಪ್ರವೇಶ ಮಾಡಿದ ನೀವು ಮೊದಲ ಸಿನಿಮಾದಿಂದಲೆ ಮಹಾನ್ ನಟ ಎಂದು ಸಾಬೀತು ಮಾಡಿದಿರಿ. ಮುಂದಿನ ಇಪ್ಪತ್ತು ವರ್ಷಗಳ ಅವಧಿಯಲ್ಲಿ ನೀವು ಅಭಿನಯ ಮಾಡಿದ್ದು ಮುತ್ತಿನಂಥ 25 ಸಿನೆಮಾಗಳಲ್ಲಿ! ಅದರಲ್ಲಿ ಹತ್ತು ಸಿನೆಮಾಗಳು ನೂರು ದಿನ ದಾಟಿದ ಪ್ರದರ್ಶನ ಕಂಡಿವೆ! ಮಿಲನ, ವಂಶಿ, ಜೇಮ್ಸ್, ರಾಜಕುಮಾರ, ನಟ ಸಾರ್ವಭೌಮ, ಯುವ ರತ್ನ, ಆಕಾಶ್, ಅಭಿ, ಹುಡುಗರು, ಸಿನೆಮಾಗಳು ಬೆಳ್ಳಿಹಬ್ಬದ ಆಚರಣೆ ಮಾಡಿದವು! ಮಿಲನ ಸಿನೆಮಾ ಮಲ್ಟಿಪ್ಲೆಕ್ಸಗಳಲ್ಲಿ ವರ್ಷಾನುಗಟ್ಟಲೆ ಓಡಿತು!

ನೀವು ಮಾಡಿದ ಪಾತ್ರಗಳೂ ಅಷ್ಟೇ ವೈವಿಧ್ಯ ಇರುವಂತ ಪಾತ್ರಗಳು ಅಪ್ಪು ಸರ್. ರೇಡಿಯೋ ಜಾಕಿಯಿಂದ ಆರಂಭವಾಗಿ ಜಿಲ್ಲಾಧಿಕಾರಿಯವರೆಗೆ, ಪೊಲೀಸ್ ಅಧಿಕಾರಿಯಿಂದ ಆರಂಭವಾಗಿ ನ್ಯಾಯಕ್ಕಾಗಿ ಹೋರಾಡುವ ಬಿಸಿರಕ್ತದ ಯುವಕನವರೆಗೆ, ರೌಡಿಗಿರಿಯನ್ನು ಮಾಡಿ ಅಮ್ಮನಿಂದಲೇ ವಿಷ ಉಣಿಸಲ್ಪಡುವ ಮಗ, ಅಜ್ಜನ ಕನಸು ನನಸು ಮಾಡಲು ಕಷ್ಟಪಡುವ ಮೊಮ್ಮಗ…….ನಿಮಗೆ ಎಲ್ಲಾ ಪಾತ್ರಗಳೂ ಸಲೀಸು. ನಿಮ್ಮಷ್ಟು ವೇಗವಾಗಿ ಮತ್ತು ಕ್ಲಿಷ್ಟವಾದ ಸ್ಟೆಪ್ಸ್ ಹಾಕುವ ಮತ್ತೊಬ್ಬ ನಟ ಕನ್ನಡದಲ್ಲಿ ಇಲ್ಲ ಅನ್ನುವುದು ನಿಮ್ಮ ಪವರ್! ಪಾತ್ರದ ಒಳಗೆ ಇಳಿದು ಅಭಿನಯಿಸುವ ಕಲೆಯು ನಿಮಗೆ ಕರತಲಾಮಲಕ. ನಿಮ್ಮ ಸಂಭಾಷಣೆ ಒಪ್ಪಿಸುವ ರೀತಿ, ಬಾಡಿ ಲಾಂಗ್ವೇಜ್, ಆಳವಾದ ಧ್ವನಿ, ಫೈಟಿಂಗ್ ಸ್ಪಿರಿಟ್ ನಿಮ್ಮನ್ನು ಕನ್ನಡದ ಪವರ್ ಸ್ಟಾರ್ ಆಗಿ ರೂಪಿಸಿದವು.

ಒಬ್ಬ ನಟನಾಗಿ ಒಂದು ರಾಷ್ಟ್ರೀಯ ಪ್ರಶಸ್ತಿ, ನಾಲ್ಕು ರಾಜ್ಯ ಪ್ರಶಸ್ತಿಗಳು, ಆರು ಫಿಲಂ ಫೇರ್ ಪ್ರಶಸ್ತಿಗಳು, ಐದು ಸೈಮಾ ಪ್ರಶಸ್ತಿಗಳು ನಿಮಗೆ ದೊರೆತಿವೆ! ಕನ್ನಡದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಮತ್ತು ಅತೀ ಹೆಚ್ಚು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಸ್ಟಾರ್ ಕಲಾವಿದ ನೀವು ಅನ್ನುವುದೇ ಹೆಚ್ಚು ಹೆಮ್ಮೆಯ ಸಂಗತಿ.

ಅಪ್ಪು ಸರ್ ಅವರ ಮೂರನೇ ಆಯಾಮ – ನಿಮ್ಮ ಟಿವಿ ಶೋ: ಹಲವು ಕನ್ನಡದ ರಿಯಾಲಿಟಿ ಶೋಗಳನ್ನು ನೀವು ನಿರೂಪಣೆ ಮಾಡಿದರೂ ಹೆಚ್ಚು ಜನಪ್ರಿಯತೆ ಪಡೆದದ್ದು ಕನ್ನಡದ ಕೋಟ್ಯಾಧಿಪತಿ! ಕನ್ನಡದ ರಿಯಾಲಿಟಿ ಶೋಗಳ ಇತಿಹಾಸದಲ್ಲಿ ಅತೀ ಹೆಚ್ಚು TRP ಪಡೆದ ಶೋ ಅದು! ಅದಕ್ಕೆ ಕಾರಣ ಅಪ್ಪು ಸರ್, ನಿಮ್ಮ ಸುಂದರವಾದ ನಿರೂಪಣೆ. ಕಸ್ತೂರಿ ಕನ್ನಡದ ಪದಗಳನ್ನು ನಿಮ್ಮ ಬಾಯಿಂದ ಕೇಳುವುದೇ ಚಂದ. ಹಾಟ್ ಸೀಟಿನಲ್ಲಿ ಕೂತವರನ್ನು ಹೇಗೆ ಕಂಫರ್ಟ್ ಆಗಿರಿಸಬೇಕು ಎಂದು ಯಾರಾದ್ರೂ ನಿಮ್ಮಿಂದ ಕಲಿಯಬೇಕು. ಪ್ರತೀ ಬಾರಿಯೂ ಅಹಂಕಾರದ ಲವಲೇಶವೂ ಇಲ್ಲದೆ ಇನ್ನೊಬ್ಬರನ್ನು ಪ್ರೀತಿಸುವ ಗುಣ, ನಿಮ್ಮ ಮುಗ್ಧತೆ ಯಾರಿಗೆ ಆಪ್ತವಾಗಿ ಬಿಡುವುದಿಲ್ಲ ಹೇಳಿ? ಅಪ್ಪು ಸರ್, ನೀವು ನಿಜವಾಗಿಯೂ ಗ್ರೇಟ್!

ಅಪ್ಪು ಸರ್ ನಾಲ್ಕನೇ ಆಯಾಮ – ನಿಮ್ಮ ಸಾಮಾಜಿಕ ಕಳಕಳಿ: ಅಪ್ಪು ಸರ್, ನಿಮ್ಮ ವ್ಯಕ್ತಿತ್ವ ಹೇಗೆಂದು ನಮಗೆ ಅರ್ಥವಾಗಬೇಕು ಎಂದರೆ ಅದು ನೀವು ಅಭಿನಯ ಮಾಡಿದ ಕನ್ನಡ ಸಿನೆಮಾ ‘ರಾಜಕುಮಾರ’ ನೋಡಬೇಕು! ನಿಮ್ಮ ಸಂಪಾದನೆಯ ಬಹು ದೊಡ್ಡ ಭಾಗವನ್ನು ಸಮಾಜಸೇವಾ ಚಟುವಟಿಕೆಗಳಿಗೆ ಪ್ರಚಾರ ಇಲ್ಲದೆ ವಿನಿಯೋಗ ಮಾಡಿದವರು ನೀವು. ಕನ್ನಡ ಸಿನೆಮಾದಲ್ಲಿ ನೀವು ಹಾಡಿದ ನೂರಾರು ಹಾಡುಗಳ ಮೂಲಕ ಬಂದ ಅಷ್ಟೂ ದುಡ್ಡನ್ನು ಮೈಸೂರಿನ ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ತಂದು ಸುರಿದವರು ನೀವು! ಮೈಸೂರಿನ ನಿಮ್ಮದೇ ಕನಸಿನ ‘ಶಕ್ತಿಧಾಮ ಆಶ್ರಮಕ್ಕೆ’ ನೀವೇ ಸ್ಫೂರ್ತಿ ದೇವತೆ. ನೂರಾರು ಬಡ ಮಕ್ಕಳ ಶಿಕ್ಷಣದ ವ್ಯವಸ್ಥೆಗೆ ಹೆಗಲು ಕೊಟ್ಟವರು ನೀವು. ಎಲ್ಲವನ್ನೂ ಮಾಡಿ ನಾನೇನೂ ಅಲ್ಲ ಎನ್ನುವ ನಿಮ್ಮ ವಿನೀತ ಭಾವವು ನಮಗೆಲ್ಲ ಭಾರೀ ಅಚ್ಚರಿಯನ್ನು ತಂದಿದೆ. ನಿಮ್ಮ ತಂದೆಯಲ್ಲಿ ಇದ್ದ ಅಷ್ಟೂ ಒಳ್ಳೆಯತನಗಳನ್ನು ಕಿತ್ತುಕೊಂಡು ಬಂದಂತೆ ನೀವು ಬದುಕಿದವರು!

ಒಂದು ರೂಪಾಯಿ ಸಂಭಾವನೆ ಪಡೆಯದೆ ನಂದಿನಿ ಹಾಲಿಗೆ (ಕೆ.ಎಂ.ಎಫ್) ರಾಯಭಾರಿ ಆದವರು ನೀವು. ಅದೇ ರೀತಿ ಸರಕಾರದ ಆರ್.ಟಿ.ಇ ಯೋಜನೆ, ಬಿಎಂಟಿಸಿ ಸಂಸ್ಥೆಗಳಿಗೆ ನೀವು ರಾಯಭಾರಿ ಆಗಿ ಅಂತಹ ಸದಾಶಯದ ಯೋಜನೆಗಳಿಗೆ ಮಾರುಕಟ್ಟೆ ಒದಗಿಸಿಕೊಟ್ಟವರು ನೀವು! ನಿಮ್ಮ ಸಾಮಾಜಿಕ ಕಳಕಳಿ ಮತ್ತು ಬದ್ಧತೆಗಳಿಗೆ ನೀವೇ ಉಪಮೆ, ನೀವೇ ರೂಪಕ ಎಲ್ಲವೂ!

ಅಪ್ಪು ಸರ್ ಐದನೇ ಆಯಾಮ – ಮಹಾ ಮಾನವತಾವಾದಿ ಆಗಿ: ಒಬ್ಬ ವಿಶ್ವ ಮಾನವನಾಗಿ ನಮ್ಮನ್ನು ಆವರಿಸುವ ನಿಮ್ಮ ವ್ಯಕ್ತಿತ್ವಕ್ಕೆ ನಮ್ಮಲ್ಲಿ ಬೇರೆ ದೃಷ್ಟಾಂತಗಳು ಇಲ್ಲ ಅಪ್ಪು ಸರ್! PRK ಪ್ರೊಡಕ್ಷನ್ ಹೌಸ್ ಆರಂಭ ಮಾಡಿ ನೂರಾರು ಪ್ರತಿಭಾವಂತ ಯುವ ಕಲಾವಿದರಿಗೆ ವೇದಿಕೆ ಒದಗಿಸಿಕೊಟ್ಟವರು ನೀವು. ಕೋವಿಡ್ ಸಮಯದಲ್ಲಿ ಕೆಲಸ ಕಳೆದುಕೊಂಡ ನೂರಾರು ಕಲಾವಿದರ, ತಂತ್ರಜ್ಞರ ನೆರವಿಗೆ ನಿಂತ ಘಟನೆಗಳ ಹಿಂದೆ ಎಲ್ಲಿಯೂ ನೀವು ಬ್ಯಾನರ್ ಕಟ್ಟಿ ಫೋಟೋ ತೆಗೆಸಿಕೊಂಡವರು ಅಲ್ಲ! ಅಶಕ್ತ ಮತ್ತು ನೊಂದ ಕಲಾವಿದರ ನೆರವಿಗೆ ನಿಂತ ನೂರಾರು ಘಟನೆಗಳು ಇದ್ದರೂ ಅವುಗಳನ್ನು ಅಪ್ಪು ಸರ್ ನೀವೆಲ್ಲಿಯೂ ಉಲ್ಲೇಖ ಮಾಡಿದ ಉದಾಹರಣೆಯೇ ಇಲ್ಲ! ನಿಮ್ಮ ರಾಜಕುಮಾರ ಸಿನೆಮಾ ತೆರೆಕಂಡ ನಂತರ ನೂರಾರು ಓದಿದ ಮಂದಿ ವೃದ್ಧಾಶ್ರಮಗಳಿಗೆ ಹೋಗಿ ತಮ್ಮ ತಂದೆ, ತಾಯಿಯರನ್ನು ತಮ್ಮ ಮನೆಗಳಿಗೆ ಹಿಂದೆ ಕರೆದುಕೊಂಡು ಬಂದದ್ದು ನಮಗೆ ಭಾರೀ ಸ್ಫೂರ್ತಿ ನೀಡಿದೆ! ನೀವು ಕಣ್ಣುಗಳನ್ನು ದಾನ ಮಾಡಿದ ನಂತರ 85,000 ಮಂದಿ ದೃಷ್ಟಿದಾನದ ಒಪ್ಪಂದಕ್ಕೆ ಸಹಿ ಮಾಡಿದ್ದು ಅದು ನಿಮ್ಮದೇ ಪವರ್! 2022ರಲ್ಲಿ ತೆರೆಕಂಡ 200ಕ್ಕಿಂತ ಹೆಚ್ಚಿನ ಕನ್ನಡ ಸಿನೆಮಾಗಳು ಅಪ್ಪು ಸರ್ ನಿಮಗೆ ಡೆಡಿಕೇಟ್ ಆದದ್ದು ಕನ್ನಡದ ಜನರು ನಿಮ್ಮ ಮೇಲೆ ಇಟ್ಟ ಪ್ರೀತಿಯ ದ್ಯೋತಕ!

ಅಪ್ಪು ಸರ್, ನಾವು ನಿಮ್ಮನ್ನು ಮರೆಯುವ ಪ್ರಶ್ನೆಯೇ ಇಲ್ಲ: ಕನ್ನಡಿಗರ ಹೃದಯ ಸಾಮ್ರಾಟರಾದ ನೀವು ತೋರಿದ ಹೃದಯ ವೈಶಾಲ್ಯತೆ, ಸನ್ನಡತೆಗಳು, ಪಾಸಿಟಿವ್ ಎನರ್ಜಿ, ಸ್ಫೂರ್ತಿ ತುಂಬುವ ಗುಣ, ಕನ್ನಡದ ಸಂಸ್ಕೃತಿಯ ಮೇಲಿನ ಪ್ರೀತಿ ಎಲ್ಲವೂ ನಮ್ಮ ಹೃದಯಗಳನ್ನು ಗಾಢವಾಗಿ ತಟ್ಟಿವೆ. ನಿಮ್ಮ ಸಿನೆಮಾದ ಪಾತ್ರಗಳಿಗಿಂತ ನೀವು ಬದುಕಿದ ರೀತಿಯೇ ನಮಗೆ ಆದರ್ಶ ಅಪ್ಪು ಸರ್. ನಾವು ಲೈಫ್ ಲಾಂಗ್ ನಿಮ್ಮ ಅಭಿಮಾನಿಗಳು. ರಾಜ್ಯ ಸರ್ಕಾರವು ನಿಮ್ಮ ಹುಟ್ಟುಹಬ್ಬವನ್ನು ಸ್ಫೂರ್ತಿ ದಿನವಾಗಿ ಆಚರಣೆ ಮಾಡುತ್ತಿದೆ.

ನಿಮಗೆ ಮತ್ತೆ ಮತ್ತೆ ಹುಟ್ಟುಹಬ್ಬದ ಶುಭಾಶಯಗಳು ಸರ್.

-ರಾಜೇಂದ್ರ ಭಟ್ ಕೆ

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಯಾ: ಗ್ರಾಮೀಣ ಕ್ರೀಡಾಕೂಟ

ಕಾರ್ಕಳ, ಜ.20: ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ಮೈ...

ಕೆ.ಎಂ.ಸಿ ಮಣಿಪಾಲ: ಕಾರ್ಪೊರೇಟ್ ಕ್ರಿಕೆಟ್ ಲೀಗ್ 2025 ಸಂಪನ್ನ

ಮಣಿಪಾಲ, ಜ.20: ಕಾರ್ಪೊರೇಟ್ ಸಂಸ್ಥೆಗಳು, ಬ್ಯಾಂಕ್‌ಗಳು, ವೈದ್ಯಕೀಯ ಸಂಘಗಳು, ಆಸ್ಪತ್ರೆಗಳು ಮತ್ತು...

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜ.20: ಜನರ ಶಕ್ತಿಯನ್ನು ಬಲಪಡಿಸಲು ತಂತ್ರಜ್ಞಾನದ ಶಕ್ತಿಯನ್ನು ಚುನಾವಣಾ ಆಯೋಗ...

ವೈವಾಹಿಕ ಜೀವನಕ್ಕೆ ಕಾಲಿಟ್ಟ ನೀರಜ್ ಚೋಪ್ರಾ

ಯು.ಬಿ.ಎನ್.ಡಿ., ಜ.20: ಪ್ರಸಿದ್ಧ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ...
error: Content is protected !!