Saturday, November 23, 2024
Saturday, November 23, 2024

ಒಟ್ಟು ಹನ್ನೆರಡು ಭಾಷೆಗಳಲ್ಲಿ ಆಕೆ ಹಾಡಿದ ಹಾಡುಗಳ ಸಂಖ್ಯೆ ಅಂದಾಜು ಹತ್ತು ಸಾವಿರ

ಒಟ್ಟು ಹನ್ನೆರಡು ಭಾಷೆಗಳಲ್ಲಿ ಆಕೆ ಹಾಡಿದ ಹಾಡುಗಳ ಸಂಖ್ಯೆ ಅಂದಾಜು ಹತ್ತು ಸಾವಿರ

Date:

ಒಟ್ಟು ಹನ್ನೆರಡು ಭಾಷೆಗಳಲ್ಲಿ ಆಕೆ ಹಾಡಿದ ಹಾಡುಗಳ ಸಂಖ್ಯೆ ಅಂದಾಜು ಹತ್ತು ಸಾವಿರ. ಹಾಡು ನಿಲ್ಲಿಸಿದ ಇನಿದನಿಯ ಕೋಗಿಲೆ ವಾಣಿ ಜಯರಾಮ್ ಅವರ ದಾಖಲೆ ಇದು. ಈ ಸಂಖ್ಯೆ ಖಂಡಿತ ದೊಡ್ಡದಲ್ಲ! ಕನ್ನಡದಲ್ಲಿ ಹಾಡಿದ್ದು ಅಂದಾಜು ಒಂದು ಸಾವಿರ ಹಾಡುಗಳನ್ನು. ಅದೂ ದೊಡ್ಡ ಸಂಖ್ಯೆ ಅಲ್ಲ. ಆದರೆ ಆಕೆಯು ತನ್ನ ನಾದ ಮತ್ತು ಮಾಧುರ್ಯದ ಮೂಲಕ ಕ್ರಿಯೇಟ್ ಮಾಡಿದ ಇಂಪ್ಯಾಕ್ಟ್ ಇದೆಯಲ್ಲ ಅದು ನಿಜಕ್ಕೂ ವಿಸ್ಮಯವೇ ಆಗಿದೆ. ಆಕೆ ನಿನ್ನೆ ಶನಿವಾರ (ಫೆಬ್ರುವರಿ 4) ಹಾಡು ನಿಲ್ಲಿಸಿ ನಿರ್ಗಮಿಸಿದ್ದಾರೆ.

ವಾಣಿ ಜಯರಾಂ ದೈವದತ್ತ ಪ್ರತಿಭೆ: ಹೆತ್ತವರ ತೀವ್ರ ಒತ್ತಾಸೆ ಮತ್ತು ಬೆಂಬಲದಿಂದ ಆಕೆಯು ಸಂಗೀತ ತರಗತಿಗೆ ಸೇರಿದಾಗ ವಯಸ್ಸು ಕೇವಲ ಮೂರು! ತಿರುವನಂತಪುರದಲ್ಲಿ ಮೂರು ಘಂಟೆಗಳ ಅವಧಿಯ ಸಂಗೀತ ಕಛೇರಿ ನಡೆಸಿದಾಗ ವಯಸ್ಸು ಕೇವಲ ಹತ್ತು! ಅಂತಹ ಗಾಯಕಿ ಸಿನೆಮಾ ಹಿನ್ನೆಲೆ ಗಾಯಕಿ ಆದದ್ದು ಕೇವಲ ಆಕಸ್ಮಿಕ.

ಹಿಂದಿಯ ಪ್ರಸಿದ್ಧ ಸಿನೆಮಾ ನಿರ್ದೇಶಕ ಹೃಷಿಕೇಶ್ ಮುಖರ್ಜಿ ಅವರು ಎಪ್ಪತ್ತರ ದಶಕದಲ್ಲಿ ತನ್ನ ‘ಗುಡ್ಡಿ’ ಸಿನೆಮಾದಲ್ಲಿ ಜಯಾ ಬಾಧೂರಿ ಎಂಬ ಅದ್ಭುತವಾದ ಹದಿಹರೆಯದ ಪ್ರತಿಭೆಯನ್ನು ಲಾಂಚ್ ಮಾಡಲು ಹೊರಟಿದ್ದರು. ಅವರಿಗೆ ಮುಗ್ಧತೆಯೇ ಆವಾಹನೆ ಆದ ಒಂದು ಹಿನ್ನೆಲೆ ಧ್ವನಿಯು ಬೇಕಾಗಿತ್ತು. ಮಿಯಾ ಮಲ್ಹಾರ ರಾಗದ ‘ಬೋಲೇರೆ ಪಪಿಹರಾ’ ಹಾಡು ರೆಡಿ ಆಗಿತ್ತು. ಅದನ್ನು ವಾಣಿ ಜಯರಾಂ ಹಾಡಿದರು ಎಂಬಲ್ಲಿಗೆ ಹಿಂದಿ ಸಿನಿಮಾದಲ್ಲಿ ಒಂದು ಮಾಧುರ್ಯದ ಅಲೆಯೇ ಸೃಷ್ಟಿ ಆಯಿತು. ನಂತರ ನಡೆದದ್ದು ಇತಿಹಾಸ.

ಐವತ್ತು ವರ್ಷ ಹಾಡಿದ ಲೆಜೆಂಡ್: ಮುಂದೆ ಆಕೆಯು ನಿರಂತರ ಐವತ್ತು ವರ್ಷ ಹಾಡಿದರು. ನಾಲ್ಕು ಬಾರಿ ರಾಷ್ಟ್ರಪ್ರಶಸ್ತಿ ಪಡೆದರು. ಅಸಂಖ್ಯ ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಬಂತು. ಪದ್ಮ ಭೂಷಣ ಕೂಡ ಒಲಿಯಿತು. ಹಾಡುಗಳ ಸಂಖ್ಯೆ ಕಡಿಮೆ ಆದರೂ ಆಕೆ ಕ್ರಿಯೇಟ್ ಮಾಡಿದ ಮಾಧುರ್ಯದ ಅಧ್ಯಾಯವು ಅದೊಂದು ಸುವರ್ಣ ಅಧ್ಯಾಯವೇ ಸರಿ. ಯಾವ ಹಾಡು ಕೊಟ್ಟರೂ ಅದರಲ್ಲಿ ಮಾಧುರ್ಯವನ್ನು ತುಂಬಿಸುವ ಆಕೆಯ ದೈವದತ್ತ ಕಂಠವು ಮೊನ್ನೆ ಮೊನ್ನೆಯವರೆಗೂ ಹಾಡಿತು. ಭಾರತೀಯ ಸಿನಿಮಾರಂಗವನ್ನು ಶ್ರೀಮಂತಗೊಳಿಸಿತು. ಎಸ್ ಜಾನಕಿ, ಲತಾ ಮಂಗೇಷ್ಕರ್, ಪಿ ಸುಶೀಲಾ ಹಾಡಿದಷ್ಟು ಹಾಡುಗಳನ್ನು ವಾಣಿ ಜಯರಾಂ ಹಾಡಿಲ್ಲ ಅನ್ನುವುದು ಕೊರತೆ ಅಲ್ಲ. ಆದರೆ ಮಾಧುರ್ಯದಲ್ಲಿ ಆಕೆ ಯಾರಿಗೂ ಕಡಿಮೆ ಇಲ್ಲ!

ಆಕೆಯ ಅದ್ಭುತ ಹಾಡುಗಳು: ಕೆ. ವಿಶ್ವನಾಥ್ ನಿರ್ದೇಶನದ ಶಂಕರಾಭರಣಮ್ ಸಿನೆಮಾದ ಹಾಡುಗಳಿಗಾಗಿ ಆಕೆಗೆ ರಾಷ್ಟ್ರಪ್ರಶಸ್ತಿಯು ಒಲಿದಿತ್ತು. ಅದರ ‘ಮಾನಸ ಸಂಚರರೆ’ ಹಾಡನ್ನು ಒಮ್ಮೆ ಕೇಳಿ! ನಿಮಗೆ ಆಧ್ಯಾತ್ಮದ ಸ್ಪರ್ಶ ನೀಡುವ ಹಾಡದು. ಕನ್ನಡದಲ್ಲಿ ಅವರು ಕವಿರತ್ನ ಕಾಳಿದಾಸ ಸಿನೆಮಾದಲ್ಲಿ ಹಾಡಿದ ‘ಸದಾ ಕಣ್ಣಲಿ ಒಲವಿನ ಕವಿತೆ ಹಾಡುವೆ’, ಎರಡು ರೇಖೆಗಳು ಸಿನೆಮಾದ ‘ ನೀಲ ಮೇಘ ಶ್ಯಾಮ’ , ಹೊಸಬೆಳಕು ಸಿನೆಮಾದ ‘ತೆರೆದಿದೆ ಮನೆ ಓ ಬಾ ಅತಿಥಿ’, ಬಿಳಿ ಹೆಂಡ್ತಿ ಸಿನೆಮಾದ ಇಂಗ್ಲಿಷ್ ಭಾಷೆಯ ಹಾಡು, ಶುಭಮಂಗಳ ಸಿನೆಮಾದ ‘ಈ ಶತಮಾನದ ಮಾದರಿ ಹೆಣ್ಣು’ ಬೆಸುಗೆ ಸಿನೆಮಾದ ಟೈಟಲ್ ಸಾಂಗ್, ನಾ ನಿನ್ನ ಮರೆಯಲಾರೆ ಸಿನೆಮಾದ ಟೈಟಲ್ ಸಾಂಗ್, ಶುಭ ಮಂಗಳ ಸಿನೆಮಾದ ಟೈಟಲ್ ಸಾಂಗ್ ಇವೆಲ್ಲವೂ ಮಾಧುರ್ಯದ ಪರಾಕಾಷ್ಠೆಯ ಹಾಡುಗಳು.

ಮೂರು ಸ್ಥಾಯಿಗಳಲ್ಲಿ ಸುಲಲಿತವಾಗಿ ಸಾಗುವ ಅವರ ಧ್ವನಿಯಲ್ಲಿ ಜೇನಿನ ಸಿಹಿ ಇದೆ. ಕೋಗಿಲೆಯ ಇಂಪು ಇದೆ. ಯಾವ ಹಾಡನ್ನೂ ಅಮರತ್ವಕ್ಕೆ ಏರಿಸುವ ಶಕ್ತಿ ಇದೆ. ಹಾಗೆ ವಾಣಿ ಜಯರಾಂ ಅಂದರೆ ಮಾಧುರ್ಯದ ದೇವತೆಯೇ ಎಂದು ಪುಟ್ಟಣ್ಣ ಕಣಗಾಲ್ ಕರೆದಿದ್ದರು. ಕನ್ನಡದಲ್ಲಿ ಪುಟ್ಟಣ್ಣ ಕಣಗಾಲರ ಹೆಚ್ಚಿನ ಸಿನೆಮಾಗಳಲ್ಲಿ ವಾಣಿ ಜಯರಾಂ ಹಾಡಿದ್ದಾರೆ. ಲೆಜೆಂಡ್ ಕಂಪೋಸರ್ ವಿಜಯ ಭಾಸ್ಕರ್, ಎಂ. ರಂಗರಾವ್, ಉಪೇಂದ್ರ ಕುಮಾರ್ ಮೊದಲಾದವರ ಆಸ್ಥಾನ ಗಾಯಕಿ ಆಗಿ ಮೆರೆದವರು ವಾಣಿ ಜಯರಾಂ!

ಈ ಹಾಡುಗಳನ್ನೂ ಒಮ್ಮೆ ಕೇಳಿ ನೋಡಿ: 1) ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ (ಜಿಮ್ಮಿ ಗಲ್ಲು), 2) ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು (ಉಪಾಸನೆ), 3) ಹಾಡು ಹಳೆಯದಾದರೇನು (ಮಾನಸ ಸರೋವರ), 4) ವಸಂತ ಬರೆದನು ಒಲವಿನ ಓಲೆ( ಬೆಸುಗೆ), 5) ಮಲೆನಾಡಿನ ಮೂಲೆನ್ಯಾಗೆ ಇತ್ತೊಂದು ಸಣ್ಣ ಹಳ್ಳಿ (ಸುವರ್ಣ ಸೇತುವೆ), 6) ಮಧುಮಾಸ ಚಂದ್ರಮ ನೀನಿರಲು ಸಂಭ್ರಮ (ವಿಜಯ ವಾಣಿ), 7) ಭಾವವೆಂಬ ಹೂವು ಅರಳಿ (ಉಪಾಸನೆ), 8) ಸವಿನೆನಪುಗಳು ಬೇಕು ಸವಿಯಲು ಬದುಕು (ಅಪರಿಚಿತ), 9) ಅಧರಂ ಮಧುರಂ (ಮಲಯ ಮಾರುತ), 10) ಏನೇನೋ ಆಸೆ ನೀ ತಂದಾ ಭಾಷೆ (ಶಂಕರ್ ಗುರು) ಇವಿಷ್ಟೇ ಅಲ್ಲ. ವಾಣಿ ಜಯರಾಂ ಹಾಡಿ ಜನಪ್ರಿಯವಾದ ನೂರಾರು ಹಾಡುಗಳು ಕನ್ನಡದಲ್ಲಿ ಇವೆ.

ಆಕೆ ಕೇವಲ ಗಾಯಕಿ ಅಲ್ಲ: ವಾಣಿ ಜಯರಾಂ ಕೇವಲ ಗಾಯಕಿ ಮಾತ್ರ ಅಲ್ಲ. ಸಂಗೀತವೇ ನನ್ನ ಬದುಕು, ಬೇರೆ ನನಗೇನೂ ಬೇಡ ಎಂದಾಕೆ ಹೇಳಿದ್ದರು. ಆಕೆಯು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಧರೆ. ಮಲಯಾಳಂ, ತಮಿಳು, ಹಿಂದೀ ಭಾಷೆಗಳಲ್ಲಿ ಆಕೆ ಕವನ ಸಂಕಲನಗಳನ್ನು ಬರೆದು ಪ್ರಕಟಿಸಿದ್ದಾರೆ. ಕ್ಯಾನ್ಸರ್ ರೋಗಿಗಳಿಗೆ ಸಂಗೀತದ ಮೂಲಕ ನೋವು ನಿವಾರಿಸುವ ಆಕೆಯ ಕಾರ್ಯಾಗಾರಗಳು ಭಾರೀ ಜನಪ್ರಿಯ ಆದವು. ಪಂಡಿತ್ ಬಿರ್ಜೂ ಮಹಾರಾಜ್ ಅವರ ಜೊತೆ ಸೇರಿ ಗೀತ ಗೋವಿಂದವನ್ನು ಕಥಕ್ ನೃತ್ಯಕ್ಕೆ ಅಳವಡಿಸಿದ್ದು ಬಹು ದೊಡ್ಡ ಸಾಧನೆ.

ಶಾಸ್ತ್ರೀಯ ಸಂಗೀತದ ಕುರಿತು ಅವರ ರಸಗ್ರಹಣ ಶಿಬಿರಗಳು, ಉಪನ್ಯಾಸಗಳು ತುಂಬಾ ಜನಪ್ರಿಯ ಆಗಿವೆ. ಸ್ವತಃ ಸಂಗೀತ ಕಲಾವಿದರಾದ ಜಯರಾಂ ಅವರನ್ನು ಮದುವೆ ಆದ ಆಕೆಯ ಸಂಗೀತ ಸಾಧನೆಗಳ ಹಿಂದೆ ಪತಿಯ ಬೆಂಬಲ ಇತ್ತು ಎಂದು ಆಕೆ ತುಂಬಾ ಬಾರಿ ಹೇಳಿದ್ದರು. ಅಂತಹ ಸಂಗೀತ ಸರಸ್ವತಿಯ ನಿರ್ಗಮನ ಸಂಗೀತ ಲೋಕದಲ್ಲಿ ಒಂದು ದೊಡ್ಡ ಶೂನ್ಯವನ್ನು ಕ್ರಿಯೇಟ್ ಮಾಡಿದೆ. ಅದನ್ನು ತುಂಬುವ ಇನ್ನೋರ್ವ ಕಲಾವಿದೆ ಕನ್ನಡದಲ್ಲಿ ಸದ್ಯಕ್ಕೆ ಇಲ್ಲ ಅನ್ನುವುದು ಕೊರತೆ.

-ರಾಜೇಂದ್ರ ಭಟ್ ಕೆ.

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇತಿಹಾಸದ ಅವಲೋಕನ ಬದುಕಿನ ಪುನರ್ ವಿಮರ್ಶೆಗೆ ಸಹಾಯಕ: ಶಬಾನ್ ಅಂಜುಮ್

ಕೋಟ, ನ.22: ಇತಿಹಾಸದ ಪಿತಾಮಹ ಹೆರೋಡಟಸ್ ಸಂಸ್ಕೃತಿಗಳ ತಿಳಿಯಲು ಒಂದು ಉತ್ತಮ...

ಆನಂದತೀರ್ಥ: ವಾರ್ಷಿಕ ಕ್ರೀಡಾಕೂಟ

ಕಟಪಾಡಿ, ನ.22: ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಪಾಜಕ ಆನಂದತೀರ್ಥ ಪ.ಪೂ ಕಾಲೇಜು...

ಸಾಂಸ್ಕೃತಿಕ ಸ್ಪರ್ಧೆ: ಮಣಿಪಾಲ ಜ್ಞಾನಸುಧಾದ ವಿದ್ಯಾರ್ಥಿಗಳ ಅಮೋಘ ಸಾಧನೆ

ಉಡುಪಿ, ನ.22: ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಮತ್ತು ಶಾಲಾ ಶಿಕ್ಷಣ...

ಅರುಣ್ಯಾ 2024: ಭಂಡಾರಕಾರ್ಸ್ ಪಿಯು ಕಾಲೇಜು ತಂಡ ಚಾಂಪಿಯನ್

ಬಸ್ರೂರು, ನ.22: ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿ ಉಡುಪಿ ಜಿಲ್ಲಾಮಟ್ಟದ...
error: Content is protected !!