Monday, January 20, 2025
Monday, January 20, 2025

ರಾಮಾನುಜನ್ ಎಂಬ ದೈವದತ್ತ ಗಣಿತ ಪ್ರತಿಭೆ

ರಾಮಾನುಜನ್ ಎಂಬ ದೈವದತ್ತ ಗಣಿತ ಪ್ರತಿಭೆ

Date:

ಇಂದು ಅವರ 135ನೆಯ ಹುಟ್ಟಿದ ಹಬ್ಬ, ರಾಷ್ಟ್ರೀಯ ಗಣಿತ ದಿನ ಕೂಡ.

ಅವರ ಬಗ್ಗೆ ತುಂಬಾ ಬಾರಿ ತುಂಬಾ ಬರೆದಿದ್ದೇನೆ. ಆದರೆ ಅವರ ಬಗ್ಗೆ ನನ್ನ ಪ್ರೀತಿ ಎಷ್ಟು ಬರೆದರೂ ಮುಗಿಯುವಂತಹದ್ದು ಅಲ್ಲವೇ ಅಲ್ಲ.

ಬಾಲ್ಯದಿಂದಲೇ ಮಹಾ ಬುದ್ದಿವಂತ:

1887 ಡಿಸೆಂಬರ್ 22ರಂದು ಈರೋಡ್ ನಗರದಲ್ಲಿ ಒಬ್ಬ ಸಾಮಾನ್ಯ ಗುಮಾಸ್ತನ ಮಗನಾಗಿ ಜನಿಸಿದ ರಾಮಾನುಜನ್ ಬಾಲ್ಯದಿಂದಲೂ ಗಣಿತಲೋಕದಲ್ಲಿ ಮುಳುಗಿಬಿಡುತ್ತಿದ್ದರು. ಐದನೇ ತರಗತಿಯಲ್ಲಿ ಒಬ್ಬ ಗಣಿತ ಅಧ್ಯಾಪಕರು ಪಾಠ ಮಾಡುತ್ತಾ ಸೊನ್ನೆಗೆ ಸೊನ್ನೆಯಿಂದ ಭಾಗಿಸಿದರೆ ಒಂದು ಎಂದು ನಿರೂಪಣೆ ಮಾಡಲು ಹೊರಟಾಗ ಸಾಧ್ಯವೇ ಇಲ್ಲ, ಸೊನ್ನೆಯಿಂದ ಯಾವ ಸಂಖ್ಯೆಯನ್ನು ಭಾಗಿಸಿದರೂ ಅನಂತ(Infinite) ಸಂಖ್ಯೆಯು ದೊರೆಯುತ್ತದೆ ಎಂದು ವಾದ ಮಾಡಿ ಗೆದ್ದವರು ರಾಮಾನುಜನ್!

ಮೂರನೇ ತರಗತಿಯಲ್ಲಿ ಇರುವಾಗ ಶ್ರೇಣಿಯ ಅಪ್ಲಿಕೇಶನ್ ಲೆಕ್ಕಗಳನ್ನು ಬಿಡಿಸಿದ ಪ್ರತಿಭಾವಂತ ಆತ! ನಾಲ್ಕನೇ ಫಾರಂ ಓದುತ್ತಿದ್ದಾಗ ಡಿಗ್ರಿಯ ಪಠ್ಯಪುಸ್ತಕವಾದ ಎಸ್ ಎಲ್ ಲೋನಿ ಎಂಬ ಲೇಖಕನ ‘ಟ್ರಿಗೊನೋಮೆಟ್ರಿ ಪಾರ್ಟ್ 2’ ಪುಸ್ತಕವನ್ನು ಪೂರ್ತಿಯಾಗಿ ಓದಿ ಜೀರ್ಣಿಸಿಕೊಂಡವರು ಅವರು!

ಮುಂದೆ ತನ್ನ ವಯಸ್ಸಿಗಿಂತ ಅಗಾಧ ಬುದ್ದಿಮತ್ತೆಯನ್ನು ತೋರಿಸುತ್ತಾ ಹೋದ ಅವರು ಪಿಯುಸಿಯ ಪ್ರವೇಶ ಪರೀಕ್ಷೆಯಾದ FA ಪರೀಕ್ಷೆಯಲ್ಲಿ ಫೇಲ್ ಆದರು! ಕಾರಣ ಎಂದರೆ ಅವರು ಗಣಿತ ಬಿಟ್ಟು ಬೇರೆ ಯಾವುದೇ ವಿಷಯಗಳನ್ನು ಓದುತ್ತಲೇ ಇರಲಿಲ್ಲ! ಅದರಿಂದಾಗಿ ಅವರು ಹಲವು ಅವಕಾಶಗಳನ್ನು ಮುಂದೆ ಕಳೆದುಕೊಂಡರು.

ವಿದ್ಯಾರ್ಥಿವೇತನ ಕೊನೆಗೊಂಡಿತು. ಆರ್ಥಿಕ ಸಮಸ್ಯೆಗಳು ಉಲ್ಬಣ ಆದವು. ಅದರಿಂದಾಗಿ ಗಣಿತದ ಈ ಅದ್ಭುತ ಪ್ರತಿಭೆ ಮದ್ರಾಸಿನ ಬಂದರಿನಲ್ಲಿ ಮೂಟೆಗಳನ್ನು ಲೆಕ್ಕ ಮಾಡುವ ಕೆಲಸವನ್ನು ಮಾಡಬೇಕಾಯಿತು! ಆದರೆ ಗಣಿತದ ಅಧ್ಯಯನದ ಹಸಿವು ನಿಲ್ಲಲಿಲ್ಲ ಅನ್ನುವುದು ಭಾರತದ ಅದೃಷ್ಟ.

ರಾಮಾನುಜನ್ ಮದುವೆ ಆದಾಗ ಅವರಿಗೆ 22 ವರ್ಷ. ಅವರ ಹೆಂಡತಿ ಜಾನಕಿಗೆ 9 ವರ್ಷ! ಗುಮಾಸ್ತನ ಕೆಲಸ ಮಾಡುತ್ತ ಈ ಗಣಿತ ಪ್ರತಿಭೆ ಹಾಳಾಗಬಾರದು ಎಂದು ಆಗ ಆರ್ಕಾಟ್ ಜಿಲ್ಲೆಯ ಡೆಪ್ಯುಟಿ ಕಲೆಕ್ಟರ್ ಆಗಿದ್ದ ರಾಮಸ್ವಾಮಿ ಅಯ್ಯರ್ ಅವರು ಮೊದಲು ಮನಗಂಡರು.

ಅದಕ್ಕಾಗಿ ಕೇಂಬ್ರಿಜ್ ವಿವಿಯಲ್ಲಿ ಗಣಿತ ಪ್ರಾಧ್ಯಾಪಕರಾಗಿದ್ದ ಪ್ರೊಫೆಸರ್ ಜಿ ಹೆಚ್ ಹಾರ್ಡಿ ಅವರೇ ಸೂಕ್ತವಾದ ಗುರು ಆಗುತ್ತಾರೆ ಎಂದು ಮನಗಂಡರು ಅಯ್ಯರ್. ಅವರ ಶಿಫಾರಸು ಪಡೆದು ರಾಮಾನುಜನ್ ತನ್ನ ಸಂಶೋಧನೆಯ ಫಲವಾದ 120 ಗಣಿತದ ಪ್ರಮೇಯಗಳನ್ನು ಬರೆದು ಹಾರ್ಡಿ ಸರ್ ಅವರಿಗೆ ಕಳುಹಿಸಿಕೊಟ್ಟರು.

ಹಾರ್ಡಿ ಸರ್ ಈ ಯುವಕನ ಅಗಾಧ ಪ್ರತಿಭೆಯನ್ನು ಮನಗಂಡು ಇಂಗ್ಲಾಂಡಗೆ ಬರಲು ಹೇಳಿದರು. 1914ರ ಮಾರ್ಚ್ 17ರಂದು ಲಂಡನ್ ಹೋಗುವ ಹಡಗಿನಲ್ಲಿ ಆರು ತಿಂಗಳು ಪ್ರಯಾಣ ಮಾಡಿ ಅವರು ಕೇಂಬ್ರಿಜ್ ತಲುಪಿದರು.

ಹೊರಡುವ ಮೊದಲು ನಿನಗೆ ಬುಟ್ಟಿ ತುಂಬಾ ಚಿನ್ನದ ಆಭರಣ ತರುವೆ ಎಂದು ಹೆಂಡತಿಗೆ ಅವರು ಪ್ರಾಮಿಸ್ ಕೊಡುತ್ತಾರೆ. ಆಗ 19 ವರ್ಷದ ಹೆಂಡತಿ ಜಾನಕಿ ಹೇಳಿದ ಮಾತು ಇಲ್ಲಿ ನಾನು ದಾಖಲು ಮಾಡಬೇಕು. “ನನಗೆ
ಚಿನ್ನಾಭರಣದ ಆಸೆ ಇಲ್ಲ .ನೀವು ಗಣಿತದ ಮಹಾ ಮೇರು ಎಂದು ಸಾಧನೆ ಮಾಡಿಕೊಂಡು ಹಿಂದೆ ಬರುವ ಭರವಸೆ ನನಗಿದೆ. ಅದೇ ನನಗೆ ಚಿನ್ನದ ಆಭರಣ!” ಎಂದಿದ್ದರು ಜಾನಕಿ.

ರಾಮಾನುಜನ್ ಜೀವನದಲ್ಲಿ ಆಕೆ ಕೊಟ್ಟ ಸ್ಫೂರ್ತಿ ಮತ್ತು ಪ್ರೀತಿಗಳನ್ನು ಬೇರೆ ಯಾರೂ ಕೊಡಲು ಸಾಧ್ಯ ಇರಲಿಲ್ಲ.

ಕೇಂಬ್ರಿಜನಲ್ಲಿ ರಾಮಾನುಜನ್ ವಿಜೃಂಭಣೆ:

ಕೇಂಬ್ರಿಜನಲ್ಲಿ ರಾಮಾನುಜನ್ ಇದ್ದದ್ದು ಹೆಚ್ಚು ಕಡಿಮೆ ಐದು ವರ್ಷಗಳು. ಆದರೆ ಹಗಲು ರಾತ್ರಿ ಗಣಿತ ಪ್ರಪಂಚದಲ್ಲಿ ಮುಳುಗಿಬಿಟ್ಟ ಆತ ನೂರಾರು ಗಣಿತದ ಸಂಶೋಧನೆಗಳನ್ನು ಪೂರ್ತಿ ಮಾಡಿದರು.

1) ಮಾಕ್ ತೀಟಾ ಫಂಕ್ಷನ್.
2) ರಾಮಾನುಜನ್ ಪ್ರೈಮ್.
3) ರಾಮಾನುಜನ್ ಸಾಲ್ದನರ್ ಸ್ಥಿರಾಂಕ.
4) ರಾಮಾನುಜನ್ ಸಮ್.
5) ರೋಜರ್ ರಾಮಾನುಜನ್ ಐಡೆಂಟಿಟಿಸ್.
6) ರಾಮಾನುಜನ್ ಮಾಸ್ಟರ್ ಥಿಯರಂ.
7) ಇನ್ಫನೈಟ್ ಸೀರೀಸ್ ಆಫ್ ಪೈ.
ಇವೆಲ್ಲವೂ ರಾಮಾನುಜನ್ ಗಣಿತ ಸಂಶೋಧನೆಯ ಚಿನ್ನಂದಂತಹ ಕೊಡುಗೆಗಳು.

ಅದರಲ್ಲಿ ಕೂಡ ಕೊನೆಯ ಪುಸ್ತಕವು ಇಡೀ ಗಣಿತ ಪ್ರಪಂಚದ ಅತೀ ಶ್ರೇಷ್ಟವಾದ ಗ್ರಂಥ ಎಂದು ಪರಿಗಣಿತವಾಗಿದೆ!

ರಾಮಾನುಜನ್ ಕೇಂಬ್ರಿಜನಲ್ಲಿ ಸಂಶೋಧನೆ ಮಾಡಿದ ಗಣಿತ ಫಲಿತಾಂಶಗಳ ಒಟ್ಟು ಸಂಖ್ಯೆಯೇ 3900ಕ್ಕಿಂತ ಅಧಿಕ! ಅವರ ನೂರಾರು ಗಣಿತದ ಸಂಶೋಧನಾ ಪ್ರಬಂಧಗಳು ಅಂತಾರಾಷ್ಟ್ರೀಯ ಗಣಿತ ಮ್ಯಾಗಝೀನನ ಮುಖಪುಟದಲ್ಲಿ ಪ್ರಕಟ ಆದವು.

ಕೊನೆಗೂ ಒಲಿಯಿತು ಜಾಗತಿಕ ಫೆಲೋಶಿಪ್:

ಫೆಲೋ ಆಫ್ ರಾಯಲ್ ಸೊಸೈಟಿಯ ಫೆಲೋಶಿಪ್ (FRS) ಅವರಿಗೆ ಕೇಂಬ್ರಿಜ್ ವಿವಿಯಿಂದ ದೊರೆಯಿತು. ಈ ಗೌರವ ಪಡೆದ ಮೊದಲ ಇಂಗ್ಲೀಷೇತರ ವ್ಯಕ್ತಿ ಅಂದರೆ ಅದು ರಾಮಾನುಜನ್! ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಆ ಕಾಲದಲ್ಲಿ, ಭಾರತೀಯರನ್ನು ವೈರಿಗಳ ಹಾಗೆ ನೋಡುತ್ತಿದ್ದ ಬ್ರಿಟಿಷ್ ವಿವಿಯಿಂದ ಆ ಗೌರವ ರಾಮಾನುಜನ್ ಅವರಿಗೆ ದೊರೆಯಿತು ಅಂದರೆ ಅವರ ಪ್ರತಿಭೆಯ ಮಟ್ಟವನ್ನು ಕಲ್ಪನೆ ಮಾಡಿಕೊಳ್ಳಿ.

ಲಂಡನ್ನಿನಲ್ಲಿ ನರಳಿದ ಅಸಾಮಾನ್ಯ ಗಣಿತ ಪ್ರತಿಭೆ:

ಲಂಡನ್ನಿನಲ್ಲಿ ಓದುತ್ತಿದ್ದಾಗ ಅವರು ಪಟ್ಟ ಬವಣೆಗಳನ್ನು ನನ್ನ ಹಿಂದಿನ ಲೇಖನದಲ್ಲಿ ಬರೆದಿದ್ದೇನೆ. ಅಲ್ಲಿನ ಏಕಾಂಗಿತನ, ತೀವ್ರವಾದ ಚಳಿ, ಸಸ್ಯಾಹಾರದ ಕೊರತೆ, ವಿಶ್ರಾಂತಿಯಿಲ್ಲದ ದಿನಚರಿ, ನಿದ್ದೆಯಿಲ್ಲದ ರಾತ್ರಿಗಳು ಅವರ ಆರೋಗ್ಯವನ್ನು ಪೂರ್ತಿ ಖಾಲಿ ಮಾಡಿದವು.

ಆತ್ಮಹತ್ಯೆಗೂ ಅವರು ಪ್ರಯತ್ನ ಮಾಡಿದ್ದುಂಟು. ಅವರು ಹೆಂಡತಿಗೆ ಪ್ರೀತಿಯಿಂದ ಬರೆದ ಅಷ್ಟೂ ಪತ್ರಗಳಿಗೆ ಭಾರತದಿಂದ ಉತ್ತರಗಳು ಬರುತ್ತಿರಲಿಲ್ಲ! ಈ ಎಲ್ಲ ನೋವುಗಳ ಕಾರಣದಿಂದ ಅವರು ಚೇತರಿಸಿಕೊಳ್ಳಲೆ ಇಲ್ಲ. ಕ್ಷಯರೋಗ ಅವರ ಶಕ್ತಿಯನ್ನು ಖಾಲಿ ಮಾಡಿತು. 1919ರಲ್ಲಿ ಅವರು ಹಡಗಿನ ಮೂಲಕ ಭಾರತಕ್ಕೆ ಮರಳಿದರು. ಮುಂದೆ ಒಂದು ವರ್ಷ ಮಾತ್ರ ಬದುಕಿದ್ದ ರಾಮಾನುಜನ್ 1920ರ ಏಪ್ರಿಲ್ 26ರಂದು ತನ್ನ ಕೊನೆಯುಸಿರೆಳೆದರು.

ಗಣಿತದ ವಿಶ್ವಮಟ್ಟದ ಅಗಾಧ ಪ್ರತಿಭೆಯೊಂದು ಅವರೇ ಪ್ರೀತಿಸಿದ ಅನಂತದಲ್ಲಿ ಲೀನವಾಗಿ ಹೋಯಿತು. ಅವರು ಬದುಕಿದ್ದು ಒಟ್ಟು 32 ವರ್ಷ ಮಾತ್ರ!

ರಾಮಾನುಜನ್ ಸಾವಿನ ಆಚೆಗೂ ಬದುಕಿದರು:

ರಾಮಾನುಜನ್ ಅವರ ಗಣಿತದ ಸಂಶೋಧನೆಗಳು ಈಗಲೂ ಗಣಿತ, ವಿಜ್ಞಾನ, ಖಗೋಳ ವಿಜ್ಞಾನ, ಸಂವಹನ ಕ್ಷೇತ್ರಗಳಲ್ಲಿ ಅನ್ವಯ ಆಗುತ್ತಿರುವುದನ್ನು ನೋಡುವಾಗ ರೋಮಾಂಚನ ಆಗುತ್ತದೆ.

ಅವರ ಹುಟ್ಟುಹಬ್ಬವಾದ ಡಿಸೆಂಬರ್ 22ನ್ನು ರಾಷ್ಟ್ರೀಯ ಗಣಿತ ದಿನವನ್ನಾಗಿ ಭಾರತವು ಆಚರಿಸುತ್ತಿದೆ. ಅಲ್ಲದೆ ಅವರ 125ನೆಯ ಜನ್ಮ ವರ್ಷವಾದ 2012ನ್ನು ರಾಷ್ಟ್ರೀಯ ಗಣಿತ ವರ್ಷವಾಗಿ ಭಾರತವು ಆಚರಣೆ ಮಾಡಿತು.

2017ರಲ್ಲಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ‘ರಾಮಾನುಜನ್ ಮ್ಯಾಥ್ ಪಾರ್ಕ್’ ಲೋಕಾರ್ಪಣೆ ಆಗಿದೆ. ಅವರ ಹುಟ್ಟೂರಾದ ಕುಂಭಕೋಣಂನಲ್ಲಿ ರಾಮಾನುಜನ್ ಹೆಸರಿನಲ್ಲಿ 32 ವರ್ಷದ ಒಳಗಿನ ಓರ್ವ ಜಾಗತಿಕ ಮಟ್ಟದ ಗಣಿತ ಸಂಶೋಧಕರಿಗೆ ‘ಶಾಸ್ತ್ರಾ ರಾಮಾನುಜನ್ ಪ್ರಶಸ್ತಿ’ ನೀಡಿ ಗೌರವಿಸುವ ಕಾರ್ಯಕ್ರಮ ಪ್ರತೀ ವರ್ಷ ಡಿಸೆಂಬರ್ 22ರಂದು ನಡೆಯುತ್ತಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಲಂಡನ್ನಿನ ಟ್ರಿನಿಟಿ ಕಾಲೇಜ್ ಮುಂಭಾಗದಲ್ಲಿ ರಾಮಾನುಜನ್ ಅವರ ಆಳೆತ್ತರದ ಪ್ರತಿಮೆಯನ್ನು ಕೇಂಬ್ರಿಜ್ ವಿವಿ ಸ್ಥಾಪನೆ ಮಾಡಿದೆ!

ಇಂದು ಅವರಿಗೆ ಪ್ರತಿಯೊಬ್ಬ ಗಣಿತ ಪ್ರೇಮಿಯೂ ಒಂದು ತೊಟ್ಟು ಕಂಬನಿ ಮಿಡಿದು ಶ್ರದ್ಧಾಂಜಲಿ ಸಮರ್ಪಣೆ ಮಾಡೋಣ ಅಲ್ಲವೇ?

– ರಾಜೇಂದ್ರ ಭಟ್ ಕೆ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!