Sunday, November 24, 2024
Sunday, November 24, 2024

ಹಿಡಿಯಕ್ಕಿ ಸಂಗ್ರಹಿಸಿ ಕೆನರಾ ಬ್ಯಾಂಕ್ ಕಟ್ಟಿದ ಅಮ್ಮೆಂಬಳ ಸುಬ್ಬರಾವ್ ಪೈ

ಹಿಡಿಯಕ್ಕಿ ಸಂಗ್ರಹಿಸಿ ಕೆನರಾ ಬ್ಯಾಂಕ್ ಕಟ್ಟಿದ ಅಮ್ಮೆಂಬಳ ಸುಬ್ಬರಾವ್ ಪೈ

Date:

ಮ್ಮೆಂಬಳ ಸುಬ್ಬರಾವ್ ಪೈ ಅವರು ಬ್ಯಾಂಕಿಂಗ್ ವ್ಯವಸ್ಥೆಗೆ ಭಾರೀ ಸ್ಫೂರ್ತಿಯನ್ನು ನೀಡಿದ ಕೆನರಾ ಬ್ಯಾಂಕನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದವರು. ಅದೇ ರೀತಿ ಶಿಕ್ಷಣ ಕ್ಷೇತ್ರದಲ್ಲಿ ಇಂದು ಭಾರೀ ಕೀರ್ತಿಯನ್ನು ಪಡೆದಿರುವ ಮಂಗಳೂರಿನ ಕೆನರಾ ವಿದ್ಯಾ ಸಂಸ್ಥೆಗಳನ್ನು ಸಮರ್ಪಣೆ ಮಾಡಿದವರು.

ಅಮ್ಮೆಂಬಳ ಸುಬ್ಬರಾವ್ ಪೈ ಅವರು 1852ರ ಇಸವಿಯ ನವೆಂಬರ್ 19ರಂದು ಮಂಗಳೂರಿನ ಹತ್ತಿರ ಇರುವ ಮೂಲ್ಕಿಯಲ್ಲಿ ಜನಿಸಿದರು. ಅವರ ತಂದೆ ಉಪೇಂದ್ರ ಪೈ ಅವರು ಮುನ್ಸೀಫರ ಕೋರ್ಟನಲ್ಲಿ ಬಹು ಜನಪ್ರಿಯ ವಕೀಲರಾಗಿದ್ದರು.

ಮಂಗಳೂರಿನ ಕನ್ನಡ ಶಾಲೆಯಲ್ಲಿ ಓದಿ ಎಫ್.ಎ ಪರೀಕ್ಷೆ ಮುಗಿಸಿದ ನಂತರ ಸುಬ್ಬರಾವ್ ಪೈ ಅವರು ಮದ್ರಾಸಿಗೆ ತೆರಳಿ ಪದವಿ ಮತ್ತು ಕಾನೂನು ಪದವಿಗಳನ್ನು ಪಡೆದರು. ಅಲ್ಲಿ ಅವರಿಗೆ ದೊರೆತ ಜಸ್ಟೀಸ್ ಹಾಲೋವೇ ಎಂಬವರ ಪ್ರೇರಣೆಯು ಅವರ ಜೀವನದ ಮೇಲೆ ಭಾರೀ ಪರಿಣಾಮ ಬೀರಿತು.

1876ರಲ್ಲಿ ತಮ್ಮ ತಂದೆಯವರು ನಿಧನ ಆದ ಕಾರಣದಿಂದ ಮಂಗಳೂರಿಗೆ ಹಿಂದಿರುಗಿದ ಸುಬ್ಬರಾವ್ ಪೈಯವರು ಉತ್ತಮವಾಗಿ ವಕೀಲಿ ವೃತ್ತಿ ನಡೆಸುತ್ತಿದ್ದರು. ತಮಗೆ ದುಡ್ಡು ಬಾರದಿದ್ದರೂ ಚಿಂತೆಯಿಲ್ಲ ಎಂಬ ಧೋರಣೆ ಅವರದ್ದು. ಅದಕ್ಕಾಗಿ ಆದಷ್ಟೂ ಕೋರ್ಟಿನ ಹೊರಗೇ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಅವರ ಪ್ರಯತ್ನ ಜಾರಿಯಲ್ಲಿ ಇತ್ತು. ಅವರಿಗೆ ದುಡ್ಡು ಆದ್ಯತೆ ಆಗಿರಲಿಲ್ಲ. 1891ರ ಹೊತ್ತಿಗೆ ಅವರ ಕೆಲವು ಶಿಕ್ಷಕರಾಗಿದ್ದ ಸ್ನೇಹಿತರು ಮಂಗಳೂರಿನಲ್ಲಿ ಶಾಲೆಗಳ ಕೊರತೆಯನ್ನು ಪ್ರಸ್ತಾಪಿಸಿದರು. ಆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಅವರು ತುಂಬಾ ಕಾಳಜಿ ವಹಿಸಿ ಕೆನರಾ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿದರು.

ಅದಾದ ನಂತರ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಆಗುವಂತೆ 1894ರಲ್ಲಿ ಕೆನರಾ ಹೆಣ್ಣು ಮಕ್ಕಳ ಹೈಸ್ಕೂಲನ್ನು ಕೂಡ ಅವರು ತೆರೆದರು. ಅಂದಿನ ದಿನಗಳಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಬಗೆಗೆ ಸಮಾಜದಲ್ಲಿ ಪ್ರೋತ್ಸಾಹದ ವಾತಾವರಣ ಇರಲಿಲ್ಲ. ಆದ್ದರಿಂದ ಕೆನರಾ ವಿದ್ಯಾಸಂಸ್ಥೆಯ ಸ್ಥಾಪನೆಯು ಕ್ರಾಂತಿಕಾರಕ ಹೆಜ್ಜೆಯೇ ಆಗಿತ್ತು.

ಮುಂದೆ ಕೆನರಾ ವಿದ್ಯಾಸಂಸ್ಥೆಗಳು ಭಾರೀ ದೊಡ್ಡ ಹೆಮ್ಮರ ಆಗಿ ಬೆಳೆದು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡುತ್ತಾ ಮುಂದೆ ಸಾಗಿವೆ. ಶತಮಾನೋತ್ಸವ ಕಂಡಿವೆ.

ಹೆಣ್ಣುಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಅಂದಿನ ದಿನಗಳಲ್ಲಿ ನಿರುತ್ಸಾಹದ ವಾತಾವರಣವನ್ನು ಕಂಡಾಗ ಅಮ್ಮೆಂಬಳ ಸುಬ್ಬರಾವ್ ಪೈ ಅವರು ಕಂಡುಹಿಡಿದ ಪರಿಹಾರವು ಅದ್ಭುತವಾಗಿಯೇ ಇತ್ತು. ಅದು ಉಳಿತಾಯ ಪ್ರಜ್ಞೆ!

ತಮ್ಮ ಹೆಣ್ಣು ಮಕ್ಕಳಿಗೆ ಓದು ಬರಹ ಬೇಕು ಎಂದು ಆಸೆ ಪಡುವ ತಾಯಿಯರು ಪ್ರತೀದಿನ ‘ಹಿಡಿ ಅಕ್ಕಿ ಉಳಿಸಿ’ ಎಂಬ ಅಭಿಯಾನದ ಮೂಲಕ ಅಮ್ಮೆಂಬಳ ಪೈಯವರು ಜನರಲ್ಲಿ ಜಾಗೃತಿಯನ್ನು ಮೂಡಿಸಿದರು.
ಇದೇ ಉಳಿತಾಯದ ಶ್ರೇಷ್ಟ ಚಿಂತನೆಯು ಮುಂದೆ ಯಶಸ್ವಿಯಾಗಿ ಅವರಿಂದ ಹುಟ್ಟಿದ್ದು ‘ಹಿಂದೂ ಪರ್ಮನೆಂಟ್ ಫಂಡ್! ಇದೇ ಮುಂದೆ ಕೆನರಾ ಬ್ಯಾಂಕ್ ಎನಿಸಿತು!

‘ಉತ್ತಮ ಬ್ಯಾಂಕ್ ಎನ್ನುವುದು ಸಮಾಜದ ಆರ್ಥಿಕ ಶಕ್ತಿಯ ಕೇಂದ್ರ ಮಾತ್ರವಲ್ಲ, ಅದು ಸಾಮಾನ್ಯ ಜನರ ಆರ್ಥಿಕ ಸ್ಥಿತಿಗತಿಗಳನ್ನು ಉತ್ತಮಪಡಿಸುವ ಜವಾಬ್ಧಾರಿಯನ್ನು ತನ್ನ ಮೇಲಿರಿಸಿಕೊಂಡಿದೆ’ ಎಂಬುದು ಅಮ್ಮೆಂಬಳ ಸುಬ್ಬರಾವ್ ಪೈ ಅವರು ಬಲವಾಗಿ ನಂಬಿದ ಧ್ಯೇಯ ಆಗಿತ್ತು. ಲಾಭದ ಗಳಿಕೆಗಿಂತ ಜನಸಾಮಾನ್ಯರ ಆರ್ಥಿಕ ಸಬಲೀಕರಣ ಅವರ ಉದ್ದೇಶವಾಗಿತ್ತು.

ಕೆನರಾ ಬ್ಯಾಂಕ್ ಸ್ಥಾಪನೆಯು ಆಗಿನ ಕಾಲದಲ್ಲಿ ಭಾರೀ ಸಂಚಲನವನ್ನು ಮೂಡಿಸಿದ್ದು ಹೇಗೆ? ಅದು ಶತಮಾನದ ಆರಂಭದ ದಶಕ. ಭಾರತದಲ್ಲಿ ಆಗ ಬ್ರಿಟನ್‌ ರಾಣಿಯ ಆಡಳಿತ. ಮಂಗಳೂರಿನಲ್ಲಿ ಆಗ ಇದ್ದದ್ದು ಬ್ರಿಟಿಷರಿಗೆ ಸೇರಿದ ಮದ್ರಾಸ್‌ ಬ್ಯಾಂಕಿನ ಶಾಖೆಯೊಂದೇ! ಸಂಪೂರ್ಣವಾಗಿ ಬ್ರಿಟಿಷ್‌ ಅಧಿಕಾರಿಗಳೇ ತುಂಬಿದ್ದ ಈ ಬ್ಯಾಂಕ್‌ನಲ್ಲಿ ಭಾರತೀಯರು ಕಾರಕೂನರ ಮತ್ತು ಜವಾನನ ಕೆಲಸಕ್ಕೆ ಮಾತ್ರ ನೇಮಕ ಆಗುತ್ತಿದ್ದರು. ಆ ಬ್ಯಾಂಕ್‌ ಕೇವಲ ಶ್ರೀಮಂತರತ್ತ ಮಾತ್ರ ಮುಖವನ್ನು ಮಾಡಿತ್ತು. ಆದರೆ ಅದು ವಿಧಿಸುತ್ತಿದ್ದ ಬಡ್ಡಿ ಮಾತ್ರ ವಿಪರೀತ ಪ್ರಮಾಣದ್ದಾಗಿತ್ತು. ಬಡವರು ಬ್ಯಾಂಕಿನ ಒಳಗೆ ಬರಲು ಸಾಧ್ಯವೇ ಇರಲಿಲ್ಲ!

ಜನಸಾಮಾನ್ಯರು ತಮ್ಮ ಕಠಿಣ ದುಡಿಮೆಯ ಹಣವನ್ನು ಸುರಕ್ಷಿತವಾಗಿಡಲು ಪಡುತ್ತಿದ್ದ ಕಷ್ಟಗಳು, ಸಂಕಷ್ಟದ ವೇಳೆ ಸಾಲಕ್ಕಾಗಿ ಅಲೆದಾಡುತ್ತಿದ್ದ ಕಷ್ಟವನ್ನು ನೋಡಿ ಸುಬ್ಬರಾವ್ ಪೈ ಅವರು ಭಾರೀ ಚಿಂತನೆಗೆ ತೊಡಗಿದರು. ಬಡವರ ಕಷ್ಟಗಳಿಗೆ ಅವರ ಮನಸ್ಸು ಕರಗಿತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಣದಿಂದಲೇ ನಿಧಿ ಸ್ಥಾಪಿಸಿ, ಉಳಿತಾಯದ ಅವಕಾಶ ಮತ್ತು ಸಾಲವನ್ನು ನೀಡುವುದು ಅವರ ಉದೇಶ ಆಗಿತ್ತು.

ವಿಶೇಷವಾಗಿ ಶಿಕ್ಷಣದ ಸಾಲ ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಕೆನರಾ ಬ್ಯಾಂಕಿನ ಆದ್ಯತೆ ಆಗುವಂತೆ ಅವರು ಮಾಡಿದರು. ಹೆಣ್ಣುಮಕ್ಕಳ ಶೈಕ್ಷಣಿಕ ಸಾಲವನ್ನು ಆದ್ಯತೆಯ ಸಾಲವಾಗಿ ಅವರು ಘೋಷಣೆ ಮಾಡಿದರು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ‘ಆದ್ಯತೆಯ ಸಾಲ’ ನೀಡಿದ ದೇಶದ ಮೊದಲ ಬ್ಯಾಂಕು ಎಂಬ ಕೀರ್ತಿ ಕೂಡ ಕೆನರಾ ಬ್ಯಾಂಕಿಗೆ ದೊರೆಯಿತು! ಇದೆಲ್ಲವೂ ಅಮ್ಮೆಂಬಳ ಸುಬ್ಬರಾವ್ ಪೈ ಅವರ ದೂರದೃಷ್ಟಿಯ ಸಂಕೇತವೇ ಆಗಿದೆ.

ಕೆನರಾ ಬ್ಯಾಂಕಿನ ನಿಧಿಯನ್ನು ಸಂಗ್ರಹಿಸಲು ಸುಬ್ಬರಾವ್ ಪೈ ಅವರು ಹಾಕಿದ ಶ್ರಮವು ಅಷ್ಟಿಷ್ಟಲ್ಲ. ಅವರು ಎತ್ತಿನ ಗಾಡಿಯಲ್ಲಿ ಊರೂರು ಸುತ್ತಿ ತಲಾ 50ರೂ ಬೆಲೆಯ ಎರಡು ಸಾವಿರ ಷೇರು ಪತ್ರಗಳನ್ನು ಮಾರಿ ನಿಧಿಯನ್ನು ಸಂಗ್ರಹಿಸಿದರು! ಹೀಗೆ ಸುಬ್ಬರಾವ್ ಪೈಯವರ ಘನ ಅಧ್ಯಕ್ಷತೆಯಲ್ಲಿ 1906ರಲ್ಲಿ ಆರಂಭ ಆದ ಬ್ಯಾಂಕು ಇಂದು ದೇಶ, ವಿದೇಶಗಳಲ್ಲಿ ಅವರು ಮಾಡಿರುವ ಶ್ರೇಷ್ಟವಾದ ಕಾಯಕವನ್ನು ಸಾರುತ್ತಿದೆ. ಆ ಬ್ಯಾಂಕ್ ಸ್ಥಾಪನೆಯಿಂದ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಹೆಸರು ಶಾಶ್ವತ ಸ್ಥಾನ ಪಡೆಯಿತು.

ಅಮ್ಮೆಂಬಳ ಪೈ ಅವರು 1909ರ ಜುಲೈ 25ರಂದು ಕೇವಲ ತಮ್ಮ 57ನೆಯ ವಯಸ್ಸಿನಲ್ಲಿ ನಿಧನರಾದರು. ಆದರೆ ಅವರು ಸ್ಥಾಪನೆ ಮಾಡಿದ ಸಂಸ್ಥೆಗಳು ಮತ್ತು ಶಾಲೆಗಳು ಮುಖ್ಯವಾದ ಸಾಮಾಜಿಕ ಕೊಡುಗೆಯಾಗಿ ಉಳಿದವು. ಹಗಲಿರುಳು ಬಡಜನತೆಗಾಗಿ ಮಾಡಿದ ಕಾರ್ಯಗಳು ಅವರನ್ನು ಚಿರಂಜೀವಿ ಆಗಿ ಮಾಡಿದವು. ಅಮ್ಮೆಂಬಳ ಸುಬ್ಬರಾವ್ ಪೈ ಅವರು ಆಗಿನ ಕಾಲಕ್ಕೆ ತುಂಬಾ ಅಡ್ವಾನ್ಸ್ ಆಗಿದ್ದರು.

ತನ್ನದೇ ಸಮಾಜದ ಒಬ್ಬ ಮಹಿಳೆಯು ಅಂತರ್ಜಾತೀಯ ಮದುವೆಯ ಕಾರಣಕ್ಕೆ ಸಾಮಾಜಿಕವಾದ ಬಹಿಷ್ಕಾರಕ್ಕೆ ಒಳಗಾದಾಗ ತುಂಬಾ ನೊಂದರು. ಮುಂದೆ ಅದೇ ಮಹಿಳೆ ನಿಧನರಾದಾಗ ಅವರ ಕೊನೆಯ ಇಚ್ಛೆಯಂತೆ ಪೈಯವರೇ ಮುಂದೆ ನಿಂತು ತನ್ನ ಗೆಳೆಯರ ಸಹಕಾರ ಪಡೆದು ಹಿಂದೂ ಸಂಪ್ರದಾಯದ ಪ್ರಕಾರ ಅವರ ಅಂತಿಮ ವಿಧಿಗಳನ್ನು ಪೂರ್ತಿ ಮಾಡಿದರು. ಈ ಕಾರಣಕ್ಕೆ ಅವರು ಒಂದು ಪ್ರಬಲ ವರ್ಗದ ಜನರ ತೀವ್ರ ಪ್ರತಿರೋಧ ಎದುರಿಸಬೇಕಾಯಿತು. ಆದರೆ ಪೈಯವರು ಅವುಗಳಿಗೆ ಕ್ಯಾರೇ ಅನ್ನಲಿಲ್ಲ!

ಅವರು ಸ್ಥಾಪನೆ ಮಾಡಿದ ಕೆನರಾ ಬ್ಯಾಂಕ್ ಮತ್ತು ಕೆನರಾ ವಿದ್ಯಾಸಂಸ್ಥೆಗಳು ಇರುವ ತನಕ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಹೆಸರು ಶಾಶ್ವತ ಆಗಿರುವುದು ಖಂಡಿತ.

-ರಾಜೇಂದ್ರ ಭಟ್ ಕೆ

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನ.28: ನರೇಂದ್ರ ಎಸ್ ಗಂಗೊಳ್ಳಿ ಅವರ ‘ನಿಭೃತ’ ಪತ್ತೇದಾರಿ ಕಾದಂಬರಿ ಬಿಡುಗಡೆ

ಉಡುಪಿ, ನ.23: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮತ್ತು...

ವಯನಾಡ್: ಪ್ರಿಯಾಂಕಾ ಗಾಂಧಿಗೆ ಐತಿಹಾಸಿಕ ಗೆಲುವು

ವಯನಾಡ್, ನ.23: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ...

ಉಪಚುನಾವಣೆಯಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್- ನಮ್ಮ ಕಾರ್ಯಕರ್ತರ ಅವಿರತ ಶ್ರಮದ ಗೆಲುವು: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ನ.23: ಕರ್ನಾಟಕದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಮಹಾರಾಷ್ಟ್ರದ ಗೆಲುವು ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಗೆಲುವು: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ನ.23: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಗೆಲುವು ಉತ್ತಮ...
error: Content is protected !!