Monday, January 20, 2025
Monday, January 20, 2025

ಯಕ್ಷಗಾನ ಸಮ್ಮೇಳನ – ನೂರು ಭರವಸೆ, ನೂರಾರು ನಿರೀಕ್ಷೆಗಳು

ಯಕ್ಷಗಾನ ಸಮ್ಮೇಳನ – ನೂರು ಭರವಸೆ, ನೂರಾರು ನಿರೀಕ್ಷೆಗಳು

Date:

ಫೆಬ್ರವರಿ 11, 12 ರಂದು ಉಡುಪಿಯಲ್ಲಿ ಮೊಟ್ಟಮೊದಲ ಯಕ್ಷಗಾನದ ಸಮ್ಮೇಳನ ನಡೆಸಲು ಸರಕಾರವೇ ಮುಂದಾಗಿದೆ. ಅದಕ್ಕಾಗಿ ಕರ್ನಾಟಕ ಸರಕಾರವನ್ನು ಯಕ್ಷಗಾನದ ಎಲ್ಲ ಅಭಿಮಾನಿಗಳು ಅಭಿನಂದನೆ ಮಾಡಬೇಕು.

ಆದರೆ ಈ ಸಮ್ಮೇಳನವು ಸುಮ್ಮನೆ ಒಂದಿಷ್ಟು ಹರಟೆ, ಒಂದಿಷ್ಟು ಉಪನ್ಯಾಸ, ಊಟ, ತಿಂಡಿ, ಮನರಂಜನಾ ಕಾರ್ಯಕ್ರಮಗಳು ಇಷ್ಟರಲ್ಲಿಯೇ ಮುಗಿದು ಹೋಗಬಾರದು ಎಂಬ ಕಾಳಜಿ ಪ್ರತಿಯೊಬ್ಬ ಯಕ್ಷಗಾನ ಪ್ರೇಮಿಯಲ್ಲಿ ಇದೆ. ಆ ಎಚ್ಚರದಿಂದ ಈ ಲೇಖನ ಇದೀಗ ನಿಮ್ಮ ಮುಂದೆ..

ನೂರಾರು ಭರವಸೆಗಳು ಮತ್ತು ನಿರೀಕ್ಷೆಗಳು!

1) ಯಕ್ಷಗಾನವು ಜಗತ್ತಿನ ಒಂದು ಪರಿಪೂರ್ಣವಾದ ಕಲೆ ಎಂದು ಜಾಗತಿಕ ಮಟ್ಟದ ವಿದ್ವಾಂಸರು ಒಪ್ಪಿಕೊಂಡ ಸತ್ಯ. ಅದು ನಾವೆಲ್ಲ ಹೆಮ್ಮೆ ಪಡುವ ಕಲೆ! ಅಂತಹ ಮಹಾನ್ ಕಲೆಯ ಹಿರಿಮೆಯ ಬಗ್ಗೆ, ಸಾಧ್ಯತೆಗಳ ಬಗ್ಗೆ ಸಂವಾದಗಳು ನಡೆಯಬೇಕು.

2) ಯಕ್ಷಗಾನದ ಆರಂಭಕ್ಕೆ ಕಾರಣವಾದ ಕುಂಬಳೆಯ ಪಾರ್ತಿ ಸುಬ್ಬನ ಬಗ್ಗೆ ಈಗಿನ ತಲೆಮಾರಿನ ಜನರಿಗೆ ಹೆಚ್ಚು ಗೊತ್ತಿಲ್ಲ. ಆತನನ್ನು ಒಳಗೊಂಡಂತೆ ಯಕ್ಷಗಾನದ ಕೀರ್ತಿ ಪುರುಷರ ಬಗ್ಗೆ ಪರಿಚಯಗಳು ಇರಲಿ.

3) ಯಕ್ಷಗಾನದಲ್ಲಿ ತೀರಾ ಅವಜ್ಞೆಗೆ ಒಳಗಾದವರು ಯಕ್ಷಗಾನದ ಪ್ರಸಂಗಕರ್ತರು. ಸಾವಿರಾರು ಪ್ರಯೋಗ ಕಾಣುತ್ತಿರುವ ದೇವಿ ಮಹಾತ್ಮೆಯಂತಹ ಪ್ರಸಂಗ ಬರೆದಿರುವ ಅಗರಿ ಭಾಗವತರ ಪರಿಚಯ, ಮಹೋನ್ನತ ಪೌರಾಣಿಕ ಪ್ರಸಂಗಗಳನ್ನು ಬರೆದಿರುವ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು, ಸೀತಾನದಿ ಗಣಪಯ್ಯ ಶೆಟ್ಟರು ಮೊದಲಾದವರ ಸ್ಮರಣೆಯು ಸಮ್ಮೇಳನದಲ್ಲಿ ಆಗಲಿ.

4) ಯಕ್ಷಗಾಗದಲ್ಲಿ ಅಳಿದು ಹೋಗುತ್ತಿರುವ ಮುಖವರ್ಣಿಕೆ, ವೇಷಭೂಷಣ, ಹೆಜ್ಜೆಗಳು ಇವುಗಳ ಪ್ರಾತ್ಯಕ್ಷಿಕೆ ಮತ್ತು ದಾಖಲೀಕರಣ ಆಗಲಿ.

5) ಯಕ್ಷಗಾನವನ್ನು ಶ್ರೀಮಂತಗೊಳಿಸಿದ ಮಲ್ಪೆ ಸಾಮಗ ಮನೆತನ, ಕೆರೆಮನೆ ಪರಂಪರೆ, ಚಿಟ್ಟಾಣಿ ಪರಂಪರೆ.. ಹೀಗೆ ಅನೇಕ ಪರಂಪರೆಗಳು ಇವೆ. ಅವುಗಳ ಕೊಡುಗೆಗಳ ಬಗ್ಗೆ ಸಂವಾದಗಳು ನಡೆಯಬೇಕು.

6) ‘ಕಾಲಮಿತಿ ಯಕ್ಷಗಾನ’ ಈಗ ಒಪ್ಪಿತವಾದ ಪದ್ಧತಿ. ಅದನ್ನು ಅಳವಡಿಕೆ ಮಾಡಿದ ಹೆಚ್ಚು ಅನುಕೂಲ ಆಗಿದೆ. ಆದರೆ ಒಂದಿಷ್ಟು ಅನಾನುಕೂಲಗಳು ಕೂಡ ಆಗಿವೆ. ಅದು ಶಾಸ್ತ್ರಕ್ಕೆ ವಿರುದ್ಧ ಎಂದು ಇಂದಿಗೂ ವಾದಿಸುವವರು ಹಲವರು ಇದ್ದಾರೆ. ಅಂತಹ ಅಂಶಗಳ ಬಗ್ಗೆ ಚರ್ಚೆಗಳು ನಡೆಯಬೇಕು.

7) ಯಕ್ಷಗಾನ ಬೆಳೆದುಬಂದದ್ದು ಆರಂಭದಿಂದಲೂ ರಾಜಾಶ್ರಯದಿಂದ! ದೇವಾಲಯಗಳ ಬೆಂಬಲಗಳಿಂದ. ಈಗಲೂ ಹರಕೆ ಮೇಳಗಳು ಅಂದರೆ ದೇವಾಲಯಗಳೇ ನಡೆಸುತ್ತಿರುವ ಮೇಳಗಳು ಎಂದು ಅರ್ಥ. ಅಂತಹ ಮೇಳಗಳ ಕಲಾವಿದರ ಆರೋಗ್ಯ ಪರೀಕ್ಷೆ, ಸೇವಾ ಭದ್ರತೆ, ಆರೋಗ್ಯ ವಿಮೆ ಮೊದಲಾದ ಬದ್ಧತೆಗಳ ಬಗ್ಗೆ ನಿರ್ದೇಶನ ದೊರೆಯಬೇಕು.

8) ಯಕ್ಷಗಾನದ ಪೂರ್ವಸೂರಿಗಳನೇಕರು ಈ ಕಲೆಯನ್ನು ಬೆಳೆಸಿದ್ದಾರೆ. ಶೇಣಿ ಗೋಪಾಲಕೃಷ್ಣ ಭಟ್ಟರು, ಕುಂಬಳೆ ಸುಂದರ ರಾವ್ ಅವರು, ಮಲ್ಪೆ ಶಂಕರನಾಾಯಣ ಸಾಮಗರು, ಕೆರೆಮನೆ ಶಿವರಾಮ ಹೆಗಡೆ, ಶಂಭು ಹೆಗಡೆ ಮೊದಲಾದವರ ಬಹಳ ದೊಡ್ಡ ಪರಂಪರೆಯೇ ಇದೆ. ಅವರ ಬಗ್ಗೆ ಈಗಿನ ತಲೆಮಾರಿನವರಿಗೆ ಹೆಚ್ಚು ಮಾಹಿತಿ, ಪರಿಚಯ ಇಲ್ಲ. ಅದನ್ನು ಹೇಗೆ ತಲುಪಿಸಬಹುದು ಎಂಬ ಸಂವಾದ ಬೇಕು.

9) ಯಕ್ಷಗಾನ ಶಾಸ್ತ್ರೀಯವಾಗಿ ಬೆಳೆದಿದೆ. ಅಕಾಡೆಮಿಕ್ ಆಗಿ ಬೆಳೆದದ್ದು ಸಾಲದು. ಮುಖ್ಯವಾಗಿ ಯಕ್ಷಗಾನದ ಪಠ್ಯದ ಬಗ್ಗೆ ಇತ್ತೀಚೆಗೆ ಗಮನ ಹರಿಸಿದ್ದು ಏನೇನೂ ಸಾಲದು. ಅದರ ಬಗ್ಗೆ ನಿರ್ದೇಶನಗಳು ದೊರೆಯಬೇಕು.

10) ಯಕ್ಷಗಾನದಲ್ಲಿ ಇತ್ತೀಚೆಗೆ ಆಗುತ್ತಿರುವ ಕೆಲವು ಅಪಸವ್ಯಗಳು ಕಲೆಗೆ ಹಿನ್ನಡೆ ಆಗಿವೆ. ಉದಾಹರಣೆಗೆ ಸೆಟ್ಟಿಂಗ್ ಯಕ್ಷಗಾನ, ಸಿನೆಮಾ ಕಥೆ ಆಧಾರಿತ ಕಾಲ್ಪನಿಕ ಪ್ರಸಂಗಗಳು… ಹೀಗೆ! ಅವುಗಳ ಬಗ್ಗೆ ಗಂಭೀರವಾದ ಚರ್ಚೆ ಆಗಬೇಕು. ಯಕ್ಷಗಾನ ಅದ್ಭುತವಾದ ಕಲೆ. ಅದು ಯಕ್ಷಗಾನವೇ ಆಗಿ ಉಳಿಯಬೇಕು. ಅದು ಸಿನೆಮಾ, ನಾಟಕ ಆಗುವುದು ಬೇಡ.

11) ಕರಾವಳಿ ಜಿಲ್ಲೆಗಳಲ್ಲಿ ಒಂದು ಕಾಲದಲ್ಲಿ ಕ್ರಿಯಾಶೀಲವಾಗಿದ್ದ ಹಲವು ಯಕ್ಷಗಾನ ಕಲಿಕಾ ಕೇಂದ್ರಗಳು ಒಂದು ಅನುದಾನ ಇಲ್ಲದೆ ಮುಚ್ಚಿವೆ. ಯಕ್ಷಗಾನ ಕಲಿಯುವ, ಕಲಿಸುವ ಆಸಕ್ತರು ಬಹಳ ದೊಡ್ಡ ಸಂಖ್ಯೆಯಲ್ಲಿ ಇಲ್ಲಿದ್ದಾರೆ. ಆದ್ದರಿಂದ ಯಕ್ಷಗಾನದ ಗುರುಗಳಿಗೆ ಮತ್ತು ಕಲಿಕಾ ಕೇಂದ್ರಗಳಿಗೆ ಸರಕಾರ ಅನುದಾನದ ಭರವಸೆ ಕೊಡಬೇಕು.

12) ಇತ್ತೀಚೆಗೆ ಹಲವು ಕಲಾವಿದರು ಅಕಾಲಿಕ ಮರಣ ಹೊಂದಿದ್ದು, ವೇದಿಕೆಯಲ್ಲಿ ಕುಸಿದು ಮರಣ ಹೊಂದಿದ್ದು ನಮಗೆಲ್ಲ ಆಘಾತ ತಂದಿದೆ. ಅದಕ್ಕೆ ಕಾರಣಗಳನ್ನು ಮತ್ತು ಪರಿಹಾರಗಳನ್ನು ಸಮ್ಮೇಳನವು ಕಂಡುಕೊಳ್ಳಬೇಕು. ಕಲಾವಿದರ ಆರೋಗ್ಯ ಸಂರಕ್ಷಣೆಗಾಗಿ ಸರಕಾರ ಮತ್ತು ಮೇಳಗಳ ಆಡಳಿತ ಏನೇನು ಮಾಡಬೇಕು ಎನ್ನುವ
ಕಾರ್ಯಸೂಚಿ ಈ ಸಮ್ಮೇಳನದಿಂದ ದೊರೆಯಬೇಕು.

13) ಪ್ರಾಥಮಿಕ, ಪ್ರೌಢಶಾಲಾ ಆಸಕ್ತ ವಿದ್ಯಾರ್ಥಿಗಳಿಗೆ ಯಕ್ಷಗಾನವನ್ನು ಕಲಿಸುವ ಬಹಳ ದೊಡ್ಡ ಕೆಲಸವನ್ನು ಉಡುಪಿಯ ಯಕ್ಷಗಾನ ಕಲಾರಂಗ ತುಂಬಾ ಶ್ರದ್ಧೆಯಿಂದ ಮಾಡುತ್ತಿದೆ. ಇಲ್ಲಿ ನೂರಾರು ವಿದ್ಯಾರ್ಥಿಗಳ ಯಕ್ಷಗಾನ ಕಲಿಕೆ ಮತ್ತು ಪ್ರದರ್ಶನಗಳು ನಡೆಯುತ್ತಿವೆ. ಅದನ್ನು ಸರಕಾರ ಬೆಂಬಲಿಸಬೇಕು. ಪಠ್ಯಪುಸ್ತಕಗಳಲ್ಲಿ ಯಕ್ಷಗಾನದ ಪಾಠಗಳು ಸ್ಥಾನ ಪಡೆಯಬೇಕು.

14) ಯಕ್ಷಗಾನದ ಕಲಾವಿದರಿಗೆ ನೀತಿಸಂಹಿತೆ ಬೇಕು ಅನ್ನುವುದು ಬಹುದಿನದ ಬೇಡಿಕೆ. ಇಂದು ಕೆಲವೇ ಕೆಲವು ಕಲಾವಿದರಿಂದ ಕಲೆಗೆ ಕೆಟ್ಟ ಹೆಸರು ಬರ್ತಾ ಇದೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಸ್ವಲ್ಪ ಹೆಚ್ಚು ಸಮ್ಮೇಳನವು ಗಮನ ಹರಿಸಬೇಕು.

15) ಯಕ್ಷಗಾನದ ಘನತೆಯನ್ನು ಎತ್ತರಿಸುವ ನೂರಾರು ಪ್ರಯೋಗಗಳು ನಡೆಯುತ್ತಿವೆ. ನಡೆಯುತ್ತಲೇ ಇವೆ. ಶಿವರಾಮ ಕಾರಂತರು ನಡೆಸಿದ ಬ್ಯಾಲೆಗಳು ತುಂಬಾ ಜನಪ್ರಿಯ ಆಗಿವೆ. ಯಕ್ಷಗಾನವನ್ನು ವಿಶ್ವಮಟ್ಟಕ್ಕೆ ತಲುಪಿಸಲು ಇಂಗ್ಲಿಷ್ ಭಾಷೆಯಲ್ಲಿ ಯಕ್ಷಗಾನಗಳು ನೆರವಾಗಿವೆ. ಯಕ್ಷಗಾನದ ಇಂತಹ ಸಾಧ್ಯತೆಗಳ ಬಗ್ಗೆ ಗಮನ ಹರಿಸಬೇಕು.

16) ಕೇರಳದಲ್ಲಿ ಕಥಕ್ಕಳಿ, ಕೊಡಿಯೆಟ್ಟಮ್ ಮೊದಲಾದ ಕಲೆಗಳನ್ನು ಉಳಿಸಿ, ಬೆಳೆಸುವ ದೃಷ್ಟಿಯಿಂದ ನೂರಾರು ಪ್ರಯತ್ನಗಳು ನಡೆದಿವೆ. ಅಲ್ಲಿ ಇಂದು ಕೂಡ ಕಲೆಯನ್ನು ಗುರುಮುಖೇನ ಕಲಿಯುವ ವ್ಯವಸ್ಥೆ ಇದೆ. ಅಲ್ಲಿನ ಗುರುಗಳು ಆ ಕಲೆಗಳನ್ನು ಇಂದಿಗೂ ಆರಾಧನಾ ಕಲೆಗಳಾಗಿಯೇ ಉಳಿಸಿಕೊಂಡಿದ್ದಾರೆ. ಯಕ್ಷಗಾನಕ್ಕೆ ಕೂಡ ಅದೇ ರೀತಿಯ ಬೆಂಬಲ ಇಂದು ಬೇಕಾಗಿದೆ. ಈ ಬಗ್ಗೆ ಸಮ್ಮೇಳನವು ಮಾರ್ಗದರ್ಶನ ಮಾಡಬೇಕು.

17) ಯಕ್ಷಗಾನದ ಇತರ ಅಂಗಗಳಾಗಿ ಬೆಳೆದಿದ್ದ ಗೊಂಬೆಯಾಟ, ತೊಗಲು ಗೊಂಬೆಯಾಟ, ಹೂವಿನಕೋಲು ಮೊದಲಾದವುಗಳು ಇಂದು ಅಳಿವಿನ ಅಂಚಿನಲ್ಲಿವೆ. ಗೊಂಬೆಯಾಟದ ಗೊಂಬೆಗಳು ಇಂದು ಮೂಲೆ ಸೇರಿವೆ. ಈ ಬಗ್ಗೆ ಸಮ್ಮೇಳನವು ಮಾರ್ಗದರ್ಶನ ಮಾಡಬೇಕು.

18) ಆರುವತ್ತನೇ ವರ್ಷಕ್ಕೆ ಕಲಾವಿದರಿಗೆ ಕಡ್ಡಾಯ ನಿವೃತ್ತಿ ಮತ್ತು ಉತ್ತಮವಾದ ನಿವೃತ್ತಿ ವೇತನದ ವ್ಯವಸ್ಥೆಯನ್ನು ಸರಕಾರವೇ ಮಾಡಬೇಕು.

19) ಸಾಮಾಜಿಕ ಜಾಲತಾಣಗಳಲ್ಲಿ ಯು ಟ್ಯೂಬ್ ಮೊದಲಾದ ವೇದಿಕೆಗಳಲ್ಲಿ ಯಕ್ಷಗಾನವು ಇಂದು ತುಂಬಾ ಜನಪ್ರಿಯ ಆಗಿದೆ. ತನ್ಮೂಲಕ ಇಂದು ‘ ವಿಶ್ವಗಾನ ‘ ಆಗಿದೆ. ಇಂತಹ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಮತ್ತು ಸಂವಾದಗಳು ನಡೆಯಬೇಕು.

ಭರತವಾಕ್ಯ: ನಾನೊಬ್ಬ ಯಕ್ಷಗಾನದ ಅಭಿಮಾನಿ ಮಾತ್ರ. ತುಂಬಾ ವರ್ಷಗಳಿಂದ ಯಕ್ಷಗಾನದ ಪಲ್ಲಟಗಳನ್ನು ನೋಡುತ್ತಾ ಬಂದವನು. ಅಪಸವ್ಯಗಳ ಬಗ್ಗೆ ಗಮನಿಸುತ್ತ ಬಂದವನು. ಈ ಮೇಲೆ ಬರೆದ ಅಷ್ಟೂ ಅಂಶಗಳು ಯಕ್ಷ ಅಭಿಮಾನಿಗಳ ಒಟ್ಟು ಅಭಿಪ್ರಾಯಗಳು. ಅವುಗಳು ಸಮ್ಮೇಳನದ ವಿವಿಧ ಘೋಷ್ಟಿಗಳಲ್ಲಿ ಸ್ಥಾನಪಡೆಯಲಿ ಅನ್ನುವುದು ಎಲ್ಲರ ಬೇಡಿಕೆ. ಹಾಗೆಯೇ ಅದನ್ನು ಚಂದವಾಗಿ ದಾಖಲು ಮಾಡಿ ಸರಕಾರಕ್ಕೆ ತಲುಪಿಸಲಿ ಅನ್ನುವುದು ವಿನಂತಿ. ಹೇಗೂ ಸರಕಾರವೇ ಈ ಸಮ್ಮೇಳನ ಮಾಡುತ್ತಿದೆ ಮತ್ತು ರಾಜ್ಯದ ಮುಖ್ಯಮಂತ್ರಿಗಳು ಇದನ್ನು ಉದ್ಘಾಟನೆ ಮಾಡಲು ಬರುತ್ತಿದ್ದಾರೆ. ಒಳ್ಳೆದಾಗಲಿ.

ಯಕ್ಷಗಾನಮ್ ಗೆಲ್ಗೆ

-ರಾಜೇಂದ್ರ ಭಟ್ ಕೆ

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!