Friday, September 20, 2024
Friday, September 20, 2024

ಯಕ್ಷಗಾನ ಸಮ್ಮೇಳನದ ಔಚಿತ್ಯ

ಯಕ್ಷಗಾನ ಸಮ್ಮೇಳನದ ಔಚಿತ್ಯ

Date:

ಡುಪಿಯಲ್ಲಿ ಇದೇ ಫೆಬ್ರವರಿ 11 ಮತ್ತು 12 ರಂದು ಯಕ್ಷಗಾನ ಸಮ್ಮೇಳನ ನಡೆಯುತ್ತಿದೆ. ಯಕ್ಷಗಾನದ ವಿವಿಧ ಮಗ್ಗುಲುಗಳ ಪ್ರದರ್ಶನ ಮತ್ತು ವಿಚಾರಗೋಷ್ಠಿಗಳನ್ನೊಳಗೊಂಡ ಯಕ್ಷಗಾನ ಗೋಷ್ಠಿಗಳು ಕಳೆದ ಹಲವಾರು ವರ್ಷಗಳಲ್ಲಿ ಖಾಸಗಿ ಸಂಘ-ಸಂಸ್ಥೆಗಳಿಂದ ಅಲ್ಲಲ್ಲಿ ನಡೆದಿವೆ. ಎರಡು ವರ್ಷಗಳ ಹಿಂದೆ ಅಮೇರಿಕಾದಲ್ಲೂ ಒಂದು ಯಕ್ಷಗಾನ ಸಮ್ಮೇಳನ ನಡೆದಿತ್ತು. ಆದರೆ ಈಗ ಕರ್ನಾಟಕ ಸರಕಾರವೇ ಪ್ರಥಮ ಬಾರಿಗೆ ಮುಂದೆ ಬಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸುನೀಲ್ ಕುಮಾರ್ ಮೂಲಕ ಉಡುಪಿಯಲ್ಲಿ ಈ ಸಮ್ಮೇಳನ ನಡೆಸುತ್ತಿರುವುದರಲ್ಲಿ ಒಂದು ಚಾರಿತ್ರಿಕ ಮಹತ್ವ ಇದೆ. ನಮ್ಮ ಸರಕಾರವು ಯಕ್ಷಗಾನ ಕಲೆಯನ್ನು ಸರಕಾರದ ಮಟ್ಟದಲ್ಲಿ ಗುರುತಿಸಿ, ಅದಕ್ಕೆ ಅಕಾಡೆಮಿಯ ಮೂಲಕ ಸರಿಯಾದ ಮನ್ನಣೆ ಕೊಡಬೇಕೆಂಬುದು ದೀರ್ಘಕಾಲದ ಕೂಗಾಗಿತ್ತು. ಹಲವು ರೀತಿಯ ಪ್ರಯತ್ನಗಳನ್ನು ಮಾಡಲಾಗಿತ್ತು.

ಇವೆಲ್ಲವುಗಳ ಸಂಚಿತ ಪರಿಣಾಮದಂತೆ ಮೊದಲ ಹಂತದಲ್ಲಿ ಜಾನಪದ ಅಕಾಡೆಮಿಯೊಂದಿಗೆ ಯಕ್ಷಗಾನವನ್ನು ಜೋಡಿಸಲಾಗಿತ್ತು. (ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ) ಬಳಿಕ ಪ್ರತ್ಯೇಕವಾಗಿ ಯಕ್ಷಗಾನ
ಬಯಲಾಟ ಅಕಾಡೆಮಿ ಸ್ಥಾಪನೆಯಾಯಿತು. ಮೂರನೇ ಹಂತದಲ್ಲಿ ಉತ್ತರ ಕನ್ನಡದ ಬಯಲಾಟ ಪ್ರಕಾರಗಳು ಇದರಿಂದ ಪ್ರತ್ಯೇಕಗೊಂಡಾಗ ಕರ್ನಾಟಕ ಯಕ್ಷಗಾನ ಅಕಾಡೆಮಿ ಸ್ಥಾಪನೆಗೊಂಡಿತು. ಹೀಗೆ ಕರ್ನಾಟಕ ಸರಕಾರವು ಮೂರು ಹಂತಗಳಲ್ಲಿ ಯಕ್ಷಗಾನವನ್ನು ಗುರುತಿಸಿ, ಈ ಕಲೆಗೆ ಸಾಧ್ಯವಾದ ಪ್ರೋತ್ಸಾಹ ಕೊಡುತ್ತಾ ಬಂದಿದೆ. ಈಗ ಯಕ್ಷಗಾನ ಸಮ್ಮೇಳನವನ್ನು ಸಂಯೋಜಿಸಿದೆ. ಇದರಲ್ಲಿ ಪಡುವಲಪಾಯ ಮತ್ತು ಮೂಡಲಪಾಯದ ಯಕ್ಷಗಾನ ಪ್ರಕಾರಗಳನ್ನು ಒಳಗೊಂಡು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದ್ಕಕಾಗಿ ಸರಕಾರವನ್ನು ಅಭಿನಂದಿಸಲೇಬೇಕು.

ಯಕ್ಷಗಾನಕ್ಕೆ ಸಮ್ಮೇಳನದ ಅಗತ್ಯವೇನು?: ಇದನ್ನು ಯೋಚಿಸುವ ಮೊದಲು ಯಕ್ಷಗಾನದ ಮಹತ್ವವನ್ನು ನೆನಪಿಸಿಕೊಳ್ಳಬೇಕು. ಯಕ್ಷಗಾನದಂತಹ ಕಲೆ (ಮುಖ್ಯವಾಗಿ ಪಡುವಲಪಾಯ ಯಕ್ಷಗಾನ) ಜಗತ್ತಿನಲ್ಲೇ ಅಪರೂಪ ಎನ್ನುವುದು ಜಾಗತಿಕ ರಂಗಭೂಮಿಗಳ ಅಧ್ಯಯನ ಮಾಡಿದವರ ಅಭಿಪ್ರಾಯ. ಇದು ಹಂತಹಂತವಾಗಿ ವೀಳಾಸಗೊಂಡ ಪಾರಂಪರಿಕ ಪ್ರದರ್ಶನ ಕಲೆ. ಸುಮಾರು 6-7 ಶತಮಾನಗಳ ಇತಿಹಾಸ ಯಕ್ಷಗಾನಕ್ಕಿದೆಯಾದರೂ ಅದು ಮೂಲತಃ ಯಾವ ರೂಪದಲ್ಲಿತ್ತು? ಅದು ಹೇಗೆ ಬೆಳೆಯಿತು? ಯಾವ ಯಾವ ಪ್ರದೇಶಗಳಲ್ಲಿ ಹೇಗೆ ರೂಪಾಂತರಗೊAಡು ಅಭಿವೃದ್ಧಿ ಹೊಂದಿತು. ಇತ್ಯಾದಿಗಳ ಬಗ್ಗೆ ಸಾಕಷ್ಟು ಸಂಶೋಧನಾ ಗ್ರಂಥಗಳಲ್ಲಿ ಪ್ರಕಟವಾಗಿವೆ. ಆದರೆ ಕೆಲವು ಶಾಸ್ತ್ರೀಯ ಕಲೆಗಳನ್ನು ವಿವರಿಸುವ ಲಕ್ಷಣ ಗ್ರಂಥಗಳು ಯಕ್ಷಗಾನಕ್ಕಿಲ್ಲ.

ಖಚಿತ ದಾಖಲೆಗಳ ಕೊರತೆಯಿಂದಾಗಿ ಡಾ. ಶಿವರಾಮ ಕಾರಂತ, ಕೃಷ್ಣಭಟ್ಟ, ಡಾ. ಅಮೃತ ಸೋಮೇಶ್ವರ, ಡಾ. ಪ್ರಭಾಕರ ಜೋಶಿ, ಡಾ. ರಾಘವ ನಂಬಿಯಾರ್, ಡಾ. ವಸಂತ ಭಾರದ್ವಾಜ್ ಮುಂತಾದ ಸಂಶೋಧಕರು ಯಕ್ಷಗಾನದ ಹುಟ್ಟು ಹಾಗೂ ಬೆಳವಣಿಗೆಗಳ ಕುರಿತು ಊಹಾತ್ಮಕವಾಗಿ ವಿವಿಧ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ನಿರಂತರವಾಗಿ ಯಕ್ಷಗಾನದ ಅಧ್ಯಯನ ವಿದ್ವಾಂಸರಿಂದ ನಡೆಯುತ್ತಿದೆ ಎನ್ನುವುದೂ ಈ ಕಲೆಯ ಹೆಗ್ಗಳಿಕೆಗಳಲ್ಲಿ ಒಂದು. ಯಕ್ಷಗಾನವನ್ನು ಹೋಲುವ ರಂಗಭೂಮಿಗಳು ದಕ್ಷಿಣ ಭಾರತದ ಅನ್ಯ ಪ್ರಾಂತ್ಯಗಳಲ್ಲೂ ಇವೆ. ಇಂದು ಯಕ್ಷಗಾನವನ್ನು ಮೂರು ರೀತಿಯಲ್ಲಿ ಅರ್ಥೈಸಲಾಗುತ್ತಿದೆ. 1. ಒಂದು ಸಂಗೀತ ಪ್ರಭೇಧ, 2. ಗೇಯ ಸಾಹಿತ್ಯ (ಯಕ್ಷಗಾನ ಪ್ರಸಂಗಗಳು), 3. ಚತುರ್ವೀಧಾಭಿನಯ ಸಂಯುಕ್ತವಾದ ಪ್ರದರ್ಶನ (ರಂಗಭೂಮಿ ಅಥವಾ ನಾಟಕ ಪ್ರಕಾರ).

ಭಾರತೀಯ ಕಲೆಗಳೆಲ್ಲವೂ ಧಾರ್ಮಿಕ ಆಚರಣೆಯ ಹಿನ್ನೆಲೆಯಿಂದಲೇ ಬಂದವು. ಯಕ್ಷಗಾನವು (ಅದರ ಬೆಳವಣಿಗೆಯ ಮಜಲುಗಳಲ್ಲಿ) ದೇವಸ್ಥಾನಗಳೊಂದಿಗೆ ನಿಕಟ ಬಾಂಧವ್ಯ ಹೊಂದಿ ದೇವಸ್ಥಾನಗಳ ಧರ್ಮ ಅಥವಾ ಭಕ್ತಿ ಪ್ರಸಾರದ ಕಲಾತ್ಮಕ ವಿಸ್ತರಣೆಯಾಗಿದೆ. ಅಂದರೆ ಇದು ಒಂದು ಆರಾಧನಾ ರಂಗಭೂಮಿ. ಹಾಗಾಗಿ ಭಾರತೀಯ ಸಂಸ್ಕೃತಿಯ ತತ್ವಬೋಧೆ ಯಾ ಧರ್ಮಬೋಧೆಯ ಮೂಲ ಉದ್ದೇಶಕ್ಕೆ ನಿಷ್ಠವಾಗಿ, ಆದರೆ ಮನೋರಂಜನಾತ್ಮಕವಾಗಿ ರಾಮಾಯಣ, ಮಹಾಭಾರತ, ಭಾಗವತ ಮುಂತಾದ ಇತಿಹಾಸ ಪುರಾಣಗಳ ಸಂದೇಶಗಳನ್ನು ಕಥೆಗಳ ಮೂಲಕ ಜನರಿಗೆ ತಿಳಿಸುವುದು ಯಕ್ಷಗಾನದ ಉದ್ದೇಶ. ಕರ್ಣಾನಂದ, ನೇತ್ರಾನಂದದಿಂದ ತೊಡಗಿ ಪ್ರೇಕ್ಷಕರಲ್ಲಿ ರಸಾನಂದವನ್ನು ಸೃಷ್ಠಿಸಿ, ಮೌಲ್ಯ ಪ್ರತಿಪಾದನೆಯ ಬೌದ್ಧಿಕ ರಂಜನೆಯನ್ನು ಉಂಟುಮಾಡುವುದರಲ್ಲಿ ಯಕ್ಷಗಾನ ಪರಿಣಾಮ ಸಾರ್ಥಕ ಕಾಣುತ್ತದೆ.

ಮಕ್ಕಳಿಂದ ಮುದುಕರವರೆಗೆ, ಅಲ್ಪಜ್ಞರಿಂದ ಪ್ರಾಜ್ಞರವರೆಗೆ ಎಲ್ಲರೂ ನೋಡಿ, ಆನಂದಿಸುವುದಕ್ಕೆ ಯಕ್ಷಗಾನದಲ್ಲಿ ವಿಫುಲ ಸಂಪನ್ಮೂಲವಿದೆ. ಸರ್ವಜನಾಕರ್ಷಣೆ ಯಕ್ಷಗಾನದ ವೈಶಿಷ್ಟ್ಯ. ಕನ್ನಡದ ವಿವಿಧ ಸಾಹಿತ್ಯ ಪ್ರಕರಗಳ ಮಧ್ಯೆ ಯಕ್ಷಗಾನ ಸಾಹಿತ್ಯ (ಕವಿಕೃತ ಪ್ರಸಂಗ ಸಾಹಿತ್ಯ ಮತ್ತು ಕಲಾವಿದಾಕೃತ ಮೌಖಿಕ ಸಾಹಿತ್ಯ ಅಂದರೆ ಅರ್ಥಗಾರಿಕೆ) ತನ್ನ ಅನನ್ಯತೆಯನ್ನು ಸಾಧಿಸಿದೆ. ಚಂದಶಾಸ್ತ್ರಕ್ಕೆ ಯಕಷ್ಗಾನದ ಕವಿಗಳ ಕೊಡುಗೆ ಗಣನೀಯವಾದುದು. ಕನ್ನಡ ಭಾಷೆಯ ಅಮೂಲ್ಯ ಶಬ್ದ ಸಂಪತ್ತು, ಭಾಷಾ ಮಾಧುರ್ಯ, ಶೈಲಿ ಸೊಗಸು ಕಾಣಬೇಕಿದ್ದರೆ ಯಕ್ಷಗಾನವನ್ನು ನೋಡಬೇಕು. ತಾಳಮದ್ದಳೆಯನ್ನು ಕೇಳಬೇಕು. ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಕಾಯಕದಲ್ಲಿ ತೊಡಗಿರುವ ಯಕ್ಷಗಾನಕ್ಕೆ ಸಮಗ್ರ ಕರ್ನಾಟಕವೇ ಕೃತಜ್ಞವಾಗಿರಬೇಕು ಎನ್ನುವುದರಲ್ಲಿ ಅತಿಶಯೋಕ್ತಿ ಇಲ್ಲ.

ಕರಾವಳಿ ಕರ್ನಾಟಕದಲ್ಲಿ (ಮಲೆನಾಡು, ಕಾಸರಗೋಡು ಪ್ರದೇಶ ಸೇರಿ) ವಿದ್ಯಾವಂತ ಚಿಂತಕರು ಕಳೆದ ಸುಮಾರು ಒಂದು ಶತಮಾನದಲ್ಲಿ ಯಕ್ಷಗಾನದ ಜಾನಪದ ರೂಪದಲ್ಲಿ ಪರಿಷ್ಕಾರ ಮಾಡುತ್ತಾ ಬಂದಿದ್ದಾರೆ. ಅದರ ರಾಗ, ತಾಳ, ಕುಣಿತ, ಅರ್ಥಗಾರಿಕೆಗಳನ್ನು ಸ್ವಚ್ಛ ಮಾಡುತ್ತಾ ಬಂದಿದ್ದಾರೆ. ಭರತನ ನಾಟ್ಯಶಾಸ್ತçದಲ್ಲಿ ವಿವರಿಸಲ್ಪಟ್ಟ ರಂಗಭೂಮಿಯ ಹೆಚ್ಚಿನ ಲಕ್ಷಣಗಳು ಯಕ್ಷಗಾನದಲ್ಲಿರುವುದರಿಂದ ಶಾಸ್ತ್ರೀಯತೆಯ ಶಿಸ್ತು ಮತ್ತು ಜಾನಪದದ ಸ್ವಾತಂತ್ರ್ಯ ಇವೆರಡನ್ನು ಸಮ್ಮೀಳಿತಗೊಳಿಸಿಯೇ ಯಕ್ಷಗಾನದ ಪರಂಪರೆ ನಿರ್ಮಾಣವಾಗುತ್ತಿದೆ. ನಿತ್ಯ ನೂತನತೆಯ ಜೀವಂತಿಕೆ ಯಕ್ಷಗಾನಕ್ಕಿರುವುದರಿಂದಲೇ ಇಂದು ಪ್ರತಿನಿತ್ಯ ರಾತ್ರಿ (ಡಿಸೆಂಬರ್‌ನಿಂದ ಮೇ ತಿಂಗಳವರೆಗೆ) ಸುಮಾರು ಐವತ್ತಕ್ಕೂ ಮಿಕ್ಕಿ ವೃತ್ತಿ ಮೇಳಗಳು ಪ್ರದರ್ಶನ ನಿರತವಾಗಿದೆ. ಇದು ಯಕ್ಷಗಾನದ ಮಹತ್ವವಲ್ಲವೇ?

ಇದು ಪ್ರಯೋಗ ರಂಗಭೂಮಿ. ಯಕ್ಷಗಾನದ ವಿವಿಧ ಮಾದರಿಗಳು, ಅಂಶಾAಶಗಳ ಪ್ರತ್ಯೇಕ ಬೆಳವಣಿಗೆಗಳು ಈ ಕಲೆಯ ಜನಪ್ರಿಯತೆಯನ್ನು ಹೆಚ್ಚಿಸುತ್ತಿವೆ. (ಗಾನ ವೈಭವ, ನಾಟ್ಯ ವೈಭವ, ಏಕವ್ಯಕ್ತಿ ಪ್ರದರ್ಶನ ಇತ್ಯಾದಿಗಳು) ಯಕ್ಷಗಾನ ಜನ್ಯ ಕಲಾ ಪ್ರಕಾರಗಳು, ಯಕ್ಷಗಾನ ಪ್ರಪಂಚದೊಳಗೆ ಸೇರುತ್ತವೆ. ಇದು ಸಮೂಹ ಕಲೆ. ಜನ ಸಮೂಹವೇ ಈ ಕಲೆಯನ್ನು ಉಳಿಸಬೇಕು, ಬೆಳೆಸಬೇಕು. ಯಾವುದೇ ಕಲೆ ಬೆಳೆಯಬೇಕಾದರೆ, ಅದು ಕುಲಗೆಡದೇ ತನ್ನ ಸಹಜ ಸ್ವರೂಪವನ್ನು, ಪರಿಶುದ್ಧತೆಯನ್ನು, ಗುಣ ಶ್ರೇಷ್ಠತೆಯನ್ನು ಕಾಪಿಡಬೇಕಾದರೆ, ಜವಾಬ್ದಾರಿಯುತವಾದ ವಿಮರ್ಶೆ, ಅಧ್ಯಯನಾತ್ಮಕ ಚಿಂತನೆಯೂ ಅಗತ್ಯ. ಹಾಗಾಗಿ ಯಕ್ಷಗಾನ ಕಲಾವಿಮರ್ಶೆಯೂ ಯಕ್ಷಗಾನದ ಅಂಗವೇ. ಯಕ್ಷಗಾನಕ್ಕೆ ಅನ್ವಯಿಸುವ ವಿಮರ್ಶಾ ಮಾನದಂಡಗಳನ್ನೂ ಪರಿಶೋಧಿಸಬೇಕಾಗಿದೆ. ಕಳೆದ ಶತಮಾನದಲ್ಲಿದ್ದ ಕಷ್ಟ ಮತ್ತು ಅವಜ್ಞೆ ಯಕ್ಷಗಾನಕ್ಕೆ ಇಂದಿಲ್ಲ. ಯಕ್ಷಗಾನ ಕಲೆ ಮತ್ತು ಕಲಾವಿದರ ಬಗ್ಗೆ ಅಭಿಮಾನ ಹೆಚ್ಚುತ್ತಿದೆ. ಶಾಲಾ- ಕಾಲೇಜುಗಳಲ್ಲಿ, ಮಹಿಳಾ ಮಂಡಳಿಗಳಲ್ಲಿ ಯಕ್ಷಗಾನ ಕುಣಿತದಲ್ಲಿ ಸಂಭ್ರಮಿಸುವವರ ಸಂಖ್ಯೆ ಹೆಚ್ಚುತ್ತಿದೆ. ವೃತ್ತಿಪರ ಮೇಳಗಳಂತೆ ಹವ್ಯಾಸಿ ಮಂಡಳಿಗಳೂ ಉತ್ತಮ ಪ್ರದರ್ಶನ ನೀಡುತ್ತಿವೆ. ಯಕ್ಷಗಾನವಿಲ್ಲದ ರಾಷ್ಟ್ರಮಟ್ಟದ ಉತ್ಸವ ಅಪೂರ್ಣ ಎಂದೇ ತಿಳಿಯಲಾಗುತ್ತಿದೆ.

ಯಕ್ಷಗಾನದ ವ್ಯಾಪಕತೆ ವಿದೇಶಗಳಲ್ಲೂ ಕಾಣಬಹುದು. ಒಂದು ದೃಷ್ಠಿಯಿಂದ ಯಕ್ಷಗಾನಕ್ಕಿದು ಉಚ್ಫಾçಯ ಕಾಲ. ಉತ್ಸರ್ಪಿಣೆ ಕಾಲ. ಇಷ್ಟಲ್ಲ ಜನಪ್ರಿಯತೆ, ಮಹತ್ವ ಹೊಂದಿರುವ ಯಕ್ಷಗಾನಕ್ಕೆ ಸಮ್ಮೇಳನ ಏಕೆ ಎಂದು ಪ್ರಶ್ನಿಸಬಹುದು. ಒಂದು ಕಾಲಕ್ಕೆ ರಾಜಾಶ್ರಯ, ಜನಾಶ್ರಯದಿಂದ ಬೆಳೆಯುತ್ತಿದ್ದ ಕಲೆಗಳಿಗೆ ಈಗ ಸರಕಾರದ ಪ್ರೋತ್ಸಾಹ ಬೆಂಬಲ ಬೇಕೆ ಬೇಕು. ಸರಕಾರ ಕೊಡುವ ಧನಸಹಾಯ ಪರೋಕ್ಷವಾಗಿ ಜನರಿಂದ ಸಂಗ್ರಹಿತವಾದ ಧನಸಂಪತ್ತಿನಿಂದ ತಾನೇ? ಸಮೂಹ ಸಮಾವೇಶದಿಂದ ಸಮೂಹ ಪ್ರಜ್ಷೆ ಚೈತನ್ಯ ಪಡೆಯುತ್ತದೆ. ಈ ಸಮೂಹ ಪ್ರಜ್ಷೆ ಕಲಾಭಿವೃದ್ಧಿಗೆ ಪೂರಕವಾಗುತ್ತದೆ.

ಕಲೆ ಹುಟ್ಟುವುದು ವೈಯಕ್ತಿಕ ಅನುಭವದ ನೆಲೆಯಲ್ಲೇ ಆದರೂ, ಅದು ಸಾಧಾರಣೀಕರಣಗೊಂಡು ಸಾರ್ವತ್ರಿಕವಾಗುತ್ತದೆ. ಯಕ್ಷಗಾನವು ಸಾರ್ವತ್ರೀಕರಣಗೊಂಡಾಗ ಅದರ ವ್ಯಾಪಕತೆ ಹೆಚ್ಚಿ ಕರ್ನಾಟಕದ ಪ್ರಾತಿನಿಧಿಕ ಕಲೆ ಅದು ನಮ್ಮೆಲ್ಲರ ಕಲೆ ಎಂಬ ಭಾವ ಜಾಗೃತವಾಗುವುದು ಸಾಧ್ಯ. ನಮ್ಮ ಮುಂದಿನ ತಲೆಮಾರಿವನರು ಯಕ್ಷಗಾನವನ್ನು ಒಪ್ಪಿ, ಅಪ್ಪಿ, ಅಭಿರುಚಿ ಬೆಳೆಸಿಕೊಳ್ಳಬೇಕಾದರೆ, ಅವರು ಇಂಥ ಸಮ್ಮೇಳನಗಳಲ್ಲಿ ಭಾಗವಹಿಸಿ ಆಸಕ್ತಿ ತಾಳಬೇಕು. ಇಂಥ ಸಮ್ಮೇಳನಗಳಿಗೆ ಅವುಗಳದ್ದೇ ಆದ ಇತಿಮಿತಿಗಳಿರುತ್ತವೆ. ಆದರೂ ಧನಾತ್ಮಕ ಚಿಂತನೆಯ ಸರ್ವರ ಸಹಭಾಗಿತ್ವ ಅಪೇಕ್ಷಣೀಯ.

ಈ ಸಮ್ಮೇಳನವು ವ್ಯರ್ಥವಾಗಲಿಲ್ಲ ಎಂಬ ಸಂದೇಶ ಸರಕಾರಕ್ಕೆ ತಲುಪಿದರೆ ಮುಂದಿನ ವರ್ಷಗಳಲ್ಲಿಯೂ ಯಕ್ಷಗಾನ ಸಮ್ಮೇಳನವೂ ನಡೆದೀತು. ಆ ಮೂಲಕ ಯಕ್ಷಗಾನದ ಮೇಲೆ ಪರೋಕ್ಷ ಸತ್ಪರಿಣಾಮವಾದೀತು. ಅದರಿಂದ ಜೀವನ ಮೌಲ್ಯಗಳನ್ನು ಜನರಿಗೆ ತಿಳಿಸುವ ಸಾಂಸ್ಕೃತಿಕ ಮಹತ್ವದ ಯಕ್ಷಗಾನ ಇನ್ನು ಅಭಿವೃದ್ಧಿ ಕಂಡೀತು.

-ಪ್ರೊ. ಎಂ.ಎಲ್. ಸಾಮಗ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲಾಮಟ್ಟದ ಸಮೂಹಗಾನ ಸ್ಪರ್ಧೆ

ಮಂಗಳೂರು, ಸೆ.20: ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ನಡೆಯಲಿರುವ...

ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಸೆ.20: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...

ಜೋರ್ಡಾನ್ ಕುಷ್ಠರೋಗ ಮುಕ್ತ ರಾಷ್ಟ್ರ

ಯು.ಬಿ.ಎನ್.ಡಿ., ಸೆ.20: ವಿಶ್ವ ಆರೋಗ್ಯ ಸಂಸ್ಥೆ ಜೋರ್ಡಾನ್ ಅನ್ನು ಕುಷ್ಠರೋಗವನ್ನು ತೊಡೆದು...

ಸಾಗರ ಸುರಕ್ಷತೆಗಾಗಿ ಎಂಒಯುಗೆ ಭಾರತೀಯ ಕೋಸ್ಟ್ ಗಾರ್ಡ್ ಸಹಿ

ನವದೆಹಲಿ, ಸೆ.20: ಭಾರತೀಯ ಕೋಸ್ಟ್ ಗಾರ್ಡ್ ನವದೆಹಲಿಯಲ್ಲಿ ಸಾಗರ ಸಂರಕ್ಷಣೆಗಾಗಿ ದಿ...
error: Content is protected !!