Home ಅಂಕಣ ಸಂಶೋಧನೆಯಿಂದ ಸಾಹಿತ್ಯದೆಡೆಗೆ ಬಾಬು ಶಿವ ಪೂಜಾರಿ

ಸಂಶೋಧನೆಯಿಂದ ಸಾಹಿತ್ಯದೆಡೆಗೆ ಬಾಬು ಶಿವ ಪೂಜಾರಿ

481
0

ಸಾಹಿತ್ಯ ಲೋಕ ಎನ್ನುವುದು ಒಂದು ಸಮುದ್ರ. ಸಾಹಿತ್ಯದ ಹಲವು ಮಜಲುಗಳ ಸಂಗಮದಿಂದ ಸಮೃದ್ಧ ಸಾಹಿತ್ಯ ಎನಿಸಿಕೊಳ್ಳುತ್ತದೆ. ಹಲವರು ಸಾಹಿತ್ಯ ಕಥೆ-ಕವನಗಳಿಗೆ ಮೀಸಲಾದರೆ ಇನ್ನೂ ಹಲವರದು ಹಾಸ್ಯ,ಚಟುಕು, ವಚನದಂತಹ ದಾರಿಯಲ್ಲಿ ಸಾಹಿತ್ಯ ರಚನೆಯಾಗುತ್ತದೆ. ಇನ್ನು ಕೆಲವರು ತಾವು ಅಧ್ಯಯನ ನಡೆಸಿ ಸಂಶೋಧಿಸಿದನ್ನು ಸಾಹಿತ್ಯ ರೂಪಕ್ಕೆ ತಂದು ಸಾಹಿತ್ಯಾಸಕ್ತರಿಗೆ ಉಣ ಬಡಿಸುತ್ತಾರೆ. ಅಂತಹವರಲ್ಲಿ ಒಬ್ಬರು ಬಾಬು ಶಿವ ಪೂಜಾರಿ. ತುಳುನಾಡಿನ ಐತಿಹಾಸಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿ ತುಳುನಾಡಿನ ರಾಜಧಾನಿ ಎಂದೆನಿಸಿಕೊಂಡ ಬಾರ್ಕೂರಿನಲ್ಲಿ 1945ರಲ್ಲಿ ಬಾಬು ಶಿವ ಪೂಜಾರಿ ಜನಿಸಿದರು. ಪಾರಂಪರಿಕವಾಗಿ ಇತಿಹಾಸ ಸಾರುವ ಮಣ್ಣಿನಲ್ಲಿ ಜನಿಸಿರುವುದರಿಂದ ಇವರಿಗೆ ಸಂಶೋಧನಾ ಕ್ಷೇತ್ರದಲ್ಲಿ ಒಲವು ಮೂಡಿರಬಹದೇನೋ..? ಪ್ರಾಥಮಿಕ ಶಾಲಾ ಶಿಕ್ಷಣವನ್ನು ಬಾರ್ಕೂರಿನಲ್ಲಿ ಮುಗಿಸಿ ಚಿಕ್ಕ ವಯಸ್ಸಿನಲ್ಲಿಯೇ ಮುಂಬಯಿ ಸೇರಿದರು. ಹಗಲಿನಲ್ಲಿ ಬದುಕು ಸಾಗಿಸಲು ಕೆಲಸ ಮಾಡಿ ರಾತ್ರಿ ಶಾಲೆಯ ಮೂಲಕ ಎಸ್‌ಎಸ್‌ಸಿ ಮಾಡಿದರು. ನಂತರ ಬೆಳಿಗ್ಗೆ ಕಾಲೇಜು ಸೇರಿ ಪದವಿ ಪಡೆದರು. ಮುಂಬಯಿಯ ಸಿದ್ದಾರ್ಥ ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಜೀವನದಲ್ಲಿ ಬೆಸ್ಟ್ ಸ್ಪೀಕರ್ ಅವಾರ್ಡ್ ಸೊಲ್ಲಾಪುರದಲ್ಲಿ ಪಡೆದಿದ್ದರು. ಆ ಮೂಲಕ ವಿದ್ಯಾರ್ಥಿ ಜೀವನದಲ್ಲಿಯೇ ಭಾಷಣ ಕಲೆ ಮತ್ತು ಸಾಹಿತ್ಯದ ಒಲವನ್ನು ಗಳಿಸಿಕೊಂಡಿದ್ದರು.

ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಬಾಬು ಶಿವ ಪೂಜಾರಿ ಅವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಸಂಶೋಧನೆಯ ಒಲವಿತ್ತು. 80ನೇ ದಶಕದ ಮುಂಬೈ ನಗರದಲ್ಲಿ ಕನ್ನಡ ಸಂಘ ಹಾಗೂ ಕಾಲೇಜು ಅಂತರ್ ಘಟಕ ಪ್ರತಿಭಾ ಸ್ಪರ್ಧೆಯಲ್ಲಿ ಹೆಚ್ಚಾಗಿ ಭಾಷಣ ವಿಭಾಗವನ್ನು ಆಯ್ಕೆ ಮಾಡಿ ತಮ್ಮ ವಾಕ್ ಚಾತುರ್ಯವನ್ನು ಪ್ರದರ್ಶಿಸುತ್ತಿದ್ದರು. ಉತ್ತಮ ವಾಗ್ಮಿಯಾಗಿ ಗುರುತಿಸಿಕೊಂಡಿರುವ ಬಾಬು ಶಿವ ಪೂಜಾರಿ ಅವರು ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಮುಂಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಕನ್ನಡ ಪ್ರೀತಿಯ ಕನ್ನಡಿಗರಾಗಿ ಗುರುತಿಸಿಕೊಂಡಿದ್ದಾರೆ. ತಾಯಿನಾಡಿನ ಅದೆಷ್ಟೋ ನೊಂದ ಹೃದಯಗಳಿಗೆ ತನ್ನ ಉದಾರ ಸಹಾಯದಿಂದ ಸಾಂತ್ವಾನದ ಚೈತನ್ಯವನ್ನು ತುಂಬಿದವರು. ಅಲ್ಲದೇ ತಮ್ಮ ಪರಿಸದ ಏಳ್ಗೆಗಾಗಿ ತಮ್ಮಿಂದಾದ ಒಂದಷ್ಟು ಸಹಾಯ ಹಸ್ತವನ್ನು ನೀಡಿದವರು.

ಬಾರ್ಕೂರು ಎನ್ನುವುದು ರಾಜರುಗಳು ಆಳಿ ತುಳುನಾಡಿನ ರಾಜಧಾನಿ ಎನಿಸಿಕೊಂಡು ಹಲವಾರು ಇತಿಹಾಸಗಳನ್ನು ತನ್ನಲ್ಲಿ ಅಪ್ಪಿಕೊಂಡ ಪ್ರದೇಶ. ಅಂತಹ ಊರಲ್ಲಿ ಒಂದೊಂದು, ಕಂಬಗಳು, ಶಿಲೆಗಳು ನೂರಾರು ಕಥೆಗಳನ್ನು ಹೇಳುತ್ತದೆ. ಇಂತಹ ನೂರಾರು ಇತಿಹಾಸದ ಬಗ್ಗೆ ಸಂಶೋಧನೆ ಮಾಡಿ ಅಲ್ಲಿನ ವಾಸ್ತವತೆಯನ್ನು ಜನರಿಗೆ ಮುಟ್ಟಿಸುವಲ್ಲಿ ಇವರು ಸಫಲತೆಯನ್ನು ಕಂಡುಕೊಂಡಿದ್ದಾರೆ. ಬಾಬು ಶಿವಪೂಜಾರಿ ಅವರು ವೇದ, ಆಧುನಿಕ ಸಾಹಿತ್ಯ, ಬೌದ್ಧ, ಜೈನ, ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮ ಗ್ರಂಥಗಳನ್ನು ಆಳವಾಗಿ ಅಭ್ಯಸಿಸಿದ್ದಾರೆ. ನಾರಾಯಣ ಗುರುಗಳು ಆದರ್ಶ, ನಾರಾಯಣ ಗುರು ವಿಜಯ ದರ್ಶನ, ಅನುಸಂಧಾನ, ಹಗ್ಗಿನ ಹನಿ ಮುಂತಾದವು ಇವರ ಕೃತಿಗಳು. ಶ್ರೀಕೃಷ್ಣ ದೇವರಾಯ, ಕೋಟಿ ಚೆನ್ನಯ್ಯ, ತುಳು ಸಂಸ್ಕೃತಿ, ಕಾಂತಬಾರೆ ಬೂದಬಾರೆ, ಸಿರಿ, ನಾಗಾರಾಧನೆ, ಭೂತಾರಾಧನೆ ಮತ್ತು ತುಳುನಾಡಿನ ಗರಡಿಗಳ ಬಗ್ಗೆ ಸಂಶೋಧನಾತ್ಮಕ ಫ್ರೌಡ ಲೇಖನಗಳನ್ನು ಪ್ರಕಟಿಸಿದ್ದಾರೆ. ‘ನಾರಾಯಣ ಗುರು ವಿಜಯ ದರ್ಶನ”ವು ಆಧ್ಯಾತ್ಮ ಮತ್ತು ಸಾಮಾಜಿಕ ನೆಲೆಯಲ್ಲಿ ನೆಲದ ಸಂಕಟ ಮತ್ತು ಆಶೋತ್ತರಗಳನ್ನು ತೆರೆದಿಟ್ಟ ಕೃತಿ. ಈಗಾಗಲೇ ಎಂಟು ಪುಸ್ತಕಗಳು ಮುದ್ರಣಗೊಂಡು ಹಲವಾರು ಪುಸ್ತಕಗಳು ಮುದ್ರಣಗೊಳ್ಳಲು ಸನಿಹವಿದೆ. ಅಲ್ಲದೇ ಕಳೆದ 17 ವರ್ಷಗಳಿಂದ ಗುರುತು ಪತ್ರಿಕೆಯ ಸಂಪಾದಕರಾಗಿ, ಅಕ್ಷಯ ಪತ್ರಿಕೆಯ ಅಂಕಣಗಾರರಾಗಿ ಕೆಲಸ ನಿರ್ವಹಿಸಿದ್ದಾರೆ.

ಎಲೆಮರೆಯ ಕಾಯಿಯಂತೆ ಇದ್ದು ಯಾವುದೇ ಪ್ರಚಾರ ಪಡೆಯದೇ ಹಲವು ಸಾಧನೆಗೈದ ಬಾಬು ಶಿವಪೂಜಾರಿ ಅವರು ಈವಾಗಲೇ ರಾಜ್ಯ, ಹೊರ ರಾಜ್ಯಗಳಲ್ಲಿ ಹಲವಾರು ಸನ್ಮಾನಗಳನ್ನು ಪಡೆದಿದ್ದು, ಮಡಿಕೇರಿ ಸಾಹಿತ್ಯ ಸಮ್ಮೇಳನ, ಕಾಂತವರ ಕನ್ನಡ ಸಂಘ, ಮಹಾರಾಷ್ಟ್ರ ಕನ್ನಡ ಸಾಹಿತ್ಯ ಘಟಕ ಮುಂತಾದ ಕಡೆಗಳಲ್ಲಿ ಸನ್ಮಾನ ಪಡಿದ್ದಾರೆ. ಅಲ್ಲದೇ ಬ್ರಹ್ಮಾವರ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿದ್ದರು. ಇವರ ಕುರಿತಾದ ಅಭಿನಂದನ ಗ್ರಂಥ ‘ಕಲಶ’ ಕೂಡ ಪ್ರಕಟಗೊಂಡಿದೆ. ಅಲ್ಲದೇ ಇವರ ಸಾಹಿತ್ಯ ಕೃಷಿಯನ್ನು ಗುರುತಿಸಿ ‘ಸಾಹಿತ್ಯ ದುರಂಧರ, ಬಿಲ್ಲವ ಸಾಹಿತ್ಯ ರತ್ನ’ ಪ್ರಶಸ್ತಿ ಕೂಡಾ ಭಾಜನರಾಗಿದ್ದಾರೆ. ಯಾವಾಗಲೂ ನಗು ಮೊಗದಿಂದ ಕ್ರೀಯಾಶೀಲ ವ್ಯಕ್ತಿಯಾಗಿರುವ ಬಾಬು ಶಿವ ಪೂಜಾರಿ ಅವರ ಸಂಶೋದನೆ, ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆ, ಸಮಾಜಮುಖಿ ಚಿಂತನೆಗಳು ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಹದಿನಾರನೇ ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸದ ವಿಷಯ. ಮುಂದಿನ ದಿನಗಳಲ್ಲಿ ಇನ್ನಷ್ಟೂ ಇವರಿಂದ ಸಾಹಿತ್ಯ ಕ್ಷೇತ್ರಕ್ಕೆ ಇವರ ಕೊಡುಗೆ ನಿರಂತರವಾಗಿರಲಿ ಎನ್ನುವ ಆಶಯ ನಮ್ಮದು.

ಡಿಸೆಂಬರ್ 5 ಮತ್ತು 6 ರಂದು ವಿವೇಕ ವಿದ್ಯಾಲಯದಲ್ಲಿ ನಡೆಯುವ 16ನೆಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿ 2 ದಿನಗಳ ಕಾಲ ನಡೆಯುವ ಸಾಹಿತ್ಯದ ಹಬ್ಬದಲ್ಲಿ ಕನ್ನಡಿಗರಿಗೆ ಹೊರನಾಡ ಕನ್ನಡಿಗರಾದ ಬಾಬುಶಿವ ಪೂಜಾರಿಯವರ ಅದ್ಭುತವಾದ ವಾಗ್ಝರಿಯನ್ನು ಕೇಳುವ ಸದಾವಕಾಶವಿದೆ. ಸಂಶೋಧನಾತ್ಮಕ ಮತ್ತು ಕರಾವಳಿಯ ಇತಿಹಾಸದ ಸಂಶೋಧಕರಾದ ಬಾಬುಶಿವ ಪೂಜಾರಿಯವರನ್ನು ಸಮ್ಮೇಳನಾಧ್ಯಕ್ಷತೆಯ ಪೀಠದಲ್ಲಿ ಕಾಣಲು ಕರಾವಳಿಯ ಕನ್ನಡಿಗರೆಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.

-ಪ್ರಶಾಂತ್ ಸೂರ್ಯ ಸಾಯ್ಬ್ರಕಟ್ಟೆ

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.